ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಬೆಳೆಗೆ ಉಸಿರಾದ ಹೊಂಡದ ನೀರು

Last Updated 1 ಜುಲೈ 2017, 7:02 IST
ಅಕ್ಷರ ಗಾತ್ರ

ಹನುಮಸಾಗರ: ಕಪ್ಪು ಭೂಮಿ ಹೊಂದಿದ ರೈತರು ಅರೆಬರೆ ಹಸಿಯಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಹೂಲಗೇರಿ ಭಾಗದಲ್ಲಿ ಕೊಂಚ ಮುಂಚೆ ಬಿತ್ತಿದ ಮಿಂಚು ಹೆಸರು ಬೆಳೆ ಸದ್ಯ ಕಾಯಿ ಕಟ್ಟುವ ಹಂತದಲ್ಲಿದೆ. ಆದರೆ, ಮೂರು ವಾರಗಳಿಂದ ಒಂದು ಹನಿ ಮಳೆ ಬೀಳದ ಕಾರಣ  ಬೆಳೆಗಳು ಬಾಡುವ ಹಂತದಲ್ಲಿವೆ.

ಆದರೆ, ಹೂಲಗೇರಿಯ ರೈತ ಪರಪ್ಪ ಗಾಣಿಗೇರ ತಮ್ಮ ಹೊಂಡದಲ್ಲಿ ಸಂಗ್ರಹ ವಾದ ಮಳೆ ನೀರನ್ನು ತುಂತುರು ನೀರಾವರಿ ಪದ್ಧತಿ ಮೂಲಕ ಬೆಳೆಗೆ   ನೀಡುತ್ತಿದ್ದು, ಇದು ಹೆಸರು ಬೆಳೆಗೆ ಆಸರೆಯಾಗಿದೆ. ಹೊಂಡದಲ್ಲಿ ಸಂಗ್ರಹ ವಾದ ನೀರು ಒಂದು ಬಾರಿ ಮಾತ್ರ ಬೆಳೆಗೆ ನೀಡುವಷ್ಟು ಮಾತ್ರ ಇದೆ. 

ಮಳೆ ಕೈಕೊಟ್ಟಾಗ ಒಂದು ಬಾರಿ ನೀರಿನ ಅನುಕೂಲತೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ  ಕೃಷಿ ಇಲಾಖೆ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ಹೊಂಡ ನಿರ್ಮಿಸಿಕೊಟ್ಟು ರಿಯಾಯಿತಿ ದರದಲ್ಲಿ ಡೀಸೆಲ್‌ ಪಂಪ್‌ಸೆಟ್‌ ನೀಡುತ್ತಿದೆ. ಆದರೆ, ಈ ಹಿಂದೆ ಕೃಷಿ ಇಲಾಖೆಯ ನೆರವಿನಿಂದ ಕೃಷಿ ಹೊಂಡ ಮಾಡಿ ಕೊಂಡಿದ್ದ ಪರಪ್ಪ ಅವರಿಗೆ ಈಗ ಅದರ ನೆರವು ದೊರೆತಿದೆ.

‘ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿತ್ತು. ಈ ಕಾರಣದಿಂದ ಕೊಳವೆ ಬಾವಿಯ ಪಕ್ಕದಲ್ಲಿಯೇ ಹೊಂಡ ನಿರ್ಮಾಣ ಮಾಡಿದ್ದೆವು. ಕೊಳವೆಬಾವಿ ಬತ್ತಿ ಹೋಯಿತು. ತೋಟ ತೆಗೆದು ಹೊರ ಬೇಸಾಯ ಮಾಡಿದೆವು. ಸದ್ಯ ಮಳೆ ಕೈಕೊಟ್ಟಿದ್ದು, ಬಾಡುವ ಹಂತ ದಲ್ಲಿದ್ದ ಬೆಳೆಗೆ ಹೊಂಡದಲ್ಲಿ ಸಂಗ್ರಹ ವಾದ ನೀರು ಈಗ ಆಸರೆಯಾಯಿತು’ ಎಂದು ರೈತ ಪರಪರಪ್ಪ ಗಾಣಿಗೇರ ಸಂತಸದಿಂದ ಹೇಳುತ್ತಾರೆ.

ಕೃಷಿ ಅಧಿಕಾರಿಗಳ ತಂಡ ಗುರುವಾರ ಅವರ ಜಮೀನಿಗೆ ಭೇಟಿ ನೀಡಿ ವೀಕ್ಷಿಸಿತು. ಜಿಲ್ಲಾ ಕೃಷಿ ವಿಸ್ತರಣ ಕೇಂದ್ರದ ಮುಂದಾಳು ಡಾ.ಎಂ.ಬಿ. ಪಾಟೀಲ ಮಾತನಾಡಿ, ‘ಕಡಿಮೆ ನೀರಿನಲ್ಲಿ ಹೆಚ್ಚಿನ ಲಾಭ ಪಡೆಯುವ  ರೈತನ ಜಾಣತನ ಉಳಿದ ರೈತರಿಗೆ ಮಾದರಿಯಾಗಿದೆ. ಮಳೆ ಕೈಕೊಟ್ಟಾಗ ರೈತರು ಹತಾಶರಾಗುವ ಬದಲು ಇಂತಹ ಉಪಾಯ ಮಾಡಿಕೊಂಡರೆ ಬೆಳೆಗಳು ಕೈ ಹಿಡಿಯುತ್ತವೆ’ ಎಂದು ಹೇಳಿದರು.

ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ಕಮತರ ಮಾತನಾಡಿ, ‘ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕೂಡಲೇ   ರೈತನಿಗೆ ತುಂತುರ ನೀರಾವರಿ ಸಲಕರಣೆ ಗಳನ್ನು ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಕೃಷಿ ಭಾಗ್ಯ ಯೋಜನೆಯಲ್ಲಿ ಮತ್ತೊಂದು ಹೊಂಡ ನಿರ್ಮಾಣ ಮಾಡುವ ಉದ್ದೇಶವನ್ನು  ರೈತ ಹೊಂದಿದ್ದು, ಡೀಸೆಲ್‌ ಪಂಪ್‌ಸೆಟ್‌ ನೀಡಲಾಗುವುದು’ ಎಂದು ಹೇಳಿದರು. ಜಿಲ್ಲಾ ಆಹಾರ ಭದ್ರತಾ ಅಧಿಕಾರಿ ಎಸ್‌.ಬಿ.ಕೋಣಿ ಇದ್ದರು.

* * 

ಖುಷ್ಕಿ ಬೇಸಾಯದಲ್ಲಿ ನೀರು ಹರಿಸುವುದರ ಬದಲು, ಕಡಿಮೆ ನೀರಿನಲ್ಲಿ ಗರಿಷ್ಠ ಲಾಭ ಪಡೆಯುವ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವುದು ಉತ್ತಮ.
ಡಾ.ಎಂ.ಬಿ.ಪಾಟೀಲ
ಜಿಲ್ಲಾ ಕೃಷಿ ವಿಸ್ತರಣ ಕೇಂದ್ರದ ಮುಂದಾಳು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT