ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದುಮ ಪುರುಷ ಕತೆ

Last Updated 1 ಜುಲೈ 2017, 19:30 IST
ಅಕ್ಷರ ಗಾತ್ರ

ಸಣ್ಣದೊಂದು ತಗಡು ಹಾಸಿನ ಮನೆ. ಅದರೊಳಗೊಬ್ಬ ಪದುಮಳೆಂಬ ಕಪ್ಪು ಸುಂದರಿ. ಉಬ್ಬು ಹಲ್ಲಿದ್ದರೂ ನಗೆ ಉಕ್ಕಿಸುವ ಚೆಲುವೆ. ಮೂವರು ಗಂಡುಮಕ್ಕಳ ತಾಯಾದರೂ ಚೂರಿಯ ಸಣ್ಣ ಮೈಮಾಟ. ಗಂಡ ಮಹಾನ್ ಕುಡುಕ. ಹೊಟ್ಟೆಬಟ್ಟೆ ಹೊರೆಯಲು ಮನೆಕೆಲಸ. ಆದರೆ ಕೆಲಸದಲ್ಲಿಯ ಚುರುಕುತನ, ರಾತ್ರಿ ಗಂಡನಿಂದ ಬೀಳುವೇಟಲ್ಲಿ ಒಮ್ಮೊಮ್ಮೆ ದಿಕ್ಕುತಪ್ಪಿ ನಲುಗುತಿತ್ತು. ಹಿಂಗಿರುವಾಗಲೇ ದಾರಿಯಲ್ಲಿ ತನ್ನಂತೆ ತಮಿಳು ಮಾತಾಡುವ ಪೇಪರ್ ಅಂಗಡಿ ಇಟ್ಟಿದ್ದ ಸೆಲ್ವ ಇವಳನ್ನು ಒಲಿದ. ಇನ್ನೂ ಮಾಗದ ಇವಳ ಹರಯ, ನೋವು ಹಂಚಿಕೊಳ್ಳುವ ಗೆಳೆಯ, ದುಡ್ಡಿನ ಅನಿವಾರ್ಯತೆ ಜೊತೆಗೆ ಸೆಲ್ವನ ಜವಾಬ್ದಾರಿಯ ನಡವಳಿಕೆ ಇವಳಿಗೆ ಅವನನ್ನು ಕಟ್ಟಿ ಹಾಕಿಬಿಟ್ಟಿತು.

ಕೆಲಸ ಮಾಡುವ ಮನೆಗೆ ಪದುಮಳನ್ನು ಸೈಕಲ್ಲಲ್ಲಿ ಸೆಲ್ವ ಯಾವುದೇ ಹಿಂಜರಿಕೆ ಇಲ್ಲದೆ ತಂದು ಬಿಡುತಿದ್ದ. ಇದನ್ನು ಕಂಡ ಮನೆಯೊಡತಿ ಮುಗುಳು ನಕ್ಕು 'ಗಂಡ್ನೇನೆ ಅವ್ನು?' ಎಂದಾಗ 'ಇಲ್ಲ ನಂಗೆ ಬೇಕಾದೋರು' ಅಂದ ಪದುಮಳ ನಗೆಗೆ ಒಡತಿ ಸುಮ್ಮನಾದಳು.

ಕ್ರಮೇಣ ಸೆಲ್ವ ಇವರ ಮನೆ ಹಳೆ ಪೇಪರ್ ತಗಂಡೋಗಲು ಬರುತ್ತಾ ವ್ಯಾಪಾರ ಶುರು ಮಾಡಿದ. ಆಗಾಗ್ಗೆ ಪದುಮಳ ವಾರಸುದಾರನಂತೆ ಬಂದು ಅವಳೆಲ್ಲಿ ಎಂದು ಕೇಳುತಿದ್ದ. ನಲ್ಲಿ ರಿಪೇರಿ, ಕರೆಂಟ್ ರಿಪೇರಿ ಬೇಕೂ ಅಂದ್ರೂ ಪದುಮ ಅವನ ಮೂಲಕ ಎಲ್ಲವನ್ನೂ ತನ್ನೊಡತಿಗೆ ಒದಗಿಸಿ ಕೊಡ್ತಿದ್ಲು. ಸೆಲ್ವ ಒಳ್ಳೇ ಮನುಷ. ನಾಕಾರು ವರುಶ ಆಗ್ತಾ, ಆಗ್ತಾ ಅವರ ಮುನಿಸು ರಾಜಿ ಎಲ್ಲದಕ್ಕೂ ಒಡತಿ ಸಾಕ್ಷಿಯಾಗುತ್ತಾ ಕಾಲದಲ್ಲಿ ಹರಿದು ಹೋಗುವ ನದಿಯಾದಳು.

