ಶನಿವಾರ, ಡಿಸೆಂಬರ್ 7, 2019
24 °C

ಜಿಎಸ್‌ಟಿಯಿಂದ ಜನಸಾಮಾನ್ಯರಿಗೆ ಹೊರೆ: ಚಿದಂಬರಂ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಿಎಸ್‌ಟಿಯಿಂದ ಜನಸಾಮಾನ್ಯರಿಗೆ ಹೊರೆ: ಚಿದಂಬರಂ

ಕರೈಕುಡಿ (ತಮಿಳುನಾಡು): ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಅಪೂರ್ಣವಾಗಿದ್ದು, ಗಂಭೀರ ಲೋಪಗಳಿಂದ ಕೂಡಿದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿಂದಬರಂ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜಿಎಸ್‌ಟಿಯಿಂದ ಜನಸಾಮಾನ್ಯರಿಗೆ ಹೊರೆಯಾಗಲಿದ್ದು, ಹಣದುಬ್ಬರ ಏರಿಕೆಗೆ ಕಾರಣವಾಗಲಿದೆ. ಜಿಎಸ್‌ಟಿ ಜಾರಿಗೊಳಿಸಿರುವುದು ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆದಾರರ ವಿರುದ್ಧ ಕೈಗೊಳ್ಳಲಾದ ನಿರ್ಧಾರ’ ಎಂದು ಹೇಳಿದ್ದಾರೆ.

‘ದೇಶವು ಸಂಪೂರ್ಣ ಸಿದ್ಧವಾಗದೇ ಇರುವಾಗ, ಪ್ರಮುಖ ತೊಡಕುಗಳನ್ನು ತೊಡೆದುಹಾಕಬೇಕಾದಂಥ ಸಂದರ್ಭದಲ್ಲಿ, ತೀವ್ರ ಟೀಕೆಗಳು ಎದುರಾದರೂ ಲೆಕ್ಕಿಸದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಿಎಸ್‌ಟಿ ಜಾರಿಗೊಳಿಸಿತು’ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ಮೊದಲು ಜಿಎಸ್‌ಟಿಯನ್ನು ಪ್ರತಿಪಾದಿಸಿದ್ದು ನಿಜ. ಆದರೆ, ಈಗ ಜಾರಿ ಮಾಡಿರುವುದು ತಜ್ಞರು ಸಿದ್ಧಪಡಿಸಿದ ಜಿಎಸ್‌ಟಿಯಲ್ಲ. ಮುಖ್ಯ ಆರ್ಥಿಕ ಸಲಹೆಗಾರರು ಸಲಹೆ ನೀಡಿದ, ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಸಿದ್ಧಪಡಿಸಿದ ಜಿಎಸ್‌ಟಿ ಇದಲ್ಲ ಎಂದು ಚಿದಂಬರಂ ಹೇಳಿದ್ದಾರೆ.

ಹಲವು ತೆರಿಗೆ ದರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗಿರುವ ಭಿನ್ನ ನ್ಯಾಯವ್ಯಾಪ್ತಿ, ಪೆಟ್ರೋಲಿಯಂ ಉತ್ಪನ್ನಗಳು, ವಿದ್ಯುತ್, ಮದ್ಯವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟಿರುವುದೂ ಸೇರಿದಂತೆ ಹಲವು ಲೋಪಗಳು ಜಿಎಸ್‌ಟಿಯಲ್ಲಿವೆ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)