ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಿಗೆಗೆ ತಾಕಿದರೆ ಕರಗುವ ರಾಮನಗರದ ಮೈಸೂರು ಪಾಕ್‌

Last Updated 1 ಜುಲೈ 2017, 19:30 IST
ಅಕ್ಷರ ಗಾತ್ರ

ಮೈಸೂರು ಪಾಕ್‌ ಎಂದರೆ ಯಾರಿಗೆ ಇಷ್ಟವಿಲ್ಲ. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರ ಬಾಯಲ್ಲಿಯೂ ಸಹಜವಾಗಿಯೇ ನೀರು ಬರುತ್ತದೆ.

ಮೈಸೂರು ಪಾಕ್‌ ಸಿದ್ಧಪಡಿಸುವ ರಾಜ್ಯದ ಕೆಲವೇ ಕೆಲವರಲ್ಲಿ ರಾಮನಗರದ ಶ್ರೀ ಜನಾರ್ಧನ ಹೋಟೆಲ್‌ ಮಾಲೀಕರೂ ಒಬ್ಬರು. ನಗರದ ಮುಖ್ಯ ರಸ್ತೆಯಲ್ಲಿ (ಹಳೆ ಬೆಂಗಳೂರು– ಮೈಸೂರು ರಸ್ತೆ) ಇರುವ ಈ ಹೋಟೆಲ್‌ ಮೈಸೂರು ಪಾಕ್‌ನಿಂದಾಗಿಯೇ ರಾಜ್ಯದಾದ್ಯಂತ ಪ್ರಖ್ಯಾತಿ ಗಳಿಸಿಬಿಟ್ಟಿದೆ.

ಈ ರಸ್ತೆಯಲ್ಲಿ ಹಾದು ಹೋಗುವ ಹೊಸಬರು ತಾವಾಗಿಯೇ ಹೋಟೆಲ್‌ ಒಳಗೆ ಬರುವಂತೆ ಮೈಸೂರು ಪಾಕಿನ ಸುವಾಸನೆ ಅವರನ್ನು ಕರೆದು ತರುತ್ತದೆ. ಮೈಸೂರು ಪಾಕ್‌ನ ಸಣ್ಣ ತುಣುಕಿನ ರುಚಿ ನೋಡಿದ ಮೇಲೆ ಇನ್ನೊಂದು ‘ಪೀಸ್‌’ ಕೊಡಿ ಎಂದು ಕೇಳುವವರೇ ಹೆಚ್ಚು. ಬಾಯಿಗಿಳಿದ ಈ ಮೈಸೂರು ಪಾಕ್‌ ಯಾವಾಗ ಕರಗಿ ಹೋಯಿತು ಎಂಬುದೇ ಗೊತ್ತಾಗುವುದಿಲ್ಲ. ಆದರೆ, ರುಚಿ ಮಾತ್ರ ನಾಲಿಗೆ ಮೇಲೆ ಹಾಗೆಯೇ ಇರುತ್ತದೆ. ಅದು ದೂರವಾಗುವ ಮುನ್ನವೇ ಇನ್ನೂ ಸ್ವಲ್ಪ ತಿನ್ನೋಣ ಎನ್ನಿಸುತ್ತದೆ.

ತಿಂದ ಮೇಲೆ, ಈ ರುಚಿ ಎಲ್ಲರಿಗೂ ತಲುಪಿಸುವ ಆಸೆ ಹುಟ್ಟುತ್ತದೆ. ಕೆ.ಜಿ ಗಟ್ಟಲೆ ಮೈಸೂರು ಪಾಕ್‌ ಅನ್ನು ಕಟ್ಟಿಸಿಕೊಂಡು ಹೋಗುತ್ತಾರೆ. ಒಮ್ಮೆ ಈ ಹೋಟೆಲಿನಲ್ಲಿ ಮೈಸೂರು ಪಾಕಿನ ರುಚಿ ನೋಡಿದವರು ಇದರ ಕಾಯಂ ಗ್ರಾಹಕರಾಗುವುದುಂಟು. ಬೆಂಗಳೂರು– ಮೈಸೂರು ಮಾರ್ಗದಲ್ಲಿ ಸ್ವಂತ ವಾಹನಗಳಲ್ಲಿ ಸಾಗುವ ಹಲವರು ರಾಮನಗರ ಬಂದಾಗ ಈ ಹೋಟೆಲ್‌ ಕಡೆ ವಾಹನವನ್ನು ತಿರುಗಿಸಿ ಮೈಸೂರು ಪಾಕ್‌ ಸವಿದು, ಮನೆಗೆ ತೆಗೆದುಕೊಂಡು ಹೋಗುತ್ತಾರೆ.

ಬೆಂಗಳೂರು, ಮಂಡ್ಯ, ಮೈಸೂರು ಭಾಗದವರು ಇಲ್ಲಿಗೆ ಬಂದು ಮೈಸೂರು ಪಾಕ್‌ ಅನ್ನು ಖರೀದಿಸುತ್ತಾರೆ. ಚನ್ನಪಟ್ಟಣದಲ್ಲಿ ಬೊಂಬೆಗಳನ್ನು ಖರೀದಿಸಲು ಬರುವ ಹಲವರು ರಾಮನಗರಕ್ಕೆ ಬಂದು ಮೈಸೂರು ಪಾಕ್‌ನ ರುಚಿ ನೋಡಿ ಹೋಗುವುದೂ ಉಂಟು.

ರಾಮನಗರದಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಗೆ ರಾಜ್ಯ ಮತ್ತು ಹೊರ ರಾಜ್ಯದಿಂದಲೂ ರೇಷ್ಮೆ ಕೃಷಿಕರು, ನೂಲು ಬಿಚ್ಚಾಣಿಕೆದಾರರು (ರೀಲರ್‌) ಬರುತ್ತಿರುತ್ತಾರೆ. ಅವರೂ ಇಲ್ಲಿನ ಮೈಸೂರು ಪಾಕ್‌ ಸವೆದು ಕಾಯಂ ಗ್ರಾಹಕರಾಗಿದ್ದಾರೆ. ಇದು ಜನಾರ್ಧನ್‌ ಹೋಟೆಲ್‌ನ ಪ್ರಖ್ಯಾತಿಯನ್ನು ರಾಜ್ಯದ ಹೊರಗೂ ಹಬ್ಬುವಂತೆ ಮಾಡಿದೆ.

ಜನಾರ್ಧನ್‌ ಹೋಟೆಲ್‌ನ ಇತಿಹಾಸ ಇದು:
ಈ ಹೋಟೆಲ್‌ಗೆ 91 ವರ್ಷಗಳ ಕಥೆಯಿದೆ. ಜನಾರ್ದನಯ್ಯ ಎಂಬುವರು 1926ರಲ್ಲಿ ಇದನ್ನು ಸ್ಥಾಪಿಸಿದರು. ಹಾಗಾಗಿ ಇದಕ್ಕೆ ಜನಾರ್ಧನ್‌ ಹೋಟೆಲ್‌ ಎಂದೇ ಹೆಸರಿದೆ. ಆಗಿನಿಂದಲೇ ಇದು ಮೈಸೂರು ಪಾಕಿಗೆ ‘ಫೇಮಸ್‌’ ಆಗಿತ್ತು. ಜನಾರ್ದನಯ್ಯ ಅವರು ಸಿದ್ಧಪಡಿಸುತ್ತಿದ್ದ ಮೈಸೂರು ಪಾಕ್‌ ಮೈಸೂರಿನ ಅರಮನೆಯನ್ನೂ ತಲುಪಿದ್ದಿದೆ ಎಂದು ಸ್ಮರಿಸುತ್ತಾರೆ ಅವರ ಮೊಮ್ಮಗ ಜಿ.ಪಿ. ಪ್ರಶಾಂತ್‌ (ಈಗ ಇವರೇ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ).

ಜನಾರ್ದನಯ್ಯ ಅವರು 1962ರವರೆಗೆ ಹೋಟೆಲ್‌ ನಡೆಸಿಕೊಂಡು ಬಂದಿದ್ದರು. ನಂತರ ಅವರ ಮಗ ಪರಮೇಶ್ವರಯ್ಯ 2000ದವರೆಗೆ ಹೋಟೆಲ್‌ ನಡೆಸಿದರು. ಈ ಅವಧಿಯಲ್ಲಿಯೂ ಮೈಸೂರು ಪಾಕಿನ ರುಚಿಯಲ್ಲಿ ವ್ಯತ್ಯಾಸವಾಗಲಿಲ್ಲ.

2000ದಿಂದ ಈಚೆಗೆ ಈ ಹೋಟೆಲ್‌ ಅನ್ನು ಜಿ.ಪಿ.ಪ್ರಶಾಂತ್‌ ನೋಡಿಕೊಳ್ಳುತ್ತಿದ್ದಾರೆ. ಪ್ರಶಾಂತ್‌ ಮತ್ತು ಅವರ ಪತ್ನಿ ಗಾಯತ್ರಿ ಅವರು ಸ್ವತಃ ನಿಂತಿದ್ದು ತಾವೇ ಪಾಕ ತೆಗೆಸಿ, ಮೈಸೂರು ಪಾಕ್‌ಗೆ ಅಂತಿಮ ಸ್ಪರ್ಶ ನೀಡುತ್ತಾರೆ.

ಮೈಸೂರು ಪಾಕ್‌ ತಯಾರಿಕೆ ವಿದ್ಯೆ ಬಂದದ್ದು ಹೇಗೆ:
‘ತಾತ ಜನಾರ್ದನಯ್ಯ ಅವರು ಮಂಡ್ಯದಲ್ಲಿ ವಾಸವಿದ್ದಾಗ ಅಲ್ಲಿನ ಶಿಕ್ಷಕರೊಬ್ಬರು ಮೈಸೂರು ಪಾಕ್‌ ತಯಾರಿಸುವುದನ್ನು ಹೇಳಿಕೊಟ್ಟಿದ್ದರು ಎಂಬುದನ್ನು ನನ್ನ ತಂದೆಯವರಿಂದ ಕೇಳಿ ತಿಳಿದಿದ್ದೇನೆ’ ಎನ್ನುತ್ತಾರೆ ಪ್ರಶಾಂತ್‌.

‘ಅದರಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ರುಚಿಕರ ಮೈಸೂರು ಪಾಕ್‌ ಅನ್ನು ತಾತ ತಯಾರಿಸಿದರು. ಅದು ಬಾಯಲ್ಲಿಡುತ್ತಿದ್ದಂತೆ ಕರಗಿ ಬಿಡುತ್ತಿತ್ತು. ಸುವಾಸನೆಯಿಂದ ಕೂಡಿತ್ತು. ಇದೇ ವಿದ್ಯೆಯನ್ನು ಅವರು ನನ್ನ ತಂದೆಗೂ (ಪರಮೇಶ್ವರಯ್ಯ) ಕಲಿಸಿದ್ದರು. ಬಳಿಕ ಅಪ್ಪನವರಿಂದ ಅದನ್ನು ನಾನು ಕಲಿತಿದ್ದೇನೆ’ ಎಂದು ಅವರು ವಿವರಿಸುತ್ತಾರೆ.

‘ಕಡ್ಲೆಹಿಟ್ಟು, ತುಪ್ಪ ಮತ್ತು ಸಕ್ಕರೆಯನ್ನು ಸರಿಯಾದ ಮಿಶ್ರಣದೊಂದಿಗೆ ಬೆರೆಸಿ ಮೈಸೂರು ಪಾಕ್‌ ತಯಾರಿಸುವುದು. ತಾತ ಮತ್ತು ಅಪ್ಪ ಬೆಣ್ಣೆಯನ್ನು ಖರೀದಿಸಿ ತಾವೇ ತುಪ್ಪ ಮಾಡಿ ಮೈಸೂರು ಪಾಕ್‌ ಮಾಡುತ್ತಿದ್ದರು. ಆದರೆ ಈಗ ನಾನು ಬ್ರಾಂಡೆಡ್‌ ತುಪ್ಪ ಮತ್ತು ಕಡ್ಲೆಹಿಟ್ಟನ್ನು ಖರೀದಿಸುತ್ತಿದ್ದೇನೆ. ಈಗ ಗ್ರಾಹಕರು ಹೆಚ್ಚಿರುವ ಕಾರಣ ಯಂತ್ರವನ್ನು ಖರೀದಿಸಿದ್ದೇನೆ. ಪಾಕ ಮತ್ತು ಅಂತಿಮ ಸ್ಪರ್ಶ ಬಹಳ ಮುಖ್ಯವಾಗಿರುವುದರಿಂದ ಅವನ್ನು ಸ್ವತಃ ನಾನು ಅಥವಾ ನನ್ನ ಪತ್ನಿಯೇ ಮಾಡುತ್ತೇವೆ. ಉಳಿದ ಕೆಲಸವನ್ನು ಹೋಟೆಲ್‌ನ ಸಿಬ್ಬಂದಿ ಮಾಡುತ್ತಾರೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಹೋಟೆಲ್‌ ಬೆಳಿಗ್ಗೆ 7.30ರಿಂದ ರಾತ್ರಿ 9 ಗಂಟೆಯವರೆಗೂ ತೆರೆದಿರುತ್ತದೆ. ಮೈಸೂರು ಪಾಕ್‌ ತಯಾರಿಕೆಯ ಕೆಲಸಕ್ಕೆ ಬೆಳಿಗ್ಗೆ 5.30ಕ್ಕೆ ಚಾಲನೆ ಸಿಗುತ್ತದೆ. ದಿನಕ್ಕೆ ಇಂತಿಷ್ಟು ಕೆ.ಜಿ ಎಂದು ನಿಗದಿ ಮಾಡಿಕೊಂಡು ಇದನ್ನು ತಯಾರಿಸುವುದಿಲ್ಲ. ಮುಂಗಡ ಬೇಡಿಕೆಯಿದ್ದರೆ ಅದಕ್ಕೆ ಅನುಗುಣವಾಗಿ ಸಿದ್ಧಪಡಿಸುತ್ತಾರೆ. ಅಲ್ಲದೆ ಹೋಟೆಲ್‌ನಲ್ಲಿ ಯಾವಾಗಲೂ ಕನಿಷ್ಠ ಐದು ಕೆ.ಜಿ ಮೈಸೂರು ಪಾಕ್‌ ಇರುವಂತೆ ಎಚ್ಚರವಹಿಸಲಾಗುತ್ತದೆ. ಅದು ಖಾಲಿಯಾಗುವುದಕ್ಕೂ ಮುನ್ನವೇ ಪುನಾ ಐದು ಕೆ.ಜಿ ಬಂದು ಸೇರುವಂತೆ ನೋಡಿಕೊಳ್ಳುತ್ತೇವೆ’ ಎನ್ನುತ್ತಾರೆ ಅವರು.

‘ಕುಟುಂಬದವರೇ ಮುತುವರ್ಜಿ ವಹಿಸಿ ಮೈಸೂರು ಪಾಕ್‌ ತಯಾರಿಸುತ್ತಿರುವುದರಿಂದ ಗುಣಮಟ್ಟದಲ್ಲಿ ರಾಜಿ ಆಗಿಲ್ಲ. ನಿತ್ಯ ಸ್ಥಳೀಯ ಗ್ರಾಹಕರ ಜತೆಗೆ ಪ್ರವಾಸಿಗರು, ಹೊರ ಜಿಲ್ಲೆಯವರು, ರೈತರು, ಪ್ರಯಾಣಿಕರು ಬಂದು ಇಲ್ಲಿನ ಸಿಹಿಯನ್ನು ಸವಿಯುತ್ತಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದವರು ಇಲ್ಲಿ ಜತೆ ಜತೆಯಲ್ಲಿಯೇ ಕುಳಿತು ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಮೈಸೂರು ಪಾಕ್‌ ತಿನ್ನುತ್ತಾರೆ. ಮುಸ್ಲಿಂ ಸಮುದಾಯದವರು ಹೆಚ್ಚಿಗೆ ಮೈಸೂರು ಪಾಕ್‌ ಖರೀದಿಸುತ್ತಾರೆ ಎಂದು ಅವರು ವಿವರಿಸುತ್ತಾರೆ.

ಮೈಸೂರು ಪಾಕ್ ಜತೆಗೆ ಬಾದಾಮಿ ಹಲ್ವಾಗೂ ಹೆಚ್ಚಿನ ಬೇಡಿಕೆ ಇದೆ. ಎರಡೂ ಸಿಹಿ ತಿನಿಸಿನ ಬೆಲೆ ಕೆ.ಜಿಗೆ ತಲಾ ₹ 680 ನಿಗದಿ ಮಾಡಲಾಗಿದೆ.
ಪೂರ್ಣ ತುಪ್ಪದಲ್ಲಿಯೇ ಮಾಡಿರುವುದರಿಂದ ಇಲ್ಲಿನ ಮೈಸೂರು ಪಾಕ್‌ ತಿಂಗಳುಗಟ್ಟಲೆ ಇಟ್ಟರೂ ಕೆಡುವುದಿಲ್ಲ. ರುಚಿಯಲ್ಲೂ ಬದಲಾವಣೆ ಆಗುವುದಿಲ್ಲ. ಆದರೆ ದಿನ ಕಳೆದಂತೆ ಇದು ಗಟ್ಟಿಯಾಗುತ್ತದೆ. ‘ಒವೆನ್‌’ನಲ್ಲಿ ಒಮ್ಮೆ ಬಿಸಿ ಮಾಡಿಕೊಂಡರೆ ಮೊದಲಿನ ಮೃದು ಮೈಸೂರು ಪಾಕ್‌ ದೊರೆಯುತ್ತದೆ ಎಂದು ಹೇಳುತ್ತಾರೆ ಪ್ರಕಾಶ್‌.

ಸಿ.ಎಂ ಮೆಚ್ಚಿದ ಮೈಸೂರು ಪಾಕ್‌
ಕಳೆದ ವರ್ಷ ಬೆಂಗಳೂರಿನಲ್ಲಿ ಕೆ.ಎಂ.ಎಫ್ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮನಗರದ ಜನಾರ್ಧನ್‌ ಹೋಟೆಲ್‌ನ ಮೈಸೂರು ಪಾಕ್‌ ರುಚಿಯ ಬಗ್ಗೆ ಹೊಗಳಿದ್ದರು. ಇಲ್ಲಿ ತಯಾರಾಗುವ ಮೈಸೂರು ಪಾಕ್‌ ತುಂಬಾ ರುಚಿಕರವಾಗಿರುತ್ತದೆ ಎಂದಿದ್ದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆ.ಎಂ.ಎಫ್‌ನಲ್ಲಿ ಮೈಸೂರು ಪಾಕ್‌ ಸಿದ್ಧಪಡಿಸುವವರಿಗೆ ಜನಾರ್ಧನ್‌ ಹೋಟೆಲ್‌ನಲ್ಲಿ ತರಬೇತಿ ಕೊಡಿಸಬೇಕು ಎಂದೂ ಸಲಹೆ ನೀಡಿದ್ದರು. ಮುಖ್ಯಮಂತ್ರಿ ಅವರು ಹೀಗೆ ಮೆಚ್ಚುಗೆ ವ್ಯಕ್ತಪಡಿಸಿದ ನಂತರ ಜನಾರ್ಧನ್‌ ಹೋಟೆಲ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಹೋಟೆಲ್‌ ಮಾಲೀಕ ಜಿ.ಪಿ. ಪ್ರಶಾಂತ್‌.

ಮೈಸೂರು ಪಾಕ್‌ ಇತಿಹಾಸ
ಮೈಸೂರಿನ ಒಡೆಯರ್‌ ಅವರ ಅರಮನೆಯಲ್ಲಿ ಪಾಕತಜ್ಞರಾಗಿದ್ದ ಕಾಕಾಸುರ ಮಾರಪ್ಪ ಎಂಬುವರು ಒಂದು ದಿನ ಒಡೆಯರ್‌ ಅವರಿಗೆ ಕಡ್ಲೆಹಿಟ್ಟು, ತುಪ್ಪ, ಸಕ್ಕರೆಯಿಂದ ಸಿಹಿ ತಿಂಡಿಯೊಂದನ್ನು ಮಾಡಿಕೊಟ್ಟಿದ್ದರು. ಒಡೆಯರ್‌ ಅವರು ಈ ತಿಂಡಿಯ ಹೆಸರನ್ನು ಕೇಳಿದಾಗ ಮಾರಪ್ಪ ಏನೂ ತೋಚದೆ ಮೈಸೂರು ಪಾಕ್‌ ಎಂದು ಹೇಳಿದರು. ಆಗಿನಿಂದ ಇದಕ್ಕೆ ಮೈಸೂರು ಪಾಕ್‌ ಎಂಬ ಹೆಸರು ಬಂದಿತು ಎಂಬ ಕತೆ ಇದೆ.  

***

ಮೈಸೂರು ಪಾಕ್‌ನ ಬಣ್ಣ ಮತ್ತು ಸುವಾಸನೆಗಾಗಿ ಹೆಚ್ಚುವರಿಯಾಗಿ ಏನನ್ನೂ ಹಾಕುವುದಿಲ್ಲ. ಕಡ್ಲೆಹಿಟ್ಟು ಬಳಸುವುದರಿಂದ ತಾನಾಗಿಯೇ ಹಳದಿ ಬಣ್ಣ ಬರುತ್ತದೆ. ತುಪ್ಪವನ್ನು ಮಾತ್ರವೇ ಉಪಯೋಗಿಸುವುದರಿಂದ ಅದರ ಸುವಾಸನೆಯೇ ಇರುತ್ತದೆ

ಗಾಯತ್ರಿ ಪ್ರಶಾಂತ್‌, ಹೋಟೆಲ್‌ ಮಾಲೀಕರ ಪತ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT