ಭಾನುವಾರ, ಡಿಸೆಂಬರ್ 8, 2019
25 °C

ಸೋಗಾನೆ: ಕಲಾತ್ಮಕ ಕಾರಾಗೃಹ ನಿರ್ಮಾಣ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಸೋಗಾನೆ: ಕಲಾತ್ಮಕ ಕಾರಾಗೃಹ ನಿರ್ಮಾಣ

ಶಿವಮೊಗ್ಗ: ನಿರ್ಮಾಣದ ಹಂತದಲ್ಲೇ ‘ಕಲಾತ್ಮಕ ಕಾರಾಗೃಹ’ ಎಂದು ಖ್ಯಾತಿ ಪಡೆದಿರುವ ರಾಜ್ಯದ 9ನೇ ಕೇಂದ್ರ ಕಾರಾಗೃಹ ಸೋಗಾನೆ ಬಳಿ ಮುಂದಿನ ತಿಂಗಳು  ಉದ್ಘಾಟನೆಯಾಗಲಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ಧಾರವಾಡ, ತುಮಕೂರು, ಕಲಬುರ್ಗಿಗಳಲ್ಲಿ ಕೇಂದ್ರ ಕಾರಾಗೃಹಗಳಿವೆ.

ಮೈಸೂರಿನಲ್ಲಿ ಕೇಂದ್ರ ಕಾರಾಗೃಹದ ಜತೆಗೆ  ಕೈದಿಗಳ ವೃತ್ತಿ ತರಬೇತಿ ಕೇಂದ್ರ ಕಾರಾಗೃಹವೂ ಇದೆ. ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗಿರುವ ಕಾರಾಗೃಹದ ಆವರಣದ ಒಳಗೇ ಕೈದಿಗಳ ತರಬೇತಿ ಕೇಂದ್ರವೂ ಹೊಂದಿದೆ.

62 ಎಕರೆ ವಿಶಾಲ ಪ್ರದೇಶದಲ್ಲಿ ₹ 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸುಸಜ್ಜಿತ ಕಾರಾಗೃಹ ಹತ್ತು ಹಲವು ವಿಶೇಷತೆ ಹೊಂದಿದೆ. ಏಕಕಾಲಕ್ಕೆ 600 ಕೈದಿಗಳು ಇರಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ. 500 ಪುರುಷರು ಹಾಗೂ 100 ಮಹಿಳಾ ಕೈದಿಗಳಿಗೆ  ಪ್ರತ್ಯೇಕ ವಿಭಾಗ ನಿರ್ಮಿಸಲಾಗಿದೆ.

53 ಒಂಟಿ ಸೆಲ್‌ಗಳು: 

ಇದು ರಾಜ್ಯದಲ್ಲೇ ಅತ್ಯಂತ ಹೆಚ್ಚು ಒಂಟಿ ಸೆಲ್‌ ಹೊಂದಿರುವ ಕಾರಾಗೃಹ. ಪುರುಷರಿಗೆ 49 ಹಾಗೂ ಮಹಿಳೆಯರಿಗೆ 4 ಒಂಟಿ ಸೆಲ್‌ಗಳಿವೆ. ಸಹ ಕೈದಿಗಳ ಜತೆ ಗುಂಪಿನಲ್ಲಿ ಸೇರಿಸಲು ಸಾಧ್ಯವಾಗದ ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿರುವ ಕೈದಿಗಳನ್ನು ಒಂಟಿಯಾಗಿ ಈ ಸೆಲ್‌ಗಳಲ್ಲಿ ಇಡಲಾಗುತ್ತದೆ. ಉಳಿದಂತೆ ಪುರುಷರಿಗೆ 224 ಹಾಗೂ ಮಹಿಳಾ ಕೈದಿಗಳಿಗೆ 8 ಸಾಮೂಹಿಕ ಸೆಲ್‌ಗಳಿವೆ.

50 ಅಡಿ ಎತ್ತರದ ವೀಕ್ಷಣಾ ಗೋಪುರ:

ಕಾರಾಗೃಹಕ್ಕೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಅಪ್ಪಿತಪ್ಪಿ ಒಬ್ಬ ಕೈದಿಯೂ ತಪ್ಪಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇಡೀ ಜೈಲಿನ ಆವರಣ ಮೇಲೆ ಹದ್ದಿನ ಕಣ್ಣಿಡಲು 50 ಅಡಿ ಎತ್ತರದ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಮಹಿಳಾ ಕೈದಿಗಳ ಆವರಣಕ್ಕೆ 25 ಅಡಿ ಎತ್ತರದ ಕಾಂಪೌಂಡ್‌, ಪುರುಷ ಕೈದಿಗಳ ಆವರಣಕ್ಕೆ 27 ಅಡಿ ಎತ್ತರದ ಕಾಂಪೌಂಡ್‌ ನಿರ್ಮಿಸಲಾಗಿದೆ. ವೀಕ್ಷಣಾ ಗೋಪುರದ ಮೇಲೆ ನಿಂತರೆ ಇಡೀ ಕಾರಾಗೃಹ ಪ್ರದೇಶ ಗಸ್ತುಪಡೆಯ ಹದ್ದಿನ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸಲಿದೆ.

ಕೈದಿಗಳ ವೃತ್ತಿ ತರಬೇತಿ ಕೇಂದ್ರ:

ಬಿಡುಗಡೆಯ ನಂತರ ಕೈದಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ವೃತ್ತಿ ತರಬೇತಿ ಕೇಂದ್ರ, ಕಾರ್ಖಾನೆ ವಿಭಾಗ ತೆರೆಯಲಾಗಿದೆ. ಮೇಣದ ಬತ್ತಿ, ಊದುಬತ್ತಿ ತಯಾರಿಕೆ, ಬಟ್ಟೆ ಹೊಲಿಯುವುದು ಮುಂತಾದ ತರಬೇತಿ ನೀಡಲಾಗುತ್ತದೆ. ಕಠಿಣ ಶಿಕ್ಷೆಗೆ ಒಳಗಾದ ಕೈದಿಗಳಿಗೆ ಕೆಲಸ ನೀಡಲೂ ಕಾರಾಗೃಹದ ಒಳಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ.

ಬಯಲು ರಂಗಮಂದಿರ:

ಕೈದಿಗಳ ಮನಃಪರಿವರ್ತನೆಗೆ ಅವಕಾಶ ನೀಡುವ ಸಲುವಾಗಿ ನಾಟಕ ಕಲಿಸಲಾಗುತ್ತದೆ. ಅಂತಹ ನಾಟಕಗಳ ಪ್ರದರ್ಶನಕ್ಕೆ ಸುಸಜ್ಜಿತ ಬಯಲು ರಂಗ ಮಂದಿರ ನಿರ್ಮಿಸಲಾಗಿದೆ.

ಕಾರಾಗೃಹ ನಿರ್ಮಾಣದ ಇತಿಹಾಸ:

ನಗರದ ಮಧ್ಯಭಾಗದಲ್ಲಿ ಜಿಲ್ಲಾ ಕಾರಾಗೃಹವಿದೆ. ಈ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಮಾತ್ರ ಅವಕಾಶವಿದೆ. ಜಿಲ್ಲೆಯವರೇ ಆದ ಬಿ.ಎಸ್‌.ಯಡಿಯೂರಪ್ಪ ಅವರು 2010ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ  ಹೊಸ ಕಾರಾಗೃಹ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು. ಆರಂಭದಲ್ಲಿ ₹ 54 ಕೋಟಿ ವೆಚ್ಚದಲ್ಲಿ ಜಿಲ್ಲಾ ಕಾರಾಗೃಹ ನಿರ್ಮಿಸಲು ಮಾತ್ರ ಒಪ್ಪಿಗೆ ದೊರೆತಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ  ಕೆಂದ್ರ ಕಾರಾಗೃಹವಾಗಿ ಬದಲಾಯಿಸಿತು. ನಿರ್ಮಾಣ ವೆಚ್ಚ ₹ 80 ಕೋಟಿಗೆ ಹೆಚ್ಚಿಸಲಾಗಿತ್ತು.

ಉದ್ಘಾಟನೆಗೂ ಮೊದಲೇ ಚಿತ್ರೀಕರಣ:

ಕಾರಾಗೃಹ ಅಧಿಕೃತವಾಗಿ ಉದ್ಘಾಟನೆ ಯಾಗುವ ಮೊದಲೇ ಅಲ್ಲಿ ಕನ್ನಡದ ‘ದಿ ವಿಲನ್‌’ ಚಲನಚಿತ್ರ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸುದೀಪ್‌, ಶಿವರಾಜ್‌ಕುಮಾರ್‌ ನಟನೆಯ ಈ ಚಿತ್ರವನ್ನು ಜೋಗಿ ಖ್ಯಾತಿಯ ಪ್ರೇಮ್‌ ನಿರ್ದೇಶಿಸುತ್ತಿದ್ದಾರೆ. ಸುದೀಪ್‌ ಈ ಕಾರಾಗೃಹದಲ್ಲಿ ಕಳೆದ ತಿಂಗಳು ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

* * 

ಕಾರಾಗೃಹ ಸಂಪೂರ್ಣ ಸಿದ್ಧವಾಗಿದೆ. ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ. ಜುಲೈ 4ರಂದು ಉದ್ಘಾಟನೆಯ ದಿನ ನಿಗದಿ ಮಾಡಲಾಗಿದೆ.

–ಕೆ.ಬಿ.ಪ್ರಸನ್ನಕುಮಾರ್, ಶಾಸಕ.

ಪ್ರತಿಕ್ರಿಯಿಸಿ (+)