ಶುಕ್ರವಾರ, ಡಿಸೆಂಬರ್ 6, 2019
19 °C

ರವಿ ಬೆಳಗೆರೆ, ಅನಿಲ್ ರಾಜ್‌ ಸ್ಪೀಕರ್ ಮುಂದೆ ಹಾಜರಾಗಲು ಹೈಕೋರ್ಟ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರವಿ ಬೆಳಗೆರೆ, ಅನಿಲ್ ರಾಜ್‌ ಸ್ಪೀಕರ್ ಮುಂದೆ ಹಾಜರಾಗಲು ಹೈಕೋರ್ಟ್‌ ಸೂಚನೆ

ಬೆಂಗಳೂರು: ‘ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಸೋಮವಾರ ವಿಧಾನಸಭೆಯ ಸ್ವೀಕರ್ ಮುಂದೆ ಹಾಜರಾಗಬೇಕು’ ಎಂದು ಹೈಕೋರ್ಟ್‌ ಸೂಚನೆ ನೀಡಿದೆ.

‘ಹಕ್ಕು ಬಾಧ್ಯತೆ ಸಮಿತಿಯ ಶಿಫಾರಸಿನಂತೆ ಸದನದಲ್ಲಿ ಕೈಗೊಂಡಿರುವ ನಿರ್ಣಯವನ್ನು ಮರುಪರಿಶೀಲಿಸಬೇಕು ಎಂದು ಕೋರಿ ಹೊಸ ಜ್ಞಾಪನಾ ಪತ್ರ ಸಲ್ಲಿಸಬೇಕು’ ಎಂದು ಹೈಕೋರ್ಟ್ ಹೇಳಿದೆ.

‘ಸ್ಪೀಕರ್ ಮುಂದೆ ಹಾಜರಾದಾಗ ಅರ್ಜಿದಾರರನ್ನು ಬಂಧಿಸುವ ಭೀತಿ ಇದೆ’ ಎಂಬ ಅರ್ಜಿದಾರರ ಪರ ವಕೀಲರ ಆತಂಕಕ್ಕೆ ಪ್ರತಿಕ್ರಿಯಿಸಿದ ಎಎಜಿ ಪೊನ್ನಣ್ಣ, ‘ಆ ರೀತಿಯ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ’ ಎಂದು ಮೌಖಿಕ ಭರವಸೆ ನೀಡಿದರು.

‘ಒಂದು ವೇಳೆ ಆ ರೀತಿ ಏನಾದರೂ ಆದಲ್ಲಿ ಯಾವುದೇ ಹೊತ್ತಿನಲ್ಲಿ ಬಂದು ಕೋರ್ಟ್ ಸಂಪರ್ಕಿಸಿ’ ಎಂದು ನ್ಯಾಯಮೂರ್ತಿಗಳು ಸೂಚಿಸಿದರು.

‘ಅರ್ಜಿದಾರರನ್ನು ಬಂಧಿಸದಂತೆ ಆದೇಶಿಸಿ’ ಎಂದು ಅರ್ಜಿದಾರರ ಪರ ವಕೀಲರು ಎಷ್ಟು ಬೇಡಿಕೊಂಡರೂ ನ್ಯಾಯಪೀಠ ಆ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿತು.

‘ಇನ್ನು ಮುಂದೆ ಅರ್ಜಿದಾರರು ಯಾವುದೇ ಅವಿಧೇಯತೆ ಪ್ರದರ್ಶಿಸಿದರೆ ಅಥವಾ ಸೊಂಟದ ಕೆಳಗಿನ ಭಾಷೆ ಬಳಸಿದರೆ ಸದನ ನಿಮ್ಮ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ನ್ಯಾಯಪೀಠ ಗಂಭೀರ ಎಚ್ಚರಿಕೆ ನೀಡಿದೆ.

‘ಪತ್ರಿಕೋದ್ಯಮವನ್ನು ಪ್ರಜಾತಾಂತ್ರಿಕ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗಿ’ ಎಂದು ನ್ಯಾಯಪೀಠ ಹೇಳಿದೆ.

ಪ್ರತಿಕ್ರಿಯಿಸಿ (+)