ಬುಧವಾರ, ಡಿಸೆಂಬರ್ 11, 2019
24 °C

‘ಮೋಹಿನಿ’ ಪ್ರಕರಣ ಕಟಕಟೆಗೆ ಬಂದಾಗ...

Published:
Updated:
‘ಮೋಹಿನಿ’ ಪ್ರಕರಣ ಕಟಕಟೆಗೆ ಬಂದಾಗ...

ಆರಕ್ಷಕರನ್ನು (ಪೊಲೀಸರು) ‘ಆ ರಾಕ್ಷಸರು’ ಎಂದು ಹೇಳುವವರಿಗೇನೂ ಕಮ್ಮಿ ಇಲ್ಲ. ಎಲ್ಲೆಡೆ ಇರುವಂತೆ ಪೊಲೀಸ್‌ ಇಲಾಖೆಯಲ್ಲಿಯೂ ಇಂಥ ‘ರಾಕ್ಷಸರು’ ಇದ್ದಾರೆ ನಿಜ. ಅಂದ ಮಾತ್ರಕ್ಕೆ ಎಲ್ಲರನ್ನೂ ಸಾರಾಸಗಟಾಗಿ ದೂಷಿಸುವುದು ಸರಿಯಲ್ಲ. ಮಾನವೀಯತೆ ಹಾಗೂ ಕರ್ತವ್ಯನಿಷ್ಠೆಯಿಂದ ಮೆರೆಯುವ ಪೊಲೀಸರೂ ಸಾಕಷ್ಟು ಮಂದಿ ಇದ್ದಾರೆ.

ಇನ್ನೊಂದೆಡೆ, ಕೋರ್ಟ್‌ಗಳೆಂದರೆ ಸ್ಥಾಪಿತ ಕಾನೂನು – ನಿಯಮಗಳ ಅಡಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಂಸ್ಥೆಗಳು ಎಂಬ ಮಾತು ಇದೆ. ಆದರೆ ವಾಸ್ತವದಲ್ಲಿ, ಈ ಸ್ಥಾಪಿತ ಲೆಕ್ಕಾಚಾರಗಳ ಹೊರತಾಗಿಯೂ ನ್ಯಾಯಾಲಯಗಳು ಕಾನೂನು ನಿಯಮಗಳನ್ನು ಮೀರಿ ಮಾನವೀಯ ತೀರ್ಪುಗಳನ್ನು, ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವುದು ಕಾಣಸಿಗುತ್ತವೆ.

ಬೀದಿ ಹೆಣವಾಗಬೇಕಾಗಿದ್ದ ಒಬ್ಬ ಅನಾಥ ಹೆಣ್ಣುಮಗಳು ಮಾನವೀಯತೆ ಮೆರೆದ ಪೊಲೀಸನ  ಹಾಗೂ ಕಾನೂನು ಹೊರತಾಗಿಯೂ ಆಸ್ಥೆ ತೋರಿದ ಕೋರ್ಟ್‌ನಿಂದಾಗಿ, ಮರುಜೀವ ಪಡೆದದ್ದು, ನನ್ನ ವೃತ್ತಿಜೀವನದಲ್ಲಿ ಕಂಡ ಅಪರೂಪದ ಘಟನೆಯಾಗಿದೆ.

***

ವಾಹನ ಸಂಚಾರ, ಜನದಟ್ಟಣೆ ಕರಗಿ ಮಧ್ಯರಾತ್ರಿಯ ಕಗ್ಗತ್ತಲು ಕವಿದು ಇಡೀ ಶಹರ ಶಯನದಲ್ಲಿ ಲೀನವಾಗುತ್ತಿದ್ದಂತೆ, ಅವಳು ಮೈಕೊಡವಿ ಎದ್ದು ನಿಲ್ಲುತ್ತಾಳೆ. ಹಾಸಿಗೆ ದಿಂಬುಗಳನ್ನು ಸುರುಳಿಸುತ್ತಿ ತಂಗುದಾಣದ ಮೂಲೆಯಲ್ಲಿ ಅದುಮಿ, ಆಕಾಶವೇ ತನ್ನ ಉಡುಗೆ ಎಂದು ಹೊರಟು ನಿಲ್ಲುತ್ತಾಳೆ. ಅವಳು ಎಲ್ಲಿಂದ ಬಂದಳು ಮತ್ತು ಎಲ್ಲಿಗೆ ಹೊರಟಳು, ಯಾತಕ್ಕಾಗಿ ಹೊರಟಳು... ಎಲ್ಲವೂ ಕುತೂಹಲವೇ...  

ಹಂದಿ ನಾಯಿಗಳ ಆವಾಸವಾದ ಒಂದು ಗಬ್ಬುನಾರುವ, ಈಗಲೋ ಆಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿ ಇರುವ ಹಾಳುಬಿದ್ದ ಬಸ್ ತಂಗು ದಾಣವನ್ನೇ ಆಕೆ ತನ್ನ ವಾಸಸ್ಥಳವನ್ನಾಗಿ ಮಾಡಿಕೊಂಡಿದ್ದಾಳೆ.

ಯಾರ ಕಣ್ಣಿಗೂ ಬೀಳದೆ ಹಗಲುಪೂರ್ತಿ ಮೈತುಂಬ ಮುಸುಕು ಹಾಕಿಕೊಂಡು ಮಲಗುವುದು, ರಾತ್ರಿಯಾಗುತ್ತಿದ್ದಂತೆ ಸದ್ದು ಗದ್ದಲವಿಲ್ಲದೆ ಎಲ್ಲಿಗೋ ಎದ್ದು ಹೋಗುವುದು. ಮತ್ತೆ ಬೆಳಗಾಗುವುದರೊಳಗೆ ಯಥಾಪ್ರಕಾರ ಅದೇ ಜಾಗದಲ್ಲಿ ಮುಸುಕು ಹಾಕಿಕೊಂಡು ಮಲಗಿಬಿಡುವುದು... ಇದು ಆಕೆಯ ದಿನಚರಿ.

***

ಅದೊಂದು ನಡುರಾತ್ರಿ 2–3 ಗಂಟೆಯ ಆಸುಪಾಸು. ಧಾರವಾಡದ ಬಿರಿಯಾನಿ ಹೋಟೆಲ್‌ ಹಿಂದುಗಡೆ ಬೀಸಾಕಿದ ಬೋಟಿ, ಮೂಳೆ, ಮಾಂಸಕ್ಕಾಗಿ ಅಲ್ಲೇ ಸುಳಿದಾಡುತ್ತಿರುವ ಗಜಗಾತ್ರದ ನಾಯಿಗಳ ಹಿಂಡು ವಿಕಾರವಾಗಿ ಅರಚಲು ಶುರುಮಾಡುತ್ತವೆ.  ನಾಯಿಗಳ ಅರಚಾಟ ಕೇಳಿದ ಹೋಟೆಲ್ ಮಾಣಿ ಕಿಟಕಿಯಿಂದ ಇಣುಕುತ್ತಾನೆ.

ಒಂದು ಮನುಷ್ಯ ಆಕೃತಿ  ಅತ್ತಿಂದಿತ್ತ ಸುಳಿಡುವುದು ಕಾಣಿಸುತ್ತದೆ. ಕಣ್‌ಕಣ್‌ ಬಿಟ್ಟು ನೋಡಿ ಥಟ್ಟನೇ ಚೀರುತ್ತಾನೆ. ಕಾರಣ, ಕೆದರಿದ ಕೂದಲಿನ ಹೆಂಗಸೊಬ್ಬಳು ಬೆತ್ತಲೆಯಾಗಿ, ವಿಕಾರವಾದ ಮುಖ ಮಾಡಿಕೊಂಡು ನಿಂತಿದ್ದನ್ನು ನೋಡುತ್ತಾನೆ. ಇದು ಮೋಹಿನಿಯೋ, ಮಹಿಳೆಯೋ ಎಂದು ತಿಳಿಯದೇ ಬೆದರಿ ಕಿಟಕಿ ಹಾಕಿಕೊಂಡು ಮಲಗಿಬಿಡುತ್ತಾನೆ. ಮಾರನೆಯ ದಿನವೂ ಅದೇ ಅರಚಾಟ, ಅಂಥದ್ದೇ ನಗ್ನ ಶರೀರ... ಮಾಣಿ ಅಕ್ಷರಶಃ ಬೆವರಿ ಬಿಡುತ್ತಾನೆ.

ಈ ಘಟನೆಯನ್ನು ಹೋಟೆಲ್‌ ಮಾಲೀಕರ ಗಮನಕ್ಕೆ ತರುತ್ತಾನೆ. ಈ ‘ಮೋಹಿನಿ’ಯನ್ನು ನೋಡಲು ಮಾಲೀಕ ಸೇರಿ ನಾಲ್ಕಾರು ಜನ ಮಾರನೆಯ ರಾತ್ರಿ ಕಾದು ಕುಳಿತುಕೊಳ್ಳುತ್ತಾರೆ. ಆದರೆ ಆಕೆ ಬರುವುದೇ ಇಲ್ಲ. ಇನ್ನೊಂದು ರಾತ್ರಿ ಕಾದರೂ ಆಕೆಯ ಸುಳಿವು ಇರುವುದಿಲ್ಲ. ಇದು ಹೋಟೆಲ್‌ ಮಾಣಿಯ ಭ್ರಮೆ ಎಂದು ಅವನನ್ನೇ ಬೈದು ಎಲ್ಲರೂ ಸುಮ್ಮನಾಗುತ್ತಾರೆ.

ಹೀಗೆ ಕೆಲ ದಿನಗಳು ಕಳೆಯುತ್ತವೆ. ಈ ‘ಮೋಹಿನಿ’ ಹೋಟೆಲ್‌ ಪಕ್ಕದ ಅಂಗಡಿಯವನಿಗೂ ಆಗಾಗ್ಗೆ ಕಾಣಿಸುತ್ತಾಳೆ. ಹೋಟೆಲ್‌ ಹಿಂಬದಿವರೆಗೆ ಹೋಗುವ ಆಕೆ ಅಲ್ಲಿಂದ ಎಲ್ಲಿಗೆ ಹೋಗುತ್ತಾಳೋ ಅವನಿಗೆ ಕಾಣಿಸುವುದೇ ಇಲ್ಲ. ಆಗ ಅಂಗಡಿಯವನಿಗೆ ಈ ಮಾಣಿಯ ಮೇಲೆ ಸಂದೇಹ ಶುರುವಾಗುತ್ತದೆ. ತಡ ಮಾಡುವುದೇ ಇಲ್ಲ.

ರವಾಗಿ ಹೋಟೆಲ್‌ ಮಾಲೀಕನ ಬಳಿ ಹೋಗಿ, ‘ನೋಡಿ ಸರ್‌... ರಾತ್ರಿ ಯಾರೋ ಒಬ್ಬ ಹೆಂಗಸು ನಿಮ್ಮ ಹೋಟೆಲ್‌ ಹತ್ತಿರ ಬಂದು ಹೋಗುತ್ತಾಳೆ. ಅನೇಕ ಬಾರಿ ಅವಳನ್ನು ನೋಡಿದ್ದೇನೆ. ನಿಮ್ಮ ಮಾಣಿಯ ಮೇಲೆ ಕಣ್ಣು ಇಡಿ’ ಎಂದು ಹೇಳುತ್ತಾನೆ. ಇಷ್ಟು ಹೇಳಿದ್ದೇ ತಡ, ಮಾಲೀಕನಿಗೆ ಮಾಣಿಯ ಮೇಲೆಯೇ ಸಂಶಯ ಶುರುವಾಗುತ್ತದೆ.

