ಶುಕ್ರವಾರ, ಡಿಸೆಂಬರ್ 6, 2019
18 °C

‘ಅಂತ’ದ ಅನಂತರಾಯರು

Published:
Updated:
‘ಅಂತ’ದ ಅನಂತರಾಯರು

-ಗೋನವಾರ ಕಿಶನ್ ರಾವ್

ಜೂನ್ 26ರ ಬೆಳಗಿನ ಜಾವ, ಸುಮಾರು 5.30 ಇದ್ದೀತು. ಮೊಬೈಲ್ ರಿಂಗಾಯಿತು. ಅನಂತರಾಯರ  ಹೆಸರು  ಸ್ಕ್ರೀನ್‌ ಮೇಲೆ ಫ್ಲ್ಯಾಷ್  ಆಗುತ್ತಿದೆ. ಇದು ನನಗೆ ಹೊಸದೇನೂ  ಅಲ್ಲ. ಹೊತ್ತಲ್ಲದ ಹೊತ್ತಿನಲ್ಲಿ, ಈ ಮನುಷ್ಯ ಫೋನು ಮಾಡುವುದು ಅವನ ದೃಷ್ಟಿಯಲ್ಲಿ ಸಾಮಾನ್ಯ.  ಏನಾದರೊಂದು ಅನುಮಾನ ಬಂತೆಂದರೆ ಈ ಮನುಷ್ಯನಿಗೆ ಸಮಯದ ಪರಿವೆ ಇರುವುದಿಲ್ಲ. ನಾನು ನಿದ್ದೆ ಮಂಪರಿನಲ್ಲಿ ‘ಬೋಲೋ, ಅನಂತರಾವ್’ ಎಂದೆ.  ನಾವು ಹೈದರಾಬಾದ್‌ನಲ್ಲಿ ಹಿಂದಿ ಬಳಸುವುದು ನಮಗೆ ಅಂಟಿ ಬಂದ ದುರಭ್ಯಾಸ. ಅವರ ತಮ್ಮ ಆ ಕಡೆಯಿಂದ, ‘ನಾನು ಶ್ರೀನಿವಾಸ, ಅಣ್ಣ ರಾತ್ರಿ 12 ಗಂಟೆಗೆ ಸಾವನ್ನಪ್ಪಿದರು’ ಎನ್ನುವ ಸುದ್ದಿ ತಿಳಿಸಿದ. ‘ಸರಿ’ ಎಂದು ಫೋನ್ ಇಟ್ಟು ಬಿಟ್ಟೆ. ಹತ್ತು ನಿಮಿಷ ಹಾಗೆಯೇ ಕುಳಿತಿದ್ದೆ .

ನನ್ನ ಅವರ ಸಂಬಂಧ ಸುಮಾರು ನಾಲ್ಕು ದಶಕಗಳದ್ದು. ನಾನು 1980ರಲ್ಲಿ ಹೈದರಾಬಾದ್‌ನ ನೃಪತುಂಗ ಕಾಲೇಜು ಸೇರಿ ಇಲ್ಲಿಯ ಸಾಹಿತ್ಯ ಸಂಸ್ಥೆ ‘ಕರ್ನಾಟಕ ಸಾಹಿತ್ಯ ಮಂದಿರ’ದ ಸಕ್ರಿಯ ಸದಸ್ಯನಾದಾಗ, ನನ್ನ ಅವರ ಒಡನಾಟ ಆರಂಭವಾಯಿತು ಅಷ್ಟರಲ್ಲಾಗಲೇ  ‘ಅಂತ’ ಕಾದಂಬರಿ ಚಲನಚಿತ್ರವಾಗಿ ಅವರು ಅದರ ಯಶಸ್ಸಿನ ಉತ್ತುಂಗದಲ್ಲಿದ್ದರು. ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಉದ್ಯೋಗಿ ಎಚ್‌.ಕೆ. ಅನಂತರಾಯರೆಂದರೆ(72) ಯಾರಿಗೂ ತಿಳಿಯಲಿಕ್ಕಿಲ್ಲ. ಆದರೆ ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ‘ಅಂತ’ ಅನಂತರಾವ್  ಎಂದರೆ, ಕರ್ನಾಟಕ ಏಕೆ ಕನ್ನಡೇತರರಿಗೂ ಅವರು ಚಿರಪರಿಚಿತರು.

ದೊಂದು ಮೈ ನವಿರೇಳಿಸುವ ಅನುಭವ. ‘ಅಂತ’, ಅದರ ತೆಲುಗು ಮತ್ತು ಹಿಂದಿ ಅವತರಣಿಕಗಳಾದ ‘ಅಂತಂ ಕಾದಿದಿ ಆರಂಭಂ’ (ತೆಲುಗು)  ‘ಮೇರಿ ಆವಾಜ್‌ ಸುನೋ’(ಹಿಂದಿ)ಗಳ ಮೂಲಕ ಇವರು ಒಂದು ಹೊಸ ಅಧ್ಯಾಯ ಆರಂಭಿಸಿದರು. ಕನ್ನಡ ಚಲನಚಿತ್ರರಂಗದಲ್ಲಿ ‘ಅಂತ’ ಎಲ್ಲಾ ದಾಖಲೆಗಳನ್ನು ಸ್ಥಾಪಿಸಿತು. ಅನೇಕ ನಟನಟಿಯರಿಗೆ ಯಶಸ್ಸಿನ ಮೆಟ್ಟಿಲಾಯಿತು. ನಟ ಅಂಬರೀಷ್ ಅವರಿಗೆ ಹೆಸರು ತಂದುಕೊಟ್ಟ ಚಿತ್ರ ‘ಅಂತ’.  ‘ಅಂತ’ದ ನಾಯಕ ಸುಶೀಲಕುಮಾರನ ಅಭಿನಯದಲ್ಲಿ ಅಂಬರೀಷ್, ರಾಜೇಂದ್ರ ಸಿಂಗ್ (ಬಾಬು) ನಿರ್ದೇಶನ ಇಂದಿಗೂ ನೆನಪಿನಲ್ಲಿರುವ ಸಂಗತಿಗಳು. ಇದಕ್ಕೆಲ್ಲಾ ಕಾರಣ ಅನಂತರಾಯರ ‘ಅಂತ’.

ಪತ್ರಿಕೆಯಲ್ಲಿ  ಬಂದ ಓರ್ವ ಸಿ.ಬಿ.ಐ. ಅಧಿಕಾರಿಯ ಅಸಹಾಯಕತೆ ಈ ಕಾದಂಬರಿಗೆ ಪ್ರೇರಣೆ ಎನ್ನುತ್ತಿದ್ದರು ಅವರು. ‘ಅಂತ’ದ ಯಶಸ್ವಿನ ನಂತರ,  ಬಹುಶಃ ರಾಜಕೀಯ ಒತ್ತಡದಲ್ಲಿ ಸಿಲುಕಿದ್ದ  ಅನೇಕ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ್ದುದನ್ನು ನೆನಪಿಸಿಕೊಳ್ಳುತ್ತಿದ್ದರು.

ನಾನು ಸಾಹಿತ್ಯ ಮಂದಿರಕ್ಕಾಗಿ ‘ಪರಿಚಯ’ ಸಂಪಾದಿಸುತ್ತಿದ್ದೆ . ಅವರ ಒಂದು ಸಂದರ್ಶನ ಹಾಕಬೇಕೆಂದು ನಿರ್ಧರಿಸಿ ನಮ್ಮಿಬ್ಬರ ಮಧ್ಯೆ ಔಪಚಾರಿಕತೆ ಇಲ್ಲದಿದ್ದರೂ ಕಾಗದ ಪೆನ್ನು ಹಿಡಿದು ಔಪಚಾರಿಕವಾಗಿ ಆರಂಭಿಸಿದೆ. ಸಂದರ್ಶನ ಲೇಖನ ಪ್ರಕಟಿಸಿದೆ. ಅಂದು ಅನೇಕ ಸಂಗತಿಗಳನ್ನು ಅವರು ಮನಬಿಚ್ಚಿ ಮಾತಾಡಿದರು. 9ನೆಯ ತರಗತಿಯಲ್ಲಿ ಇರುವಾಗ ತಂದೆಯ ಸಾವು, ಶಿಕ್ಷಣ ಪೂರೈಸಲಾಗದೇ ಉದ್ಯೋಗಕ್ಕೆ ಸೇರಬೇಕಾದ  ಅನಿವಾರ್ಯತೆ, ಇಂಗ್ಲಿಷ್ ಭಾಷೆಯ ಕ್ರೈಂ ಥ್ರಿಲ್ಲರ್ ಕನ್ನಡದಲ್ಲಿ ಬರೆಯುತ್ತೇನೆ ಎಂದು ತೆಗೆದುಕೊಂಡ ಚಾಲೆಂಜ್  ಇತ್ಯಾದಿ.

ಸಾಹಿತ್ಯದಿಂದ ಆರಂಭವಾದ ನಮ್ಮ  ಸ್ನೇಹ ಎಲ್ಲಾ ಕ್ಷೇತ್ರಗಳಿಗೆ ವ್ಯಾಪಿಸಿ ಸುಭದ್ರಗೊಂಡಿತು. ಅವರ ಮನೆಗೆ ನಾನು ಹೋಗುವ, ನನ್ನ ಮನೆಗೆ ಅವರು ಬರುವ ಮಧ್ಯರಾತ್ರಿಯವರೆಗೆ ಚರ್ಚೆ ಸಂವಾದ ಹರಟೆ ಚಹಾ ಎಲ್ಲವೂ ಧಾರಾಳವಾಗಿರುತ್ತಿತ್ತು. ಆಗ ಇಲ್ಲಿಯೇ ಇದ್ದ ಸ್ನೇಹಿತ ಎಂ.ಎಸ್.ಶ್ರೀರಾಮ ನಮ್ಮೊಂದಿಗೆ ಸೇರುತ್ತಿದ್ದ.

ಓ ಹೆನ್ರಿ ಬರೆದ ಕಥೆಯೊಂದರ ಆಧಾರಿತ ‘ಗುಂಡ ಕಳೆದ ಚಳಿಗಾಲ’ ಅವರ  ಮೊದಲಕಥೆ . ‘ಜಾಲ’ ಅವರ ಮೊದಲ ಕಾದಂಬರಿ. ಆನಂತರ ‘ಶೋಧ’,  ‘35 ಪಾರ್ಟಿ’, ‘ಅಂತ 2’,  ‘ಅಂತ ಆಗ ಈಗ’, ‘ಮನೋಮಯ’,  ‘ಮಾಯಾ  ದರ್ಪಣ’,  ‘ಅನಾಮಿಕರು’ ಮೊದಲಾದ 40 ಕೃತಿಗಳನ್ನು ರಚಿಸಿದ್ದಾರೆ.  ಅದರಲ್ಲಿ, ಎರಡು ಕಥಾಸಂಕಲನಗಳು, ಮೂರು ಚಿತ್ರಕಥೆಗಳು, ಒಂದು ‘ಮಾನಸಿಕ ಕಾದಂಬರಿ’ ಒಂದು ‘ಫ್ಯಾಂಟಸಿ ಕಾದಂಬರಿ’ ಸೇರಿವೆ.

ಸಾಲ್  ಬೆಲೋ, ಸಿಂಗರ್, ಸಾದತ್ ಹಸನ್ ಮಾಂಟೊ,  ಅವರ ನೆಚ್ಚಿನ ಲೇಖಕರು. ಅನಂತರಾಯರ ಪ್ರೇರಣೆಯಿಂದಲೇ ನಾನು ರಿಚರ್ಡ್‌ ಬಾಕ್‌ನ ‘ಜೊನಾಥನ್’ ಲಿವಿಂಗ್ಸ್ಟನ್‌ನ  ‘ಸೀಗಲ್’ ಅನುವಾದಿಸಿದ್ದು. ತಮ್ಮ  ಕೃತಿಗಳನ್ನು ವಿಮರ್ಶಕರು ಗುರುತಿಸಿಲ್ಲ ಎನ್ನುವುದು ಅವರ ಕೊರಗಾಗಿತ್ತು. ಜನಪ್ರಿಯ ಲೇಖಕರು, ಸೃಜನಶೀಲ ಲೇಖಕರು ಎನ್ನುವ ವರ್ಗೀಕರಣ ಅವರಿಗೆ ಹಿಡಿಸುತ್ತಿರಲಿಲ್ಲ. ‘ಜನಪ್ರಿಯ ಸಾಹಿತ್ಯ ಉತ್ತಮ ಸಾಹಿತ್ಯ ಅಲ್ಲ ಎನ್ನುವದಾದರೆ,  ಸಾಲ್ ಬೆಲೋನಿಗೆ ನೊಬೆಲ್ ಪುರಸ್ಕಾರ ಕೊಟ್ಟು ತಪ್ಪು ಮಾಡಿದ್ದಾರೆ’ ಎಂದು ಅವರು ಜಗಳಕ್ಕೆ ಇಳಿಯುತಿದ್ದರು.

ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಹೋದಾಗಲೆಲ್ಲ ಅಲ್ಲಿಯ ಮರದ ನೆರಳಿನ ಕ್ಯಾಂಟೀನ್‌ನಲ್ಲಿ ನಾನು ಚಹ, ಅವರು ಡಿಕಾಕ್ಷನ್ ಕುಡಿಯುತ್ತ ಸಮಯದ ಪರಿವೆ ಇಲ್ಲದೆ ಮಾತು, ಮಾತು ಮಾತು.  ಫೋನ್‌ನಲ್ಲಿಯೂ ನಮ್ಮ ಮಾತು ಮಂದುವರಿಯುತ್ತಾ ಇತ್ತು. ಅವರು ಕಾದಂಬರಿ ಬರೆಯುವಾಗ ಅವರ ಅನೇಕ ಅನುಮಾನಗಳನ್ನು ನಾನು ನಿವಾರಿಸುತ್ತಿದ್ದೆ. ಅವರ ಪ್ರತಿ ಕಾದಂಬರಿಯ ಮುನ್ನುಡಿಯಲ್ಲಿ ನನ್ನ ಉಲ್ಲೇಖ ಇರುತ್ತಿತ್ತು. ಅವರ ಹಸ್ತಪ್ರತಿಗಳ ಮೊದಲ ಓದುಗ ನಾನೇ.

ಅವರ ಕೈಬರಹ ಸರಿ ಇಲ್ಲದ ಕಾರಣ ಅವರು ಕಾದಂಬರಿಗಳನ್ನು ಡಿಕ್ಟೇಟ್  ಮಾಡಿದರೆ, ನಮ್ಮ ಆತ್ಮೀಯ  ಸ್ನೇಹಿತರಾಗಿದ್ದ, ಹನಮಂತರಾವ್, ಮುರಳಿ,  ಪೋತದಾರ್,  ಗೋವಿಂದ ಮುಂತಾದವರು ಬರೆದುಕೊಡುತ್ತಿದ್ದರು. ಅವರು ನಟರೂ ಆಗಿದ್ದರು. ಸಾಹಿತ್ಯ ಮಂದಿರದ ನಾಟಕಗಳಲ್ಲಿ ಅವರು ಅಭಿನಯಿಸುತ್ತಿದ್ದರು ಎಂದು ಕೇಳಿದ್ದೇನೆ. ನಾವು ಕಟ್ಟಿದ್ದ ‘ಅನ್ವೇಷಕರು’ ನಾಟಕ ತಂಡ ಹೈದರಾಬಾದ್‌ನ ಆಚೆ ಪ್ರದರ್ಶನಗಳಿಗೆ ಹೋದಾಗೆಲ್ಲ ಅವರು ನಮ್ಮೊಂದಿಗೆ ಇರುತ್ತಿದ್ದರು.

ಖಾರವಾಗಿ ಮಾತಾಡುವ, ಜಗಳಕ್ಕೆ ನಿಲ್ಲುವ ಮತ್ತು ಅಷ್ಟೇ ಬೇಗ ತಣ್ಣಗಾಗುವ ಸ್ನೇಹಜೀವಿ ಅವರು. ಚಿತ್ತೂರು ಜಿಲ್ಲೆಯ ಅಮರಾಪುರದಲ್ಲಿ ನಡೆದ ಆಂಧ್ರ ಕರ್ನಾಟಕ ಗಡಿನಾಡ ಸಮ್ಮೇಳನದ ಅಧ್ಯಕ್ಷರಾಗಿ ವೇದಿಕೆಯಲ್ಲಿ ಇದ್ದು, ಇಲ್ಲಿನ ‘ಸಾಹಿತ್ಯ ಮಂದಿರ’ ಸನ್ಮಾನಿಸಿದಾಗಲೂ ಅವರು ತಮ್ಮದೇ ಗುಂಗಿನಲ್ಲಿದ್ದದ್ದನ್ನು ನಾನೇ ನೋಡಿದ್ದೇನೆ. ‘ಮಂದಿರ’ಕ್ಕೆ ಆಗಮಿಸಿದ್ದ ಎಸ್. ಎಲ್. ಭೈರಪ್ಪನವರನ್ನು ಇವರು ತಮ್ಮ ಪ್ರಶ್ನೆಗಳಿಂದ ಚಕಿತಗಳಿಸಿದ್ದೂ ಇದೆ. ಏನೇ ಇರಲಿ ಅವರು ಜನಪ್ರಿಯ ಲೇಖಕರಾಗಿದ್ದರು. ಅವರದೇ ಆದ ಓದುಗರ ಬಳಗ ಇತ್ತು. ಅವರ ಪುಸ್ತಕಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿದ್ದವು. ಅಪ್ಪಟ ಹೈದರಾಬಾದಿ ಅನಂತರಾಯರು ಚಹಾ ಪ್ರಿಯರು, ಧೂಮ್ರಪಾನ ಪ್ರಿಯರು, ಸ್ನೇಹಪ್ರಿಯರು.   ‘ಇನ್ನಿಲ್ಲ’ ಎನ್ನುವುದು ವಾಸ್ತವ ಆದರೂ, ‘ಅಂತ’ ಅನಂತರಾಯರು. ಇನ್ನು ನೆನಪು ಮಾತ್ರ.

(ಲೇಖಕ: ನಿವೃತ್ತ ಕನ್ನಡ ಉಪನ್ಯಾಸಕ, ಹೈದರಾಬಾದ್‌)

ಪ್ರತಿಕ್ರಿಯಿಸಿ (+)