ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಆಘಾತ: ಹೋಟೆಲ್ ತಿಂಡಿ, ಕಾಫಿ ದುಬಾರಿ!

Last Updated 1 ಜುಲೈ 2017, 10:50 IST
ಅಕ್ಷರ ಗಾತ್ರ

ಬೆಂಗಳೂರು: ಜಿಎಸ್‍ಟಿ ವ್ಯವಸ್ಥೆ ಜಾರಿಗೆ ಬಂದ ನಂತರ ಹೋಟೆಲ್ ತಿಂಡಿ, ಕಾಫಿ ದುಬಾರಿಯಾಗಿದೆ. ಜಿಎಸ್‍ಟಿ ವ್ಯವಸ್ಥೆ ಬಗ್ಗೆ ಜನರಿಗೆ ಇನ್ನೂ ಗೊಂದಲ ಮುಗಿದಿಲ್ಲ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಕ್ರಾಂತಿಕಾರಕ ತೆರಿಗೆ ಸುಧಾರಣಾ ಕ್ರಮವಾಗಿದ್ದು ಹೊಸ ತೆರಿಗೆ ವ್ಯವಸ್ಥೆ ದೇಶದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಶುಕ್ರವಾರ ಮಧ್ಯರಾತ್ರಿಯಿಂದ ದೇಶದಾದ್ಯಂತ ಜಿಎಸ್‍ಟಿ ವ್ಯವಸ್ಥೆ ಜಾರಿಗೆ ಬಂದಿದ್ದು, ಶನಿವಾರ ಬೆಳಗ್ಗೆ ಹೋಟೆಲ್ ತಿಂಡಿ ಸೇವನೆ ಮಾಡಿದವರಿಗೆ ತಮ್ಮ ಬಿಲ್‍ನಲ್ಲಿ ಜಿಎಸ್‍ಟಿ ಪ್ರಭಾವ ಅನುಭವಕ್ಕೆ ಬಂದಿದೆ.

ಸಾಮಾನ್ಯರಿಗೆ ಹೊರೆ!

ಜಿಎಸ್‍ಟಿ ವ್ಯವಸ್ಥೆಯಿಂದಾಗಿ ಹೋಟೆಲ್ ತಿಂಡಿಗಳು ದುಬಾರಿಯಾಗಿವೆ. ಜಿಎಸ್‌ಟಿಯಲ್ಲಿ ಸಾಮಾನ್ಯ ಹೋಟೆಲ್‌ಗಳಿಗೆ ಶೇ.12 ರಷ್ಟು ಮತ್ತು ಏ.ಸಿ. ಹೋಟೆಲ್‌ಗಳಿಗೆ ಶೇ.18 ರಷ್ಟು ತೆರಿಗೆ ನಿಗದಿಮಾಡಲಾಗಿದೆ. ಹೀಗಾಗಿ ಸಾಮಾನ್ಯ ಹೋಟೆಲ್‍ನಲ್ಲಿ ಆಹಾರ ಸೇವಿಸುವ ವ್ಯಕ್ತಿಗೆ ಬಿಲ್ ಜತೆ ಶೇ.12ರಷ್ಟು ತೆರಿಗೆ ನೀಡಬೇಕಾಗುತ್ತದೆ. ಇಲ್ಲಿಯವರೆಗೆ ಹೋಟೆಲ್ ಮಾಲೀಕರು ನಿಗದಿ ಪಡಿಸಿದ ಬಿಲ್‍ ಜತೆ ಮರೆಮಾಚುವ ತೆರಿಗೆ (ವಸ್ತುವಿನ ದರದ ಜತೆ ಸೇರಿಕೊಂಡಿರುವ ಸುಂಕ-Hidden Charges) ಇರುತ್ತಿತ್ತು. ಆದರೆ ಇನ್ಮುಂದೆ ಈ ಸುಂಕಗಳು ಇರುವುದಿಲ್ಲ ಅಂತಾರೆ ತಜ್ಞರು. ಮಾತ್ರವಲ್ಲ ಎಲ್ಲ ಹೋಟೆಲ್‍ಗಳಲ್ಲಿ ಗ್ರಾಹಕರು ಬಿಲ್ ಜತೆ ಜಿಎಸ್‍ಟಿ ಮಾತ್ರ ಪಾವತಿ ಮಾಡಿದರೆ ಸಾಕು. 

ಇಲ್ಲಿ ನೀಡಿರುವ  ಬಿಲ್ ಬೆಂಗಳೂರಿನ ದರ್ಶಿನಿಯೊಂದರದ್ದು. ಇಲ್ಲಿ ಬಿಲ್ ಜತೆ ಶೇ.12 ಜಿಎಸ್‍ಟಿ ಉಲ್ಲೇಖ ಮಾಡಲಾಗಿದೆ. ಅಂದರೆ ಒಂದು ರೈಸ್ ಬಾತ್ ಬೆಲೆ ₹31.25 ಪೈಸೆ.  ಶೇ.12 ಜಿಎಸ್‍ಟಿ ಸೇರಿರುವ ಕಾರಣ ರೈಸ್ ಬಾತ್ ಬೆಲೆ ₹35 ಆಗಿದೆ. ಇಲ್ಲಿ ಜಿಎಸ್‌‍ಟಿ ವ್ಯವಸ್ಥೆ ಸಾಮಾನ್ಯರ ಪಾಲಿಗೆ ಹೊರೆಯಾಗಿದೆ.

ಈ ಹಿಂದೆ ಪಂಚತಾರಾ ಹೋಟೆಲ್‌ಗಳಿಗೆ ಶೇ 20.5 ರಷ್ಟಿದ್ದ ತೆರಿಗೆ ದರ ಈಗ ಶೇ.18ಕ್ಕೆ ಇಳಿಸಲಾಗಿದೆ. ಹಾಗಾಗಿ ಐಷಾರಾಮಿ ಹೋಟೆಲ್‍ಗಳಲ್ಲಿ ಆಹಾರ ಸೇವನೆ ಮಾಡುವ ಗ್ರಾಹಕರಿಗೆ ಜಿಎಸ್‍ಟಿಯಿಂದಾಗಿ ಲಾಭವೇ ಆಗಲಿದೆ.

 ನಗರದ ಪ್ರತಿಷ್ಠಿತ ಹೋಟೆಲ್‍ನಲ್ಲಿ ಬೆಳಗ್ಗೆ ಕಾಫಿ ಸೇವನೆ  ಮಾಡಿದ ವ್ಯಕ್ತಿಯೊಬ್ಬರು ತಮ್ಮ ಕಾಫಿ ಬಿಲ್‍ನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದಾರೆ.

ಬಿಲ್‍ನಲ್ಲಿ ತೋರಿಸುವಂತೆ ಕಾಫಿಯ ಬೆಲೆ ₹ 32.20 ಪೈಸೆ. ಈ ಬೆಲೆಗೆ ಸಿಜಿಎಸ್‍ಟಿ ಶೇ. 9 ಮತ್ತು ಎಸ್‍ಜಿಎಸ್‍ಟಿ ಶೇ. 9 ವಿಧಿಸಲಾಗಿದೆ. ಇದೆಲ್ಲವನ್ನೂ ಲೆಕ್ಕ ಹಾಕಿದಾಗ ಒಂದು ಕಾಫಿಯ ಬೆಲೆ ₹38.
ಇಲ್ಲಿ ₹32.20 ಪೈಸೆ ಬೆಲೆಯ ಕಾಫಿಗೆ ಶೇ.18 ತೆರಿಗೆ ವಿಧಿಸಲಾಗಿದೆ. ಶೇ. 18 ಇರುವ ತೆರಿಗೆಯನ್ನು ಶೇ.9 ಸಿಜಿಎಸ್‍ಟಿ ಮತ್ತು ಶೇ.9 ಎಸ್‍ಜಿಎಸ್‍ಟಿ ಆಗಿ ವಿಂಗಡಿಸಲಾಗಿದೆ.

ಏನಿದು ಸಿಜಿಎಸ್‍ಟಿ? ಎಸ್‍ಜಿಎಸ್‍ಟಿ?

ಜಿಎಸ್‌‍ಟಿಯಲ್ಲಿ ಮೂರು ವಿಭಾಗಗಳಿವೆ. ಅವುಗಳೆಂದರೆ ಸಿಜಿಎಸ್‍ಟಿ, ಎಸ್‍ಜಿಎಸ್‍ಟಿ ಮತ್ತು ಐಜಿಎಸ್‍ಟಿ.

ಏನಿದು ಸಿಜಿಎಸ್‍ಟಿ  (Central Goods and Service Tax)?
ಸಿಜಿಎಸ್‍ಟಿ ಅಂದರೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ. ಸಿಜಿಎಸ್‍ಟಿ ಅನ್ವಯ ಸಂಗ್ರಹಿಸಲಾದ ಎಲ್ಲ ಆದಾಯವೂ ಕೇಂದ್ರ ಸರ್ಕಾರಕ್ಕೆ ಸೇರುತ್ತದೆ. ಪ್ರಸ್ತುತ ಇರುವ ಕೇಂದ್ರ ಅಬಕಾರಿ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಹೆಚ್ಚುವರಿ ಅಬಕಾರಿ ತೆರಿಗೆ, ಹೆಚ್ಚುವರಿ ಸೀಮಾ ಸುಂಕಗಳು ಸಿಜಿಎಸ್‌ಟಿಯೊಂದಿಗೆ ಸೇರಿಕೊಳ್ಳುತ್ತವೆ.

ಎಸ್‍ಜಿಎಸ್‍ಟಿ  (State Goods and Service Tax)
ಎಸ್‍ಜಿಎಸ್‍ಟಿ ಅಂದರೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ. ಇದರಿಂದ ಬರುವ ಆದಾಯವು ಆಯಾ ರಾಜ್ಯ ಸರ್ಕಾರಗಳಿಗೆ ಸೇರುತ್ತವೆ. ಇದರಲ್ಲಿ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್ ), ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ, ಪ್ರವೇಶ ತೆರಿಗೆ ಮತ್ತಿತರ ರಾಜ್ಯ ತೆರಿಗೆಗಳು ಎಸ್‍ಜಿಎಸ್‍ಟಿಯೊಂದಿಗೆ ವಿಲೀನಗೊಳ್ಳುತ್ತವೆ.

ಐಜಿಎಸ್‍ಟಿ (Integrated Goods and Services Tax)
ಐಜಿಎಸ್‍ಟಿ ಅಂದರೆ ಏಕೀಕೃತ ಸರಕು ಮತ್ತು ಸೇವಾ ತೆರಿಗೆ. ಸರಕು ಮತ್ತು ಸೇವೆಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಚಲಿಸಿದಾಗ ವಿಧಿಸಲಾಗುವ ತೆರಿಗೆ ಇದು. ಐಜಿಎಸ್‍ಟಿಯಿಂದ ಬರುವ ಆದಾಯವನ್ನು ಕೇಂದ್ರ ಹಾಗೂ  ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ.

ಐಷಾರಾಮಿ ಹೋಟೆಲ್‍ಗಳಲ್ಲಿ ಕಡಿಮೆ ದರ


ಈ ಬಿಲ್ ಮುಂಬೈನಲ್ಲಿರುವ ಹೋಟೆಲ್‍ನದ್ದು
3 ಪ್ಲೇಟ್ ಇಡ್ಲಿ ಸಾಂಬಾರ್, 4 ಪ್ಲೇಟ್ ಉಪ್ಪಿಟ್ಟು, 4 ವಡಾ ಸಾಂಬಾರ್  ಬಿಲ್  ₹661,  ಇದರಲ್ಲಿ ತಿಂಡಿಗಳ ಬೆಲೆ  ಒಟ್ಟು ₹555 ಆಗಿದ್ದು ಅದಕ್ಕೆ ವಿಧಿಸಲಾದ ಎಸ್‍ಜಿಎಸ್‍ಟಿ ಮತ್ತು ಸಿಜಿಎಸ್‍ಟಿ ಸೇರಿ ತೆರಿಗೆ ಶೇ.18. ಹಾಗಾಗಿ ಒಟ್ಟು ಬೆಲೆ ₹661, ಅಂದರೆ ₹106 ರೂಪಾಯಿ ತೆರಿಗೆ. 


ಇಲ್ಲಿರುವ ಬಿಲ್ ಚೆನ್ನೈನಲ್ಲಿರುವ ಹೋಟೆಲ್‍ವೊಂದರದ್ದು. ಒಂದು ಪ್ಲೇಟ್  ಪೊಂಗಲ್ ಬೆಲೆ  ₹50 ಮತ್ತು ಕಾಫಿ ಬೆಲೆ ₹25. ಒಟ್ಟು ಬೆಲೆ ₹75.
ಇಲ್ಲಿ ಶೇ.18 ತೆರಿಗೆ ಸೇರಿದಾಗ ಒಟ್ಟು ಬೆಲೆ ₹88.50 ಪೈಸೆ. ₹75 ರೂಪಾಯಿ ಬೆಲೆಯಿರುವ ತಿಂಡಿಗೆ ₹13.50 ಪೈಸೆ ತೆರಿಗೆ ರೂಪದಲ್ಲಿ ಪಾವತಿ ಮಾಡಲಾಯಿತು.

ಇದು ಬೆಂಗಳೂರಿನ ಹೋಟೆಲ್‍ವೊಂದರ ಬಿಲ್. ಇಲ್ಲಿ ಎರಡು ವಡೆ ಬೆಲೆ ₹80 ರೂಪಾಯಿ. ಶೇ. 18 ತೆರಿಗೆ ಸೇರಿದಾಗ ಒಟ್ಟು ಬೆಲೆ ₹94.40. 

ಜಿಎಸ್‍ಟಿ ವ್ಯವಸ್ಥೆ ಜಾರಿಗೆ ಬರುವ ಮುನ್ನ ಆಗಿದ್ದರೆ ಗ್ರಾಹಕ ಈ ಬಿಲ್ ಜತೆ ಶೇ. 20.5 ರಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತಿತ್ತು. ಜಿಎಸ್‍ಟಿ ನಂತರ ಆತ ಪಾವತಿ ಮಾಡಬೇಕಾದ ತೆರಿಗೆ ಶೇ.18.

ಅಂದಹಾಗೆ ಜಿಎಸ್‍ಟಿ ಜಾರಿಗೆ ಬಂದರೆ ಗ್ರಾಹಕರ ಮೇಲೆ ಹೊರೆ ಆಗಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಇದ್ದರೂ, ಅದು ಯಾವ ರೀತಿ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ ಎನ್ನುತ್ತಾರೆ ಜನ ಸಾಮಾನ್ಯರು.

[related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT