ಸೋಮವಾರ, ಡಿಸೆಂಬರ್ 9, 2019
23 °C
‘ಶಿಕ್ಷಣವೇ ಶಕ್ತಿ’

ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರ ಶೈಕ್ಷಣಿಕ ಸ್ಥಿತಿ, ಲಿಂಗಾನುಪಾತ, ಜೀವನ ಮಟ್ಟದಲ್ಲಿ ಸುಧಾರಣೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರ ಶೈಕ್ಷಣಿಕ ಸ್ಥಿತಿ, ಲಿಂಗಾನುಪಾತ, ಜೀವನ ಮಟ್ಟದಲ್ಲಿ ಸುಧಾರಣೆ

ನವದೆಹಲಿ: ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಭಾರತದ ದಲಿತರ ಶೈಕ್ಷಣಿಕ ಸ್ಥಿತಿ, ಲಿಂಗಾನುಪಾತ ಹಾಗೂ ಜೀವನ ನಿರ್ವಹಣಾ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ ಎಂದು ‘ಇಂಡಿಯಾ ಸ್ಪೆಂಡ್‌’ ಸುದ್ದಿತಾಣ ವರದಿ ಮಾಡಿದೆ.

2011ರ ಜನಗಣತಿಯ ಅಂಕಿಅಂಶಗಳನ್ನು ಆಧರಿಸಿ ಇಂಡಿಯಾ ಸ್ಪೆಂಡ್ ಈ ವರದಿ ಮಾಡಿದೆ. ಭಾರತದಲ್ಲಿ 80 ಲಕ್ಷಕ್ಕೂ ಹೆಚ್ಚು ಬೌದ್ಧ ಧರ್ಮೀಯರಿದ್ದಾರೆ. ಈ ಪೈಕಿ ಶೇಕಡ 87ರಷ್ಟು ಜನ ಇತರೆ ಧರ್ಮಗಳಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರು. ಹೀಗೆ ಮತಾಂತರಗೊಂಡ ಬಹುತೇಕರು ದಲಿತರು. ಹಿಂದೂ ಧರ್ಮದಲ್ಲಿನ ಜಾತೀಯತೆ, ಅಸ್ಪೃಶ್ಯತೆಯ ಅನಿಷ್ಟದಿಂದ ಬೇಸತ್ತು ಇವರೆಲ್ಲಾ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರು ಎಂದು ವರದಿ ಹೇಳಿದೆ.

ಹಿಂದೂ ಧರ್ಮದಲ್ಲಿರುವ ಇತರೆ ಪರಿಶಿಷ್ಟ ಜಾತಿಗಳಿಗೆ ಹೋಲಿಸಿದರೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರ ಶೈಕ್ಷಣಿಕ ಸ್ಥಿತಿ, ಲಿಂಗಾನುಪಾತ ಹಾಗೂ ಜೀವನ ನಿರ್ವಹಣೆ ಮಟ್ಟ ಉತ್ತಮ ಸ್ಥಿತಿಯಲ್ಲಿದೆ ಎಂದು ವರದಿ ತಿಳಿಸಿದೆ.ಭಾರತದ ಒಟ್ಟಾರೆ ಸಾಕ್ಷರ ಪ್ರಮಾಣಕ್ಕಿಂತ ಬೌದ್ಧ ಧರ್ಮೀಯರಲ್ಲಿನ ಸಾಕ್ಷರ ಪ್ರಮಾಣ ಹೆಚ್ಚಾಗಿದೆ. ಭಾರತದ ಒಟ್ಟು ಸಾಕ್ಷರ ಪ್ರಮಾಣ ಶೇಕಡ 72.98. ಆದರೆ, ಬೌದ್ಧ ಧರ್ಮೀಯರಲ್ಲಿನ ಸಾಕ್ಷರ ಪ್ರಮಾಣ ಶೇಕಡ 81.29ರಷ್ಟಿದೆ. ಹಿಂದೂ ಧರ್ಮೀಯರ ಸಾಕ್ಷರ ಪ್ರಮಾಣ ಶೇಕಡ 73.27ರಷ್ಟಿದೆ. ಇದರಲ್ಲಿ ಪರಿಶಿಷ್ಟ ಜಾತಿಗಳ ಸಾಕ್ಷರ ಪ್ರಮಾಣ ಶೇಕಡ 66.07ರಷ್ಟಿದೆ. ಅಲ್ಲದೆ, ದೇಶದ ಒಟ್ಟೂ ಬೌದ್ಧ ಧರ್ಮೀಯರ ಪೈಕಿ ಶೇಕಡ 43ರಷ್ಟು ಮಂದಿ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಜೀವನ ಮಟ್ಟ ಉತ್ತಮವಾಗಿದೆ ಎಂದು ವರದಿ ಹೇಳಿದೆ.

‘ದೇಶದ ಆಡಳಿತದ ಉನ್ನತ ಹುದ್ದೆಯಲ್ಲಿರುವ ಬಹುತೇಕ ದಲಿತರು ಬೌದ್ಧ ಧರ್ಮೀಯರು. ಅಸ್ಪೃಶ್ಯತೆ, ಜಾತೀಯತೆಯ ಕ್ರೌರ್ಯಕ್ಕೆ ಸಿಲುಕಿದ್ದ ದಲಿತರಿಗೆ ಬೌದ್ಧ ಧರ್ಮ ಆತ್ಮ ವಿಶ್ವಾಸವನ್ನು ತುಂಬಿದೆ’ ಎನ್ನುತ್ತಾರೆ ಭೀಮ್‌ ಆರ್ಮಿಯ ಮುಖಂಡ ಸತ್ಪಾಲ್‌ ತನ್ವಾರ್‌.

ಪರಂಪರೆಯಿಂದ ಬೌದ್ಧ ಧರ್ಮೀಯರಾಗಿರುವ ಈಶಾನ್ಯ ಭಾರತದ ಬುಡಕಟ್ಟು ಸಮುದಾಯದವರಲ್ಲಿ ಸಾಕ್ಷರ ಪ್ರಮಾಣ ಕಡಿಮೆ ಇದೆ. ಮಿಜೋರಾಂನಲ್ಲಿ ಶೇಕಡ 48.11 ಮತ್ತು ಅರುಣಾಚಲ ಪ್ರದೇಶದಲ್ಲಿ ಶೇಕಡ 57.89ರಷ್ಟು ಬೌದ್ಧ ಧರ್ಮೀಯರು ಮಾತ್ರ ಅಕ್ಷರಸ್ಥರು. ಆದರೆ, ಚತ್ತೀಸಗಡದಲ್ಲಿ ಶೇಕಡ 87.34, ಮಹಾರಾಷ್ಟ್ರದಲ್ಲಿ ಶೇಕಡ 83.17 ಮತ್ತು ಜಾರ್ಖಂಡ್‌ನಲ್ಲಿ ಶೇಕಡ 80.41ರಷ್ಟು ಬೌದ್ಧ ಧರ್ಮೀಯರು ಅಕ್ಷರಸ್ಥರು ಎಂದು ವರದಿ ವಿವರಿಸಿದೆ.ಮಹಾರಾಷ್ಟ್ರದ ಒಟ್ಟು ಜನಸಂಖ್ಯೆಯ ಶೇಕಡ 5.81ರಷ್ಟು ಬೌದ್ಧ ಧರ್ಮೀಯರಿದ್ದಾರೆ. ಡಾ. ಬಿ.ಆರ್‌. ಅಂಬೇಡ್ಕರ್‌ ಅವರು 1956ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಾಗ ಸುಮಾರು 6 ಲಕ್ಷ ಮಂದಿ ದಲಿತರು ಬೌದ್ಧ ಧರ್ಮಕ್ಕೆ ಸೇರ್ಪಡೆಗೊಂಡರು. ಜಾತೀಯತೆಯ ವಿರುದ್ಧ ನಡೆದ ದಲಿತರ ಪ್ರತಿಭಟನೆಯ ರೂಪ ಇದು ಎಂದು ವರದಿ ಹೇಳಿದೆ.

ಉತ್ತರ ಪ್ರದೇಶದಲ್ಲಿಯೂ ಒಟ್ಟಾರೆ ಸಾಕ್ಷರ ಪ್ರಮಾಣಕ್ಕಿಂತ ಬೌದ್ಧ ಧರ್ಮೀಯರ ಸಾಕ್ಷರ ಪ್ರಮಾಣ ಹೆಚ್ಚಾಗಿದೆ. ಉತ್ತರ ಪ್ರದೇಶದ ಒಟ್ಟು ಸಾಕ್ಷರ ಪ್ರಮಾಣ ಶೇಕಡ 67.68. ಆದರೆ, ಇಲ್ಲಿನ ಬೌದ್ಧ ಧರ್ಮೀಯರ ಸಾಕ್ಷರ ಪ್ರಮಾಣ ಶೇಕಡ 68.59. ಇಲ್ಲಿನ ಪರಿಶಿಷ್ಟ ಜಾತಿಗಳ ಸಾಕ್ಷರ ಪ್ರಮಾಣ ಶೇಕಡ 60.88 ಎಂದು ವರದಿ ತಿಳಿಸಿದೆ.

ಮಹಿಳಾ ಸಾಕ್ಷರತೆ

ಬೌದ್ಧ ಧರ್ಮದಲ್ಲಿನ ಮಹಿಳೆಯರ ಶೈಕ್ಷಣಿಕ ಸ್ಥಿತಿಗತಿಯೂ ಉತ್ತಮವಾಗಿದೆ. ಬೌದ್ಧ ಧರ್ಮದಲ್ಲಿ ಶೇಕಡ 74.04ರಷ್ಟು ಅಕ್ಷರಸ್ಥ ಮಹಿಳೆಯರಿದ್ದಾರೆ. ಇದು ದೇಶದ ಒಟ್ಟೂ ಅಕ್ಷರಸ್ಥ ಮಹಿಳೆಯರ ಪ್ರಮಾಣಕ್ಕಿಂತ ಹೆಚ್ಚು ಎಂದು ವರದಿ ಹೇಳಿದೆ.

ದೇಶದ ಅಕ್ಷರಸ್ಥ ಮಹಿಳೆಯರ ಪ್ರಮಾಣ ಶೇಕಡ 64.63ರಷ್ಟಿದೆ. ಇತರೆಡೆಗೆ ಹೋಲಿಸಿದರೆ ಉತ್ತರ ಪ್ರದೇಶ ಮತ್ತು ಕರ್ನಾಟಕದ ಬೌದ್ಧ ಧರ್ಮೀಯರಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಉತ್ತರ ಪ್ರದೇಶದಲ್ಲಿ ಶೇಕಡ 57.07ರಷ್ಟು ಬೌದ್ಧ ಧರ್ಮೀಯ ಮಹಿಳಾ ಸಾಕ್ಷರಸ್ಥರು ಹಾಗೂ ಕರ್ನಾಟಕದಲ್ಲಿ ಶೇಕಡ 64.21ರಷ್ಟು ಬೌದ್ಧ ಧರ್ಮೀಯ ಮಹಿಳಾ ಸಾಕ್ಷರಸ್ಥರು ಇದ್ದಾರೆ. ಆದರೆ, ಈ ಎರಡೂ ರಾಜ್ಯಗಳಲ್ಲಿನ ಪರಿಶಿಷ್ಟ ಜಾತಿಗಳ ಮಹಿಳಾ ಸಾಕ್ಷರತೆಗೆ ಹೋಲಿಸಿದರೆ ಬೌದ್ಧ ಧರ್ಮೀಯರ ಮಹಿಳಾ ಸಾಕ್ಷರತೆ ಪ್ರಮಾಣ ಉತ್ತಮ ಮಟ್ಟದಲ್ಲಿಯೇ ಇದೆ ಎಂದು ವರದಿ ವಿವರಿಸಿದೆ.

ಬೌದ್ಧ ಧರ್ಮೀಯರ ಲಿಂಗಾನುಪಾತ

ಬೌದ್ಧ ಧರ್ಮೀಯರ ಲಿಂಗಾನುಪಾತ ಪ್ರಮಾಣ ದೇಶದ ಒಟ್ಟೂ ಜನಸಂಖ್ಯೆಯ ಲಿಂಗಾನುಪಾತ ಪ್ರಮಾಣಕ್ಕಿಂತ ಉತ್ತಮವಾಗಿದೆ. ಬೌದ್ಧ ಧರ್ಮೀಯರಲ್ಲಿ ಪ್ರತಿ ಸಾವಿರ ಪುರುಷರಿಗೆ 965 ಮಹಿಳೆಯರಿದ್ದಾರೆ. ದೇಶದ ಒಟ್ಟೂ ಜನಸಂಖ್ಯೆಯ ಲಿಂಗಾನುಪಾತ ಪ್ರಮಾಣವನ್ನು ನೋಡುವುದಾದರೆ ಪ್ರತಿ 1000 ಪುರುಷರಿಗೆ 943 ಮಹಿಳೆರಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಈ ಪ್ರಮಾಣ ಪ್ರತಿ ಸಾವಿರ ಪುರುಷರಿಗೆ 945 ಮಹಿಳೆಯರಿದ್ದಾರೆ ಎಂದು ವರದಿ ತಿಳಿಸಿದೆ.ಮಹಾರಾಷ್ಟ್ರದ ಯಶೋಗಾಥೆ

ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ತವರು ರಾಜ್ಯ ಮಹಾರಾಷ್ಟ್ರದಲ್ಲಿ ಬೌದ್ಧ ಧರ್ಮಕ್ಕೆ ಸೇರಿದ ದಲಿತರ ಜೀವನ ಮಟ್ಟ ಸಾಕಷ್ಟು ಸುಧಾರಿಸಿದೆ. ದಲಿತ (ಮಹಾರ್‌) ಸಮುದಾಯದಲ್ಲಿ ಜನಿಸಿದ್ದ ಅಂಬೇಡ್ಕರ್‌ ಅಸ್ಪೃಶ್ಯತೆಯ ವಿರುದ್ಧ ನಡೆಸಿದ ಹೋರಾಟ ಮಹಾರಾಷ್ಟ್ರದ ದಲಿತರಿಗೆ ಮಾದರಿಯಾಗಿದೆ. ಸಾಮಾಜಿಕ ಸುಧಾರಣೆಗಾಗಿ ಶಿಕ್ಷಣವೇ ಶಕ್ತಿ ಎಂಬ ಅಂಬೇಡ್ಕರ್‌ ಅವರ ಕರೆಯನ್ನು ಮಹಾರಾಷ್ಟ್ರದ ಬಹುತೇಕ ದಲಿತರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರ ಜೀವನ ಮಟ್ಟ ಉಳಿದ ಪರಿಶಿಷ್ಟ ಜಾತಿಯ ಜನರಿಗಿಂತ ಉತ್ತಮವಾಗಿದೆ ಎಂದು ವರದಿ ತಿಳಿಸಿದೆ.

ಪ್ರತಿಕ್ರಿಯಿಸಿ (+)