ಶನಿವಾರ, ಡಿಸೆಂಬರ್ 7, 2019
25 °C
ಅಂತರ ಬೆಳೆ ಬೆಳೆಯಲು ಅವಕಾಶ * ಅಂತರ್ಜಲ ವೃದ್ಧಿಗೆ ಸಹಕಾರಿ* ದ್ವಿತಳಿ ಗೂಡು ಉತ್ಪಾದನೆ

ಗುಳಿಪದ್ಧತಿ ಹಿಪ್ಪುನೇರಳೆ ತೋಟಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಳಿಪದ್ಧತಿ ಹಿಪ್ಪುನೇರಳೆ ತೋಟಕ್ಕೆ ಸಲಹೆ

ವಿಜಯಪುರ: ಕೆರೆ, ಕುಂಟೆಗಳಲ್ಲಿ ನೀರಿಲ್ಲದೆ, ಬಹುತೇಕ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಿರುವ ರೈತಾಪಿ ವರ್ಗದ ಜನರ ಆರ್ಥಿಕ ಬಲವನ್ನು ಹಿಮ್ಮಡಿಗೊಳಿಸಲು ಮುಂದಾಗಿರುವ ರೇಷ್ಮೆ ಇಲಾಖೆ, ದ್ವಿತಳಿ ಗೂಡು ಉತ್ಪಾದನೆ, ಹಾಗೂ ಮರಕಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಸುವ ಮೂಲಕ ಕಡಿಮೆ ನೀರಿನಲ್ಲೂ ಉತ್ತಮ ಇಳುವರಿಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ.

ಬಯಲುಸೀಮೆ ಭಾಗಗಳ ಶೇ 80 ರಷ್ಟು ರೈತರು ಹೈನುಗಾರಿಕೆ ಮತ್ತು ರೇಷ್ಮೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ರೈತರ ಪಾಲಿಗೆ ವರದಾನವಾಗಿದ್ದ ರೇಷ್ಮೆ ಉದ್ಯಮದಿಂದ ರೈತರು ವಿಮುಖರಾಗುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ.

ಒಂದು ಕಾಲದಲ್ಲಿ ರೇಷ್ಮೆಹುಳು ಸಾಕಾಣಿಕೆ ಪ್ರಾರಂಭಿಸಿದರೆ, ಮನೆ ಮಂದಿಯೆಲ್ಲಾ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಗ್ರಾಮಾಂತರ ಭಾಗಗಳಲ್ಲಿನ ರೈತರು, ಪ್ರತಿಭಾವಂತ ಯುವಕರನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳುಹಿಸದೆ, ಉದ್ಯಮದಲ್ಲಿ ತೊಡಗುವಂತೆ ಮಾಡುತ್ತಿದ್ದರು. ಸರ್ಕಾರಿ ನೌಕರಿ ಮನೆ ಬಾಗಿಲಿಗೆ ಬಂದರೂ ಅದನ್ನು ತಿರಸ್ಕರಿಸಿ, ಇರೋ ಜಮೀನಿನಲ್ಲಿ ಕೃಷಿ ಮಾಡಿಕೊಂಡರೆ ಸರ್ಕಾರ ನೀಡುವ ಸಂಬಳಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡಿಕೊಂಡು ‘ನಮ್ಮ ಮಕ್ಕಳು ನಮ್ಮ ಕಣ್ಣ ಮುಂದೆ ಇರಲಿ’ ಎನ್ನುವ ಕಾಲ ಅದಾಗಿತ್ತು.

ಈಗ ಪರಿಸ್ಥಿತಿ ಭಿನ್ನವಾಗಿದೆ. ರೇಷ್ಮೆ ಉದ್ಯಮಕ್ಕೆ ಕೈ ಹಾಕುವ ಮುನ್ನ ಎಲ್ಲಾ ಲೆಕ್ಕಾಚಾರಗಳನ್ನು ಮಾಡುತ್ತಿರುವ ದೊಡ್ಡ ರೈತರು, ಮಕ್ಕಳನ್ನು ಬೆಂಗಳೂರಿನಂತಹ ನಗರಗಳ ಕಡೆಗೆ ಹೋಗಿ ಒಂದಷ್ಟು ಹಣ ಸಂಪಾದನೆ ಮಾಡಿಕೊಂಡು ಬರುವಂತೆ ಕಳುಹಿಸಬೇಕಾಗಿದೆ.

