ಶುಕ್ರವಾರ, ಡಿಸೆಂಬರ್ 6, 2019
18 °C

ನಳನಳಿಸಿದ ‘ಚಿಕ್ಕಬೀರನ ಕೆರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಳನಳಿಸಿದ ‘ಚಿಕ್ಕಬೀರನ ಕೆರೆ’

ರಿಪ್ಪನ್‌ಪೇಟೆ: 15 ವರ್ಷಗಳಿಂದ ಗ್ರಾಮದ ಕಸ ಕಡ್ಡಿ, ತ್ಯಾಜ್ಯ ವಿಲೇವಾರಿಯ ಪ್ರಮುಖ ತಾಣವಾಗಿದ್ದ ‘ಚಿಕ್ಕ ಬೀರನ ಕೆರೆ’ ಬರದ ಕಾರಣ ಮರು ಜನ್ಮ ಪಡೆದಿದೆ!

ರಿಪ್ಪನ್‌ಪೇಟೆ –ಹೊಸನಗರ ರಸ್ತೆಯ ರಾಜ್ಯ ಹೆದ್ದಾರಿ ಪಕ್ಕದಲ್ಲಿ ದುರ್ನಾತ ಬೀರುತ್ತಿದ್ದ ಈ ಕೆರೆಯನ್ನು ದಾಟುವಾಗ ಪಾದಚಾರಿಗಳು ಹಾಗೂ ವಾಹನ ಚಾಲಕರು, ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಸಾಗಬೇಕಾಗಿತ್ತು.

ಇಂದು ದುಸ್ಥಿತಿಯಲ್ಲಿದ್ದ ಕೆರೆಗೆ ಕಾಯಕಲ್ಪ ಒದಗಿದೆ. ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ  ಕಾಗೋಡು ತಿಮ್ಮಪ್ಪ ಅವರ ಆಸಕ್ತಿಯಿಂದ ರಾಜ್ಯ ಸರ್ಕಾರದ ಕೆರೆ ಸಂಜೀವಿನಿ ಯೋಜನೆಯಡಿ ಕೆರೆ ಮರುಜೀವ ಪಡೆದು ಕಂಗೊಳಿಸುತ್ತಿದೆ.

ಗ್ರಾಮ ಪಂಚಾಯ್ತಿ ಸಾಥ್‌: ಸುಮಾರು 5 ಎಕರೆ ವಿಸ್ತೀರ್ಣದ ಈ ಕೆರೆ ಅಭಿವೃದ್ಧಿಗೆ ವಿಧಾನ ಸಭಾ ಸದಸ್ಯರ ₹ 5 ಲಕ್ಷ, ಜಿಲ್ಲಾ ಪಂಚಾಯ್ತಿ ಸದಸ್ಯರ ₹ 5 ಲಕ್ಷ ಹಾಗೂ ಗ್ರಾಮ ಪಂಚಾಯ್ತಿ ₹ 2 ಲಕ್ಷ ನೀಡುವ ವಾಗ್ದಾನದಲ್ಲಿ ಕೆರೆಗೆ ಮರುಜೀವ ನೀಡುವ ಕಾಮಗಾರಿ ಕೈಗೊಳ್ಳಲಾಯಿತು. 

ಹೂಳು ಎತ್ತುವುದು, ಕಾಲುವೆ ನಿರ್ಮಾಣ, ತೂಬು ದುರಸ್ತಿ ನಿರ್ಮಾಣ ವನ್ನು ಸುಮಾರು ₹15 ಲಕ್ಷದ ವೆಚ್ಚದಲ್ಲಿ ಗುತ್ತಿಗೆದಾರರು ಪೂರೈಸಿದ್ದಾರೆ. ಒಂದು ತಿಂಗಳು ಹಗಲು–ರಾತ್ರಿ ಈ ಕಾಮಗಾರಿ ನಡೆಯಿತು. ಇದರಿಂದಾಗಿ ಮೊದಲ ಮುಂಗಾರು ಮಳೆಗೇ ನೀರು ತುಂಬಿ ಕೊಂಡ ಕೆರೆ ನೋಡುಗರ ಆಕರ್ಷಣೆಯ ಕೇಂದ್ರವಾಗಿದೆ. 

ಕೆರೆ ಅಚ್ಚುಕಟ್ಟು ಪ್ರದೇಶದ ಸುತ್ತಲೂ ತಡೆಗೋಡೆ, ವಾಯು ವಿಹಾರಕ್ಕೆ  ಅನುಕೂಲ ವಾಗುವಂತೆ ಉದ್ಯಾನವನ ನಿರ್ಮಿಸಲು ಸುಮಾರು ₹ 50 ಲಕ್ಷದ ವೆಚ್ಚದ ನೀಲ ನಕ್ಷೆಯನ್ನು ಗ್ರಾಮ ಪಂಚಾಯ್ತಿ ತಯಾರಿಸಿದೆ.

ಸಾಂಪ್ರದಾಯಿಕವಾಗಿ ಈ ಕೆರೆಯನ್ನು ಜಾನುವಾರುಗಳ ನೀರಡಿಕೆಗೆ ಹಾಗೂ ಗ್ರಾಮದ ಅಗಸರ ಬಟ್ಟೆ ತೊಳೆಯಲು ಬಳಸಲಾಗುತಿತ್ತು. ಊರಿನಲ್ಲಿ ಹಿಂದೂ ಮಹಾಸಭಾ ಆಶ್ರಯದಲ್ಲಿ ನಡೆಯುತ್ತಿದ್ದ ಗಣೇಶೋತ್ಸವದ ಗಣಪತಿ ವಿಗ್ರಹವನ್ನು ಇಲ್ಲೇ ವಿಸರ್ಜನೆ ಮಾಡಲಾಗುತಿತ್ತು.

2002ರಲ್ಲಿ ₹ 2 ಲಕ್ಷ ವೆಚ್ಚದಲ್ಲಿ ಕೂಲಿಗಾಗಿ ಕಾಳು ಯೋಜನೆಯಡಿ ಈ ಕೆರೆಯ ಹೂಳೆತ್ತುವ ಕಾರ್ಯ ನಡೆದಿತ್ತು. ಕ್ರಮೇಣ ನಿರ್ವಹಣೆಯ ಕೊರತೆಯಿಂದ ಊರಿನ ಚರಂಡಿಯ ಕೊಳಚೆ ನೀರು ಕೆರೆಗೆ ಸೇರ್ಪಡೆಗೊಂಡು ಜನಬಳಕೆಗೆ ಬಾರದಂತಾಯಿತು. ಕೊನೆಗೆ ಸತ್ತ ಪ್ರಾಣಿಗಳ, ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ಎಸೆಯುವ ತಾಣವಾಯಿತು.

ಅಂತರ್ಜಲ ವೃದ್ಧಿಗೆ ನೆರವು: ‘ಚಿಕ್ಕಬೀರನಕೆರೆ ಕೆರೆ ಅಭಿವೃದ್ಧಿಯಿಂದ ಸುಮಾರು 100 ಎಕರೆಗೂ ಹೆಚ್ಚು ಜಮೀನಿಗೆ ಅನುಕೂಲವಾಗಲಿದೆ. ಬಾವಿಗಳ ಅಂತರ್ಜಲ ವೃದ್ಧಿಗೂ ನೆರವಾಗಲಿದೆ.  ಜನರ ಸಹಭಾಗಿತ್ವದಲ್ಲಿ ಪಟ್ಟಣದ ಈ ಕೆರೆಯನ್ನು ಸುಂದರವಾಗಿಸುವ ಕನಸು ನಮ್ಮದು’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಆರ್‌.ರಾಘವೇಂದ್ರ.

ಊರಿನ ಅಭಿವೃದ್ಧಿಯಾಗಬೇಕೆಂಬ ಬದ್ಧತೆ ಜನರಲ್ಲಿ, ಜನಪ್ರತಿನಿಧಿಗಳಲ್ಲಿ ಇದ್ದರೆ ಉತ್ತಮ ಕಾರ್ಯವಾಗಬಲ್ಲದು ಎಂಬುದಕ್ಕೆ ಈ ಕೆರೆ ಸಾಕ್ಷಿಯಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ವೇತಾ ಆರ್‌. ಬಂಡಿ.

 

ಪ್ರತಿಕ್ರಿಯಿಸಿ (+)