ಮಂಗಳವಾರ, ಡಿಸೆಂಬರ್ 10, 2019
16 °C

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ವಿರೋಧ

ಮಂಡ್ಯ: ‘ಬರಗಾಲದಿಂದ ರೈತರು ತತ್ತರಿಸಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ಮಾಡಿದರು.

‘ಜಿಲ್ಲೆಯ ನಾಲೆಗಳಿಗೆ ನೀರು ಹರಿಸುವ ಬದಲು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ‘ಕರ್ನಾಟಕ ಕಾವೇರಿ ನೀರಾವರಿ ನಿಗಮ’ ಎನ್ನುವ ಬದಲು ‘ತಮಿಳುನಾಡು ಕಾವೇರಿ ನೀರಾವರಿ ನಿಗಮ’ ಎಂದು ನಾಮ ಫಲಕ ಹಾಕಿಕೊಳ್ಳಲಿ. ರಾಜ್ಯ ಸರ್ಕಾರ ಹಾಗೂ ಕಾವೇರಿ ನಿಗಮದ ಅಧಿಕಾರಿಗಳು ತಮಿಳುನಾಡಿನ ನೀರುಗಂಟಿಗಳಂತೆ ಕೆಲಸ ಮಾಡಲಿ’  ಎಂದು ಹರಿಹಾಯ್ದರು.

‘ತಕ್ಷಣ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಿ, ಜಿಲ್ಲೆಯಲ್ಲಿ ಬರಿದಾಗಿರುವ ಕೆರೆಕಟ್ಟೆಗಳು ಹಾಗೂ ಕಾಲುವೆಗಳಿಗೆ ನೀರು ಹರಿಸಬೇಕು. ತಪ್ಪಿದರೆ ಮುಂದೆ ಆಗುವ ಎಲ್ಲ ತೊಂದರೆಗಳಿಗೆ ಸರ್ಕಾರ ಹೊಣೆ ಆಗುತ್ತದೆ. ಕಾನೂನು ಭಂಗ ಚಳವಳಿಯನ್ನೂ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌, ಬೊಮ್ಮೇಗೌಡ, ಹಲ್ಲೇಗೆರೆ ಹರೀಶ್‌, ಇಂಡುವಾಳು ಸಿದ್ದರಾಜು, ಪಣಕನಹಳ್ಳಿ ನಾಗಣ್ಣ, ಹನಿಯಂಬಾಡಿ ನಾಗರಾಜು, ಕನ್ನಲಿ ನವೀನ್‌ ಭಾಗವಹಿಸಿದ್ದರು.

ಅರೆಬೆತ್ತಲೆ ಪ್ರತಿಭಟನೆ: ಕದ್ದು–ಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಸರ್ಕಾರದ ನಡೆ ಸರಿಯಲ್ಲ. ತಕ್ಷಣ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರವೇ ಸೇರಿದಂತೆ ವಿವಿಧ ಸಂಘಟನೆಗಳು ನಗರದ ಸಂಜಯ ವೃತ್ತದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದವು.

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಎಚ್‌.ಡಿ.ಜಯರಾಂ, ಶಂಕರೇಗೌಡ, ಚಂದ್ರು, ಪ್ರಕಾಶ್‌, ಶಂಭೂನಹಳ್ಳಿ ಕೃಷ್ಣ ಇದ್ದರು.

ಪ್ರತಿಭಟನೆ

ಮದ್ದೂರು: ಕೆಆರ್ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು  ಶುಕ್ರವಾರ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಕೊಪ್ಪ ವೃತ್ತದ ಬಳಿ  ಮೈಸೂರು-ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಅವರು,  ರಾಜ್ಯ ಸರಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನರಸರಾಜು ಮಾತನಾಡಿ,  ‘ಸುಮಾರು 5 ಸಾವಿರ ಕ್ಯುಸೆಕ್‌ ನೀರನ್ನು ರಾತ್ರೋ ರಾತ್ರಿ ಕಾವೇರಿ ನದಿ ಮೂಲಕ ತಮಿಳುನಾಡಿಗೆ ಹರಿಯ ಬಿಟ್ಟಿರುವುದು ಸರಿಯಲ್ಲ.

ಕೂಡಲೇ ಕಾವೇರಿ ನದಿಗೆ ಬಿಡುಗಡೆಗೊಳಿಸಿರುವ ನೀರನ್ನು ನಿಲ್ಲಿಸಿ ಕೆಆರ್ಎಸ್ ಅಚ್ಚುಕಟ್ಟು ನಾಲೆಗಳಿಗೆ ಬಿಡುಗಡೆಗೊಳಿಸಬೇಕು ಇಲ್ಲದಿದ್ದಲ್ಲಿ  ಜಾನುವಾರುಗಳೊಂದಿಗೆ ಹೆದ್ದಾರಿ ಬಂದ್‌ ಮಾಡಲಾಗುವುದು’ ಎಂಬ  ಎಚ್ಚರಿಕೆ ನೀಡಿದರು.

ಅರ್ಧ ಗಂಟೆಗೂ ಹೆಚ್ಚುಕಾಲ ಹೆದ್ದಾರಿ ಬಂದ್‌ ಮಾಡಿದ ಪರಿಣಾಮ ನೂರಾರು ವಾಹನಗಳೂ ಸಾಲುಗಟ್ಟಿ ನಿಂತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಡಿವೈಎಸ್‌ಪಿ ಮ್ಯಾಥ್ಯೂ ಥಾಮಸ್ ಬಂದು ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿ ಹೆದ್ದಾರಿ ತಡೆ ತೆರವುಗೊಳಿಸಿದರು.

ರೈತ ಸಂಘದ ಪದಾಧಿಕಾರಿಗಳಾದ ಯರಗನಹಳ್ಳಿ ರಾಮಕೃಷ್ಣಯ್ಯ,  ಕೀಳಘಟ್ಟ ನಂಜುಂಡಯ್ಯ, ವರದರಾಜು, ರಮೇಶ್, ಶ್ರೀಕಂಠು, ಸ್ವಾಮಿ, ಗೊಲ್ಲರದೊಡ್ಡಿ ಅಶೋಕ್, ಶ್ರೀನಿವಾಸ್, ರವಿಕುಮಾರ್, ಅರಸು,  ಸಿದ್ದೇಗೌಡ, ಸಿದ್ದರಾಮು ಇದ್ದರು.

ಕೆಆರ್‌ಎಸ್‌ನಲ್ಲಿ ಬಂದೋಬಸ್ತ್‌

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬ ಕಾರಣಕ್ಕೆ ರೈತರು ಜಲಾಶಯಕ್ಕೆ ಮುತ್ತಿಗೆ ಹಾಕಬಹುದು ಎಂಬ ಕಾರಣದಿಂದ ಜಲಾಶಯದ ಆಸುಪಾಸಿನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಕೈಗಾರಿಕಾ ಭದ್ರತಾ ಪಡೆಯ ಜತೆಗೆ 3 ಕೆಎಸ್‌ಆರ್‌ಪಿ ತುಕಡಿ, 2 ಡಿಎಆರ್‌ ತುಕಡಿ, ಇಬ್ಬರು ಡಿವೈಎಸ್ಪಿಗಳು ಹಾಗೂ 50ಕ್ಕೂ ಹೆಚ್ಚು ಸಿವಿಲ್‌ ಪೊಲೀಸರನ್ನು ನಿಯೋಜಿಸಲಾಗಿದೆ.

ಬೃಂದಾವನ ಪ್ರವೇಶ ದ್ವಾರದಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ. ದಕ್ಷಿಣ ವಲಯ ಐಜಿ ವಿಪುಲ್‌ಕುಮಾರ್‌, ಮಂಡ್ಯ ಎಸ್‌ಪಿ ರಾಧಿಕಾ ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಆರ್‌ಎಸ್‌ನಲ್ಲೇ ಬೀಡು ಬಿಟ್ಟಿದ್ದರು. ಶ್ರೀರಂಗಪಟ್ಟಣದ ಸೋಪಾನ ಕಟ್ಟೆ ಬಳಿ ಕೂಡ ಪೊಲೀಸ್‌ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಎಎಸ್‌ಪಿ ಲಾವಣ್ಯಾ, ಸಿಪಿಐ ಎಂ.ಚಂದ್ರಶೇಖರ್‌, ಪಿಎಸ್‌ಐಗಳಾದ ಯೋಗಾಂಜನಪ್ಪ, ಮಹಮದ್‌ ಅಜರುದ್ದೀನ್‌ ನೇತೃತ್ವದ ಪೊಲೀಸರ ತಂಡ ನದಿ ದಂಡೆಯಲ್ಲಿ ಅರ್ಧ ದಿನ ಬೀಡು ಬಿಟ್ಟಿತ್ತು.

2,300 ಕ್ಯುಸೆಕ್‌ ನೀರು ಹೊರಕ್ಕೆ: ಕೆಆರ್‌ಎಸ್‌ ಜಲಾಶಯದಿಂದ 2,300 ಕ್ಯುಸೆಕ್‌ ನೀರನ್ನು ನದಿಗೆ ಹರಿಯಬಿಡಲಾಗಿದೆ. ಪ್ಲಸ್‌ 50 ಅಡಿ ಮಟ್ಟದ ಗೇಟ್‌ಗಳ ಮೂಲಕ ನೀರು ನದಿಗೆ ಹರಿಯುತ್ತಿದೆ. ಗುರುವಾರ ರಾತ್ರಿಯಿಂದ ನೀರು ಹರಿಯಬಿಡಲಾಗಿದೆ. ಜಲಾಶಯಕ್ಕೆ 7,818 ಕ್ಯುಸೆಕ್‌ ನೀರು ಹರಿದು ಬರುತ್ತಿದೆ ಎಂದು ಕಾವೇರಿ ನಿಗಮದ ಮೂಲಗಳು ತಿಳಿಸಿವೆ.

‘ಪರಿಣಾಮ ನೆಟ್ಟಗಿರಲ್ಲ’

ಮಂಡ್ಯ: ‘ಬೆಂಗಳೂರಿಗೆ ಕುಡಿಯಲು ನೀರು ಬಿಡುತ್ತೇವೆ ಎಂದು ಹೇಳಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ ಜನ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ’ ಎಂದು ನೀರಾವರಿ ನಿಗಮದ ಅಧಿಕಾರಿಗಳಿಗೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಎಚ್ಚರಿಕೆ ನೀಡಿದರು.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಶುಕ್ರವಾರ ದೂರವಾಣಿ ಕರೆ ಮಾಡಿ ಅವರು ಮಾತನಾಡಿದರು. ತಮಿಳುನಾಡಿಗೆ ನೀರು ಬಿಟ್ಟರೆ ಹೋರಾಟ ಮಾಡಲಾಗುವುದು. ನೀರು ನಿಲ್ಲಿಸುವವರೆಗೂ ಪ್ರತಿಭಟನೆ ಮಾಡುತ್ತಿರುತ್ತೇವೆ. ರೈತರು ಪ್ರತಿಭಟನೆ ಮಾಡಲಿ, ಪೊಲೀಸರು ಅವರ ಕೆಲಸ ಮಾಡಲಿ ಇದರ ಬಗ್ಗೆ ಮಾತನಾಡುವುದಿಲ್ಲ ಎಂದರು.

ಬಿಗಿ ಭದ್ರತೆ

ಮಂಡ್ಯ: ತಮಿಳುನಾಡಿಗೆ ನೀರು ಬಿಟ್ಟ ಬೆನ್ನಲ್ಲೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ನಗರದ ತಮಿಳು ಕಾಲೊನಿಗೆ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಯಿತು.

ಹೆದ್ದಾರಿ ತಡೆ

ಮಂಡ್ಯ: ರೈತಸಂಘ (ಮೂಲ ಸಂಘಟನೆ)ಯ ಕಾರ್ಯಕರ್ತರು ನಗರದ ಸರ್‌ ಎಂ.ವಿ. ಪ್ರತಿಮೆಯ ಎದುರು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡಿದರು. ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಚಂದ್ರಶೇಖರ್‌, ಸುಧೀರ್‌ ಕುಮಾರ್‌, ಇಂಡುವಾಳು ಬಸವಾರಾಜು, ತಮ್ಮಯ್ಯ, ಜಯರಾಂ, ಮಂಜುನಾಥ್‌, ಲಿಂಗರಾಜು ಭಾಗವಹಿಸಿದ್ದರು.

ನದಿಗಿಳಿದು ಪ್ರತಿಭಟನೆ

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ರೈತಸಂಘ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ನದಿಗಿಳಿದು ಪ್ರತಿಭಟನೆ ನಡೆಸಿದರು.

ರೈತ ನಾಯಕ ಕೆ.ಎಸ್‌.ನಂಜುಂಡೇಗೌಡ ಹಾಗೂ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕ ಅಧ್ಯಕ್ಷ ರಮೇಶ್‌ಗೌಡ ನೇತೃತ್ವದಲ್ಲಿ ಇಲ್ಲಿನ ಸೋಪಾನಕಟ್ಟೆ ಬಳಿ ಪ್ರತಿಭಟನೆ ನಡೆಯಿತು. ರೈತ ಸಂಘದ ಕಾರ್ಯಕರ್ತರು ಬೆಂಗಳೂರು– ಮೈಸೂರು ಹೆದ್ದಾರಿ ವೃತ್ತದಿಂದ ಮಿನಿ ವಿಧಾನಸೌಧವರೆಗೆ ಬೈಕ್‌ ರ್‌್ಯಾಲಿ ನಡೆಸಿದರು. ತಾಲ್ಲೂಕು ಕಚೇರಿ ಎದುರು ಅರ್ಧ ತಾಸಿಗೂ ಹೆಚ್ಚುಕಾಲ ಧರಣಿ ನಡೆಸಿದರು.

‘ರೈತರಿಗೆ ಘೋರ ಅನ್ಯಾಯವಾಗುತ್ತಿದ್ದರೂ ಕ್ಷೇತ್ರದ ಶಾಸಕ ಮೌನ ವಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ‘ಹೋದ ಪುಟ್ಟ ಬಂದ ಪುಟ್ಟ’ ಎಂಬಂತೆ ವರ್ತಿಸುತ್ತಿದ್ದಾರೆ. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು. ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಗಾಂಧಿ ಮಾರ್ಗದಂತೆ ಸರ್ಕಾರಿ ಕಚೇರಿಗಳ ಮುಂದೆ ಪಿಕೆಟಿಂಗ್‌ ನಡೆಸುತ್ತೇವೆ’ ಎಂದು ಕೆ.ಎಸ್‌. ನಂಜುಂಡೇಗೌಡ ಎಚ್ಚರಿಸಿದರು.

‘ಜುಲೈ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯಕ್ಕೆ ಬರುತ್ತಿದ್ದು, ಅವರಿಗೆ ಘೇರಾವ್‌ ಹಾಕುತ್ತೇವೆ. ಕಾವೇರಿ ನೀರು ಕುಡಿಯುತ್ತಿರುವ ಬೆಂಗಳೂರು, ಮೈಸೂರು ಮತ್ತು ಮಂಡ್ಯ ನಗರಗಳ ಜನ ಈ ಅನ್ಯಾಯದ ವಿರುದ್ಧ ದನಿ ಎತ್ತಬೇಕು. ಜನಪ್ರತಿನಿಧಿಗಳು ಪಕ್ಷಭೇದ ಮರೆತು ಹೋರಾಟಕ್ಕೆ ಧುಮುಕಬೇಕು’ ಎಂದು  ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಕೃಷ್ಣೇಗೌಡ ಹೇಳಿದರು. ಪಿಎಸ್‌ಎಸ್‌ಕೆ ನಿರ್ದೇಶಕರಾದ ಪಾಂಡು, ಬಿ.ಸಿ.ಕೃಷ್ಣೇಗೌಡ, ಯುವ ಅಧ್ಯಕ್ಷ ಬಾಬು, ಕಾರ್ಯಾಧ್ಯಕ್ಷ ಬಿ.ಸಿ.ರಮೇಶ್‌, ಕಡತನಾಳು ಬಾಲಕೃಷ್ಣ ನೀರಿಗೆ ಇಳಿದಿದ್ದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ನದಿಗಿಳಿದು ಪ್ರತಿಭಟನೆ ನಡೆಸಿದರು. ವೇದಿಕೆಯ ರಾಜ್ಯ ಘಟಕ ಅಧ್ಯಕ್ಷ ರಮೇಶ್‌ಗೌಡ, ಜಿಲ್ಲಾ ಘಟಕ ಅಧ್ಯಕ್ಷ ವಿ.ಸಿ.ಉಮಾಶಂಕರ್‌, ರಾಮನಗರ ಜಿಲ್ಲಾ ಘಟಕ ಅಧ್ಯಕ್ಷ ಯೋಗೇಶ್‌ಗೌಡ, ತಾಲ್ಲೂಕು ಅಧ್ಯಕ್ಷ ಭರತ್‌ಗೌಡ, ಮಮತಾ, ಶೋಭಾ, 60 ವರ್ಷದ ರಾಜಮ್ಮ ಇದ್ದರು.

 

ಪ್ರತಿಕ್ರಿಯಿಸಿ (+)