ಮಕ್ಕಳು ದೊಡ್ಡೋರಾದ್ರು. ಅವರು ಪೇಪರ್ ಹಾಕೋದು. ಇಲ್ಲಿರೋ ಮನೆಗಳಿಗೆ ಗಿಡಕ್ಕೆ ನೀರು ಹಾಕೋದು. ಅಂಗಡಿ ಸಾಮಾನು ತರೋದು. ಹೂವು ಮಾರಿ ಬರೋದು. ಹೀಗೆ......ಕೆಲಸಗಳನ್ನು ಅವರವರೇ ಹಂಚಿಕೊಳ್ಳುತಿದ್ದರು. ಚೂರು ಚೂರೇ ಹಣ ಸಂಪಾದನೆಯ ದಿಕ್ಕನ್ನು ಕಾಣತೊಡಗಿದರು. ಹೈಸ್ಕೂಲು ಮೆಟ್ಲು ಹತ್ತಿದ ಪದುಮಳ ಮಕ್ಕಳ ಖರ್ಚು ವೆಚ್ಚಕ್ಕೆ ಆಗಾಗ ಸೆಲ್ವ ನೆರವಾಗುತಿದ್ದ.

ಎಂದಿನಂತೆ ಒಂದು ದಿನ ಗಂಡ ಹೊಡೆದ ಅಂತ ಹೇಳಿ ಒಡತಿ ಮನೇಲಿ ಇವಳು ಬಂದು ಠಿಕಾಣಿ ಹಾಕಿದ್ಲು. ಇದು ಆಗಾಗ ನಡೆಯುವ ಕರ್ಮವೇ ಆಗಿತ್ತು ಅವಳದ್ದು. ಪದುಮಳ ಮಕ್ಕಳು ಬೆಳಿಗ್ಗೆ ಬಂದವರೇ ಸಣ್ಣಪುಟ್ಟ ಕೆಲಸ ಮಾಡಿ ಅವರ ಅಂಕಲ್ ಸೆಲ್ವನ ಜೊತೆ ಸೈಕಲ್ ಹತ್ತಿ ಸ್ಕೂಲಿಗೆ ಹೋದರು. ಕೆಲಸ ಮುಗಿದ ಮೇಲೆ ಕಾಫಿ ಕಪ್ ಹಿಡಿದು ವಿರಾಮವಾಗಿ ಕುಳಿತ ಒಡತಿ ಕೇಳಿದಳು.

'ಪದುಮ, ರಾತ್ರಿ ನಿನ್ ಗಂಡ ಹೊಡೆದಿದ್ದು ಸೆಲ್ವನ ವಿಚಾರ ಗೊತ್ತಾಗೇನೆ?'

'ತೆಗ್ಯಕ್ಕ, ಅಷ್ಟು ನೆದರಿದ್ಯ ಆ ನನ್ ಮಗಂಗೆ. ಕುಡ್ಯೋಕೆ ಸಿಕ್ಕಿದ್ರೆ ಆಯ್ತು. ಕುಡಕಬಂದು ದುಡ್ಡಿಗೆ ಬಾರಿ ಗೋಳಾಡುಸ್ತನೆ ನನ್ನ. ನಶೆ ಇಳದ ಮೇಲೆ ಅವನಂಥ ಒಳ್ಳೇ ಮನುಷಾನೇ ಇರದಿಲ್ಲ ಹಂಗಿರತಾನೆ. ಆದ್ರೆ ಮಕ್ಕಳು ಅಂದ್ರೆ ಗಮನಾನೇ ಇಲ್ಲ ನೋಡು ಅವ್ನಿಗೆ. ಗೊತ್ತಾ ಅಕ್ಕ ನಿಂಗೆ? ನೀ ನಂಬಲ್ಲ ಹೇಳುದ್ರೆ. ನೀವಿಬ್ರೂ ನಿಮ್ಮನೇಲಿ ಮಕ್ಳಿಗೆ ಏನು ಒದ್ದಾಡ್ತೀರ... ಆದ್ರೆ ಅವನನ್ನ ನೋಡ್ಬೇಕು ನೀನು. ಒಬ್ನೇ ಕೂತಕಂಡು ಬೋಟಿ ಕಲೀಜ ಕಟ್ಟುಸ್ಕಬಂದು ಭೂತದ ಥರ ತಿಂತಾನಕ್ಕಾ... ನನ್ನ ಮಕ್ಳು ನೋಡತ ಕುಂತಿರತಾವೆ.' ಹೇಳುವಾಗ ಅವಳ ಕಣ್ಣಲ್ಲಿ ನೀರು ತುಂಬಿತು.

'ಸೆಲ್ವ ಇದಾನಲ್ಲ, ನನಗೆ, ಮಕ್ಳಿಗೆ... ಇಬ್ರಿಗೂ ಕಟ್ಟುಸ್ಕಬರ್ತಾನೆ. ಏನೇ ತಂದ್ರೂ ಅಷ್ಟೆ.' ಅವನ ಬಗ್ಗೆ ಹೆಮ್ಮೆಯಿಂದ ಹೇಳಿದ್ಲು.
'ಹೌದಾ? ಗಂಡಂಗೆ ಮಕ್ಕ್ಳಿಗೆ ಗೊತ್ತೇನೇ ಎಲ್ಲಾ ಹಾಗಾದ್ರೆ'

'ನೀನೆ ನೋಡಿದಿಯಲ್ಲ. ಮಕ್ಳಿಗ್ ಗೊತ್ತು. ಆದ್ರೆ ಸಂಬಂಧ ಇಂಥದು ಅಂತ ಗೊತ್ತಿಲ್ಲ ಕಣಕ್ಕ. ನಿಮ್ಮ ಎದ್ರು ಮನೆ ಅಕ್ಕ ಕೋರ್ಟಲ್ಲಿ ಕೆಲ್ಸ ಮಾಡತಾರಲ್ಲ ಆವಕ್ಕಂದೂ ನನ್ನ ಕೇಸೇಯ. ನಂಗೊತ್ತಾಗ್‌ಬುಡ್ತದೆ ಕಣಕ್ಕ. ನಮಗೆ ಬಡತನ. ಕಷ್ಟ ಸುಖಕ್ಕ ಆಗ್ತಾನೆ ಇವ್ನು. ಪಾಪಾ! ಆವಕ್ಕಂದು ಏನು ಕಷ್ಟನೋ ಯಾರಿಗ್ಗೊತ್ತು. ಫೋನಲ್ಲಿ ಮಾತಾಡುವಾಗೆಲ್ಲ ಕಣ್ಣಲ್ಲಿ ನೀರು ಅವವೇ ತುಂಬಕತಾವೆ. ನಾ ನೋಡಿದೀನಿ. ಅವರು ಜಡ್ಜು ಕಣಕ್ಕ. ಚೆನ್ನಾಗಿದರೆ. ಅವ್ರನ್ನ ಕಳ್ಸಕೊಡ್ತಿದ್ದನ್ನ ನಾನೇ ನೋಡ್ದೆ. ಇಲ್ಲಿಗೇನು ಹೆಚ್ಚಿಗೆ ಬರಲ್ಲ ಅವರು ಅನ್ಸತ್ತಪ್ಪ.... ಆವಕ್ಕನ ಯಜಮಾನ್ರು ಅಂಗಡಿ ಇಟ್ಕಂಡವರಲ್ಲ. ಈವಣ್ಣಂದೂ ಯಾಪಾರ ಚೆನ್ನಾಗಿದೆ ಅಂತರೆ. ಆದ್ರೂ ಆ ಅಕ್ಕಂಗೆ ಏನು ಕಷ್ಟನೋ? ಪಾಪಾ!' ತನ್ನ ಒಳಗನ್ನು ತಾನೇ ಇನ್ನೊಂದು ಮುಳ್ಳಲ್ಲಿ ಬಗೆಯುತ್ತಾ ಅದಕ್ಕೊಂದು ತೀರ್ಮಾನ ಕೊಡುತಿದ್ದವಳ ಮಾತು ಮುರಿದು ಕೇಳಿದ್ಲು ಒಡತಿ.

'ನೀನು ಆ ಲಾಯರಮ್ಮಂಗಿಂತ ಜೋರಾಗಿದಿಯ ಬಿಡು. ನಿನ ಗಂಡಂಗೆ ಗೊತ್ತಾ... ಅಂದ್ರೆ, ಇನ್ಯಾರದೋ ಗಂಡಂಗೆ ಆಕೆ ಸಂಬಂಧ ಗೊತ್ತಿಲ್ಲ ಅಂತೀಯಲ್ಲ? ಹಾಂ...' ಒಡತಿ ನಗು ಬಂದರೂ ಗದರಿಸಿದಳು.

'ಹೂಂ.... ಇದು ಇರದೆ ಹಿಂಗೆ. ಇಂಥ ಪ್ರಶ್ನೆಗೆ ಯಾರ್ ಯಾರ ಬದುಕಲ್ಲೋ ಉತ್ರ ಸಿಗತ್ತೆ ಕಣಕ್ಕಾ... ನಾನು ಯೋಚ್ನೆ ಮಾಡಿ ಮಾಡಿ ಆದಂಗ ಆಗ್ಲಿ ಅಂತ ಸುಮ್ಮಗೆ ಬಿಟ್ಟ್‌ಬಿಟ್ಟೆ. ಎಲ್ಲಾ ತಲೆ ಸಿಕ್ಕ್‌ ಇದ್ದಂಗೆ. ಬಾಚ್ತಾ ಇದ್ರೆ ಹದಕ್ಕೆ ಇರತ್ತೆ. ಬಾಚ್ನಿಲ್ಲ ಅಂದ್ರೆ ಗಂಟು ಕಟ್ಕಂಡು ಬಗೆ ಹರಿಯದಿಲ್ಲ. ನನ್ನ ಗಂಡ ಸರಿಗಿದ್ರೆ ಇಂಗಾಯ್ತಿರ್ಲಿಲ್ಲ ಅಂತೀಯಾ... ಅಂಗೂ ಅನ್ನಕ್ಕಾಗದಿಲ್ಲ ಅನ್ನು. ಸೆಲವಂಗೆ ಹೆಂಡ್ತಿ ಚೆನ್ನಗಿಲ್ವಾ? ನಂತಕೆ ಯಾಕೆ ಓಡಿಬತ್ತನೆ ಮತ್ತೆ, ಗೊತ್ತಿಲ್ಲ. ಹೌದು ತಾನೆ?! ನನ ಗಂಡಂಗೆ ಇಲ್ಲದಿರ ಅನುಮಾನ ಇವ್ನಿಗೆ ನನ ಮೇಲೆ ಕಣಕ್ಕ. ಇವ್ನನ್ನ ಬಿಟ್ಟು ಯಾರ ಜೊತೆನೂ ಮಾತಾಡಂಗಿಲ್ಲ ನೋಡು. ಕಟ್ಕಂಡಿರನಿಗಿಂತ ಇವಂದೇ ಮೇಲುಗೈ ಎಲ್ಲದ್ರಲ್ಲೂ. ಎರಡು ದಿಸಾ ಆದ್ರೆ ಸಾಕು ನೀನೆ ನೋಡಿದಿಯಲ್ಲ. ನಿಮ್ಮನೆಗೂ ಹುಡುಕ್ಕಬತ್ತನೆ...' ಹೇಳುವಾಗ ಜೋರು ನಗೆ ಅವಳದ್ದು.

'ಅವ್ನಿದ್ದಾಗ ನಿನ್ನ ಗಂಡ ಬಂದ್ರೆ ಏನು ಮಾಡತಾನೆ?' ಒಡತಿಯ ಬಗೆಹರಿಯದ ಪ್ರಶ್ನೆ.

'ಅಕ್ಕಾ, ಒಂದಿನಾ ಏನಾಯ್ತು ಗೊತ್ತಾ? ಮೀನು ತಂದ್‌ಕೊಟ್ಟು ಸೊಲ್ಪ ಹೊತ್ತು ಇದ್ದು ಹೊರಟ ಸೆಲವ. ನನಗೆ ಏನು ತಿನ್ವಾಗ್ಲೂ ಅವನ ನೆನಪು ಆಗೇ ಆಗುತ್ತೆ. ಯಾಕೆ ಅಂತ ಗೊತ್ತಿಲ್ಲ. ಆವತ್ತು ಜಗಳ ಮಾಡ್ದೆ. ’ಸರಿ ತಿನ್ನಕೆ ಬರ್ತೀನಿ ಬಿಡು' ಅಂತ ಹೇಳಿ ಹೋದ. ನಾನು ಹುರಮೀನು ಮಾಡತಾ ಇದ್ದೆ. ಮಕ್ಕಳು ಬಂದ್ರು. ಗಂಡ ಬಂದ. ಗಂಡ ಬಂದು ನನಗೆ ದುಡ್ಡಿಗೆ ಕಾಟ ಕೊಡತಿದ್ದ. ಅವ್ನು ನಂಗೆ ಒತ್ತಾಯ್ಸದನ್ನ ನೋಡಿ ಸೆಲ್ವನೇ ಹೋಗಿ... ಒಂದು ಬಾಟ್ಲು ತಂದ್‌ಕೊಟ್ಟ.

ಎಲ್ಲ ಕುಂತು ಉಂಡಾದ ಮೇಲೆ ಅವನು ಹೊರಟು ನಿಂತ. ನನ್ನ ಗಂಡ ಹೋಗಿದ್ದೆ ಅವನ ಮಫ಼್ಲರ್ ತಗಂಡ್ಬಂದು ಸೆಲ್ವನ ತಲೆಗೆ ಸುತ್ತಿ ಕಟ್ಟಿ ಪ್ರೀತಿಯಿಂದ ಕಳ್ಸಿಕೊಟ್ಟ. 'ಹಿಮ ಬಿದ್ದಿದೆ ಹೊರಗಡೆ' ಅಂದಕಂಡು ಅವ್ನು ಹೋಗೊವರಗೂ ಇವ್ನು ನಮ್ ಜೊತೆ ಮಾತಾಡತಲೇ ನೋಡತಾ ನಿಂತಿದ್ದ. ತನಗೆ ಹುಟ್ಟಿದ್ ಮಕ್ಳು ಯಾವ ದುಡ್ಡಲ್ಲಿ ಅನ್ನ ತಿಂತಾವೆ ಅನ್ನದು ಇವ್ನಿಗೆ ಗೊತ್ತಿಲ್ವಾ?... ಇದಕ್ಕೆ ಉತ್ರನಾ ನೀನೆ ಹೇಳಬೇಕು'
ಅವ್ಳು ಹಾಕಿದ ತಿರುಮುರಿಗೆ ಒಡತಿಯ ಬಳಿ ಉತ್ತರ ಇರ್ಲಿಲ್ಲ. ಆದ್ರೆ ತಡಿಯಕೆ ಆಗದೀರೋಥ ನಗು ಬಂತು. ಅಲೆಅಲೆಯಾಗಿ ನಕ್ಕಳು. ಪದುಮಳ ನಗುನೂ ಇದಕ್ಕೆ ಸೇರಕಂತು. ಹೊರಗಿನಿಂದ ಕಾಲಿಂಗ್ ಬೆಲ್ ಸದ್ದಿಗೆ ಬಾಗ್ಲು ತೆಗೆದ ಪದುಮ ನಗ್ತಾನೇ 'ಅಕ್ಕ, ಸೆಲ್ವ ಬಂದೇಬಿಟ್ಟ. ಬರ್ತೀನಿ' ಅಂತ ಹೇಳಿ ಸೈಕಲ್ ಹತ್ತಿ ಹೋಗೋದನ್ನ ಒಡತಿ ಬಾಲ್ಕನಿಲಿ ನಿಂತು ನೋಡ್ತಾನೆ ಇದ್ಲು.

ಆ ಸೈಕಲ್ಲಿಗೆ ರೆಕ್ಕೆ ಬಂದು ಹಾರುತ್ತಾ... ಅವರಿಬ್ಬರೂ ಹೋದಂತೆ, ದಾರೀಲಿ ಎದುರಿಗೆ ಸಿಕ್ಕ ಇವಳ ಮಕ್ಕಳನ್ನು ಇಬ್ಬರೂ... ಕುದುರೆ ಮೇಲೆ ಹತ್ತಿಸಿಕೊಂಡು ಹೋದಂತೆ, ಅಟ್ಟ ಬೆಟ್ಟ ಸುತ್ತುಸಿ, ಕಣಿವೆ ಹರಿವಲ್ಲಿ ಮೀನಂತೆ ಈಜುಸಿ, ಜಲಪಾತದಡೀಲಿ ಮೀಯಿಸಿ, ಗುಹೆಯೊಳಗಿನ ಕತ್ತಲಲ್ಲಿ ತಬ್ಬಿ ನುಗ್ಗಿಸಿ, ಕೊನೆಗೆ ಸ್ವರ್ಗದ ಹಾಡು ಹಸೆಯನ್ನೂ ತೋರುಸಿ, ಮಳೆಯ ಜೊತೆಯಲ್ಲಿ ನೆಲಕ್ಕಿಳಿದ ಈ ಜೋಡಿ... ಮಕ್ಕಳನ್ನು ತಬ್ಬಿಕೊಂಡು ಬಂದು... ಅವಳ ತಗಡಿನ ಮನೆಯ ಒಲೆಯುರಿಯಲ್ಲಿ ಮೈ ಕಾಯಿಸುತ್ತಾ ಕೂರಿಸಿ, ಹೆಂಚಿನ ಮೇಲಿನ ಹುರುಮೀನನ್ನ ಬಿಸಿಬಿಸಿಯಾಗಿ ತಟ್ಟೆಗೆ ಹಾಕಿ ಕೊಟ್ಟಂತೆ. ಮೀನು ತಿನ್ನುವ ಮಕ್ಕಳನ್ನು ನೋಡುವ ಪದುಮಳ ಕಣ್ಣ ಹೊಳಪಲ್ಲಿ ಸೆಲ್ವ ಅಲ್ಲೇ... ಅವಳಲ್ಲಿ... ಕರಗಿ ಹೋದಂಥ ಚಿತ್ರವೊಂದು, ಇವಳ ಮನಸ್ಸಲ್ಲಿ ಹಾದು ಹೋಯಿತು.

ಒಂದೆರಡು ವರುಷಗಳು ಉರುಳಿ ಹೋದವು. ಒಡತಿಯ ಮನೆ ಬದಲಾಯ್ತು. ಆಗಾಗ ಪದುಮ ಸೆಲ್ವ ಇಬ್ಬರೂ ಬಂದು ಹೋಗುತ್ತಲೇ ಸಹಾಯ ಮಾಡತಿದ್ರು. ಕ್ರಮೇಣ ಅದು ನಿಂತು ಹೋಯ್ತು. ಹರಿವ ನದಿಯಲ್ಲಿ ಹರಿದು ಹೋದ ಕಾಲದಂತೆ ಕೆಲವು ವರುಷ ಕಳೆದ ಮೇಲೆ ಅವಳ ಮಗ ಎದುರಿಗೆ ಸಿಕ್ಕಿದಾಗ ಹೇಳಿದ. 'ಅಮ್ಮ. ತಿರುವಣ್ಣಾಮಲೈಗೆ ಹೋದ್ಲು. ಅಪ್ಪ ತೀರಿ ಹೋದ್ರು.

ತಮ್ಮ ನಾನು ಇಬ್ರೂ ಕೆಲ್ಸಕ್ಕೆ ಸೇರಕೊಂಡ್ವಿ. ಕೊನೆ ತಮ್ಮ ಅಮ್ಮನ ಜೊತೆ ಇದ್ದು ಕಾಲೇಜಿಗೆ ಹೋಗ್ತಾವನೆ. ಅಮ್ಮ ೨೦ ತೆಂಗಿನ ಮರ ಇರೊ ನಮ್ಮ ಹೊಲದಲ್ಲಿ ಕನಕಾಂಬರ ಹೂ ಬೆಳೆದು ಕಟ್ಟಿ ಮಾರ್ತಾಳೆ. ನಾವೂ ಹೋಗ್ತಿರತೀವಿ. ಅಲ್ಲಿ ಅಜ್ಜ ಅಜ್ಜಿ ಇಬ್ರೂ ಇಲ್ಲ ಈಗ. ಅಪ್ಪನ ಆಸ್ತಿ ಇತ್ತಲ್ಲ. ಮನೇನೂ ಇತ್ತು. ಈಗ ತೊಂದ್ರೆ ಇಲ್ಲ. ಅಮ್ಮ ನಾವೂ ಎಲ್ಲ ಚೆನ್ನಾಗಿದೀವಿ ಆಂಟಿ.'

ಬಾಯಿ ತುದೀವರೆಗೂ ಬಂದ ಸೆಲ್ವನ ಮಾತನ್ನ ಒಡತಿ ತಡೆ ಹಿಡಿದಳು. ಆದ್ರೆ... ಒಂದಿನ ತನ್ನ ಮಗಳಿಗೆ ಕಾಲೇಜಲ್ಲಿ ಸೀಟು ಕೊಡ್ಸಿ ಅಂತ ಕೇಳಕ್ಕೆ ಹತ್ತು ವರುಷದ ನಂತರ ಸೆಲ್ವ ಬಂದು ಎದುರು ನಿಂತಿದ್ದ. ಒಡತಿಯ ಹಳೆ ಮನೆಯ ಬಳಿ ಹೋಗಿ ಅಡ್ರೆಸ್‌ ಹುಡುಕಿ ಇಲ್ಲಿಗೆ ಬಂದಿದ್ದ. ಇವಳು ಸಹಾಯ ಮಾಡತೀನಿ ಅಂತ ಒಪ್ಪಿಗೆ ಕೊಟ್ಟಳು.

'ಏನಾದ್ರೂ ಸಹಾಯಕ್ಕೆ ಬೇಕಾದ್ರೆ ಮರೀದೆ ಕರೀರಿ ಅಕ್ಕ' ಅಂತಂದ. ಒಡತಿ ನಿಧಾನವಾಗಿ ಕೇಳಿದಳು
'ಪದುಮನ್ನ ಮರೆತುಬಿಟ್ಯಾ ಸೆಲ್ವಾ? ನಿನಗೆ ಸಿಗ್ತಾ ಇರತಾಳಾ?'

'ಇಲ್ಲಾಕ್ಕ. ಆದ್ರೆ ಕೊನೆಕೊನೆಗೆ ಹುಚ್ಚಿಡದವಳ ಥರ ಆಡತಿದ್ಲು ನನ್ನತ್ರ. ನನಗೆ ಅವ್ಳ ಮೇಲೆ ಅಕ್ಕರೆ ಇಲ್ಲಾ ಅಂತ ಅವಳೆ ಅಂದ್ಕಬಿಟ್ಟಿದ್ಲು. ಈ ಕಡೆ ನನ್ ಹೆಂಡ್ತಿಗೆ ಅನುಮಾನ ಶುರುವಾಗಿತ್ತು. ಸಾಕಾಗೋಗಿತ್ತು ನಂಗೆ. ಆ ಸಿಟ್ಟಿಗೆ ಹೋಗೋವಾಗ ನಂಗೆ ಒಂದು ಮಾತೂ ಹೇಳದೆ ಹಂಗೇ ಹೋಗ್ಬಿಟ್ಲಕ್ಕ. ಅವಳ ಮಕ್ಕಳು ಮಾತ್ರ ಆಗಾಗ ಬಂದು ಹೋಗ್ತಾರೆ ಅಂಕಲ್ ಅಂತ. ನನ್ನ ಮಕ್ಕಳು ಈಗ ದೊಡ್ಡೋರಾಗಿದಾರೆ. ನನಗೂ ಇಕ್ಕಟ್ಟು. ಏನ್ ಮಾಡಲಕ್ಕ? ನಾನೆಂಗೆ ಹೋಗೋಕಾಗುತ್ತೆ? ಅವ್ಳಿಗೆ ನಾನು ಬೇಕಿಲ್ಲದೆ ಇದ್ದಾಗ... ಇದು ಇರದೆ ಹಿಂಗಲ್ಲವಾ... ಬಗೆ ಹರಿಯದ ಸಂಬಂಧ. ಈಗ್ಲೂ ಅವಳ ಕಂಡ್ರೆ ನನಗೆ ಪ್ರಾಣ ಅಕ್ಕ. ಆದರೆ ಆಗದೆ ಹೋಗದೆ ಇರೊ ಕಥೆ ಇದು ಅಂತ ನಾನೇ ಕೈಕಟ್ಕಂಬಿಟ್ಟೆ.'
****

ಇದು ಇರದೆ ಹಿಂಗೆ. ಇಂಥ ಪ್ರಶ್ನೆಗೆ ಯಾರ್ ಯಾರ ಬದುಕಲ್ಲೋ ಉತ್ರ ಸಿಗತ್ತೆ ಕಣಕ್ಕಾ... ನಾನೂ ಯೋಚ್ನೆ ಮಾಡಿ ಮಾಡಿ ಆದಂಗ ಆಗ್ಲಿ ಅಂತ ಸುಮ್ಮಗೆ ಬಿಟ್ಟ್‌ಬಿಟ್ಟೆ. ನನ್‌ ಗಂಡ ಸರಿಗಿದ್ರೆ ಇಂಗಾಯ್ತಿರ್ಲಿಲ್ಲ ಅಂತೀಯಾ... ಅಂಗೂ ಅನ್ನಕ್ಕಾಗದಿಲ್ಲ ಅನ್ನು. ಸೆಲವಂಗೆ ಹೆಂಡ್ತಿ ಚೆನ್ನಗಿಲ್ವಾ? ನಂತಕೆ ಯಾಕೆ ಓಡಿಬತ್ತನೆ ಮತ್ತೆ, ಗೊತ್ತಿಲ್ಲ. ನನ ಗಂಡಂಗೆ ಇಲ್ಲದಿರ ಅನುಮಾನ ಇವ್ನಿಗೆ ನನ ಮೇಲೆ ಕಣಕ್ಕ. ಇವ್ನನ್ನ ಬಿಟ್ಟು ಯಾರ ಜೊತೆನೂ ಮಾತಾಡಂಗಿಲ್ಲ ನೋಡು. ಕಟ್ಕಂಡಿರನಿಗಿಂತ ಇವಂದೇ ಮೇಲುಗೈ ಎಲ್ಲದ್ರಲ್ಲೂ. ಎರಡು ದಿಸಾ ಆದ್ರೆ ಸಾಕು ಹುಡುಕ್ಕಬತ್ತನೆ...'

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT