ಭಾನುವಾರ, ಡಿಸೆಂಬರ್ 15, 2019
21 °C

ಕುದುರೆಮುಖದಲ್ಲಿ ಮಳೆಯ ಮುತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುದುರೆಮುಖದಲ್ಲಿ ಮಳೆಯ ಮುತ್ತು

ಅಮೃತ್ ಜೋಗಿ

ಜಾಗ್ರತೆ. ಇಲ್ಲಿ ಅರ್ಧ ಅಡಿ ಮಾತ್ರ ಜಾಗ ಇದೆ ಎಂದು ಹತ್ತು ಹೆಜ್ಜೆ ಮುಂದೆ ಇದ್ದ ರೂಪೇಶ್ ಹೇಳಿದ. ಸ್ವಲ್ಪ ಕಾಲು ಜಾರಿದರೂ ತಳ ಕಾಣದ ಆಳ. ಅವನಿಗೆ ಸ್ವಲ್ಪ ಮುಂದೆ ನಮ್ಮ ಗೈಡ್ ಯಶವಂತ್. ಅವರು 'ಇಲ್ಲೇ ಇದೆ... ಇನ್ನು ಅರ್ಧ ಕಿ.ಮೀ. ಮಾತ್ರ' ಅನ್ನುತ್ತಾ ಮೂರು ಕಿ.ಮೀ. ಹತ್ತಿಸಿಯಾಗಿತ್ತು. 

ರೈನ್ ಕೋಟ್ ಸರಿ ಮಾಡಿಕೊಂಡು, ನೀರಿನಲ್ಲಿ ತೊಪ್ಪೆಯಾಗಿದ್ದ ಬ್ಯಾಗನ್ನೊಮ್ಮೆ ಹಿಂಡುವಷ್ಟರಲ್ಲಿ, ಕೈಯಲ್ಲಿದ್ದ ಕೊಡೆ ದಿಕ್ಕು ಬದಲಿಸಿ ಉಲ್ಟಾ ಹೊಡೆದಿತ್ತು. ಸಂತೆಗೆ ಬಂದು ಮಲಗೋಕೆ ಆಗ್ತಿಲ್ಲ, ಬರೀ ಗದ್ದಲ ಅಂದಂಗಾಯ್ತು ನಿಮ್ಮ ಕಥೆ ಅಂತ ಹಿಂದಿದ್ದವರೊಬ್ಬರು ಛೇಡಿಸಿದರು. ಇಲ್ಲಿ ಬಂದಿರೋದೇ ಮಳೆಯಲ್ಲಿ ಒದ್ದೆಯಾಗೋಕೆ, ಅಂದ್ಮೇಲೆ ಈ ಕೊಡೆ ಶೃಂಗಾರ ಯಾಕೆ ಎನ್ನೋದು ಅವರ ಆಕ್ಷೇಪಣೆ.

ನಾವಾಗಲೇ ಮುಳ್ಳೋಡಿ ಚೆಕ್ ಪೋಸ್ಟ್ ಬಿಟ್ಟು ಎರಡು ಗಂಟೆ ಕಳೆದಿತ್ತು. ಸುತ್ತಲೂ ಕರಿ ಮೋಡದ ನೆರಳು. ಸಂಜೆ ಮಾತ್ರ ಮಳೆ ಬರ್ತಿದೆ ಎಂದು ಚೆಕ್‌ಪೋಸ್ಟ್‌ನಲ್ಲಿದ್ದ ವೆಂಕಟೇಶ್ ಭರವಸೆ ನೀಡಿದ್ದರು. ಆದರೆ ಕವಿದ ಕಾರ್ಮೋಡ, ಮಳೆಯ ಬೆದರಿಕೆ ಹಾಕುತ್ತಲೇ ಇತ್ತು. ಮೇಲೇರುವುದರೊಳಗೆ ಮಳೆ ಗ್ಯಾರಂಟಿ. ಮೋಡಗಳು ಆಗಾಗ್ಗೆ ಸ್ವಲ್ಪ ಚದುರುತ್ತ ಹಸಿರು ಕಣಿವೆಯ ದರ್ಶನ ಮಾಡುತ್ತಿದ್ದವು. ಸುಸ್ತಾದರೂ ನಿಲ್ಲುವ ಹಾಗಿಲ್ಲ. ಇಂಬಳಗಳ ಬೆದರಿಕೆ. ಕುಳಿತುಕೊಳ್ಳುವ ಮಾತೇ ಇಲ್ಲ. ನಡೆಯುತ್ತಲೇ ಇರಬೇಕು ಎನ್ನುವ ಸ್ಥಿತಿ. ಮಳೆ ಖಂಡಿತ ಬರುತ್ತೆ ಅನ್ನುವಾಗಲೇ ನೀರಿನ ಬಾಣಗಳು ಮುಖಕ್ಕೆ ಇರಿಯಲಾರಂಭಿಸಿದ್ದವು.

ನಮ್ಮ 20 ಜನರ ತಂಡ ಲಗ್ಗೆ ಇಟ್ಟಿದ್ದು ಕುದುರೆಮುಖದ ತುದಿಗೆ. ವಿಷಯ ಏನೆಂದರೆ ನಾವು ಇಪ್ಪತ್ತು ಮಂದಿಗೆ ಪರಸ್ಪರ ನಾವ್ಯಾರು ಎನ್ನುವುದೇ ಹಿಂದಿನ ದಿನ ಬೆಂಗಳೂರಿನಲ್ಲಿ ಮಿನಿ ಬಸ್ ಹತ್ತುವವರೆಗೂ ಗೊತ್ತಿರಲಿಲ್ಲ. ವಾರಾಂತ್ಯದಲ್ಲಿ ಹೀಗೆ ಬೆಂಗಳೂರಿಗರನ್ನು ಎರಡು ದಿನ ಹೊರಗೆ ಕರೆದೊಯ್ದು ವಿವಿಧ ಸಾಹಸ ಚಟುವಟಿಕೆಗಳಲ್ಲಿ ತೊಡಗಿಸುವ ಸಂಸ್ಥೆಗಳು ಸಾಕಷ್ಟಿವೆ.

ಟ್ರೆಕಿಂಗ್, ಸೈಕ್ಲಿಂಗ್, ಬೈಕಿಂಗ್, ರಾಕ್ ಕ್ಲೈಂಬಿಂಗ್ ಹೀಗೆ ಪಟ್ಟಿ ದೊಡ್ಡದಿದೆ. ಟ್ರೆಕಿಂಗ್‌ಗೆ ಮನಸ್ಸಾದಾಗ ಜೊತೆಗಾರರನ್ನು ಹುಡುಕುವ, ಎಷ್ಟೋ ಸಲ ಅವರಿಗಾಗಿ ಕಾಯುವ ಕಾರಣದಿಂದ ಬೆಟ್ಟ ಹತ್ತುವುದಕ್ಕೆ ಕಾಲ ಕೂಡಿ ಬರುತ್ತಿದ್ದುದೇ ಅಪರೂಪ. ಹಾಗಾಗಿ ಇಂಥ ಸಂಸ್ಥೆಗಳನ್ನು ನೆಚ್ಚಿಕೊಳ್ಳುವುದೇ ಒಳ್ಳೆಯದು ಎನಿಸಿದೆ. 

ಸ್ವಲ್ಪ ದುಬಾರಿ ಎನಿಸಿದರೂ ವಾಹನ, ವಸತಿ, ಅನುಮತಿ, ಇತ್ಯಾದಿ ಎಲ್ಲ ತಲೆನೋವಿನಿಂದಲೂ ದೂರಾಗಬಹುದು. ಜೊತೆಗೆ ಹೊಸ ಸ್ನೇಹಿತರು ಜೊತೆಯಾಗುತ್ತಾರಲ್ಲ! ಹಾಗಾಗಿ ಕುದುರೆಮುಖಕ್ಕೆ ಹೋಗಲು ನಾವು ಆಯ್ದುಕೊಂಡಿದ್ದು ಬೆಂಗಳೂರಿನ ಅಡ್ವೆಂಚರ್ ಅಡ್ಡಾ ಸಂಸ್ಥೆಯನ್ನು.

ಹಿಂದಿನ ಚಾರಣಗಳಿಗೆ ಹೋಲಿಸಿದರೆ ಈ ಬಾರಿ ತಂಡದಲ್ಲಿ ಕನ್ನಡಿಗರೇ ಸಂಖ್ಯೆಯಲ್ಲಿ ಹೆಚ್ಚಿದ್ದಿದ್ದು ಖುಷಿಯಾಗಿತ್ತು. ಅಡ್ವೆಂಚರ್ ಅಡ್ಡಾದ ಯಶವಂತ್ ಸಹ ಮೈಸೂರಿನವರೇ. ಹವ್ಯಾಸಿ ಚಾರಣಿಗರಾಗಿ ಅವರೀಗ ಸಂಸ್ಥೆಯನ್ನು ಕಟ್ಟಿದ್ದಾರೆ.

ಮಳೆಗಾಲದ ಚಾರಣ ಖಂಡಿತ ಉದ್ದೇಶವಾಗಿರಲಿಲ್ಲ. ಕುದುರೆಮುಖ ಹತ್ತಬೇಕು ಎಂಬ ಉಮೇದಿನಲ್ಲಿ ಆನ್‌ಲೈನ್ ಬುಕ್ ಮಾಡಿದ ಮೇಲೆ ಮಲೆನಾಡಿನಲ್ಲಿ ಮಳೆಯ ಹೊಯ್ದಾಟ ಆರಂಭವಾಗಿತ್ತು. ಬುಕ್ಕಿಂಗ್ ಕ್ಯಾನ್ಸಲ್ ಮಾಡಬೇಕು ಎನ್ನುವಾಗ ಮಾನ್ಸೂನ್ ಟ್ರೆಕಿಂಗ್ ಬಗ್ಗೆ ಸ್ನೇಹಿತರೊಬ್ಬರು ಹೇಳಿದರು. ಮಳೆಯಲ್ಲೇ ಬೆಟ್ಟ ಹತ್ತುವುದೇ ಒಂದು ಸಾಹಸ ಎನ್ನುತ್ತ ನಮಗೆಲ್ಲ ರೈಲು ಹತ್ತಿಸಿದರು.

ಶುಕ್ರವಾರ ರಾತ್ರಿ ಬೆಂಗಳೂರಿನ ಎಲ್ಲ ಪಿಕ್‌ಅಪ್ ಮುಗಿಸಿ ಪೀಣ್ಯ ಬಿಟ್ಟಾಗ ರಾತ್ರಿ 11 ಕಳೆದಿತ್ತು. ಬೆಳಿಗ್ಗೆ 6 ಗಂಟೆಗೆ ಕಳಸ. ಅಲ್ಲಿಯ ಹೋಮ್ ಸ್ಟೇಯಲ್ಲಿ ನಮ್ಮ ಕ್ಯಾಂಪ್. ಸ್ನಾನ ಬೇಡ. ಮಳೆಯಲ್ಲೇ ಆಗುತ್ತೆ. ಫ್ರೆಷ್ ಆಗಿ ಎಂಟಕ್ಕೆಲ್ಲ ರೆಡಿ ಇರಿ ಎಂದು ಯಶವಂತ್ ಸೂಚನೆ ನೀಡಿದ್ದರು. 

ಅಪರಿಚಿತ ಮುಖಗಳಲ್ಲಿ ಈಗ ಅಲ್ಪಸ್ವಲ್ಪ ನಗು ಇಣುಕುತ್ತಿತ್ತು. ಸ್ನಾನ ಮಾಡಿ ಅಂದ್ರೂ ಮಾಡೋರಿರಲಿಲ್ಲ. ಎಂಟು ಗಂಟೆಗೆ ತಿಂಡಿ ಮುಗಿಸಿ ಪಿಕ್ ಅಪ್ ವ್ಯಾನ್ ಹತ್ತಿದೆವು. ಬಾಳೆಗಲ್‌ವರೆಗೆ ರಾಜ್ಯ ಹೆದ್ದಾರಿ. ಅಲ್ಲಿಂದ ಮುಳ್ಳೋಡಿಗೆ ಎಡತಿರುವು. ತೀರಾ ಕಚ್ಚಾ ರಸ್ತೆಯಲ್ಲಿ ನಮ್ಮ ವ್ಯಾನ್ ಓಲಾಡುತ್ತಾ ಭರ್ಜರಿ ಮಸಾಜ್ ಮಾಡಿತು.

ಕುದುರೆಮುಖ ಗಿರಿಯಲ್ಲಿ ಚಾರಣಕ್ಕೆ ಹಲವು ಗಿರಿಗಳಿವೆ, ಕುರಿಂಜಲ್, ಗಂಗಡಿಕಲ್, ವಾಲಿಕುಂಜ, ನರಸಿಂಹಪರ್ವತ, ಬಾಮಿಕೊಂಡ ಇತ್ಯಾದಿ. ಈ ಪೈಕಿ ಕುದುರೆಮುಖ ಗಿರಿಯೇ ಅತಿ ಎತ್ತರದ್ದು. ಸಮುದ್ರಮಟ್ಟಕ್ಕೆ ಹೋಲಿಸಿದರೆ ಕರ್ನಾಟಕದ ಮೊದಲು ಮೂರು ಎತ್ತರದ ಶಿಖರಗಳಲ್ಲಿ ಸ್ಥಾನ ಪಡೆದಿದೆ. ಚಾರಣಕ್ಕೆ ಅರಣ್ಯ ಇಲಾಖೆಯ ಅನುಮತಿ ಅಗತ್ಯ. ವಾರಾಂತ್ಯ ದೂರದೂರುಗಳಿಂದ ಚಾರಣಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅರಣ್ಯ ಇಲಾಖೆಯೂ ತಲಾ ಪ್ರವೇಶ ಶುಲ್ಕವನ್ನು 400 ರೂಪಾಯಿಗೆ ಹೆಚ್ಚಿಸಿ ಆದಾಯ ವೃದ್ಧಿಸಿಕೊಂಡಿದೆ.

ಯಶವಂತ್ ಅವರ ಪ್ರಕಾರ ಮುಳ್ಳೋಡಿ ಚೆಕ್‌ಪೋಸ್ಟ್‌ನಿಂದ ಕುದುರೆಮುಖ ಗಿರಿತುದಿಗೆ 11 ಕಿ.ಮೀ. ಚಾರಣ ಮುಗಿದಾಗ ಅವರ ಮಾತು ಸುಳ್ಳೆನಿಸಿತು. ಕೊನೆಯ ನಾಲ್ಕು ಕಿಲೋಮೀಟರ್‌ಗಳು ಮಳೆಯಿಂದಾಗಿ ಅಸಾಧ್ಯವೆನ್ನುವಷ್ಟು ಕಷ್ಟ ಕೊಟ್ಟವು. ರಭಸವಾಗಿ ಮಳೆ ಸುರಿದರೆ ಮೇಲಿನ ಅಂಟು ಮಣ್ಣು ತೊಳೆದು ಕಲ್ಲಿನ ಮೇಲೆ ಕಾಲಿಟ್ಟು ಹೋಗುವುದು ಸುಲಭ. ಆದರೆ ಜಾರುತ್ತಿದ್ದ ಹೆಜ್ಜೆಗಳು ಅಪಾಯಕ್ಕೆ ಆಹ್ವಾನ ನೀಡುವಂತಿತ್ತು.

ಅಲ್ಲೇ ಇದೆ ಎನ್ನುತ್ತಾ ಯಶವಂತ್ ಹುರಿದುಂಬಿಸುತ್ತಲೇ ಇದ್ದರು. ಆದರೆ ನಮ್ಮ ತಂಡ ಆದಾಗಲೇ ಚದುರಿ ಹೋಗಿತ್ತು. ಮುಂದೆ ಐಟಿ ಹೈಕಳ ಒಂದು ತಂಡ. ಕನ್ನಡದಲ್ಲೇ ಸುಖಕಷ್ಟ ಹಂಚಿಕೊಂಡು ಸಾಗುತ್ತಿದ್ದ ನಮ್ಮದು ಎರಡನೇ ಬ್ಯಾಚ್. ಇದ್ದ ಇಬ್ಬರು ಗೈಡ್‌ಗಳೂ ಎಲ್ಲೆಲ್ಲೋ ಸೇರಿ ಹೋದರು. ಕೊನೆಕೊನೆಯಲ್ಲಿ ನಮ್ಮ ಜೊತೆ ಬೇರೆಯದೇ ತಂಡ ಬೆರೆಯುವಂತಾಗಿತ್ತು.

ಮಳೆಯನ್ನು ಎದುರಿಸುತ್ತ ಏದುಸಿರು ಬಿಡುತ್ತಾ ಸಾಗುತ್ತಿದ್ದರೆ ಗಪ್ಪನೇ ಮೋಡ ಹೊದ್ದುಕೊಂಡ ಗಿರಿಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದವು. ಯಾವುದು ತುದಿ ಎನ್ನುವುದೇ ತಿಳಿಯದೇ ತುದಿಮೊದಲಿಲ್ಲದವರಂತೆ ನಾವು ಹೆಜ್ಜೆ ಹಾಕುತ್ತಲೇ ಇದ್ದೆವು. ಮಳೆ- ಗಾಳಿಯ ಭರಾಟೆಯಲ್ಲಿ ತಲೆಬಗ್ಗಿಸಿ ಹೆಜ್ಜೆ ನೋಡುವುದೊಂದೇ ಕೆಲಸ.

ಸಮತಟ್ಟಾದ ಜಾಗವೊಂದಕ್ಕೆ ಬಂದಾಗ ಅಲ್ಲಿದ್ದವರು ಸುಮಾರು 50 ಮಂದಿ. ಕೊನೆಗೂ ತಲುಪಿದೆವು ಎಂದುಕೊಂಡ ನಮ್ಮ ನಿಟ್ಟುಸಿರು ಕೊನೆಯಾಗುವುದರೊಳಗೆ ಮತ್ತೆ ದೂರದಲ್ಲಿ ಧೂಮದಿಂದ ಮೂರ‍್ನಾಲ್ಕು ಜನ ಪ್ರಕಟಗೊಂಡರು. ಆಗಲೇ ತಿಳಿದಿದ್ದು, ಇನ್ನೂ ದಾರಿ ಮುಂದಿದೆ ಅಂತ! ಆದರೆ ಹೊಟ್ಟೆ, ಕಾಲುಗಳು ಮನಸ್ಸಿನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಅಲ್ಲೇ ಬುತ್ತಿ ಖಾಲಿ. ಒಂದಿಷ್ಟು ಮಂದಿ ತಂಡ ಸೇರಿಕೊಂಡ ಮೇಲೆ ಮತ್ತೆ ಏರುಪ್ರಯಾಣ. ಅಲ್ಲಿಂದ ಹೆಚ್ಚು ದೂರ ಇರಲಿಲ್ಲ. ಗಿರಿ ಶೃಂಗ ಅಸ್ಪಷ್ಟವಾಗಿ ಕಾಣುತ್ತಿದ್ದರಿಂದ ಸೋಲುತ್ತಿದ್ದ ಕಾಲುಗಳಿಗೆ ಮತ್ತಷ್ಟು ಬಲ ತುಂಬಿ ಏರಿದೆವು. ಕುಳಿರ್ಗಾಳಿ, ತುಂತುರು ಮಳೆಯಿಂದಾಗಿ ಆಯಾಸ ಹೆಚ್ಚಿರಲಿಲ್ಲ. ಮೇಲೆ ನಿಲ್ಲಲೂ ಸಾಧ್ಯವಾಗದಷ್ಟು ಗಾಳಿ. ಹಿಡಿದುಕೊಂಡ ಕೈ ಬಿಡಿಸಿಕೊಳ್ಳುವಂತೆ ಕೊಡೆ ಓಲಾಡುತ್ತಿತ್ತು.

ಸ್ವರ್ಗಕ್ಕೆ ಇನ್ನೊಂದೇ ಗೇಣು ಎನ್ನುವ ಸ್ಥಳ ಇದು. ಸಮುದ್ರಮಟ್ಟದಿಂದ ಇದು 1892 ಮೀಟರ್ ಎತ್ತರ ಎನ್ನುವ ಫಲಕ ಇತ್ತು. ನಮ್ಮ ಏರುಮುಖದ ಪ್ರಯಾಣಕ್ಕೆ ಹಿಡಿದಿದ್ದು ಸುಮಾರು ಮೂರು ಗಂಟೆ. ಗಾಳಿಯಿಂದಾಗಿ ಅಲ್ಲಿ ನಿಲ್ಲುವ ಹಾಗಿರಲಿಲ್ಲ. ಅಲ್ಲದೇ ಆಗ ಸಮಯ ಮಧ್ಯಾಹ್ನ ೨ ದಾಟಿತ್ತು. ವಾಪಸ್ ಪ್ರಯಾಣಕ್ಕೆ ಇನ್ನಷ್ಟು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಅನುಭವಿ ಯಶವಂತ್ ಎಚ್ಚರಿಸಿದ್ದರಿಂದ ಒಲ್ಲದ ಮನಸ್ಸಿನಿಂದಲೇ ಕುದುರೆಮುಖಕ್ಕೆ ಬೆನ್ನು ಹಾಕಬೇಕಾಯಿತು.

ಮಳೆಯಲ್ಲಿ ಹತ್ತುವುದಕ್ಕಿಂತ ಇಳಿಯುವುದು ಕಷ್ಟದ ಕೆಲಸ. ಹಾಗಾಗಿ ನಮಗೆ ಮುಳ್ಳೋಡಿ ಚೆಕ್‌ಪೋಸ್ಟ್ ತಲುಪಲು ನಾಲ್ಕು ಗಂಟೆ ಹಿಡಿಯಿತು. ಎಷ್ಟು ಎಚ್ಚರದಿಂದ ಹೆಜ್ಜೆ ಇಟ್ಟರೂ ಮೂರು ಮಂದಿ ಜಾರಿ ಬಿದ್ದಿದ್ದರು. ಆರು ಗಂಟೆಗೆಲ್ಲ ಕತ್ತಲು ಅಡರಿಕೊಂಡಿತ್ತು. ನಮ್ಮ ಕೊನೆ ತಂಡ ಬರಲು ಇನ್ನೊಂದು ಗಂಟೆ ಹಿಡಿಯಿತು.

ಇಂಬಳ ಹತ್ತಿಕೊಳ್ಳಲೇ ಇಲ್ಲ ಎಂಬ ಖುಷಿಯಲ್ಲಿ ಬಚ್ಚಲು ಮನೆಯಲ್ಲಿ ಬಿಸಿನೀರು ಹುಯ್ಕೊಳ್ಳುವಾಗ ನೋಡಿದರೆ ಕಾಲಿನಲ್ಲಿ ಮೂರು ಹುಳಗಳು ಪ್ರೀತಿಯಿಂದ ಗಟ್ಟಿಯಾಗಿ ತಬ್ಬಿಕೊಂಡಿದ್ದವು!!

***

ಮಳೆಗೆ ಕರಗಿದ ಉಪ್ಪು

ಈ ಚಾರಣ ಪ್ರದೇಶ ಹುಲಿ ರಕ್ಷಿತಾರಣ್ಯದ ಅಡಿ ಬರುತ್ತದೆ. ಮಾರ್ಗದಲ್ಲಿ ಹುಲ್ಲುಗಾವಲು ಅಧಿಕ. ಅಲ್ಲಲ್ಲಿ ದಟ್ಟ ಅರಣ್ಯ ಮತ್ತು ನಡುವೆ ಸಾಕಷ್ಟು ತೊರೆಗಳು ಎದುರಾಗುತ್ತವೆ. ಆಗಷ್ಟೇ ಮಳೆ ಆರಂಭವಾಗಿದ್ದರಿಂದ ತೊರೆಗಳನ್ನು ಸುಲಭವಾಗಿ ದಾಟಲು ನಮಗೆ ಸಾಧ್ಯವಾಯಿತು. ಉದುರಿದ ಎಲೆಗಳು ತುಂತುರು ಮಳೆಯಿಂದ ಕೊಳೆತು ಕಾಲಿಡುವಾಗ ಜಾರುವ ಸ್ಥಿತಿಯಲ್ಲಿತ್ತು. ಇದು ಸ್ವಲ್ಪ ಸಮಸ್ಯೆ ಎನಿಸಿದರೆ, ಅಂಥ ಮಳೆಯಿಂದಲೇ ಹಸಿ ಅಂಟು ಮಣ್ಣು ಜಾರುವಂತಾಗುತ್ತಿದ್ದುದು ಇನ್ನೊಂದು ಸಮಸ್ಯೆ. 

ಇವುಗಳ ನಡುವೆ ಬಾಲದ ತುದಿಯಲ್ಲಿ ನಿಂತು ಬರುವವರನ್ನು ನಿರುಕಿಸುತ್ತಿರುವ ಇಂಬಳಗಳದ್ದೇ ಕಾಟ. ಅವುಗಳಿಗೆ ಹಾಕಲು ಸ್ವಲ್ಪ ಉಪ್ಪು ತನ್ನಿ ಸಾಕು ಎಂದಿದ್ದರೂ ಎಲ್ಲರೂ ಇಂಬಳಗಳ ಮೇಲಿನ ಕಾಳಜಿಗೆ ಪ್ಯಾಕೇಟ್ ಅಯೋಡಿನ್ ಉಪ್ಪನ್ನೇ ತಂದಿದ್ದರು. ಗುಂಪಿನಲ್ಲಿದ್ದ ಬಹುತೇಕರಿಗೆ ಮಳೆ ಚಾರಣ ಹೊಸ ಅನುಭವ. ಹಾಗಾಗಿ ಇಂಬಳಗಳು ಕಾಲಿಗೆ ಹತ್ತಿದ್ದು ತಿಳಿಯುತ್ತಿದ್ದುದೇ ಅವು ರಕ್ತ ಹೀರಿ ಉಬ್ಬಿಕೊಂಡಾಗ. ತಂದ ಉಪ್ಪು ಹೆಚ್ಚು ನೆರವಿಗೆ ಬಾರದೇ ಮಳೆ ನೀರಿನೊಂದಿಗೆ ಕರಗಿ ಹೋಯಿತು.

ಪ್ರತಿಕ್ರಿಯಿಸಿ (+)