ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣೆಮಣೆ ಏರಬೇಕಿದ್ದ ಯೋಧ ಮಸಣ ಸೇರಿದ

Last Updated 1 ಜುಲೈ 2017, 6:18 IST
ಅಕ್ಷರ ಗಾತ್ರ

ಹೂವಿನಹಡಗಲಿ: ಮನೆಯ ಮುಂದೆ ಚಪ್ಪರ (ಹಂದರ) ಹಾಕಿ ಸಿಂಗಾರ ಮಾಡಲಾಗಿತ್ತು. ಲಗ್ನದ ಅಕ್ಕಿಯ ಗಂಟು ಆಗಲೇ ದೇವರ ಜಗುಲಿ ಏರಿತ್ತು. ದೇವತಾ ಕಾರ್ಯಗಳು ನಡೆದಿದ್ದವು. ಇಡೀ ಕುಟುಂಬ ಮದುವೆ ಸಡಗರದಲ್ಲಿ ಮುಳುಗಿರುವಾಗಲೇ ವರ ಸಾವಿಗೀಡಾದ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸಿತು. ಅಲ್ಲಿಯವರೆಗೆ ಮದುವೆ ಸಂಭ್ರಮ ಕಳೆಗಟ್ಟಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತು.

ತಾಲ್ಲೂಕಿನ ಬಸರಹಳ್ಳಿ ಗ್ರಾಮದ ಕೊಯಿಲಾರಗಟ್ಟಿ ದೇವಪ್ಪನವರ ಪುತ್ರ ಸಿಐಎಸ್‌ಎಫ್‌ ಯೋಧ ಹನುಮಂತಪ್ಪ ಅವರ ವಿವಾಹ ಶನಿವಾರ ನಡೆಯಬೇಕಿತ್ತು.
ಕೊಯಿಲಾರಟ್ಟಿ ದೇವಪ್ಪನವರ ಮೂರು ಜನ ಮಕ್ಕಳಲ್ಲಿ ಯೋಧ ಹನುಮಂತಪ್ಪ ಮಧ್ಯದವರು. ಹನುಮಂತಪ್ಪನಿಗೆ ಅದೇ ಗ್ರಾಮದ ಸಂಬಂಧಿಯ ವಧುವಿನೊಂದಿಗೆ ವಿವಾಹ ನಿಶ್ಚಯವಾಗಿತ್ತು.

ಆತನ ಕಿರಿಯ ಸಹೋದರನ ಮದುವೆ ಕೂಡ ಇದೇ ಸಂದರ್ಭದಲ್ಲಿ ನಡೆಯಬೇಕಿತ್ತು. ನವ ಜೀವನದ ಕನಸು ಕಾಣುತ್ತಾ ದೂರದ ಜಾರ್ಖಂಡ್‌ನಿಂದ ಸ್ವಗ್ರಾಮಕ್ಕೆ ಬಂದಿದ್ದ ಯೋಧ ಹನುಮಂತಪ್ಪ ಅವರಿಗೆ ಮದುವೆಯ ಯೋಗ ಕೂಡಿ ಬರಲೇ ಇಲ್ಲ. ಜ್ವರದ ನಡುವೆಯೂ ಸ್ನೇಹಿತರು, ಸಂಬಂಧಿಗಳ ಊರಿಗೆ ತೆರಳಿ ಮದುವೆ ಆಮಂತ್ರಣ ನೀಡಿದ್ದರು.

ಗುರುವಾರ ಬೆಳಿಗ್ಗೆ ಮನೆಯಲ್ಲಿ ಲಗ್ನ ಕಟ್ಟಿಸುವ ಮತ್ತು ದೇವತಾ ಕಾರ್ಯಗಳು ನಡೆದವು. ಜ್ವರದಿಂದ ಬಳಲಿ ಹಾಸಿಗೆ ಹಿಡಿದಿದ್ದ ಯೋಧ ಹನುಮಂತಪ್ಪನ ಅವರಿಗೆ ತಾತ್ಕಾಲಿಕ ಚಿಕಿತ್ಸೆ ಕೊಡಿಸಲು ಗದಗ ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಶಂಕಿತ ಡೆಂಗಿ ಇರುವುದಾಗಿ ತಿಳಿಸಿದಾಗ ಆತನ ಜತೆಗಿದ್ದವರಿಗೆ ಆಕಾಶವೇ ಕಳಚಿಬಿದ್ದ ಅನುಭವ ಆಯಿತು. ತುರ್ತು ಚಿಕಿತ್ಸೆಗಾಗಿ ಬೇರೆಡೆ ಕರೆದೊಯ್ಯುವ ಸಿದ್ಧತೆಯಲ್ಲಿರು ವಾಗಲೇ ಯೋಧ ಹನುಮಂತಪ್ಪ ಅವರ ಪ್ರಾಣಪಕ್ಷಿ ಹಾರಿ ಹೋಯಿತು.

ವರನ ಸಾವಿನ ಸುದ್ದಿ ಗ್ರಾಮಕ್ಕೆ ತಲುಪುತ್ತಿದ್ದಂತೆ ಮದುವೆ ಸಂಭ್ರಮ ದಲ್ಲಿದ್ದ ಮನೆಯಲ್ಲಿ ಸೂತಕ ಆವರಿಸಿತು. ಇಡೀ ಗ್ರಾಮದಲ್ಲಿ ನೀರವ ಮೌನ ಕಂಡು ಬಂತು. ಶವವನ್ನು ಗ್ರಾಮಕ್ಕೆ ತರುತ್ತಿದ್ದಂತೆ ಕುಟುಂಬದವರ, ಸಂಬಂಧಿಗಳ ರೋಧನ ಸೇರಿದ್ದವರ ಮನಕಲು ವಂತಿತ್ತು. ‘ಮದುವೆ ಸಿದ್ಧತೆಯ ಕುರಿತು ಎರಡು ತಿಂಗಳಿಂದ ದೂರವಾಣಿಯಲ್ಲಿ ಹೇಳುತ್ತಿದ್ದ ಸಂಭಾಷಣೆಯನ್ನು ನೆನೆದು ಅವರ ತಾಯಿ ಕೊಟ್ರಮ್ಮ ಗದ್ಗದಿತರಾಗಿ ಹೇಳುತ್ತಿದ್ದರು. ಮಗನ ಹಠಾತ್ ಸಾವಿನ ಸುದ್ದಿ ಕೇಳಿ ತಂದೆ ದೇವಪ್ಪ ತಲೆಮೇಲೆ ಕೈಹೊತ್ತು ಕುಳಿತಿದ್ದರು.

ಮದುವೆ ಸಂಭ್ರಮಕ್ಕೆ ಬಂದಿದ್ದ ನೆಂಟರಿಷ್ಟರು, ಗೆಳೆಯರು ವರನ ಅಂತ್ಯ ಸಂಸ್ಕಾರಕ್ಕೆ ಆತನ ಶವದೊಂದಿಗೆ ತೆರಳುವಂತಾಯಿತು. ಸಂತಸದಿಂದ ಇದ್ದ ಮದುವೆ ಮನೆ ಕೆಲ ಕ್ಷಣದಲ್ಲೇ ಮಸಣ ವಾದಂತೆ ಭಾಸವಾಯಿತು.

ಜ್ವರದಿಂದ ಸಾವು: ಡೆಂಗಿ ಶಂಕೆ
ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಯೋಧ, ತಾಲ್ಲೂಕಿನ ಬಸರಹಳ್ಳಿ ಗ್ರಾಮದ ಹನುಮಂತಪ್ಪ ಕೊಯಿಲಾರಗಟ್ಟಿ (30) ಶಂಕಿತ ಡೆಂಗಿ ಜ್ವರದಿಂದ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಜುಲೈ 1ರಂದು (ಶನಿವಾರ) ಅವರ ವಿವಾಹ ನಿಶ್ಚಯವಾಗಿತ್ತು.

ಮದುವೆ ನಿಮಿತ್ತ ರಜೆ ಪಡೆದು, ಸೋಮವಾರವಷ್ಟೇ ಜಾರ್ಖಂಡ್‌ ನಿಂದ ಸ್ವಗ್ರಾಮಕ್ಕೆ ಬಂದಿದ್ದರು. ಜ್ವರಪೀಡಿತರಾಗಿಯೇ ಊರಿಗೆ ಬಂದಿದ್ದ ಹನುಮಂತಪ್ಪ, ಮದುವೆ ಸಿದ್ಧತೆಯ ಓಡಾಟದಲ್ಲಿ ಚಿಕಿತ್ಸೆ ಪಡೆಯುವುದನ್ನು ನಿರ್ಲಕ್ಷಿಸಿದ್ದರು ಎನ್ನಲಾಗಿದೆ.

ಗುರುವಾರ ಬೆಳಿಗ್ಗೆ ಮನೆಯ ಮುಂದೆ ಚಪ್ಪರ ಹಾಕುವ ಶಾಸ್ತ್ರ ನಡೆದಿದ್ದಾಗಲೇ ನಿಸ್ತೇಜರಾಗಿದ್ದ ಅವರನ್ನು ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ರಕ್ತ ತಪಾಸಣೆಯ ಬಳಿಕ ಡೆಂಗಿ ಇರುವ ಶಂಕೆ ವ್ಯಕ್ತಪಡಿಸಿದ ಅಲ್ಲಿನ ವೈದ್ಯರು, ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದರು.
ಆದರೆ, ಹುಬ್ಬಳ್ಳಿಗೆ ತೆರಳುವ ಸಿದ್ಧತೆಯಲ್ಲಿದ್ದಾಗಲೇ ಅವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT