ಶನಿವಾರ, ಡಿಸೆಂಬರ್ 14, 2019
25 °C

300 ಕೊಠಡಿಗಳು ಸಂಪೂರ್ಣ ಶಿಥಿಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

300 ಕೊಠಡಿಗಳು ಸಂಪೂರ್ಣ ಶಿಥಿಲ

ಚನ್ನಗಿರಿ: ತಾಲ್ಲೂಕಿನಲ್ಲಿ 303 ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಇವುಗಳ 300 ಕೊಠಡಿಗಳು ದುರಸ್ತಿ ಮಾಡಲು ಸಾಧ್ಯವೇ ಇಲ್ಲದ ಸ್ಥಿತಿಗೆ ತಲುಪಿವೆ. ಸರ್ವ ಶಿಕ್ಷಣ ಅಭಿಯಾನ ಯೋಜನೆ ಸ್ಥಗಿತಗೊಂಡ ಮೇಲೆ ಸರ್ಕಾರಿ ಶಾಲೆಗಳ ಕಟ್ಟಡಗಳ ನಿರ್ಮಾಣಕ್ಕೆ ಒಂದು ನಯಾ ಪೈಸೆ ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ.

ಈ ಬಗ್ಗೆ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಕೂಡಾ ಮಾಡಿಲ್ಲ. ಸರ್ಕಾರಿ ಶಾಲೆಗಳು ಮಕ್ಕಳ ದಾಖಲಾತಿ ಕೊರತೆಯಿಂದ ಶಾಶ್ವತವಾಗಿ ಮುಚ್ಚಿ ಹೋಗುವ ಉದಾಹರಣೆಗಳು ಪ್ರತಿವರ್ಷ ಹೆಚ್ಚುತ್ತಿವೆ. ಮೂಲ ಸೌಕರ್ಯ ನೀಡದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಶಾಲಾ ಕೊಠಡಿಗಳಿಗೆ ಅನುದಾನ ನೀಡಿ ಎಂದು ಜನಪ್ರತಿನಿಧಿಗಳಿಗೆ ನಾಲ್ಕು ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಆದರೆ, ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ನಮ್ಮ ಮಕ್ಕಳನ್ನು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಸೇರಿಸಿದ್ದೇವೆ.

ಹೊಸ ಕೊಠಡಿಗಳನ್ನು ನಿರ್ಮಿಸದಿದ್ದರೆ ಪ್ರತಿ ವರ್ಷ ತಾಲ್ಲೂಕಿನಲ್ಲಿ ಎರಡು– ಮೂರು ಸರ್ಕಾರಿ ಶಾಲೆಗಳು ಶಾಶ್ವತವಾಗಿ ಮುಚ್ಚಿ ಹೋಗುತ್ತವೆ. ಇದನ್ನು ತಡೆಯಲು ಸರ್ಕಾರ ಹೊಸ ಕೊಠಡಿಗಳ ನಿರ್ಮಾಣಕ್ಕೆ ಅಗತ್ಯವಾದ ಅನುದಾನವನ್ನು ನೀಡಬೇಕು’ ಎನ್ನುತ್ತಾರೆ ಗರಗ ಗ್ರಾಮದ ಸಿದ್ದಪ್ಪ, ಗಂಗಾಧರ್. ಸರ್ಕಾರ ಸರ್ಕಾರಿ ಶಾಲೆಗಳಿಗೆ ಸೂಕ್ತ ಸೌಕರ್ಯ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳ ಉಳಿವು ಮತ್ತಷ್ಟು ಕಷ್ಟಕರವಾಗಲಿದೆ ಎನ್ನುತ್ತಾರೆ ಅವರು.

ಮುಖ್ಯಶಿಕ್ಷಕರಿಗೆ ಆದೇಶ

ಶಿಥಿಲ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಬಾರದು ಎಂದು ಮುಖ್ಯ ಶಿಕ್ಷಕರಿಗೆ ಆದೇಶ ನೀಡಲಾಗಿದೆ. 303 ಸರ್ಕಾರಿ ಶಾಲೆಗಳಲ್ಲಿ  ಅನುದಾನಿತ 8,514 ಹಾಗೂ ಅನುದಾನರಹಿತ ಶಾಲೆಗಳಲ್ಲಿ 10,081 ವಿದ್ಯಾರ್ಥಿಗಳು ಇದ್ದಾರೆ ಎಂದು ಶಿಕ್ಷಣ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಈ ಪೈಕಿ ಕೇವಲ ಅನುದಾನಿತ, ಅನುದಾನ ರಹಿತ 94 ಶಾಲೆಗಳಲ್ಲಿ 18,595 ವಿದ್ಯಾರ್ಥಿಗಳ ದಾಖಲಾತಿ ಇರುವುದು ಗಮನಾರ್ಹ ಸಂಗತಿಯಾಗಿದೆ.

ಪ್ರಸ್ತಾವ ಸಲ್ಲಿಕೆ

ಶಿಥಿಲ ಕೊಠಡಿಗಳ ದುರಸ್ತಿ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ಅತ್ಯಂತ ತುರ್ತಾಗಿ 35 ಕೊಠಡಿಗಳ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ಜಯಣ್ಣ.

ತಾಲ್ಲೂಕಿನ ಶಾಲೆಗಳ ಸ್ಥಿತಿಗತಿ

303 ಒಟ್ಟು ಸರ್ಕಾರಿ ಶಾಲೆಗಳು

ಅನುದಾನಿತ, ರಹಿತ... ತಾಲ್ಲೂಕಿನಲ್ಲಿ 57 ಅನುದಾನಿತ ಹಾಗೂ 37 ಅನುದಾನ ರಹಿತ ಶಾಲೆಗಳಿವೆ.

24,336 ವಿವಿಧ ಶಾಲೆಗಳಲ್ಲಿ ಇರುವ ವಿದ್ಯಾರ್ಥಿಗಳು

 

ಪ್ರತಿಕ್ರಿಯಿಸಿ (+)