ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿಗೆಯಾದ ಸಗರ ಪಿಯುಸಿ ಕಾಲೇಜು

Last Updated 1 ಜುಲೈ 2017, 7:11 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಸಗರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜ್ಞಾನ ದೇಗುಲವಾಗದೆ ಜಾನುವಾರುಗಳ ಕೊಟ್ಟಿಗೆಯಾಗಿದೆ. ಖಾಸಗಿ ವ್ಯಕ್ತಿಗಳು ಕಾಲೇಜು ಅತಿಕ್ರಮಿಸಿದ್ದು, ಅಲ್ಲಿ ವಾಸವಾಗಿದ್ದಾರೆ. ಲಕ್ಷಾಂತರ ಹಣ ವೆಚ್ಚ ಮಾಡಿ ನಿರ್ಮಿಸಿದ ಸಾರ್ವಜನಿಕ ಆಸ್ತಿ ಸದ್ಬಳಕೆಯಾಗದೆ ದುರ್ಬಳಕೆಯಾಗಿದೆ ಎಂಬುದು ಪ್ರಜ್ಞಾವಂತರ ಆರೋಪ.

ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗಾಗಿ ಎರಡು ಕೋಣೆಯನ್ನು ನಿರ್ಮಿಸಲಾಗಿದ್ದು, ಅಂದಿನ ಶಾಸಕ ಶರಣಬಸಪ್ಪ ದರ್ಶನಾಪುರ  2011 ನವೆಂಬರ್‌ 11ರಂದು ಉದ್ಘಾಟಿಸಿ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದ್ದರು. ಅಂದಿನಿಂದ ಕಾಲೇಜು ಶಿಕ್ಷಣ ಇಲಾಖೆಯ ಸುಪರ್ದಿಯಲ್ಲಿ ಇದೆ.

‘ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪ್ರೌಢಶಾಲೆಯಿಂದ ಬೇರ್ಪಡಿಸಿ  ಪ್ರತ್ಯೇಕವಾದ ಕಾಲೇಜು ನಡೆಸಲು ಕೋಣೆಯನ್ನು ನಿರ್ಮಿಸಲಾಗಿದೆ. ಗ್ರಾಮಸ್ಥರ ನಿಷ್ಕಾಳಜಿಯಿಂದ ಕಾಲೇಜು ಆವರಣದಲ್ಲಿ ಜಾನುವಾರುಗಳನ್ನು ಕಟ್ಟಿದ್ದು, ಕೋಣೆಯಲ್ಲಿ ಕೆಲ ವ್ಯಕ್ತಿಗಳು ಅನಧಿಕೃತವಾಗಿ ವಾಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಮುಂದಾಲೋಚನೆ ಕೊರತೆಯಿಂದ ಸಮಸ್ಯೆ ಉಂಟಾಗಿದೆ’ ಎನ್ನುತ್ತಾರೆ ಗ್ರಾಮದ ಮುಖಂಡ ಮಹೇಶಗೌಡ ಸುಬೇದಾರ.

‘ಕಾಲೇಜಿಗೆ ಇನ್ನೂ ಎರಡು ಕೋಣೆ ಅಗತ್ಯ ಇದೆ. ಕಾಲೇಜಿನ ಸುತ್ತಮುತ್ತಲಿನ ಪರಿಸರ ಕಲುಷಿತವಾಗಿದೆ. ಆವರಣ ಗೋಡೆ ಇಲ್ಲ. ಎರಡು ಕೋಣೆಯು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬೇಕಾಗುತ್ತದೆ. ಇನ್ನುಳಿದಂತೆ ಪ್ರಾಚಾರ್ಯರ  ಹಾಗೂ ಉಪನ್ಯಾಸಕರಿಗೆ ವಿಶ್ರಾಂತಿ ಕೋಣೆ  ನಿರ್ಮಿಸುವುದು ಅಗತ್ಯವಾಗಿದೆ ’ಎಂದು ಹೇಳುತ್ತಾರೆ.

‘ಸದ್ಯ ನಿರ್ಮಿಸಿರುವ ಕಾಲೇಜಿನ ಕಟ್ಟಡದಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ಇಲ್ಲ. ಕಾಲೇಜಿಗೆ ವಿದ್ಯಾರ್ಥಿನಿಯರು ಬರುತ್ತಾರೆ. ಅಗತ್ಯ ಸೌಲಭ್ಯಗಳು ಇಲ್ಲವಾದರೆ ಹೇಗೆ? ಎಂದು ಪ್ರಶ್ನಿಸುತ್ತಾರೆ ಅವರು.

‘ಅನಧಿಕೃವಾಗಿ ವಾಸವಾಗಿರುವ ಕುಟುಂಬವನ್ನು ತೆರವುಗೊಳಿಸಿ ಶಿಕ್ಷಣ ಇಲಾಖೆ ಕಾಲೇಜನ್ನು  ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ಇನ್ನೂ ಹೆಚ್ಚುವರಿಯಾಗಿ ಕೋಣೆಯನ್ನು ನಿರ್ಮಿಸಬೇಕು. ಕಾಲೇಜಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

* * 

6 ವರ್ಷದ ಹಿಂದೆ ಕಾಲೇಜಿಗಾಗಿ ಎರಡು ಕೋಣೆಗಳನ್ನು ನಿರ್ಮಿಸಲಾಗಿದೆ. ಮೂಲ ಸೌಲಭ್ಯಗಳ ಕೊರತೆ ಇದೆ. ಅನಧಿಕೃತವಾಗಿ ವಾಸವಾಗಿರುವವರನ್ನು ತಕ್ಷಣ ತೆರವುಗೊಳಿಸಲಾಗುವುದು
ವೈ.ಎಚ್‌.ವಜ್ಜಲ, ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT