ಶುಕ್ರವಾರ, ಡಿಸೆಂಬರ್ 6, 2019
19 °C

ಕೂಪಮಂಡೂಕತ್ವದ ಹೊಸ ಠರಾವು

Published:
Updated:
ಕೂಪಮಂಡೂಕತ್ವದ ಹೊಸ ಠರಾವು

ಕನ್ನಡ ನಾಡು, ಅರೆಮನಸ್ಸಿನಿಂದಲೋ ಎಂಬಂತೆ, ಆಚರಿಸಲು ಆರಂಭಿಸಿರುವ ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದಿಯ ಈ ಗಳಿಗೆಯಲ್ಲಿ ನನ್ನ ಮನಸ್ಸು ಅವರ ಪ್ರಸಿದ್ಧ ಪದ್ಯ ‘ಕೂಪಮಂಡೂಕ’ವನ್ನು ನೆನಪಿಸಿಕೊಳ್ಳುತ್ತಿದೆ.

1963ರಲ್ಲಿ ರಚಿತವಾದ ಈ ಕವಿತೆಯು ಗಂಡು-ಹೆಣ್ಣು ಎರಡೂ ಆಗಿರಬಹುದಾದ ಮಧ್ಯವಯಸ್ಸಿನ ವ್ಯಕ್ತಿಪ್ರಜ್ಞೆಯೊಂದು ತನ್ನೊಳಗೇ ನಡೆಸಿರುವ ತೀವ್ರವಾದೊಂದು ಸ್ವಗತಕಥನದ ರೂಪದ್ದು. ‘ನೀನೆಲ್ಲಿ ಈಗ; ಹೆಗಲಿಗೆ ಹೆಗಲ ಕೊಟ್ಟವನು / ಹಾಯಿಯನ್ನುರುಟುರುಟು ಊದಿದವನು, / ದಾರಿಯುದ್ದಕ್ಕು ರಹದಾರಿ ಗಿಟ್ಟಿಸಿ ದಿಳ್ಳಿ / ದ್ವೀಪಾಂತರಕ್ಕೆ ಕೈಕೊಟ್ಟ ಸಖನು?’ - ಎಂದು ಆರಂಭವಾಗುವ ಸಾಲುಗಳು ವಿಚಿತ್ರವಾದೊಂದು ‘ವಿಪ್ರಲಂಭ ಶೃಂಗಾರ’ದ ಆವರಣದೊಳಕ್ಕೆ ನಮ್ಮನ್ನು ಕರೆದೊಯ್ದು ನಿಲ್ಲಿಸುತ್ತವೆ.

ಈ ನಿರೂಪಕ ಪ್ರಜ್ಞೆಯು ತನ್ನ ಆತ್ಮೀಯ ಒಡನಾಡಿಯಿಂದ ದೂರವಾಗಿದೆ; ಪ್ರಾಯಶಃ ತಾನು ವಂಚಿತನಾದೆ ಎಂಬ ಭಾವವೂ ಆ ಪ್ರಜ್ಞೆಗೆ ಕಾಡುತ್ತಿದೆ. ಹೀಗೆ ಮೋಸಹೋಗಿ, ‘ಮೈಹೇರಿ’ ‘ತಬ್ಬಲಿ ಹಾಗೆ’ ಬಿದ್ದಿರುವ ಈ ಪ್ರಜ್ಞೆಗೆ ತನ್ನ ಸುತ್ತ - ‘ಹೂವು, ಗಿಡ, ಬಳ್ಳಿ, ಮರ, ಪೊದೆ, ಪೊಟ್ಟರೆ / ಮುಖ ತಿರುಗಿಸುತ್ತ ಕಿಲಕಿಲ ನಗುತ್ತವೆ ; ಸುತ್ತ / ಮುತ್ತಲು ಕಿರಾತ ಲೇವಡಿಯ ಪಹರೆ’ ಕಾಣುತ್ತಿದೆ. ಮಾತ್ರವಲ್ಲ, ಆ ಲೇವಡಿಯ ನಡುವೆಯೇ ಅದಕ್ಕೊಂದು ಹೊಸ ಅರಿವಿನ ಎಚ್ಚರವೂ ಆಗತೊಡಗಿದೆ-

ಉದಾಹರಣೆಗೆ, ಎಳೆಬಿಸಿಲಿನ ಸಾರಾಯಿ ಕುಡಿದು ನಿಂತಿರುವ ಹೆಳವ ಹಲಸಿನ ಮರ ಅಲ್ಲಿ ಕಾಣುತ್ತದೆ; ಗೊನೆ ಮಾಗಿರುವ ಬಾಳೆಯ ಮರವು ‘ಜೀವನ್ಮುಕ್ತ’ಗೊಂಡು ಹಳಸುತ್ತಲೇ ‘ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ’ರುವ ವಿಪರ್ಯಾಸವೂ ಗೋಚರವಾಗುತ್ತದೆ. ಇಂಥ ಸ್ಥಿತಿಯಲ್ಲಿ ಆ ಪ್ರಜ್ಞೆಗೆ ತಾನು ಕಳೆದುಕೊಂಡಿರುವ ಪ್ರತಿಭೆಯ ಮೂಲಸೆಲೆಗಳೆಲ್ಲ ನೆನಪಿಗೆ ಬರುತ್ತವೆ; ‘ಒಳಗುಸುರುಕಟ್ಟಿ ಕುದಿವಬ್ಬಿಗಳ / ಎಬ್ಬಿಸೋ ಮೈ ಮುಟ್ಟಿ; ಅಟ್ಟು ಹೊರಗೆ’ ಎಂಬ ಕೋರಿಕೆಯ ಜತೆಗೆ ಆ ಮನಸ್ಸು ಗತಕಾಲದ ಕಡೆಗೆ ಉರುಳುತ್ತದೆ - ಅಂಥ ಬಾಲ್ಯದ ಸ್ಮೃತಿಗಳು ಈ ಪದ್ಯದ ಎರಡನೆಯ ಭಾಗ.

ಅಡಿಗರು ಈ ಪದ್ಯವನ್ನು ಬರೆದಾಗ ನನಗಿನ್ನೂ ಮೂರು ವರ್ಷ. ಅಷ್ಟರಲ್ಲಾಗಲೇ ಅವರು ‘ಕಟ್ಟುವೆವು ನಾವು’, ‘ಮೋಹನ ಮುರಳಿ’ಗಳ ಗೇಯತೆಯನ್ನು ದಾಟಿ, ಕನ್ನಡದ ಕಾವ್ಯದ ಹೊಸ ‘ಚಂಡೆಮದ್ದಲೆ’ಗಳನ್ನು ಬಾರಿಸಿಯಾಗಿತ್ತು; ಕನ್ನಡದ ನವ್ಯವಿಮರ್ಶಕರು ದುರ್ಬೀನು ಹಿಡಿದು ಅಡಿಗರ ಹೊಸ ರಚನೆಗಳಿಗಾಗಿ ಕಾದಿದ್ದ ಕಾಲ ಅದು. ಕಾವ್ಯಜೀವನದ ಅಂಥ ಉಬ್ಬರದ ನಡುವೆಯೇ ಆಗ, ಅಡಿಗರಿಗೆ ವೈಯಕ್ತಿಕವಾಗಿ ಒಂದು ‘ವಿಷಾದಯೋಗ’ ಹುಟ್ಟಿತ್ತೆಂದು ಬಲ್ಲವರು ಹೇಳಿದ್ದು ಕೇಳಿದ್ದೇನೆ.

ತನ್ನೊಳಗಿದ್ದ ಪ್ರತಿಭೆಯೇ ತನಗೆ ‘ಟಾಂಗು ಕೊಟ್ಟು... ವಿಶಾಲ ನೀಲದೆಡೆಗೆ’ ಕಂಬಿಕಿತ್ತಿರುವಂತೆಯೂ ‘ಇದೇ ಪಂದ್ಯದಂತ್ಯ ಮಜಲು’ ಎಂದೂ ಅವರಿಗೆ ಕಾಣತೊಡಗಿತ್ತಂತೆ; ಇನ್ನು ತನ್ನಿಂದ ಮಹತ್ವದ ಪದ್ಯಗಳನ್ನು ಬರೆಯಲು ಅಸಾಧ್ಯವೆಂದು ಆಗವರು ಆಪ್ತರಲ್ಲಿ ತೋಡಿಕೊಂಡಿದ್ದರಂತೆ. ಅಂಥ ವಿಷಣ್ಣತೆಯ ನಡುವೆಯೇ ಒಂದು ದಿನ, ಈ ಹೊಸ ಕವಿತೆಯನ್ನು ಅವರು ಆಪ್ತರೊಬ್ಬರಿಗೆ ಓದಿಹೇಳಿದ್ದರು - ಎಂಬುದು ನಾನು ಕೇಳಿಬಲ್ಲಂಥ ಈ ಕವಿತೆಯ ‘ಭಾವಸಂದರ್ಭ’!

ಕವಿತೆಯ ಎರಡನೆಯ ಖಂಡವು, ತನ್ನ ಮೊದಲಿನ ಸಾಲುಗಳ ಕ್ಲೆಬ್ಯವನ್ನೆಲ್ಲ ಕಳಚಿಕೊಂಡು ‘ಸಂಯೋಗ ಶೃಂಗಾರ’ದ ದಬದಬೆಗೆ ಧುಮುಕುತ್ತದೆ. ನಿರೂಪಕ ಮತ್ತು ಅವನ ಒಡನಾಡಿಯ ನಡುವೆ ಈಗ, ನಾನು-ನೀನೆಂಬ ದ್ವೆ ತ ಮಾಯವಾಗಿದೆ; ಆದ್ದರಿಂದ, ನಾನು ಅಥವಾ ನೀನು ಎಂಬ ಈ ಎರಡೂ ವಾಚಕಗಳನ್ನಿಟ್ಟುಕೊಂಡೂ ಓದಬಹುದಾದಂಥ ಸಾಲುಗಳು ಈ ಖಂಡದಲ್ಲಿ ಸಮುದ್ರದ ತೆರೆಗಳಂತೆ ಏರೇರಿ ಬರುತ್ತವೆ - ‘ಹಾಜರಾಗುತ್ತಿದ್ದೆ ಆಗ ಪ್ರತಿ ಹೊತ್ತಾರೆ, / ಹೊಯಿಗೆಗೆರೆ ತುದಿಗೆ ತುದಿಗಾಲ ದಿಗಿಲು / ನಾನಿರಲು; ಕಡಲನೊರೆ ಬಗೆವ ಬಂಗಾರಗೆರೆ / ತೇರ ತುದಿಕಳಶ ಮುನ್ನುಗ್ಗುತಿರಲು’.

ಬಾಲ್ಯ-ತಾರುಣ್ಯಗಳ ಇಂಥ ಉತ್ಸಾಹದ ಸ್ಥಾಯೀಭಾವದ ಮಹಾಪೂರದ ನಡುವೆ ಕವಿತೆಯು ಬಗೆಬಗೆಯ ಸಂಚಾರಿಭಾವಗಳನ್ನು ಹೆಣೆದಿದೆ - ಬಯಕೆಯ ಬಿಸಿಗೆ ಬಾಗಿ ಅವರಿಬ್ಬರೂ ‘ಕತ್ತಲ ಕಡಲ ನಡುವೆ ನಡುಗಡ್ಡೆ ಮನೆಯಲ್ಲಿ / ಇರುಳಿಡೀ ತಳಮುಳುಗು ಬತ್ತಲಾಟ’ ಆಡಿದ್ದು, ಮತ್ತು ಅದರ ಫಲವಾಗಿ ‘ನಾನು ನೀನಿಡಿಯಾಗಿ’ ಚಿನ್ನದ ತತ್ತಿಯನ್ನು ಹೆತ್ತಿದ್ದು, ಹಾಗೂ ‘ಹಳ್ಳಿಯ ಶಾಲೆ / ಮೇಷ್ಟರಿಲ್ಲದ ವೇಳೆ ತಾಳ ಹಿಡಿದು / ನೀ ಭಾಗವತ ಬಾರಿಸಿದೆ; ನಾನು ಬಲಭೀಮ / ರೌದ್ರಾವತಾರಕ್ಕೆ ರೂಲುದೊಣ್ಣೆ-’ ಮೊದಲಾದ ಕರಾಮತ್ತು ನಡೆಸಿ ಶಿಕ್ಷಕರಿಂದ ಪೆಟ್ಟು ತಿಂದಿದ್ದು - ಹೀಗೆ ಭೌತಿಕ-ಪಾರಭೌತಿಕಗಳ ವಲಯಗಳ ನಡುವೆ ಜಿಗಿಯುತ್ತ ಸಾಗುವ ಪ್ರತಿಮೆಗಳ ಸರಮಾಲೆಯೇ ಈ ಸಾಲುಗಳಲ್ಲಿದೆ.

ಈ ನಡುವಿಗೆ ಕವಿತೆಯು ತಟ್ಟನೆ ಮುಟ್ಟಿಬಿಡುವ ಒಂದು ಪ್ರತಿಮೆಯು ಎಲ್ಲರೂ ಸೇರಿ ಊರ ತೇರನ್ನು ಎಳೆಯುವ ಸಾಮುದಾಯಿಕ ಕ್ರಿಯೆಯದ್ದು; ‘ಕೋಟಿ ಕೋಟಿಯ ಕಂಠ ಬಾಹು ಬಲಕೂ ಮೂಲ / ಬಲ ನನ್ನ ನಿನ್ನ ಸಂಯೋಗ ಘಟನೆ’ - ಎಂಬ ವಿಶಿಷ್ಟಾದ್ವೆ ತವನ್ನು ಪ್ರತಿಪಾದಿಸುವಂಥದ್ದು!

ಇಂಥ ಭಾವೋಲ್ಲಾಸದ ಎರಡನೆಯ ಖಂಡವನ್ನು ಬರೆದ ನವ್ಯಕವಿ ಅಡಿಗರಿಗೆ, ಪ್ರಾಯಶಃ ತಾನು ಬರೆದ ಈ ಸಾಲುಗಳು ನವೋದಯ ಕವಿಗಳ ಭಾವಲೋಲುಪತೆಯ ಕಡೆಗೆ ಸಾಗುತ್ತಿವೆಯೆಂಬ ಅನುಮಾನ ಮೂಡಿತೋ ಏನೋ, ಅವರ ಕವಿತೆಯ ಮೂರನೆಯ ಖಂಡವು ಮತ್ತೊಮ್ಮೆ ಕವಿತೆಯ ಆರಂಭದಲ್ಲಿ ಕಂಡ ವಿಷಾದದತ್ತ ನಮ್ಮನ್ನು ಮರಳಿ ತರುತ್ತದೆ - ‘ಈಗ ಬಂದಿದೆ ಹಣ್ಣು ಬಿದ್ದು ಕೊಳೆಯುವ ಕಾಲ; / ಹಸುರಿನ ಬುಡಕ್ಕೊರಲೆ ಹಿಡಿವ ಕಾಲ; / ತೇರ ಹಲಗೆಗೆ ಸುರುಬು ತಗಲಿ, ಮಿಣಿಹುರಿ ಲಡ್ಡು / ಹಿಡಿದು ಹಿಸಿಯುವ ತೇವ ಇಳಿವ ಕಾಲ’. ಆದರೆ, ವಿಶೇಷವೆಂದರೆ, ಕವಿತೆಯ ಆರಂಭದಲ್ಲಿ ‘ನೀನೆಲ್ಲಿ ಈಗ?’ ಎಂಬ ನುಡಿಯಲ್ಲಿ ಕಂಡ ಆಕ್ರಂದನ ರೂಪದ ಆತಂಕಪೂರಿತ ವಿಷಾದದ ಸ್ಥಾಯಿಯು ಈಗ ತುಸು ಬದಲಾಗಿ, ಶಾಂತರಸಕ್ಕೆ ಸ್ಥಾಯಿಯಾಗಬಹುದಾದ ಶಮಗುಣದ ನಿಲುವಿನತ್ತ ಸರಿಯತೊಡಗಿದೆ.

ಈ ಹೊಸ ಭಾವಾವಸ್ಥೆಯಲ್ಲಿರುವ ನಿರೂಪಕ ಮನೋಲಹರಿಯು - ಒಂದು ದೃಷ್ಟಾಂತದ ಮೂಲಕ ಹೇಳುವುದಾದರೆ, ಮಕ್ಕಳ ಮದುವೆ ಮಾಡಿ ನೌಕರಿಗೆ ಹಚ್ಚಿ, ನಿವೃತ್ತಿಯ ವಯಸ್ಸಿಗೆ ನಿಧಾನವಾಗಿ ಸಮೀಪಿಸುತ್ತಿರುವ ಚಾಲೀಸು ವರ್ಷದ ಮಧ್ಯವಯಸ್ಕನೊಬ್ಬನ ವಿಭಾವಗಳನ್ನು ಪ್ರಕಟಿಸತೊಡಗಿದೆ - ‘ತೂಕ ಹೆಚ್ಚುತ್ತಿದೆ ದಿನದಿನಕ್ಕೆ ; ಏತದ ನನ್ನ / ತುದಿ ಮಣ್ಣು ತಿನ್ನುತಿದೆ, ಅತ್ತಕಡೆಗೆ / ನೀ ಹತ್ತಿ ಕುಳಿತಿದ್ದ ತುದಿ ಅಂತರಾಳಕ್ಕೆ; / ಚಾಳೇಶ; ಕಾಣಿಸದು ನಿನ್ನ ಚಹರೆ’.

ಅಷ್ಟೇ ಅಲ್ಲ, ಆ ಒಡನಾಡಿಯ ಅನುಪಸ್ಥಿತಿಯಲ್ಲಿ ಈತನಿಗೆ/ಈಕೆಗೆ ಸಂಪರ್ಕಕ್ರಿಯೆ ಸಾಧ್ಯವಾಗದೆ ಸಂವಹನೆ ಸೊರಗುತ್ತಿದೆ - ಆಕೆ ಬಿಡುವ ನೂರಾರು ಬಿಳಲುಗಳು ಸಂಪರ್ಕ ಸಿಗದೆ, ಕುಳಿತಲ್ಲೇ ಕೊನರುತ್ತಿವೆ; ‘ಒಣಗುವುವು ಕುಡಿ ಹೊರಗೆ ಗಾಳಿ ತಾಗಿದ ನಿಮಿಷ / ಸೇರಿಕೊಳ್ಳದೆ ನಿನ್ನ ಮೂಲ ಧಾತು’ ಎಂಬ ತಹತಹ ಆ ವ್ಯಕ್ತಿಯೊಳಗಿಂದ ಹುಟ್ಟುತ್ತಿದೆ. ಮುಂದೊಮ್ಮೆ, ಅಡಿಗರದೇ ಇನ್ನೊಂದು ಪದ್ಯ ‘ಚಿಂತಾಮಣಿಯಲ್ಲಿ ಕಂಡ ಮುಖ’ವು ಈ ತಹತಹಕ್ಕೆ ಹೊಸದೊಂದು ಪರಿಹಾರ ಹುಡುಕುತ್ತದೆ; ಅದು ಬೇರೆ ಸಂಗತಿ.

ಹೀಗೆ ಆರಂಭದ ಆವೇಶಪೂರಿತ ಆತಂಕ ಮತ್ತು ಆಮೇಲಿನ ಸಮಾಧಾನದ ತಹತಹ - ಇವೆರಡನ್ನೂ ಒಂದರ ಬಳಿಕ ಒಂದರಂತೆ ತೆರೆದಿಡುವ ಈ ಆತ್ಮನಿರೀಕ್ಷಣೆಯ ಪದ್ಯವು ಸದ್ಯದ ಈ ಕಾಲದೇಶಗಳಲ್ಲಿ ನನ್ನ ಮನಸ್ಸೊಳಕ್ಕೆ ಮರುಪ್ರವೇಶ ಮಾಡಿದ್ದು ಯಾತಕ್ಕೆ? - ಎಂಬ ಪ್ರಶ್ನೆಯತ್ತ ನಾನೀಗ ತಿರುಗುತ್ತೇನೆ. ಆರಂಭದಲ್ಲಿ ನಾನು ಉಲ್ಲೇಖಿಸಿದಂತೆ, ಇದು ಅಡಿಗರ ಜನ್ಮಶತಾಬ್ದಿಯ ವರ್ಷವೆಂಬುದು ಇದಕ್ಕೆ ನಿಮಿತ್ತ ಕಾರಣ ಮಾತ್ರ; ಗಹನವಾದ ಇನ್ನೊಂದು ಕಾರಣ ಓದುಗನಾದ ನನ್ನ ಸ್ಥಾಯೀಭಾವದೊಳಗೇ ಅಡಗಿರುವಂತೆ ನನಗನ್ನಿಸುತ್ತಿದೆ. ಅದು ಹೀಗಿದ್ದೀತು: ನಾನು ಮೂರು ವರ್ಷದವನಿದ್ದಾಗ ರಚಿತವಾದ ಆ ಪದ್ಯವನ್ನು ನಾನೀಗ ಓದುತ್ತಿರುವುದು ಹಿರಿಯ ನಾಗರಿಕನಾಗಲಿಕ್ಕೆ ಮೂರು ವರ್ಷ ಮಾತ್ರ ಬಾಕಿ ಉಳಿದಿರುವ ವಯೋಮಾನದಲ್ಲಿ. ಆದ್ದರಿಂದ ಆ ನಿರೂಪಕ ಪ್ರಜ್ಞೆಯನ್ನು ನನ್ನ ಪ್ರಜ್ಞೆಯು ಓದುವ ಪರಿಯೂ ಬದಲಾಗಿದೆ. 

ಅಷ್ಟೇ ಅಲ್ಲ, ಇವತ್ತಿನ ಕನ್ನಡ ಸಾಹಿತ್ಯ ಲೋಕದಲ್ಲಿ ಜರುಗುತ್ತಿರುವ ಹಲವು ವಿಶಾಲ ವಿದ್ಯಮಾನಗಳೂ ಕೂಡಾ, ‘ಕೂಪಮಂಡೂಕ’ದ ಇಂಥ ಹೊಸ ಓದುಗಳಿಗೆ ನೆಲೆಗಟ್ಟನ್ನು ನಿರ್ಮಿಸಿವೆ - ಎಂದೂ ನನಗನ್ನಿಸುತ್ತಿದೆ. ಮೊದಲನೆಯದಾಗಿ, ಈಚಿನ ಕನ್ನಡದ ಸಾಹಿತ್ಯಜಗತ್ತು ಹೊಸ ಬಗೆಯ ಒಂದು ಬಹಿರ್ಮುಖತೆಯನ್ನು ರೂಢಿಸಿಕೊಳ್ಳತೊಡಗಿದೆ.

ನವ್ಯವೆಂದು ಗುರುತಿಸಲಾದ ಸಾಹಿತ್ಯ ಘಟ್ಟದ ಅಂತರ್ಮುಖತೆಗೆ - ಅಥವಾ ಮಾನಸಿಕ ಕೂಪಮಂಡೂಕತ್ವಕ್ಕೆ - ಪರ್ಯಾಯವೋ ಎಂಬಂತೆ ಮೊದಮೊದಲಿಗೆ ಕಾಣಿಸಿಕೊಂಡ ಈ ಬಹಿರ್ಮುಖತೆಯೀಗ, ತನ್ನನ್ನು ತಾನು ಅನುಮಾನಿಸಿಕೊಳ್ಳಬಲ್ಲ ಅಂತರ್ದರ್ಶನದ ಶಕ್ತಿಯನ್ನೂ ಮತ್ತು ತಾನು ನಂಬಿದ ಸಿದ್ಧಾಂತಕ್ಕೆ ವಿರುದ್ಧವಾದ ಸತ್ಯಗಳನ್ನು ಲೋಕದಲ್ಲಿ ಕಾಣಬಲ್ಲ ಶಕ್ತಿಯನ್ನೂ ವಿಸರ್ಜಿಸಿಕೊಳ್ಳುತ್ತಿದೆ. ಆದ್ದರಿಂದ ಸಾಹಿತ್ಯ ಕಲಾಸಂವೇದನೆಗಳು ಸರಳೀಕೃತ ಸಾಮಾಜಿಕ ಕಳಕಳಿಯಾಗಿ, ಇನ್ನೊಂದು ಬಗೆಯ ‘ಸೈದ್ಧಾಂತಿಕ ಕೂಪಮಂಡೂಕತ್ವ’ದ ಕಡೆಗೆ ನಾವು ಸಾಗುತ್ತಿರುವಂತೆ ನನಗನ್ನಿಸಿದೆ.

ಎರಡನೆಯದಾಗಿ, ನಾವೆಲ್ಲ ಬದುಕುತ್ತಿರುವ ಈ ತಥಾಕಥಿತ ಜಾಗತೀಕರಣವೆಂಬ ವಿದ್ಯಮಾನದ ಕುರಿತು ನಾವೇನೇ ಪರ-ವಿರೋಧದ ನಿಲುವು ತಾಳಲಿ, ಆಳದಲ್ಲಿ ನಾವೆಲ್ಲ ಅದರ ಫಲಾನುಭವಿಗಳೇ. ತತ್ಫಲವಾಗಿ, ಇಡಿಯ ಲೋಕಕ್ಕೇ ನಮ್ಮನ್ನು ತೆರೆದುಕೊಳ್ಳಬೇಕು ಎಂದು ಇವತ್ತು ನಮ್ಮೊಳಗೆ ಹುಟ್ಟುತ್ತಿರುವ ತಹತಹವೇ, ನಾವು ಇದ್ದ ‘ಸ್ಥಿತಿ’ಯನ್ನು ನಮಗೆ ‘ಕೂಪಮಂಡೂಕತ್ವ’ ಎಂದು ಭ್ರಮಿಸಲಿಕ್ಕೂ ಕಾರಣವಾಗಿರಲು ಸಾಧ್ಯವಿದೆ; ಅಂಥ ಭ್ರಾಮಕ ಕೂಪಮಂಡೂಕತ್ವದಿಂದ ಹೊರಬರುವ ಭ್ರಮೆಯಲ್ಲಿ ನಾವಿವತ್ತು ಹಲವು ‘ಮಾರಕ ರಾಸಾಯನಿಕ’ಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಒತ್ತಾಯ ಮಾಡುತ್ತಿದೆಯಲ್ಲವೆ? ನನ್ನ ಬರಹಗಳು ಇಂಗ್ಲಿಷ್‌ಗೆ ಭಾಷಾಂತರಗೊಳ್ಳಬೇಕು, ಅಂತರರಾಷ್ಟ್ರೀಯ ಮಟ್ಟದ ಸಾಹಿತ್ಯಸಮಾರಂಭಗಳಲ್ಲಿ ನಾನು ಕಾಣಿಸಿಕೊಳ್ಳಬೇಕು - ಇತ್ಯಾದಿ ಇತ್ಯಾದಿ ಮಾನವ ದೌರ್ಬಲ್ಯಗಳು ಇವತ್ತು ಮುಕ್ತ ಮಾರುಕಟ್ಟೆಯ ಮಾಯಾಮುಸುಕಿನಲ್ಲಿ ನಾವು ಸಂಪಾದಿಸಿಕೊಳ್ಳಬೇಕಾದ ಸಹಜ ಶಕ್ತಿಯೆಂಬಂತೆ ಕಾಣಿಸಿಕೊಂಡು ನಮ್ಮನ್ನು ಮರುಳು ಮಾಡುತ್ತಿರಬಹುದು - ಎಂದೂ ನನಗೆ ಹಲವೊಮ್ಮೆ ಅನ್ನಿಸಿದೆ.

ಅರ್ಧ ಶತಮಾನಕ್ಕೂ ಹಿಂದೆ ಅಡಿಗರು ಬರೆದ ಈ ಪುಟ್ಟ ಪದ್ಯದೊಳಗೆ ಇಂಥ ಹೊಸಗಾಲದ ಧ್ವನಿಗಳನ್ನು ಅನುರಣಿಸುವ ಸಾಮರ್ಥ್ಯ ಇದೆ. ಮಾತ್ರವಲ್ಲ, ಇಂಥ ತಹತಹಕ್ಕೆ ಶಾಮಕವಾಗಬಹುದಾದ ಒಂದು ಶಮಶಕ್ತಿಯನ್ನೂ ಈ ಪದ್ಯದ ಕಡೆಯ ಖಂಡ ಸೂಚಿಸುತ್ತಿದೆಯೆಂಬುದು ತುಂಬ ಗಮನಾರ್ಹ ಸಂಗತಿ. ನಿಜವಾಗಿ, ಈ ಪದ್ಯದ ಮರ್ಮವಿರುವುದೇ ಈ ಕಡೆಯ ತಿರುವಿನೊಳಗೆ - ಎಂದು ನನ್ನ ಸೂಚನೆ. ಈ ಪದ್ಯದ ನಿರೂಪಕ/ಕಿಯ ಮನಸ್ಸಿನೊಳಗೆ ಈ ಕಡೆಯ ಸಾಲುಗಳು ಹೊಸ ಅರಿವೊಂದನ್ನು ಹುಟ್ಟಿಸುತ್ತವೆ - ‘ಏಳು ಹೊಂಡದ ನೀರು ಕುಡಿದ ಮಂಡೂಕಯ್ಯ / ನಾನು; ಕುಪ್ಪಳಿಸುವುದೆ ನನ್ನ ಧರ್ಮ’.

ಇನ್ನೊಂದು ಬಗೆಯಿಂದ ಹೇಳುವುದಾದರೆ, ಕೂಪಮಂಡೂಕತ್ವವು ತನ್ನ ‘ಕರ್ಮ’ ಎಂದು ಆತಂಕಿತವಾಗಿದ್ದ ಮನಸ್ಸಿಗೆ ಅದು ತನ್ನ ‘ಧರ್ಮ’ ಆಗಿರಬಹುದಲ್ಲವೆ? - ಎಂಬ ತಿಳಿವಳಿಕೆ ಹುಟ್ಟುವುದು ಈ ಸಾಲುಗಳಲ್ಲಿ ಸಂಭವಿಸುವ ಮಹತ್ತ್ವದ ಅರ್ಥಾಂತರ. ಆದ್ದರಿಂದಲೇ, ಅದುವರೆಗೂ ತನ್ನ ಮಿತಿಯೆಂದು ಭಾವಿಸಿದ್ದ ಕೂಪಮಂಡೂಕತ್ವವು ಒಂದು ಬಿಡುಗಡೆಯ ದಾರಿಯಾಗಿಯೂ ಗೋಚರವಾಗತೊಡಗುತ್ತದೆ. ನಿರೂಪಕ ಪ್ರಜ್ಞೆಯ ಈ ಮಾತುಗಳನ್ನೇ ಕೇಳಿ - ‘ಊದೂದಿ ಏದೇದಿ ನೆಲದೊಳೊದ್ದಾಡಿದೆನು; / ಇನ್ನಾದರೂ ಕೂಪಕಿಳಿವುದೆ ಸರಿ. / ನುಣ್ಣನೆಯ ಕೆಸರ ಬಸಿರಲ್ಲಿ ಹೂತಡಗುವೆನು; / ಊದಿಳಿದು ಮೈ ತಿಳಿವುದೊಂದೇ ಗುರಿ’.

ಈ ಅರಿವು ನಿರೂಪಕ ಪ್ರಜ್ಞೆಯನ್ನೀಗ ಅಂತಿಮವಾದ ಇನ್ನೊಂದು ಸ್ತರಕ್ಕೆ ಕರೆದೊಯ್ಯುತ್ತದೆ - ‘ನಾನು ತಿಂದರೆ ನೊಣವ ತೋಟ ಹುಲುಸಾಗುವುದೆ? / ಆಯ್ತೆ ಬಾಳೆಗೆ ಮತ್ತೆ ಕಾಯಕಲ್ಪ? / ನಾ ಮುಳುಗಿದರೆ ತೆಂಗು ಕಂಗಾಲೆ? ಹಲಸಿಗೆ ಅಲಸೆ? / ಇದನರಿಯಲೂ ಕಳೆದೆ ಬಹಳ ತೆರಪ!’ ಎಂಬ ಅರಿವೇ - ಈ ಪದ್ಯವು ಆತ್ಮಮರುಕದ ಒಂದು ಚಿಲ್ಲರೆ ಹಾಡಾಗಿ ಕೊನೆಗೊಳ್ಳಬಹುದಾಗಿದ್ದ ಅಪಾಯವನ್ನು ನಿವಾರಿಸುತ್ತದೆ. ಬದಲು, ಆಚಾರ್ಯ ಅಭಿನವಗುಪ್ತನ ಮಾತುಗಳನ್ನು ಬಳಸಿ ಹೇಳುವುದಾದರೆ, ವೈಯಕ್ತಿಕ ವಾಸನಾ ಜಗತ್ತಿನಿಂದ ಉದ್ಯುಕ್ತವಾದ ಸ್ಥಾಯೀಭಾವಗಳು, ಸಾಧಾರಣೀಕರಣಗೊಂಡು ತಮ್ಮ ವ್ಯಕ್ತಿನಿರ್ದಿಷ್ಟತೆಯ ಮಿತಿಯನ್ನು ಕಳಚಿ ‘ಮಾಹೇಶ್ವರ ಚಮತ್ಕಾರ’ದ ನೆಲೆಗೆ ನಮ್ಮನ್ನು ಕರೆದೊಯ್ಯುವ ಕೆಲಸಕ್ಕೆ ಈ ಕವಿತೆ ತೊಡಗುತ್ತದೆ.

ಕವಿತೆಯ ಈ ಕಡೆಯ ನಾಲ್ಕು ಸಾಲುಗಳು ಅಂಥ ರಸಾನುಭವದ ಉತ್ತುಂಗವೆಂದು ನನಗನ್ನಿಸಿದೆ - ‘ನಿನ್ನ ನಗೆಯನ್ನೆ ಮೊಳಗುತ್ತಿರುವ ಮಲ್ಲಿಗೆ, / ನಿನ್ನ ನಲ್ಮೆಯ ನೆಳಲನೀವ ಮಾವು; / ನಿನ್ನೊಲವನಪ್ಪಿ ತೋರುವ ಕೊಳದ ತಳಕೆಸರು- / ಇಲ್ಲಾಡುವುದು - ಇದೇ ಹೊಸ ಠರಾವು’. ಈ ಹೊಸ ಠರಾವು, ತನ್ನ ಕೂಪಮಂಡೂಕತ್ವದ ಆವರಣವನ್ನೇ ಹೊಸ ಇತ್ಯಾತ್ಮಕ ನಿಲುವಿನಿಂದ ಪುನರಾವಿಷ್ಕಾರ ಮಾಡಿಕೊಳ್ಳುತ್ತಿರುವುದರ ಸೂಚನೆಯನ್ನೂ ಈ ಕಡೆಯ ಸಾಲುಗಳು ಸ್ಪಷ್ಟವಾಗಿ ಸೂಚಿಸುತ್ತಿವೆ.

ಕಡೆಯದಾಗಿ, ನಾನು ಎತ್ತುತ್ತಿರುವ ಮೂಲಪ್ರಶ್ನೆ ಇದು - ನಿರ್ದಿಷ್ಟ ಕಾಲದೇಶಗಳಲ್ಲಿ ಬದುಕಿದ್ದ ಕವಿಪ್ರತಿಭೆಯೊಂದರ ಈ ಸ್ವಗತವನ್ನು ನಮ್ಮೆಲ್ಲರ ಇವತ್ತಿನ ಸ್ವಗತವೂ ಹೌದೆಂದು ಓದಲಾರಂಭಿಸಿದರೆ, ಮತ್ತು, ಈ ಪದ್ಯವು ನಮ್ಮ ವರ್ತಮಾನದ ಕೂಪಮಂಡೂಕತ್ವಗಳನ್ನು ಕುರಿತ ಹೊಸ ಜಾಗೃತಿಯನ್ನೂ ಮತ್ತು ಅದನ್ನು ಇವತ್ತಿನ ಕಾಲಕ್ಕೆ ಎದುರಿಸಬಲ್ಲ ‘ಹೊಸ ಠರಾವು’ ಮಂಡಿಸಿಕೊಳ್ಳುವ ಸಾಮರ್ಥ್ಯವನ್ನೂ ಕೊಡಬಲ್ಲುದು ಎನ್ನುವುದಾದರೆ - ಅಂಥ ನಮ್ಮನಮ್ಮ ಹೊಸ ಠರಾವು ಏನಿದ್ದೀತು? ಈ ಪ್ರಶ್ನೆಯನ್ನು ನಾನು ಓದುಗರ ಪ್ರಜ್ಞೆಗೇ ಬಗೆಹರಿಸಿಕೊಳ್ಳಲು ಬಿಡುತ್ತೇನೆ.  

****

‘ಹೊಸ ಠರಾವು’- ಎಂಬ ಈ ಕವಿತೆಯ ಕಡೆಯ ಎರಡು ಪದಗಳು, ನನ್ನ ಓದಿನೊಳಗೆ ಎರಡು ವಿಭಿನ್ನ ಅರ್ಥಗಳಿಗೆ ಕಾರಣವಾಗಿವೆ. ಮೊದಲನೆಯದು, ಈ ಕವಿತೆಯ ನಿರೂಪಣಾ ಪ್ರಜ್ಞೆಯೊಳಗೆ ಉಂಟಾದ ಅರಿವಿನಿಂದ ಪದ್ಯದೊಳಗೇ ಹುಟ್ಟಿದ ಹೊಸ ಠರಾವು; ಮತ್ತು, ಎರಡನೆಯದು ಇದನ್ನು ಓದುತ್ತಿರುವ ಇವತ್ತಿನ ಓದುಗನಾದ ನಾನು ಅನುಮಿತಿಗೊಳಿಸಿಕೊಳ್ಳಬಹುದಾದ ಹೊಸ ಠರಾವು.

‘ಹೊಸ ಠರಾವು’ ಎಂಬ ಆಧುನಿಕ ರಾಜಕೀಯ ಪರಿಭಾಷೆಯ ಈ ಪದಪ್ರಯೋಗವೇ ಇಂಥ ಎರಡನೆಯ ಅರ್ಥದ ಸ್ಫೋಟಕ್ಕೆ ಅಗತ್ಯವಾದ ಸಿಡಿಮದ್ದನ್ನು ತನ್ನೊಳಗಿರಿಸಿಕೊಂಡಿದೆ. ಆದ್ದರಿಂದ, ಕೇವಲ ವ್ಯಕ್ತಿಗತ ನೆಲೆಯಲ್ಲಿ ನಿಂತು ಅಧ್ಯಾತ್ಮದ ಅರಿವಾಗಿ ಮುಗಿಯಬಹುದಾಗಿದ್ದ ಈ ನಿರೂಪಕ ಪ್ರಜ್ಞೆಯ ಠರಾವು, ಈಗ ಹೊಸಕಾಲದ ರಾಜಕಾರಣವೊಂದರ ಆರಂಭದ ಪ್ರಮಾಣವಚನದ ಸೂಚನೆಯತ್ತ ಕೈದೋರುತ್ತದೆ.

ಕನ್ನಡ ಕಾವ್ಯೇತಿಹಾಸದ ನೆಲೆಯಿಂದಲೂ ಈ ದ್ವಂದ್ವಾರ್ಥಕ್ಕೆ ಒಂದು ಧ್ವನಿಶಕ್ತಿಯಿದೆ - ಕನ್ನಡ ಆಧುನಿಕ ಕಾವ್ಯವಿಮರ್ಶೆಯಲ್ಲಿ ಬಳಕೆಯಾದ ವರ್ಗೀಕರಣಗಳನ್ನೇ ಬಳಸಿ ಹೇಳುವುದಾದರೆ, ನವ್ಯದ ಆತಂಕಿತ ನೆಲೆಯಿಂದ ಹೊರಟ ಒಂದು ಪದ್ಯವು, ನವೋದಯದ ಆಧ್ಯಾತ್ಮಿಕ ನೆಲೆಗಳನ್ನು ಒಮ್ಮೆ ತಟ್ಟಿ, ಕಡೆಗೆ ನವ್ಯಾನಂತರದ ಸಾಮಾಜಿಕ ರಾಜಕಾರಣವೊಂದಕ್ಕೆ ಬಂದು ನಿಲ್ಲುವುದು- ಪ್ರಸ್ತುತ ಪದ್ಯದ ಈ ಚಲನೆಯು ಅಡಿಗರ ಒಟ್ಟೂ ಕಾವ್ಯೋದ್ಯೋಗಕ್ಕೇ ರೂಪಕವಾಗಬಲ್ಲ ವ್ಯಾಪ್ತಿಯನ್ನು ಪಡೆದಿದೆ.

ಪ್ರತಿಕ್ರಿಯಿಸಿ (+)