ಶನಿವಾರ, ಡಿಸೆಂಬರ್ 7, 2019
16 °C

ಎದೆಸೆಟೆಸುವಂತೆ ಮಾಡಿದ ಎದೆಗೆ ಬಿದ್ದ ಅಕ್ಷರ

Published:
Updated:
ಎದೆಸೆಟೆಸುವಂತೆ ಮಾಡಿದ ಎದೆಗೆ ಬಿದ್ದ ಅಕ್ಷರ

ಒಂದು ಕಾಲವಿತ್ತು... ಜಾತಿ ಪ್ರಮಾಣ ಪತ್ರಕ್ಕಾಗಿ ಒದ್ದಾಡುತ್ತಿದ್ದೆವು. ತಲಾಟಿ, ತಹಸೀಲ್ದಾರ್‌ ಎಂದೆಲ್ಲ ಓಡಾಡಬೇಕಾಗಿತ್ತು. ಒಂದು ವರ್ಷ ಜಾತಿ ಪ್ರಮಾಣ ಪತ್ರ ಪಡೆದರೆ ಅದೊಂಥರ ವೀಸಾ ಪಡೆದಂತೆ ಆಗುತ್ತಿತ್ತು. ಇದೀಗ ಜಾತಿ ಜನಗಣತಿಯಲ್ಲಿ ಭಾಗವಹಿಸುತ್ತಿರುವೆ.

ಅದೊಂದು ಕಾಲವಿತ್ತು... ಪೋಲ್ (ವಿದ್ಯುತ್ಕಂಬ) ಉತ್ಪಾದಕರ ಸಂಸ್ಥೆಯಲ್ಲಿ ಸದಸ್ಯತ್ವ ನಿರಾಕರಿಸಲಾಗಿತ್ತು. ಇದೀಗ ಅದೇ ಸಂಸ್ಥೆಯ ನಿರ್ಣಾಯಕ ಪಾತ್ರದಲ್ಲಿದ್ದೇನೆ.

ಹಿಂದುಳಿದ ವಿದ್ಯಾರ್ಥಿಗಳ ನಿಲಯದಲ್ಲಿ ಪ್ರವೇಶ ಸಿಕ್ಕಿರಲಿಲ್ಲ. ಶಿವರಾಮ್‌ ಮೋಘಾ ಅವರ ಮನೆಯಲ್ಲಿ ಊಟ ಮಾಡಿಕೊಂಡು ಬೆಳೆದ ಕಾಲವೊಂದಿತ್ತು. ಇದೀಗ ಹಿಂದುಳಿದ ವರ್ಗದ ಆಯೋಗದ ಸದಸ್ಯನಾಗಿದ್ದೇನೆ.

ಅಂಥ ಕಾಲವನ್ನೂ ನೋಡಿದ್ದೇನೆ. ಜನರ ಅನುಮಾನದ ದೃಷ್ಟಿಗಳನ್ನು ಎದುರಿಸಿದ್ದೇನೆ. ಅವಮಾನದಿಂದ ನೆಲಕ್ಕೆ ಕಣ್ನೆಟ್ಟು ನಿಂತಿದ್ದೇನೆ. ಆದರೆ ಜೀವನದ ಕುರಿತು ಸಕಾರಾತ್ಮಕ ದೃಷ್ಟಿಕೋನವೊಂದನ್ನು ಬೆಳೆಸಿಕೊಂಡಿದ್ದರಿಂದ ಇದೀಗ ಇಂತಹ ದಿನಗಳನ್ನು ನೋಡುತ್ತಿದ್ದೇನೆ. ಅಸಹಾಯಕರಿಗಾಗಿ ದುಡಿಯುವ ಹುಮ್ಮಸ್ಸು ಇತ್ತು. ಅಧಿಕಾರವೂ ಸಿಕ್ಕಿದ್ದು ನನ್ನ ಬದ್ಧತೆಯನ್ನು ಪರಿಶ್ರಮವನ್ನು ಹೆಚ್ಚಿಸುವಂತಾಯಿತು.’

ಇದು ಶರಣಪ್ಪ ಡಿ. ಮಾನೇಗಾರ ಅವರ ಕಥೆ. ಅವಿಭಜಿತ ಕಲ್ಬುರ್ಗಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದವರು. ಬೆಸ್ತ ಸಮುದಾಯಕ್ಕೆ ಸೇರಿದ ಶರಣಪ್ಪ ಅವರ ಗ್ರಾಮದಲ್ಲಿ ಕೈಗಾರಿಕೋದ್ಯಮಿಯಾಗಿ ಬೆಳೆದವರಲ್ಲಿ ಮೊದಲಿಗರು. ಕೇವಲ 7 ವಿದ್ಯುತ್ಕಂಬಗಳನ್ನು ನಿರ್ಮಿಸುವ ಘಟಕ ಸ್ಥಾಪಿಸಿಕೊಂಡವರು ಇದೀಗ ನಾಲ್ಕು ಘಟಕಗಳಿರಿಸಿಕೊಂಡು, ಪ್ರತಿದಿನ 500 ಘಟಕಗಳನ್ನು ತಯಾರಿಸುತ್ತಿದ್ದಾರೆ.

ಉದ್ಯಮಿಯಾದ ತಕ್ಷಣ ಅವರ ಇಷ್ಟದ ಕ್ಷೇತ್ರ ಸಮಾಜ ಸೇವೆಯನ್ನು ಕೈ ಬಿಟ್ಟಿಲ್ಲ. ರಾಜಕೀಯವು ಅದಕ್ಕೆ ಒಂದು ವೇದಿಕೆ ಎಂದು ಪರಿಗಣಿಸಿದವರೇ ಕಾಂಗ್ರೆಸ್ಸಿಗರಾದರು. ಅವರ ಕಥೆ ಅವರಿಂದಲೇ ಕೇಳಿ.

‘ನಮ್ಮ ಗ್ರಾಮದಲ್ಲಿ ಕಬ್ಬಲಿಗ ಸಮಾಜದಿಂದ ಎಸ್ಸೆಸ್ಸೆಲ್ಸಿ ಪಾಸಾದವನು ಆ ಕಾಲಕ್ಕೆ ನಾನೊಬ್ಬನೇ ಆಗಿದ್ದೆ. ಅಪ್ಪ ಮತ್ತು ಅಪ್ಪನ ಸ್ನೇಹಿತ ನಿಂಗಪ್ಪ ನಾಗರಕಟ್ಟಿ ಅಂತ. ಅವರಿಬ್ಬರೂ ಕಲಬುರ್ಗಿಗೆ ಕರೆತಂದರು. ರೈಲು ನಿಲ್ದಾಣದಿಂದ ಆಚೆ ನಿಂತು ಟಾಂಗಾದವನ ಬಳಿ ವಿಚಾರಿಸಿದರು. ಈ ಊರಲ್ಲಿ ದೊಡ್ಡ ಕಾಲೇಜು ಯಾವುದು? ನಮ್ಮ ಹುಡುಗ ದೊಡ್ಡ ಕಾಲೇಜಿನಲ್ಲಿ ಓದಿ ಬೆಳೆಯಬೇಕು’ ಎಂದು. ಉತ್ತರ ಸಿಕ್ಕಿತು.

ಬೆಟ್ಟದ ಮೇಲಿನ ಆ ಕಾಲೇಜಿಗೆ ಹತ್ತಿದ್ದು ಇನ್ನೂ ನೆನಪಿದೆ. ನನ್ನ ಏರುಗತಿಯ ಜೀವನ ಆರಂಭವಾಗಿದ್ದೇ ಅಲ್ಲಿಂದ! ಕಲಾ ವಿಭಾಗದೆಡೆ ಹೆಜ್ಜೆ ಹಾಕಿದೆವು. ಯಾವುದು ಓದಬೇಕು? ಏನು ಮಾಡಬೇಕು ಯಾರಿಗೂ ಗೊತ್ತಿರಲಿಲ್ಲ. ಅರ್ಜಿ ಸಿಕ್ಕಿತು. ಭರ್ತಿ ಮಾಡಿದೆವು. ಕಲಾ ವಿಭಾಗಕ್ಕೆ ಸೇರಿಕೊಂಡೆ.

ಕಾಲೇಜಿನ ಫೀಸಿಗಾಗಿ ಅಪ್ಪ ಹೆಣಗಾಡಿ ದುಡ್ಡು ಹೊಂದಿಸಿದ್ದ. ಇನ್ನು ಹಿಂದುಳಿದ ವಿದ್ಯಾರ್ಥಿಗಳ ವಸತಿನಿಲಯದಲ್ಲಿ ಪ್ರವೇಶ ಮೊದಲ ವರ್ಷ ಸಿಗಲಿಲ್ಲ. ಆಗ ಒಂದಷ್ಟು ಹುಡುಗರು ಸೇರಿ, ರಾತ್ರಿ ಕಳೆಯಲು ಸಾಕು ಎಂಬಂತೆ ಒಂದು ಕೋಣೆ ಮಾಡಿಕೊಂಡಿದ್ದೆವು. ಯಾದಗಿರಿಯಿಂದ ಒಂದು ಬಸ್‌ ಬರುತ್ತಿತ್ತು. ಅದರಲ್ಲಿಯೇ ನಮಗೆ ಬುತ್ತಿ ಬರುತ್ತಿತ್ತು. ‘ಬ್ರಂಚ್‌’ ಈಗಿನ ಪರಿಕಲ್ಪನೆ. ಆದರೆ ನಮ್ಮಂತ ಬಡಹುಡುಗರಿಗೆ ದಿನವೂ ಬ್ರಂಚೇ ಗತಿಯಾಗಿತ್ತು. ಬಸ್‌ ಬರುತ್ತಿದ್ದುದೇ ಮಧ್ಯಾಹ್ನ ಹನ್ನೆರಡೂವರೆ ಒಂದು ಗಂಟೆಗೆ. ತಿಂಡಿ ಊಟ ಎರಡೂ ಸೇರಿ ತಿನ್ನಬೇಕಾಗಿತ್ತು.

ಇದಕ್ಕೆ ಪರಿಹಾರ ಕಂಡಿದ್ದು ಎನ್‌.ಸಿ.ಸಿ ಮತ್ತು ಎನ್‌.ಎಸ್‌.ಎಸ್‌ ಗಳಲ್ಲಿ. ವಾರಕ್ಕೆ ಎರಡು ದಿನ ಎನ್‌.ಸಿ.ಸಿ ಇದ್ದರೆ, ಇನ್ನೆರಡು ದಿನ ಎನ್‌.ಎಸ್‌.ಎಸ್‌ ಇರುತ್ತಿತ್ತು. ಆಗ ಎರಡು ದಿನಗಳ ತಿಂಡಿ ಕೂಪನ್‌ ಸಿಗುತ್ತಿತ್ತು. ವಾರದಲ್ಲಿ ನಾಲ್ಕು ದಿನಗಳ ತಿಂಡಿ ವ್ಯವಸ್ಥೆ ಆಗಿದ್ದು ಹೀಗೆ. ಇದೇ ವ್ಯವಸ್ಥೆ ನನ್ನ ವಿದ್ಯಾಭ್ಯಾಸ ಮುಗಿಯುವವರೆಗೂ ಮುಂದುವರಿಯಿತು. ಪರಿಣಾಮ ಬರೀ ಹೊಟ್ಟೆ ತುಂಬಲಿಲ್ಲ. ನಾಯಕತ್ವ ಗುಣ, ಆತ್ಮವಿಶ್ವಾಸ ಹಾಗೂ ಹೊಸ ವ್ಯಕ್ತಿತ್ವದ ನಿರ್ಮಾಣವೇ ಆಯಿತು.

1983ರಲ್ಲಿ ಪದವಿ ಮುಗಿಸಿದಾಗ ಮೊದಲ ದರ್ಜೆಯಲ್ಲಿ ಪಾಸಾಗಿದ್ದೆ. ಫಲಿತಾಂಶ ಬಂದಾಗ ಮೊದಲು ಫೇಲಾದವರ ಪಟ್ಟಿಯಲ್ಲಿ ಹೆಸರು ಹುಡುಕಿದ್ದೆ. ಸಿಗದಿದ್ದಾಗ ಪಾಸಾದವರ ಪಟ್ಟಿಯಲ್ಲಿ ತಡಕಾಡಿದ್ದೆ. ಎದೆ ಹೊಡೆದುಕೊಳ್ಳುತ್ತಿತ್ತು. ಎರಡನೆ ದರ್ಜೆಯ ಪಟ್ಟಿಯಲ್ಲಿ ಕಣ್ಣಾಡಿಸಿದೆ. ಅಲ್ಲಿಯೂ ಇರಲಿಲ್ಲ. ಫಲಿತಾಂಶ ತಡೆಹಿಡಿದಿರಬಹುದು ಎಂದು ಖಾತ್ರಿ ಆಯಿತು.

ಉದಾಸೀನದಿಂದ ಕಾಲೇಜಿಗೆ ತಡೆಹಿಡಿಯಲು ಕಾರಣವೇನೆಂದು ಪತ್ತೆ ಮಾಡಲು ಹೋದೆ. ಗುಮಾಸ್ತ ಆ ಪಟ್ಟಿಯನ್ನೂ ಪರಿಶೀಲಿಸಿದ. ಅಲ್ಲಿಯೂ ನನ್ನ ಅಂಕಿ ಇರಲಿಲ್ಲ. ಅವರಿಗೂ ಕಬ್ಬಲಿಗರ ಹುಡುಗ ಪಾಸಾಗಿರುವ ಕುರಿತು ಖಾತ್ರಿ ಇರಲಿಲ್ಲ. ಅವರೂ ನನ್ನಂತೆಯೇ ಫೇಲಾದವರ ಪಟ್ಟಿ ಹುಡುಕಿದರು. ನಾನು ಮೊದಲ ದರ್ಜೆಯಲ್ಲಿ ಉತ್ತೀರ್ಣರಾದವರ ಪಟ್ಟಿ ನೋಡಿರಲಿಲ್ಲ. ಅವರು ನೋಡಿ, ಖುಷಿ ಪಟ್ಟು ಬೆನ್ತಟ್ಟಿ ಕಳುಹಿಸಿದರು.

ಎನ್‌.ಎಸ್‌.ಎಸ್‌ ಅಧಿಕಾರಿಯಾಗಿದ್ದ ಸಿ.ಆರ್‌. ಶಾಸ್ತ್ರಿ ಅವರು ನನ್ನಲ್ಲಿಯ ನಾಯಕತ್ವದ ಗುಣವನ್ನು ಗುರುತಿಸಿದರು. ಅದನ್ನೇ ಬೆಳೆಸಿದರು. ಹಳ್ಳಿಯ ಜಾತಿವ್ಯವಸ್ಥೆ, ನಗರದವರ ನಾಜೂಕಿನ ತಿರಸ್ಕಾರ, ನನ್ನೊಳಗೆ ಛಲ ಮೂಡಿಸುತ್ತಿತ್ತು. ಕುಗ್ಗಿ ಕೀಳರಿಮೆ ಬೆಳೆಸಿಕೊಳ್ಳದೇ, ಅವರಿಂದ ಗೌರವ ಪಡೆಯುವ ಘನತೆ ಗಳಿಸುವ ದಾರಿಯಲ್ಲಿ ಹೆಜ್ಜೆ ಹಾಕುವಂತೆ ಮಾಡುತ್ತಿತ್ತು.

ಸ್ನಾತಕೋತ್ತರ ಪದವಿ ಮುಗಿಯಿತು. ಕೆಲಸವಿಲ್ಲ. ಸಮಾಜ ಸೇವೆ ಮಾಡುವಷ್ಟು ಹಣ ಇಲ್ಲ. ಕೆಲಸಕ್ಕಾಗಿ ಬೆಂಗಳೂರಿಗೆ ಮೊದಲು ಕಾಲಿಟ್ಟೆ. ಚಿಕ್ಕಬಳ್ಳಾಪುರದ ರಾಜೀವಗಾಂಧಿ ಗ್ರಾಮೀಣ ಅಭಿವೃದ್ಧಿ ಯೋಜನೆಯಲ್ಲಿ ಸಂಯೋಜಕನಾಗಿ ಕೆಲಸಕ್ಕೆ ಸೇರಿದೆ. ನಂತರ ಬೇತ್‌ಮಂಗಲದ ಕ್ರೈಸ್ತ ಮಿಷನರಿಯಲ್ಲಿ ಕೆಲಸ ಮಾಡಿದೆ.

ಮಹಿಳಾ ಸಬಲೀಕರಣ, ಬಡತನ, ಅಸಂಘಟಿತ ಕೂಲಿ ಕಾರ್ಮಿಕರ ಸಮಸ್ಯೆ ಇವೆಲ್ಲವನ್ನೂ ಸಮೀಪದಿಂದ ನೋಡುವಂತಾಯಿತು. ನಂತರದ ಪಯಣ ನಿಮ್ಹಾನ್ಸ್‌ನಲ್ಲಿಯ ಸಮೀಕ್ಷೆಯೊಂದಕ್ಕೆ ಕೈಗೂಡಿಸಬೇಕಿತ್ತು. ಆಗಲೇ ವಾಹನ ಚಾಲಕರಿಗೆ, ವಾಹನ ಸವಾರರಿಗೆ ಇಬ್ಬರಿಗೂ ಹೆಲ್ಮೆಟ್‌ ಕಡ್ಡಾಯ ಮಾಡಲಿ ಎಂಬ ಶಿಫಾರಸು ನೀಡಿದ ಅಧ್ಯಯನ ಮತ್ತು ಸಮೀಕ್ಷೆಯನ್ನು ಡಾ. ಗೌರಿದೇವ್‌ ಅವರ ನೇತೃತ್ವದಲ್ಲಿ ಮಾಡಿದೆವು.

ಆಗಲೆಲ್ಲ ಓದಿದ ಥಿಯರಿ ಮತ್ತು ಅದಾದ ನಂತರ ಜಲಸಂವರ್ಧನ ಯೋಜನೆಯಲ್ಲಿ ಬೀದರ್‌ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಹಸಂಯೋಜಕನಾಗಿ ಕೆಲಸ ಮಾಡಿದೆ. ನಂತರ ರಾಷ್ಟ್ರೀಯ ಸಾಕ್ಷರತಾ ಮಿಷನ್‌ನಲ್ಲಿ ಸಹಸಂಯೋಜಕನಾಗಿ ದುಡಿದೆ. ನಂತರ ಜೆಸ್ಕಾಂನ ಎಚ್‌.ಆರ್‌ ನೌಕರಿಗೆ ಸೇರಿದೆ. ಆಮೇಲೆ ಅಲ್ಲಿಯ ಎಂಜಿನಿಯರ್‌ ಸಂಘದವರ ಹುನ್ನಾರದಿಂದಾಗಿ ಇದ್ದಕ್ಕಿದ್ದಂತೆ ಆ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ದಿಢೀರನೆ ನೀಡಿರುವ ಅವಕಾಶವನ್ನು ಹಿಂದಕ್ಕೆ ಪಡೆದುಕೊಂಡಿತ್ತು ಜೆಸ್ಕಾಂ.

ಅಲ್ಲಿಂದಲೇ ಹೊಸತನದ ಆರಂಭವಾಯಿತು. ವಿದ್ಯುತ್ಕಂಬಗಳನ್ನು ತಯಾರಿಸುವ ಘಟಕ ಆರಂಭಿಸುವ ಯೋಚನೆ ಮಾಡಿದೆ. ಅದೂ ಆರಂಭವಾಯಿತು. ಆದರೆ ಅದು ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎಂಬಂತಾಯಿತು. ವಿದ್ಯುತ್ಕಂಬದ ಟೆಂಡರ್‌ ಕರೆಯಲಾಗಿತ್ತು. ಆ ನಿಯಮಗಳ ಪ್ರಕಾರ ಹೊಸಬರಿಗೆ, ಸಣ್ಣ ಉತ್ಪಾದಕರಿಗೆ ಯಾವ ಆಶಾದಾಯಕ ಅವಕಾಶಗಳೂ ಇರಲಿಲ್ಲ. ಇಂಧನ ಸಚಿವರನ್ನು ಭೇಟಿಯಾಗಿ ಈ ವಿಷಯವನ್ನು ಮನವರಿಕೆ ಮಾಡಿಸಿದಾಗ ಅವರು ಕೆಲವು ನಿಯಮಗಳನ್ನು ಸಡಿಲಿಸಿದರು. ಅದರಿಂದಾಗಿ ನಮ್ಮಂಥ ಹೊಸಬರಿಗೆ ಅನೇಕ ಅವಕಾಶಗಳು ಸೃಷ್ಟಿಯಾದವು. ಮುಂದೆ ಪ್ರತಿ ಸಲವೂ ಹೊಸ ಆದೇಶ ನೀಡುವಾಗ ಶೇ 25ರಷ್ಟನ್ನು ಹೊಸಬರಿಗೆ ನಿರ್ಮಾಣ ಮಾಡುವ ಅವಕಾಶ ನೀಡಬೇಕು ಎಂಬ ತಿದ್ದುಪಡಿಯೂ ಆಯಿತು.

ಮೊದಲಿನಿಂದಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಕಾರ್ಯಕ್ಷೇತ್ರದಲ್ಲಿ ಬಳಸುವ ಅಭ್ಯಾಸವಿರಿಸಿಕೊಂಡಿದ್ದೆ. ಗೊತ್ತು ಗುರಿ ಇಲ್ಲದಂತೆ ಜೆಸ್ಕಾಂನಿಂದ ಹೊರಬಂದಿದ್ದೆ. ಅದೇ ಜೆಸ್ಕಾಂನಲ್ಲಿ ಅವಕಾಶ ಹುಡುಕಿಕೊಂಡೆ. ಇಂಥ ಕೆಲವು ಸಕಾರಾತ್ಮಕ ಕೆಲಸಗಳು ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಲೇ ಬಂದವು. ಯಾದಗಿರಿಯ ಯುವಕರಿಗೆ, ಕಲಬುರ್ಗಿಯಲ್ಲಿ, ಬೀದರ್‌, ರಾಯಚೂರು, ವಿಜಯಪುರ ಹೀಗೆ ಸೇವೆ ಸಲ್ಲಿಸಿರುವಲ್ಲಿ ಎಲ್ಲೆಡೆಯೂ ಯುವಕರಿಗೆ ಸ್ವ ಉದ್ಯೋಗಕ್ಕೆ ಹುರಿದುಂಬಿಸುವುದು ನನ್ನ ಪ್ರತಿ ಪ್ರಯಾಣದ ಉದ್ದೇಶವಾಯಿತು.

ಇದರ ಜೊತೆಗೆ ರಾಜಕೀಯವನ್ನೂ ಸಕಾರಾತ್ಮಕವಾಗಿಯೇ ಪ್ರವೇಶಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿರುವುದನ್ನು ನೋಡಿ ಕಾಂಗ್ರೆಸ್‌ ಪಕ್ಷದ ಶರಣಪ್ರಕಾಶ್‌ ಪಾಟೀಲ, ಬಿ.ಆರ್‌. ಪಾಟೀಲ ಇಬ್ಬರೂ ಗುರುತಿಸಿ ರಾಜೀವ್‌ಗಾಂಧಿ ಪಂಚಾಯತ್‌ ಸಂಘಟನೆ ಕಲಬುರ್ಗಿ ಜಿಲ್ಲೆಯ ಅಧ್ಯಕ್ಷನಾಗಿ ಮಾಡಿದರು. ಶೈಕ್ಷಣಿಕ ಹಿನ್ನೆಲೆ, ಕೌಟುಂಬಿಕ ಹಿನ್ನೆಲೆ, ಔದ್ಯೋಗಿಕ ಹಿನ್ನೆಲೆ ಹೀಗೆ ಹಲವಾರು ಅನುಭವಗಳನ್ನು ಬೆನ್ನಿಗಿಟ್ಟುಕೊಂಡು ನನ್ನ ಕೆಲಸವನ್ನು ಮುಂದುವರಿಸಿದೆ.

ಹಿಂದುಳಿದ ವರ್ಗದ ಆಯೋಗಕ್ಕೆ ಸದಸ್ಯನಾದಾಗ ಜಾತಿಗಣತಿಯ ಕಾರ್ಯಕ್ರಮ ಆರಂಭವಾಯಿತು. ಆಗ ಪಟ್ಟಿಯಾಗಿರುವ ಜಾತಿಗಳನ್ನು ಬಿಟ್ಟು, ಜಾತಿ ಅಂಕಣವನ್ನು ಖಾಲಿ ಇರಿಸಲು ಸೂಚಿಸಿದೆ. ಈ ಕ್ರಮದಿಂದಾಗಿ ಹಲವಾರು ಹಿಂದುಳಿದ ಜಾತಿಗಳು ಜಾತಿ ಪಟ್ಟಿಗೆ ಸೇರ್ಪಡೆಯಾಗುವಂತೆ ಆಗುತ್ತಿದೆ. ಇನ್ನೇನು ನನ್ನ ಅವಧಿ ಈ ವರ್ಷಾಂತ್ಯದಲ್ಲಿ ಮುಗಿಯುತ್ತದೆ. ಮತ್ತೇನೋ ದಾರಿ ಸೃಷ್ಟಿಸುವ ಕಾಲ ಸನಿಹವಾಗಿದೆ.

ಪ್ರತಿಯೊಂದು ಕಡೆ ಉದ್ಯೋಗಾವಕಾಶಗಳು ಮುಚ್ಚಿಕೊಂಡಾಗಲೂ ಅನುಭವ ಮತ್ತು ಅಕ್ಷರ ಎರಡರಿಂದಲೇ ಹೊಸದಾರಿಯನ್ನು ಹುಡುಕಿಕೊಂಡೆ. ಎಲ್ಲೂ ನಕಾರಾತ್ಮಕ ಯೋಚನೆಗಳು ನನ್ನನ್ನು ದಮನಿಸಲು ಬಿಡಲಿಲ್ಲ. ಖಿನ್ನತೆಗೆ ಒಳಗಾಗಲಿಲ್ಲ. ಆದದ್ದೆಲ್ಲ ಒಳಿತಿಗೇ ಎಂದುಕೊಂಡು ಮುನ್ನಡೆದೆ. ಅನುಮಾನ, ಅವಮಾನಗಳು ನನ್ನನ್ನು ವಿನೀತನನ್ನಾಗಿಸಿದವು. ದೃಢ ನಿಶ್ಚಯ ಮಾಡಿಕೊಳ್ಳುವಂತೆ ಮಾಡಿದವು. ಅವುಗಳಿಗೂ ಆಭಾರಿ’. 

ಪ್ರತಿಕ್ರಿಯಿಸಿ (+)