ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಪ್ರಯತ್ನದಿಂದ ಶಿಕ್ಷಣದಲ್ಲಿ ಪರಿಪೂರ್ಣತೆ

Last Updated 1 ಜುಲೈ 2017, 9:22 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಶಿಕ್ಷಣ ಕ್ಷೇತ್ರ ಬಹಳ ವಿಸ್ತಾರವಾಗಿದ್ದು, ಮಕ್ಕಳಲ್ಲಿ ಶೈಕ್ಷಣಿಕ ಪರಿಪೂರ್ಣತೆ ನಿರೀಕ್ಷಿಸಲು ಸಾಧ್ಯವಿಲ್ಲ. ನಿರಂತರ ಪರಿಶ್ರಮ ಮತ್ತು ಪ್ರಯತ್ನ ಮುಂದುವರಿಸಿದರೆ ಗುರಿ ತಲುಪಲು ಸಾಧ್ಯವಿದೆ’ ಎಂದು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ವೀರಣ್ಣ ಎಸ್.ಜತ್ತಿ ತಿಳಿಸಿದರು.

ನಗರದ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಶಿಕ್ಷಕರ ಶಿಕ್ಷಣ ಸಂಘ ಹಾಗೂ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಬಿ.ಇಡಿ ನಾಲ್ಕನೇ ಸೆಮಿಸ್ಟರ್ ಪಠ್ಯಕ್ರಮದ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ತಲುಪಬೇಕಾದರೆ, ಬಿ.ಇಡಿ ಶಿಕ್ಷಕರು ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು. ಈ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಗೆ ಒಳಪಡುವ 26 ಬಿ.ಇಡಿ ಕಾಲೇಜುಗಳ ಪ್ರಾಚಾರ್ಯ ಹಾಗೂ ಉಪನ್ಯಾಸಕರಿಗಾಗಿ ಈ ಕಾರ್ಯಾಗಾರ ಆಯೋಜಿಸಿದೆ.

4ನೇ ಸೆಮಿಸ್ಟರ್‌ನಲ್ಲಿ ಹೇಗೆ ವಿಷಯಗಳ ನಿರ್ವಹಣೆ ಮಾಡಬೇಕು. ಅಂಕಗಳು, ಕ್ರೆಡಿಟ್ಸ್‌  ನೀಡುವ ಬಗೆ ಮತ್ತು 50 ದಿನಗಳ ಇಂಟರ್ನ್‌ಶಿಪ್ ಕೋರ್ಸ್‌ಗಾಗಿ ಪ್ರಶಿಕ್ಷಣಾರ್ಥಿಗಳನ್ನು ಶಾಲೆಗಳಿಗೆ ನಿಯೋಜಿಸುವ ಕುರಿತು ಚರ್ಚಿಸಲಾಗುವುದು’ ಎಂದರು.

‘ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ 700 ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಎರಡು ಜಿಲ್ಲೆಗಳಿಂದ ಒಟ್ಟು 2000 ಪ್ರಶಿಕ್ಷಣಾರ್ಥಿಗಳನ್ನು ಶಾಲೆಗಳಿಗೆ ಈಗಾಗಲೇ ಹಂಚಿಕೆ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿನ ಸಮಸ್ಯೆ ಮತ್ತು ಗೊಂದಲಗಳ ನಿವಾರಣೆಗೆ ತಾಲ್ಲೂಕು ಹಂತದಲ್ಲಿ ಮುಖ್ಯ ಶಿಕ್ಷಕರ ಜತೆ ಮುಖಾಮುಖಿಯಾಗಿ ಸಮಸ್ಯೆ ನಿವಾರಿಸಬೇಕು’ ಎಂದರು.

‘ನಗರದ ಎಲ್ಲ ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರಿದ್ದಾರೆ. ಆದರೆ ದೂರದ ಊರುಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹಾಗಾಗಿ ಹೆಚ್ಚು ಶಿಕ್ಷಕರಿರುವ ಶಾಲೆಗಳಿಗೆ ಪ್ರಶಿಕ್ಷಣಾರ್ಥಿ ಗಳನ್ನು ಇಂಟರ್ನ್‌ಶಿಪ್‌ಗೆ ನಿಯೋಜಿಸುವು ದರಿಂದ ತೊಡಕಾಗುತ್ತದೆ. ಕೆಲವು ಪ್ರಶಿಕ್ಷಣಾರ್ಥಿಗಳು ತಮ್ಮ ಸ್ವಗ್ರಾಮದ ಶಾಲೆಗಳನ್ನು ಕೇಳಿದ್ದಾರೆ.

ಅಂಥವರಿಗೆ ಅಲ್ಲಿಯೇ ನಿಯೋಜಿಸಿದ್ದೇವೆ. ಸಮಸ್ಯೆಗಳು ಉದ್ಭವಿಸದ ರೀತಿಯಲ್ಲಿ  ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಎಚ್ಚರವಹಿಸಬೇಕು’ ಎಂದು ಸೂಚಿಸಿದರು.
‘ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜತೆಗೆ ಅವರಿಗೆ  ಶಾಲಾ ಹಂತದಲ್ಲಿಯೇ ನೈತಿಕ ಶಿಕ್ಷಣ ಕೊಡಬೇಕು’ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ತಿಳಿಸಿದರು.

ಎಂ.ಎಂ.ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಚ್. ಮಲ್ಲಿಕಾರ್ಜುನಪ್ಪ, ‘ವಿಶ್ವವಿದ್ಯಾಲಯ ಪ್ರತಿ ಸೆಮಿಸ್ಟರ್ ಪ್ರಾರಂಭದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮಾಹಿತಿ ಜತೆಗೆ, ಮುಂದಿನ ಬೋಧನಾ ಯೋಜನೆಗಳ ಕುರಿತು ಮಾಹಿತಿ ಲಭ್ಯವಾಗುತ್ತದೆ. ಬಿಇಡಿ ನಾಲ್ಕನೇ ಸೆಮಿಸ್ಟರ್‌ನಲ್ಲಿ ಹೆಚ್ಚಿನ ಜವಾಬ್ದಾರಿಗಳಿದ್ದು, ಸರಿಯಾಗಿ ನಿರ್ವಹಣೆ ಮಾಡಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಇ.ರುದ್ರಮುನಿ, ‘ಶಿಕ್ಷಕರು ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ವರ್ಗಾ ವಣೆ ಮಾಡಬೇಕು. ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಬೇಕು. ಇದೇ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳ ಲಾಗಿದೆ’ ಎಂದರು.

ದಾವಣಗೆರೆ ವಿಶ್ವವಿದ್ಯಾಲಯ ಶಿಕ್ಷಕರ ಶಿಕ್ಷಣ ಸಂಘದ ಕಾರ್ಯದರ್ಶಿ ಪ್ರೊ.ಕೆ.ಎಸ್.ಗಂಗಾಧರ್, ಖಜಾಂಚಿ ಬಿ.ಎಚ್.ಚನ್ನಬಸಪ್ಪ, ಅನಂತರಾಮು ಹಾಗೂ ಬಿ.ಇಡಿ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಇದ್ದರು.

* *

ಎಲ್ಲಿ ವೈಫಲ್ಯ ಇರುವುದಿಲ್ಲವೋ ಅಲ್ಲಿ ಯಶಸ್ಸು ಇರುವುದಿಲ್ಲ. ವೈಫಲ್ಯಗಳು ನಮ್ಮ ಒಡನಾಡಿಗಳಾಗಿವೆ.
– ವೀರಣ್ಣ ಎಸ್.ಜತ್ತಿ, ಪ್ರಾಂಶುಪಾಲರು, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT