ಸೋಮವಾರ, ಡಿಸೆಂಬರ್ 16, 2019
26 °C
ಆರು ಪೊಲೀಸರನ್ನು ಹತ್ಯೆ ಮಾಡಿದ್ದ ಬಶೀರ್ ಲಷ್ಕರಿ

ಲಷ್ಕರ್ ಕಮಾಂಡರ್ ಹತ್ಯೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಲಷ್ಕರ್ ಕಮಾಂಡರ್ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್‌ –ಎ– ತಯಬಾ ಕಮಾಂಡರ್ ಬಶೀರ್ ಲಷ್ಕರಿ ಮತ್ತು ಮತ್ತೊಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಇದೇ ಕಾರ್ಯಾಚರಣೆಯಲ್ಲಿ ಇಬ್ಬರು ನಾಗರಿಕರೂ ಮೃತಪಟ್ಟಿದ್ದಾರೆ.

ಲಷ್ಕರಿ ನೇತೃತ್ವದ ಉಗ್ರರ ತಂಡ ದಕ್ಷಿಣ ಕಾಶ್ಮೀರದ ಅಚಾಬಲ್‌ ಪ್ರದೇಶದಲ್ಲಿ ಜೂನ್‌ 16ರಂದು ದಾಳಿ ನಡೆಸಿ, ಆರು ಪೊಲೀಸರನ್ನು ಹತ್ಯೆ ಮಾಡಿತ್ತು. ಅಂದೇ ಆತನಿಗಾಗಿ ಶೋಧ ಕಾರ್ಯ ಆರಂಭಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

‘ಲಷ್ಕರಿ ಮತ್ತು ಇನ್ನೂ ಕೆಲವು ಉಗ್ರರು ಅನಂತನಾಗ್‌ನ ಬ್ರೆಂತಿ–ಬತ್ಪೋರಾ ಬಳಿಯ ಹಳ್ಳಿಯ ಮನೆಯೊಂದರಲ್ಲಿ ಅವಿತಿದ್ದಾರೆ ಎಂಬ ಮಾಹಿತಿ ದೊರೆತಿತ್ತು. ಹೀಗಾಗಿ ಅಲ್ಲಿ ಶನಿವಾರ ಬೆಳಿಗ್ಗೆಯೇ ಶೋಧ ಕಾರ್ಯ ಆರಂಭಿಸಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಆದರೆ, ಭದ್ರತಾ ಸಿಬ್ಬಂದಿಯನ್ನು ಕಂಡ ಕೂಡಲೇ ಉಗ್ರರು ಗುಂಡಿನ ದಾಳಿ ನಡೆಸಿದರು. ಜತೆಗೆ, 17 ನಾಗರಿಕರನ್ನು ಮಾನವ ಗುರಾಣಿಗಳಂತೆ ಬಳಸಿಕೊಂಡರು. ನಾಗರಿಕರನ್ನು ರಕ್ಷಿಸಿ, ನಂತರ ಪ್ರತಿದಾಳಿ ನಡೆಸಬೇಕಾಯಿತು. ಹೀಗಾಗಿ, ಕಾರ್ಯಾಚರಣೆ ವಿಳಂಬವಾದರೂ, ಉಗ್ರರನ್ನು ಹತ್ಯೆ ಮಾಡಲಾಯಿತು’ ಎಂದು ಅವರು ತಿಳಿಸಿದ್ದಾರೆ.

‘ಆದರೆ, ಗುಂಡಿನ ಚಕಮಕಿ ವೇಳೆ ಸಮೀಪದ ಮನೆಯೊಳಗೆ ಇದ್ದ ತಹಿರಾ (49) ಅವರಿಗೆ ಗುಂಡು ತಗುಲಿ ಅವರು ಮೃತಪಟ್ಟರು’ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಇದೇ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ನಡೆಸಿದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಯುವಕ ಮೃತಪಟ್ಟಿದ್ದಾನೆ.

ಪ್ರತ್ಯೇಕವಾದಿಗಳದ್ದೇ ಕುಮ್ಮಕ್ಕು

ಜೈಪುರ:
‘ಭದ್ರತಾ ಪಡೆಗಳ ಮೇಲೆ ಕಲ್ಲು ತೂರುವಂತೆ ಕಾಶ್ಮೀರಿ ಯುವಕರಿಗೆ ಅಲ್ಲಿನ ಪ್ರತ್ಯೇಕವಾದಿ ನಾಯಕರೇ ಕುಮ್ಮಕ್ಕು ನೀಡುತ್ತಿದ್ದಾರೆ. ಜತೆಗೆ, ಪಾಕಿಸ್ತಾನದ ಕಾರ್ಯಸೂಚಿಗಳನ್ನು ಜಾರಿಗೆ ತರಲು ಪ್ರಚೋದಿಸುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ’ ಎಂದು ಅಜ್ಮೇರ್‌ ದರ್ಗಾದ ಧಾರ್ಮಿಕ ಮುಖ್ಯಸ್ಥ ಝೈನುಲ್ ಅಬೆದಿನ್ ಅಲಿ ಖಾನ್ ಆಗ್ರಹಿಸಿದ್ದಾರೆ.

‘ಪ್ರತ್ಯೇಕವಾದಿ ನಾಯಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸುತ್ತಾರೆ. ಆದರೆ, ಕಾಶ್ಮೀರದಲ್ಲಿನ ಶೈಕ್ಷಣಿಕ ಸಂಸ್ಥೆಗಳನ್ನು ನಾಶಮಾಡುವ ಮೂಲಕ, ರಾಜ್ಯದ ಮಕ್ಕಳಿಗೆ ಶಿಕ್ಷಣ ಸಿಗದಂತೆ ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ಕೆಲವು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಕಾಶ್ಮೀರ ಸಮಸ್ಯೆಯನ್ನು ರಾಜಕೀಯಗೊಳಿಸುತ್ತಿವೆ. ಇದು ದುರದೃಷ್ಟ ಮಾತ್ರವಲ್ಲ, ನಾಚಿಕೆಗೇಡಿನ ವಿಷಯವೂ ಹೌದು’ ಎಂದು ಹರಿಹಾಯ್ದಿದ್ದಾರೆ.

ಪ್ರತಿಕ್ರಿಯಿಸಿ (+)