ಉನ್ನತ ವ್ಯಾಸಂಗ ಮಾಡಲಿಕ್ಕೆ ಕೈಯಲ್ಲಿ ಹಣವಿಲ್ಲ, ಈಗಾಗಲೇ ರೈತರು ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಹೀಗೆ ಎಲ್ಲಾ ಬ್ಯಾಂಕುಗಳಲ್ಲಿ ಕೃಷಿಗಾಗಿ ಸಾಲಗಳನ್ನು ಮಾಡಿಕೊಂಡು ಕಟ್ಟಲಿಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಗಳಲ್ಲಿ ಸಾಲ ಕೊಡಲಿಕ್ಕೆ ಮುಂದಾಗುತ್ತಿಲ್ಲ. ಸರ್ಕಾರಿ ನೌಕರಿಯನ್ನು ಅರಸಿ ಹೋದರೆ ಲಕ್ಷಾಂತರ ಹಣ ವ್ಯಯಮಾಡಬೇಕೆನ್ನುವ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ರೈತರನ್ನು ಮತ್ತೆ ರೇಷ್ಮೆ ಉದ್ಯಮದ ಕಡೆಗೆ ಕರೆದುಕೊಂಡು ಬಂದು, ಅವರಲ್ಲಿ ಕಮರಿಹೋಗಿರುವ ಆಸೆ  ಚಿಗುರಿಸುವ ಪ್ರಯತ್ನ ಮಾಡಲು ಇಲಾಖೆ ಹೊರಟಿದೆ. ರೇಷ್ಮೆಗೂಡು ಬೆಳೆಯುವಂತಹ ರೈತರಿಗೆ ಹುಳುಸಾಕಾಣಿಕೆ ಮನೆಗೆ ಸಹಾಯಧನ, ಮನೆಗಳಿಗೆ ಬೇಕಾಗಿರುವ ಸಲಕರಣೆಗಳು, ಔಷಧಗಳು, ಗೂಡಿಗೆ ಪ್ರೋತ್ಸಾಹಧನ, ನೀಡಲಾಗುತ್ತಿದೆ. ಜತೆಗೆ ನೀರಿಲ್ಲದಿದ್ದರೂ ಹಿಪ್ಪುನೇರಳೆ ಬೆಳೆಯುವಂತಹ ಹೊಸ ಪದ್ಧತಿಯನ್ನು ಪರಿಚಯಿಸುತ್ತಿದೆ.

ಮಳೆಯಾಶ್ರಿತ ಹಿಪ್ಪುನೇರಳೆ ತೋಟಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಆರ್ಥಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅವಕಾಶಗಳಿವೆ.  ಅದರ ಪ್ರಯೋಜನ ಪಡೆದರೆ ಹೆಚ್ಚಿನ ಹೊರೆಯಿಲ್ಲದೆ ಉತ್ತಮವಾಗಿ ರೇಷ್ಮೆಬೆಳೆ ಬೆಳೆಯಬಹುದು ಎಂದು ರೇಷ್ಮೆಗೂಡು ಮಾರುಕಟ್ಟೆಯ ಉಪನಿರ್ದೇಶಕ ಎಂ.ಎಸ್.ಬೈರಾರೆಡ್ಡಿ ತಿಳಿಸಿದ್ದಾರೆ.

ಹಿಪ್ಪುನೇರಳೆ ತೋಟಗಳನ್ನು ಸಾಲು ಪದ್ಧತಿಗಳಿಗಿಂತ ಗುಳಿಪದ್ಧತಿಯಲ್ಲಿ ನಾಟಿ ಮಾಡಬೇಕು. ದ್ರಾಕ್ಷಿ ಬೆಳೆಯಂತೆ  ಮರಗಳನ್ನಾಗಿ ಮಾಡುವ ಮೂಲಕ ಉತ್ತಮ ಇಳುವರಿಯನ್ನು ಪಡೆಯಬಹುದು. ಜತೆಗೆ ನೀರಿನ ಕೊರತೆಯನ್ನು ನೀಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬಹುದಾಗಿದೆ ಎನ್ನುತ್ತಾರೆ.

ಗುಳಿಪದ್ಧತಿಯಲ್ಲಿ ನೀರಿನ ಅವಶ್ಯಕತೆ ತೀರಾ ಕಡಿಮೆಯಾಗುತ್ತದೆ. ಮಳೆಗಾಲ ಹೊರತುಪಡಿಸಿ ಬೇಸಿಗೆಯಲ್ಲಿ ಮಾತ್ರ ನೀರಿನ ಅವಶ್ಯಕತೆ ಕಂಡುಬರುತ್ತದೆ. ಒಂದು ವರ್ಷದ ನಂತರ ಬೆಳೆ ಕಟಾವಿಗೆ ಬರುತ್ತದೆ. ಗುಳಿಪದ್ಧತಿಯಲ್ಲಿ ನಾಟಿ ಮಾಡುವುದರಿಂದ ಮಳೆಯ ನೀರನ್ನು ಹಿಡಿದಿಟ್ಟುಕೊಂಡು ಅಂತರ್ಜಲ ಮಟ್ಟ ವೃದ್ಧಿಯಾಗಲು ಸಹಕಾರಿಯಾಗುತ್ತದೆ.

ಹಿಪ್ಪುನೇರಳೆ ಕಡ್ಡಿಗಳನ್ನು ಗುಳಿ ಪದ್ಧತಿಯಲ್ಲಿ ನಾಟಿ ಮಾಡುವುದರಿಂದ ಹಣ್ಣೆಲೆ ಬೀಳುವ ಸಾಧ್ಯತೆಗಳು ತೀರಾ ಕಡಿಮೆಯಾಗಿರುತ್ತದೆ. ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿ  ಹೆಚ್ಚಾಗಿರುತ್ತದೆ.

ವಿದ್ಯುತ್ತಿನ ಅಗತ್ಯವೂ ಇರುವುದಿಲ್ಲ. ಕಡಿಮೆ ಸಂಖ್ಯೆಯಲ್ಲಿರುವ ಹಿಪ್ಪುನೇರಳೆ ಕಡ್ಡಿಗಳಿಗೆ ಟ್ಯಾಂಕರುಗಳ ಮೂಲಕ ನೀರು ಹಾಯಿಸಬಹುದಾಗಿದೆ ಎಂದು ವಿವರ ನೀಡಿದೆ.

ಹಿಪ್ಪುನೇರಳೆ ಮರಗಳ ಬೇರಿನ ವಲಯದಲ್ಲಿ ಹೆಚ್ಚಿನ ಪ್ರಮಾಣದ ತೇವಾಂಶವಿರುವುದರಿಂದ ನೀರಿನ ಅಭಾವದ ನಡುವೆ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದರು.

ಹಿಪ್ಪುನೇರಳೆ ಮರಗಳ ನಡುವೆ ಅಂತರವಿರುವುದರಿಂದ ಅಂತರ ಬೆಳೆಗಳಾದ ರಾಗಿ, ಹುರುಳಿ, ಕುದುರೆ ಮಸಾಲೆಯ ಬೆಳೆ ಬೆಳೆಯಬಹುದಾಗಿದೆ.

 

**

ಸಾಲು ಪದ್ಧತಿ ಬದಲು...

ಸಾಲು ಪದ್ಧತಿಯಲ್ಲಿ ಒಂದು ಎಕರೆಗೆ 5,000 ಗಿಡಗಳು ನಾಟಿಯಾಗುತ್ತದೆ, ಗುಳಿ ಪದ್ಧತಿಯಲ್ಲಿ ಒಂದು ಎಕರೆ ಪ್ರದೇಶಕ್ಕೆ ಕೇವಲ 436 ಗಿಡಗಳನ್ನು ಸಾಲಿ ನಿಂದ ಸಾಲಿಗೆ 10x10x10 ಪದ್ಧತಿಯಲ್ಲಿ ನಾಟಿ ಮಾಡಬೇಕು ಎಂದು ರೇಷ್ಮೆ ಇಲಾಖೆ ತಿಳಿಸಿದೆ.

ನಾಟಿ ಮಾಡುವ ಮುನ್ನ ಹಸಿರು ಎಲೆಗಳು, ಕೊಟ್ಟಿಗೆ ಗೊಬ್ಬರ, ಮತ್ತು ಮಣ್ಣನ್ನು ಮಿಶ್ರಣ ಮಾಡಿ, ಗುಂಡಿಗಳ ಒಳಗೆ ತುಂಬಿಸಿದ ನಂತರ ಇ-1 ತಳಿಯ ಹಿಪ್ಪುನೇರಳೆ ಕಡ್ಡಿಗಳನ್ನು ನಾಟಿ ಮಾಡಬೇಕು ಎಂದು ತಿಳಿಸಲಾಗಿದೆ.

**

ಕೃಷಿ ಹೊಂಡಗಳು, ಕುಂಟೆಗಳಿಂದ ನೀರು ಹಾಯಿಸಬಹುದಾಗಿದೆ.  ಕೊಳವೆಬಾವಿಗಳಿಗೆ ಲಕ್ಷಾಂತರ ರೂಪಾಯಿ ಬಂಡವಾಳ  ಹೂಡಿಕೆ ಮಾಡುವುದು ತಪ್ಪುತ್ತದೆ.

-ಎಂ.ಎಸ್.ಬೈರಾರೆಡ್ಡಿ,

ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ

**

-ಎಂ.ಮುನಿನಾರಾಯಣ

ಪ್ರತಿಕ್ರಿಯಿಸಿ (+)