ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೆ ಮಾತೇ ಚೆನ್ನ...

Last Updated 1 ಜುಲೈ 2017, 19:30 IST
ಅಕ್ಷರ ಗಾತ್ರ

ವೆಂಕಟರವಣ ಎನ್. ನಾವೆಂಕಿ

ಹುಲಿರಾಯನ ಬೆಟ್ಟದ ತಪ್ಪಲಲ್ಲಿ ಕನಕದಳ್ಳಿ ಎನ್ನುವ ಹಳ್ಳಿ ಕಾಡಿಗೆ ಹೊಂದಿಕೊಂಡೇಯಿತ್ತು. ಅಲ್ಲಿ ಕನಕಜ್ಜಿಯೆನ್ನೊ ಮುದುಕಿಯಿದ್ದಳು. ಆಕೆ ಮಾತಿಗೆ ಮೊದಲು ಕತೆ ಹೇಳುವಲ್ಲಿ ನಿಸ್ಸೀಮಳು. ಹಳ್ಳಿಯ ಸುತ್ತಮುತ್ತಲಿನ ಐತಿಹಾಸಿಕ ಕುರುಹುಗಳರಿತ ಕನಕಜ್ಜಿ ಹಳ್ಳಿ ಹೈಕಳಿಗೆ ನೂರಾರು ಜನಪದ ಕತೆಗಳನ್ನು ಉಣಬಡಿಸಿದ್ದಳು. ಹೈಕಳೆಲ್ಲಾ ಕನಕಜ್ಜಿಯನ್ನು ಅಕ್ಕರೆಯಿಂದ ಆರೈಸಿ ‘ಕತೆಗಳಜ್ಜಿ’ ಎಂದು ಕರೆಯುತ್ತಿದ್ದರು.

ಕತೆಗಳಜ್ಜಿ ಅತಿಯಾದ ತಲೆನೋವಿನಿಂದ ಹಾಸಿಗೆ ಹಿಡಿದಳು. ಹೈಕಳು ನಾಟಿ ವೈದ್ಯರನ್ನೆಲ್ಲಾ ಕರೆತಂದು ಚಿಕಿತ್ಸೆ ಕೊಡಿಸಿದರು. ಪ್ರಯೋಜನವಾಗದೆ ದುಃಖಿಸಿ, ಚಿಂತಿಸತೊಡಗಿದರು. ಕತೆಗಳಜ್ಜಿಗೆ ಇಷ್ಟವಾಗಿ, ಆಪ್ತನಾಗಿದ್ದ ಚೆನ್ನನಿಗೊಂದು ಉಪಾಯ ಹೊಳೆಯಿತು. ಕತೆಗಳಜ್ಜಿಯ ಕತೆಗಳಲ್ಲಿನ ನರಿಯ ಉಪಾಯಗಳು ನೆನಪಾಗಿ ನರಿಯನ್ನು ಭೇಟಿಯಾಗಲೇಬೇಕೆಂದು ತೀರ್ಮಾನಿಸಿದ. ಚೆನ್ನನ ಮನೆಯವರು ‘ಎಲ್ಲಿಗೆ ಎಂದು ಪ್ರಶ್ನಿಸಿದರು. ಮನೆಯವರಿಗೆ ಸುಳ್ಳು ಹೇಳಿ ತಂಗಳು ಕಟ್ಟಿಕೊಂಡು ಕಾಡಿನತ್ತ ಸಾಗಿದ.

ಕಾಡಿನ ನಡುವೆ ದೊಡ್ಡ ಆಲದ ಮರವಿದೆ. ಅಲ್ಲಿಗೆ ಕಾಡುಪ್ರಾಣಿಗಳೆಲ್ಲಾ ಸೇರುತ್ತವೆ ಎಂದು ಕತೆಗಳಜ್ಜಿ ಹೇಳಿದ್ದಳು. ಚೆನ್ನ ಹುಡುಕಾಡಿದ. ಕತ್ತಲಾಗುವ ಮೊದಲೇ ಆಲದ ಮರ ಸಿಕ್ಕಿತು. ಮರವೇರಿ ಕವಲಲ್ಲಿ ಅವಿತು ಕುಳಿತ.

ಬೆಳಕು ಸರಿದಂತೆಲ್ಲಾ ಕಾಡುಪ್ರಾಣಿಗಳ, ಹಕ್ಕಿ-ಪಕ್ಷಿಗಳ ಅಪ್ಪಟ ಕೂಗಾಟಗಳು ಕೇಳಿಸಿತು. ಚೆನ್ನನಿಗೆ ಭಯವಿಲ್ಲದಿದ್ದರೂ ಮರವೇರಿ ಕುಳಿತಿದ್ದಾನೆ. ತಾನೆಂದೂ ಕೇಳಿರದ ವಿಚಿತ್ರ ಧ್ವನಿಗಳು ಚೆನ್ನನ ಕಿವಿಗಳ ಹೊಕ್ಕಿ ಉಲ್ಲಾಸ, ಆನಂದವಾಯಿತು. ರಾತ್ರಿಯಾಗುತ್ತಿದ್ದಂತೆ ತಂಡೋಪತಂಡಗಳಾಗಿ ಪ್ರಾಣಿಗಳು ಆಲದ ಮರದಡಿಗೆ ಧಾವಿಸಿ ಬರುತ್ತಿವೆ.

ಕತೆಗಳಜ್ಜಿ ಹೇಳುತ್ತಿದ್ದ ಪ್ರಾಣಿಗಳೆಲ್ಲಾ ಚೆನ್ನನಿಗೆ ಪ್ರತ್ಯಕ್ಷವಾಗಿ ಬೆಳದಿಂಗಳ ಹಾಲು ಬೆಳಕಲ್ಲಿ ಕಾಣುತ್ತಿವೆ. ಕತೆಗಳಜ್ಜಿ ಪ್ರಾಣಿಗಳಲ್ಲಿನ ಮೃಗತ್ವದ ಬಗ್ಗೆ ಅಷ್ಟಾಗಿ ಹೇಳಿರಲಿಲ್ಲ. ಪ್ರಾಣಿಗಳೆಲ್ಲಾ ಬಂದಂತಾಗಿ ಸಿಂಹ ವಿಚಾರಣೆ ಆರಂಭಿಸಿತು. ನಗುತ್ತಾ ತಡವಾಗಿ ಬಂದ ನರಿ ‘ನೋಡಿ, ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡ್ಕೊಬೇಕು. ಇಲ್ಲಾಂದ್ರೆ ಬದುಕುಳಿಯೋದು ಕಷ್ಟ. ಕಾಡು ಬೀಡಾಗ್ತಾಯಿರೊ ಕಾಲ್ದಾಗ ನೆಲೆಯಿಲ್ಲವಾಗೊ ಸಾಧ್ಯತೆಯಿದೆ. ಎಚ್ಚರ! ಎಂದಿತು.

ನರಿ ಬಂದಾಗಿನಿಂದ ತಲೆಯೆತ್ತಿ ಇಳಿಸಿ ಮೂಸಿ ಮೂಸಿ ಏನೋ ವಾಸನೆ ಹಿಡಿಯುವ ಪ್ರಯತ್ನ ಮಾಡುತ್ತಿತ್ತು. ಸಿಂಹ ‘ಏನ್ಮಾರಾಯ ಬಂದಾಗ್ನಿಂದ ಒಂದ್ಕಡೆ ನಿಲ್ದೆ ಈ ಪರಿ ವಾಸನೆ ಹಿಡೀತಾ ಪರಿತಪಿಸುತ್ತಿರುವೆ’ ಎಂದಿತು. ನರಿ ‘ಇಲ್ಲಿ ಎಲ್ಲೋ ನರನ ವಾಸನೆ ಬರುತ್ತಿದೆಯೇ ಎಂದಿತು. ಹುಲಿ ಕೂಡಾ ‘ಹೌದು ಬರುತ್ತಿದೆ ನರಿರಾಯ’ ಎಂದಿತು. ಸಿಂಹ ‘ನನ್ಗೂ ವಾಸನೆ ಬಂದಂತೆಯಿದೆ. ಆದ್ರೇ.. ಶೀತ ಆಗಿ ವಾಸನೆ ಅಷ್ಟಾಗಿ ತಟ್ಟುತ್ತಿಲ್ಲ ಎಂದಿತು. ನರಿ ದನಿಯೆತ್ತಿ ‘ಎಲೋ ಮಾನವ.. ನೀನಾಗೇ ಬಂದ್ರೆ ಸರಿ, ಇಲ್ಲಾಂದ್ರೆ ಜೀವಕ್ಕೇ ಅಪಾಯ. ಬಾ.. ಸಿಟ್ಟು ನೆತ್ತಿಗೇರೋ ಮೊದ್ಲೆ ಬಂದ್ಬಿಡು. ಎಂದಿತು.

ಚೆನ್ನನಿಗೆ ಏನೂ ತೋಚಲಿಲ್ಲ. ಭಯ ಎದೆ ತುಂಬಿಕೊಂಡಿದೆ. ಸ್ವಲ್ಪ ಹೊತ್ತು ಸುಮ್ಮನಾದ. ಕತೆಗಳಜ್ಜಿ ಪ್ರಾಣಿಗಳಿಗೂ ದಯೆ, ಕರುಣೆ ಇದೆಯೆಂದೇಳಿದ್ದು ನೆನಪಾಗಿ ಸ್ವಲ್ಪ ಧೈರ್ಯ ಮೂಡಿತು. ಅಷ್ಟರಲ್ಲಿ ಚೆನ್ನನ ಕೈಯನ್ನು ಯಾರೋ ಕೆರೆದು, ಸ್ಪರ್ಶಿಸಿದಂತಾಯಿತು. ದಿಗ್ಗನೇ ಕಿರುಚಲೆತ್ನಿಸಿದ. ಬಳಿಗೆ ಬಂದಿದ್ದ ಕಾಗೆ ತಕ್ಷಣ ‘ಶ್.. ಅಂತ ಸನ್ನೆ ಮಾಡಿ ಚೆನ್ನನ ಬಾಯಿ ಮುಚ್ಚಿಸಿತು. ಸಿಂಹ ‘ಅದಿರ‍್ಲೀ ನರಿರಾಯ, ನನಗೇನಾದ್ರೂ ಮದ್ದು ಹೇಳಪ್ಪಾ ಈ ಹಾಳಾದ ತಲೆನೋವು, ಕೆಮ್ಮಿಗೆ ಎಂದಿತು. ನರಿ ನಗುತ್ತಾ ‘ಅಯ್ಯೋ.. ಅದ್ಕೇನು ಈ ಗಿಡದ ಸೊಪ್ಪು ತಿನ್ನು.

ಹಣೆಗೂ ಉಜ್ಜಿಕೋ ಓಡಿ ಹೋಗುತ್ತೆ. ಪ್ರಾಣಿಗಳಿಗೂ, ನರರಿಗೂ ಶೀತಬಾಧೆಗಿದು ದಿವ್ಯ ಔಷಧ, ರಾಮಬಾಣವಿದ್ದಂತೆ ಎಂದು ಅಲ್ಲೇ ಪಕ್ಕದಲ್ಲೆಯಿದ್ದ ಗಿಡವನ್ನು ತೋರಿ ಅದರ ಬಳಿ ನಿಂತುಕೊಂಡಿತು. ಅಷ್ಟರಲ್ಲಿ ಪ್ರಾಣಿಗಳೆಲ್ಲಾ ‘ಗಲ್ ಅಂತ ನಕ್ಕು ಬಿಟ್ಟವು. ನರಿ ‘ಯಾಕ್ರಪ್ಪಾ ಹಂಗ್ ನಗ್ತೀರಿ ಎಂದಿತು. ಹುಲಿ ‘ಏನ್ ನರಿರಾಯ ನೀನು. ನಮ್ಮನ್ನೂ ಸಸ್ಯಹಾರಿಗಳಾಗಿಸೊ ಹುನ್ನಾರ ಹೂಡಿ, ರಾಜಕೀಯ ಮಾಡುವಂತಿದೆ? ಎಂದಿತು.

ಸಿಂಹ ನಗುತ್ತಾ ‘ನಾವು ಸೊಪ್ಪು ತಿಂದ್ರೆ ಮೂರ್‌ಲೋಕ ನಗಲ್ವೇ ನರಿರಾಯ ಎಂದಿತು. ನರಿಗೆ ಅವಮಾನವಾಗಿ ‘ಹೌದಲ್ಲಾ ಎನ್ನೊ ಚಿಂತೆ ಕಾಡಿತು. ಚೆನ್ನನೂ ಮನಸಲ್ಲೇ ನಕ್ಕು ನರಿ ತೋರಿದ ಗಿಡವನ್ನು ಸೂಟಿಯಾಗಿ ನೋಡಿದ. ಅಷ್ಟರಲ್ಲೊಂದು ಮರಿ ನರಿ ತರಾತುರಿಯಾಗಿ ಬಂದು ‘ಹಲೋ ಪ್ರಾಣಿ ದಂಡೇ.. ಇಲ್ಲಿ ಕೇಳಿ, ದಂತ ಚೋರರು ಗಂಡು ಆನೆಯನ್ನು ಸೆರೆ ಹಿಡಿದಿದ್ದಾರೆ. ಬನ್ನಿ ಕಾಪಾಡೋಣ ಎಂದಿತು.

ಪ್ರಾಣಿಗಳೆಲ್ಲಾ ಕ್ಷಣಾರ್ಧದಲ್ಲಿ ಎದ್ದೂಬಿದ್ದು ಕಾಲುಕಿತ್ತವು. ಚೆನ್ನನಿಗೂ ಹೋಗಬೇಕೆನ್ನಿಸಿತು. ಆದರೆ ನರಿ ಆಡಿದ ಮಾತುಗಳು ಕಾಗೆ ಗೆಪ್ತಿಗೆ ತಂದು ಬೇಡವೆಂದು ತಡೆಯಿತು. ನೀನು ನಂಬಿದಂತೆ ಪ್ರಾಣಿಗಳೆಲ್ಲಾ ಒಳ್ಳೆವಲ್ಲ ಹಾಗೆಯೇ ಕೆಟ್ಟವೂ ಅಲ್ಲ. ಪ್ರಸ್ತುತ ಮಾನವರೆಂದರೆ ಪ್ರಾಣಿಗಳಿಗೆ ಏಳುಕಂಡುಗ ಸಿಟ್ಟಿದೆ ಚೆನ್ನ. ನೀನು ಎದುರಾಗೋದು ಅಷ್ಟು ಒಳ್ಳೆದಲ್ಲ ಎಂದು ಎಚ್ಚರಿಸಿತು ಕಾಗೆ.

ಚೆನ್ನನಿಗೆ ಮದ್ದು ಗಿಡ ಸಿಕ್ಕಿದ ಸಂತಸಕ್ಕಿಂತ ಸೆರೆಸಿಕ್ಕ ಆನೆ ಬಗೆಗೆ ಕನಿಕರ, ಮರುಕ ಹುಟ್ಟಿತು. ಛೇ.. ಮಾನವರು ಯಾಕೆ ಹೀಗೆ ಮಾಡ್ತಾರೋ ಪಾಪ ಪ್ರಾಣಿಗಳನ್ನು ಹಿಂಸಿಸಿದರೆ ಸಿಗುವಂಥ ನೆಮ್ಮದಿಯಾದರೂ ಏನು? ಎಂದು ಚೆನ್ನ ಕಾಗೆಯನ್ನು ಕೇಳಿದ. ಕಾಗೆ ‘ನಿನ್ನ ಹೆಸರು? ಎಂದಿತು. ನನ್ನ ಹೆಸರು ‘ಚೆನ್ನಪ್ಪ ಅಂತ ಕಾಗೆಣ್ಣ ಎಂದ. ಕಾಗೆ ‘ನೋಡು ಚೆನ್ನ, ಮಾನವರ ದುರಾಸೆಗಳಿಂದ ಕಾಡು ಹಾಳಾಗಿ ಪ್ರಾಣಿ ಸಂಕುಲವೇ ನಶಿಸಿ ಹೋಗುತ್ತಿದೆ. ಈ ಆಲದ ಮರದ ತುಂಬಾ ನೂರಾರು ಪಕ್ಷಿಗಳು ಕಿಕ್ಕಿರಿದು ತಂಗಿರುತ್ತಿದ್ದವು.

ಈಗ ಹತ್ತಾರಕ್ಕಿಳಿದಿವೆ. ತಿನ್ನಲು ಆಹಾರವಿಲ್ಲ, ಕುಡಿಯಲು ನೀರಿಲ್ಲ. ಗೂಡು ಬಿಟ್ಟು ಆಹಾರ ಹುಡುಕಿ ಹೋದ ಪ್ರಾಣಿ, ಪಕ್ಷಿ ಮತ್ತೆ ಗೂಡು ಸೇರುವ ಗ್ಯಾರೆಂಟಿಯೇ ಇಲ್ಲ. ಏಕಾಏಕಿ ಪ್ರಾಣಿಗಳನ್ನು, ಕಾಡನ್ನು ಮುಗಿಸಲು ಮುಂದಾಗಿದ್ದಾರೆ ಮಾನವರು ಎಂದಿತು. ಈ ಮಧ್ಯೆ ಪರಿಸರವಾದಿ ಪ್ರಬುದ್ಧರು ದನಿಯೆತ್ತಿದ್ದಾರೆ. ಮುಂದೆ ಸರಿಹೋಗಬಹುದು.

ಕಾಗೆಣ್ಣಾ.. ನಿನ್ನ ಮಾತೇ ಚೆನ್ನ ಎಂದ ಚೆನ್ನ.ಮಾತಿನಲ್ಲೇ ಚೆನ್ನನಿಗೆ ಹಸಿವಾಗಿ, ತಂಗಳು ಬುತ್ತಿ ನೆನಪಾಯಿತು. ಕಾಗೆಣ್ಣ ಬಾ ತಂಗಳು ತಿನ್ನೋಣ ಎಂದ. ಚೆನ್ನ, ಕಾಗೆ ಹಂಚಿಕೊಂಡು ತಿಂದರು. ಕಾಗೆ ಕಳ್ಳೆಕಾಯಿಗಳನ್ನು ಚೆನ್ನನಿಗೆ ಕೊಟ್ಟಿತು. ತಿನ್ನುತ್ತಾ ನೀನಿಲ್ಲಿಗೆ ಬಂದಿರೋ ಕಾರಣ ಏನು? ಎಂದು ಕಾಗೆ ಕೇಳಿತು. ಕತೆಗಳಜ್ಜಿ ದಿಕ್ಕಿಲ್ಲದವಳಾಗಿರುವುದು, ಹಳ್ಳಿಹೈಕಳು ಮತ್ತು ಚೆನ್ನನೊಂದಿಗೆ ಕತೆಗಳಜ್ಜಿಗಿದ್ದ ಸಂಬಂಧ ಹಾಗೂ ಬಂದ ಕಾರಣ ತಿಳಿಸಿದ. ನಿಮ್ಮೂರಿಗೆ ಬಂದಾಗ ನನಗೂ ಕತೆಗಳಜ್ಜಿಯನ್ನು ಪರಿಚಯಿಸು ಚೆನ್ನ ಎಂದು ಕಾಗೆ ಕೇಳಿತು.

ಹಾಗೆಯೇ ಆಗಲಿ ಕಾಗೆಣ್ಣ ಎಂದು ಮಾತಾಡುತ್ತಿರುವಾಗಲೇ ಹಕ್ಕಿಗಳ ಚಿಲಿಪಿಲಿ ಕಲರವದೊಂದಿಗೆ ಬೆಳಕು ಹರಿಯಿತು. ಚೆನ್ನ ಮದ್ದು ಸೊಪ್ಪನ್ನು ಕಿತ್ತುಕೊಂಡು ಕಾಗೆಯನ್ನು ಅಭಿನಂದಿಸಿ ಕನಕದಳ್ಳಿಗೆ ಮರಳಿದ. ಕತೆಗಳಜ್ಜಿಗೆ ಮೂರು ಹೊತ್ತು ಸೊಪ್ಪಿನ ರಸ ಕುಡಿಸಿ ಹಣೆಗೂ ಉಜ್ಜಿದ. ತಲೆನೋವು ಸಂಪೂರ್ಣ ಗುಣವಾಗಿ ಮಾಮೂಲಿನಂತಾದಳು. ಹಳ್ಳಿಹೈಕಳು, ಹಿರಿಯರು ಚೆನ್ನನ ಧೈರ್ಯ ಸಾಹಸವನ್ನು ಹೊಗಳಿ ಕೊಂಡಾಡಿದರು. ಚೆನ್ನ ಮನೆಯಲ್ಲಿ ಸುಳ್ಳು ಹೇಳಿ ಕಾಡಿಗೆ ಹೋಗಿದ್ದಕ್ಕೆ ಶಿಕ್ಷಿಸುವ ಮನಸಿದ್ದರೂ ಎಳೆತನದಲ್ಲೆ ಅವನಲ್ಲಿ ಒಡೆಮೂಡಿರುವ ಮಹಾ ಮಾನವತೆಯನ್ನು ಮೆಚ್ಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT