ಭಾನುವಾರ, ಡಿಸೆಂಬರ್ 8, 2019
21 °C

ಜಾರಕಿಹೊಳಿ ಸೋದರರ ಓಲೈಕೆಗೆ ಕಸರತ್ತು

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಜಾರಕಿಹೊಳಿ ಸೋದರರ ಓಲೈಕೆಗೆ ಕಸರತ್ತು

ಅಥಣಿ: ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವ ಹೊಂದಿರುವ ಸಹೋದರರಾದ ಸಚಿವ ರಮೇಶ ಜಾರಕಿಹೊಳಿ ಹಾಗೂ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರ ನಡುವೆ ಉಂಟಾಗಿರುವ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ಶುಕ್ರವಾರ ಇಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಕಂಡುಬಂತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಸಚಿವರಾದ ಎಚ್‌.ಕೆ. ಪಾಟೀಲ, ಎಂ.ಬಿ.ಪಾಟೀಲ, ಸಂಸದ ಕೆ.ಎಚ್‌. ಮುನಿಯಪ್ಪ ಅವರು ತಮ್ಮ ಭಾಷಣದಲ್ಲಿ ಮುಂಬರುವ ಚುನಾವಣೆಯಲ್ಲಿ ಒಂದಾಗಿ ಹೋಗುವಂತೆ ಜಾರಕಿಹೊಳಿ ಸಹೋದರರಿಗೆ ಹಿತವಚನ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಬೆಳಗಾವಿ ಜಿಲ್ಲೆ ನನಗೆ ಗೊತ್ತು. ಇಲ್ಲಿನ ಮತದಾರರು ಗೊತ್ತು. ಇಲ್ಲಿನ ಸಾಮಾಜಿಕ ಸ್ಥಿತಿ–ಗತಿ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಜಿಲ್ಲೆಯ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು. ವ್ಯಕ್ತಿಗತ ಪ್ರತಿಷ್ಠೆ ಮುಖ್ಯವಲ್ಲ. ಜಿಲ್ಲೆಯ 18 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆಲ್ಲಲೇಬೇಕು. 2018ರ ವಿಧಾನಸಭೆ ಚುನಾವಣೆಯನ್ನು ನಾವು ಗೆದ್ದರೆ 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಇದು ಶಕ್ತಿ  ತುಂಬಲಿದೆ’ ಎಂದರು.

‘ರಮೇಶ ಹಾಗೂ ಸತೀಶ ನಡುವೆ ಸ್ವಲ್ಪ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಮರೆತು, ರಾಮ ಲಕ್ಷ್ಮಣರಂತೆ ಕೆಲಸ ಮಾಡಬೇಕು. ಬಿಜೆಪಿಗೆ ಬುದ್ಧಿ ಕಲಿಸಬೇಕು. ನೀವಿಬ್ಬರೂ ಒಂದಾದರೆ ಮಾತ್ರ ಅದು ಸಾಧ್ಯ’ ಎಂದು  ಸಂಸದ ಕೆ.ಎಚ್‌. ಮುನಿಯಪ್ಪ ಹೇಳಿದರು.

‘ನಿಮ್ಮ (ಸತೀಶ) ಶಕ್ತಿಯನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗುರುತಿಸಿದ್ದಾರೆ. ಹೀಗಾಗಿ ಎಐಸಿಸಿ ಕಾರ್ಯದರ್ಶಿಯನ್ನಾಗಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುತ್ತೇನೆಂದು ನೀವು ಪಣ ತೊಡಿ’ ಎಂದು ವೇದಿಕೆಯಲ್ಲಿ ಹಾಜರಿದ್ದ ಸತೀಶ ಅವರತ್ತ ಕೈ ಮಾಡಿ ಹೇಳಿದರು.

ಇದಕ್ಕೆ ಸಾಥ್‌ ನೀಡುವಂತೆ ಮಾತನಾಡಿದ ಸಚಿವ ಎಚ್‌.ಕೆ. ಪಾಟೀಲ, ‘ರಮೇಶ– ಸತೀಶ ಒಗ್ಗಟ್ಟಿ ನಿಂದ ಕೆಲಸ ಮಾಡಿದರೆ ನಮ್ಮ ಗೆಲುವಿಗೆ ಶುಭಸೂಚನೆ ಸಿಕ್ಕಂತೆ’ ಎಂದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಮಾತನಾಡಿ, ‘ನಮಗೆ ನಮ್ಮ ಪಕ್ಷದ ನಾಯಕರು ಶತ್ರುಗಳಲ್ಲ. ನಮಗೆ ಬಿಜೆಪಿಯವರು ಶತ್ರುಗಳು ಎನ್ನುವುದು ನೆನಪಿರಲಿ’ ಎಂದು ಎಚ್ಚರಿಸಿದರು.

ಸಹೋದರರ ದ್ವಂದ್ವ ಹೇಳಿಕೆ

‘ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದು ರಮೇಶ ಜಾರಕಿಹೊಳಿ ಹೇಳಿದರೆ, ‘ನಮ್ಮ ನಡುವೆ ಭಿನ್ನಾಭಿಪ್ರಾಯ ಇದೆ. ಇದನ್ನು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಪಡಿಸಬೇಕು’ ಎಂದು ಸತೀಶ ಜಾರಕಿಹೊಳಿ ನುಡಿದರು.

ಅಥಣಿಯಿಂದ ಸ್ಪರ್ಧಿಸಲು ಆಹ್ವಾನ

ಅಥಣಿಯಿಂದ ಸ್ಪರ್ಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಯಬಾಗದಿಂದ ಸ್ಪರ್ಧಿಸು ವಂತೆ ಕೆಪಿಸಿಸಿ ಅಧ್ಯಕ್ಷ ಜಿ.ಪರ ಮೇಶ್ವರ್‌ ಸ್ಪರ್ಧಿಸಬೇಕೆಂದು ಸಚಿವ ರಮೇಶ ಜಾರಕಿಹೊಳಿ ಆಹ್ವಾನ ನೀಡಿದರು.

ಇವರಿಬ್ಬರೂ ನಾಯಕರು ಇಲ್ಲಿಂದ ಸ್ಪರ್ಧಿಸಿದರೆ ಜಿಲ್ಲೆಯ ಎಲ್ಲ 18 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ದರು.  ರಮೇಶ ಅವರ ಮಾತಿಗೆ ಸಿದ್ದರಾಮಯ್ಯ, ಪರಮೇಶ್ವರ್‌ ಸೇರಿದಂತೆ ವೇದಿಕೆಯ ಮೇಲೆ ಇದ್ದ ಎಲ್ಲ ನಾಯಕರು ನಗೆಯಾಡಿದರು.

ನನ್ನ ಬದ್ಧತೆ ಬಗ್ಗೆ ಸಂಶಯ ಬೇಡ: ಸತೀಶ್‌

‘2013ರಲ್ಲಿ ಜಿಲ್ಲೆಯಲ್ಲಿ ಹಾಗೂ ರಾಜ್ಯದ ತುಂಬೆಲ್ಲ ಓಡಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಮುಂಬ ರುವ ಚುನಾವಣೆಯಲ್ಲೂ ಇದೇ ನಿಷ್ಠೆ, ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಇದರ ಬಗ್ಗೆ ಸಂಶಯ  ಬೇಡ’ ಎಂದು ಸತೀಶ ಜಾರಕಿಹೊಳಿ ಹೇಳಿದರು.

‘ನಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ. ಇದು ವೈಯಕ್ತಿಕವಾದುದು. ಪಕ್ಷದ ಚಟುವಟಿಕೆ ಮೇಲೆ ಪರಿಣಾಮ ಬೀರದು. ಪಕ್ಷ ಸಂಘಟನೆಗಾಗಿ ದುಡಿಯಲು ನಾನು ಸಿದ್ಧ. ನನ್ನನ್ನು ಯಾವ ರೀತಿ ಉಪಯೋಗಿಸಬೇಕು ಎನ್ನುವುದು ಪಕ್ಷಕ್ಕೆ ಬಿಟ್ಟಿದ್ದು. ಅವರೀಗ (ರಮೇಶ) ಚಾಲಕನ ಸ್ಥಾನದಲ್ಲಿದ್ದಾರೆ. ನಾನು ಅವರ ಹಿಂದೆ ಕುಳಿತಿದ್ದೇನೆ ಅಷ್ಟೇ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.

‘ಸಮಾವೇಶದ ಆವರಣ ತುಂಬೆಲ್ಲ ಅಂಟಿಸಲಾಗಿರುವ ಪೋಸ್ಟರ್‌ಗಳಲ್ಲಿ ನನ್ನ ಫೋಟೊ ಇಲ್ಲ. ಪೋಸ್ಟರ್‌, ಬ್ಯಾನರ್‌ಗಳಲ್ಲಿ ನನ್ನ ಫೋಟೋ ಬರಲಿ ಎನ್ನುವ ಉದ್ದೇಶದಿಂದ ನಾನು ಕೆಲಸ ಮಾಡುವುದಿಲ್ಲ. ನನ್ನ ಬ್ಯಾನರ್‌ ಕಟ್ಟಲು ಚಾಮರಾಜನಗರದಿಂದ ಬೀದರ್‌ವರೆಗೆ ಜನರಿದ್ದಾರೆ. ಈಗ ಆಗಿರುವ ಸಮಸ್ಯೆಯನ್ನು ಪರಮೇಶ್ವರ್‌ ಹಾಗೂ ಸಿದ್ದರಾಮಯ್ಯ ಸರಿಪಡಿಸಬೇಕು’ ಎಂದು ತಾಕೀತಿನ ದನಿಯಲ್ಲಿ ಹೇಳಿದರು.

* * 

ಯಡಿಯೂರಪ್ಪ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲವನ್ನು ಮನ್ನಾ ಮಾಡಿಸಲಿ

ಸಿದ್ದರಾಮಯ್ಯ

ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)