ಮಾಲೀಕನಿಂದ ಮಾಣಿಗೆ ಪ್ರಶ್ನೆಗಳ ಸುರಿಮಳೆ ಶುರುವಾಗುತ್ತದೆ. ಇತ್ತ ಆ ‘ಮೋಹಿನಿ’ ಕಾಟ, ಇನ್ನೊಂದೆಡೆ ಮಾಲೀಕನ ಕಾಟ... ಇದರಿಂದ ಸುಸ್ತಾದ ಮಾಣಿ ಕೆಲಸ ಬಿಟ್ಟು ಹೋಗುತ್ತಾನೆ.

***

ಅದೇ ರಸ್ತೆಯಲ್ಲಿ ಅದೊಂದು ರಾತ್ರಿ ಪೊಲೀಸ್‌ ಕಾನ್‌ಸ್ಟೆಬಲ್‌ ರಾಜು, ಮುಫ್ತಿಯಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಆ ವೇಳೆಯಲ್ಲಿ ಅವರಿಗೂ ಆ ‘ಮೋಹಿನಿ’ಯ ದರ್ಶನವಾಗುತ್ತದೆ!  ರಾತ್ರಿಯ ವೇಳೆ ಯಾರೋ ಏನೋ ಕಳ್ಳ ವ್ಯವಹಾರ ಮಾಡುತ್ತಿದ್ದಾರೆ ಎಂದು ರಾಜು ಅವರಿಗೆ ಅನಿಸುತ್ತದೆ. ಹತ್ತಿರ ಹೋಗಿ ನೋಡಿದಾಗ ಮಹಿಳೆ ಬೆತ್ತಲೆಯಾಗಿ ಸುತ್ತಾಡುವುದು ಕಾಣಿಸುತ್ತದೆ.

ಆಕೆಯನ್ನು ಸಮೀಪಿಸಿದಾಗ ಅವಳ ಕಡೆಯಿಂದ ದುರ್ನಾತ ಬೀರುತ್ತದೆ. ತೀರಾ ಕೊಳಕು ಸ್ಥಿತಿಯಲ್ಲಿದ್ದ ಆ ಮಹಿಳೆಯನ್ನು ನೋಡಿದ ರಾಜು ‘ಈ ಅವೇಳೆಯಲ್ಲಿ ಇಲ್ಲೇನು ಮಾಡುತ್ತಿದ್ದಿ?’ ಎಂದು ಪ್ರಶ್ನಿಸುತ್ತಾರೆ. ರಾಜು ಎಷ್ಟು ಮಾತನಾಡಿಸದರೂ ಆಕೆಯಿಂದ ಏನೂ ಉತ್ತರ ಬರುವುದಿಲ್ಲ. ಅವಳ ಹಾವಭಾವ ಎಲ್ಲಾ ನೋಡಿ ರಾಜು ಅವರಿಗೆ ಇವಳೊಬ್ಬ ಮಾನಸಿಕ ರೋಗಿ ಎಂದು ತಿಳಿಯುತ್ತದೆ. ಬೇರೆ ಯಾರೋ ಆಗಿದ್ದರೆ ಬಹುಶಃ ‘ಈ ಹುಚ್ಚಿಯ ಸಹವಾಸ ನಮಗ್ಯಾಕೆ’ ಎಂದು ಹೋಗುತ್ತಿದ್ದರೇನೋ.

ಆದರೆ ಆ ಮಹಿಳೆಯನ್ನು ನೋಡಿದ ರಾಜು ಅವರ ಮನಸ್ಸು ಕರಗುತ್ತದೆ.  ಈ ವಿಷಯವನ್ನು ಕೂಡಲೇ ಪೊಲೀಸ್‌ ಠಾಣೆಗೆ ಮುಟ್ಟಿಸುತ್ತಾರೆ. ಮಹಿಳಾ ಸಿಬ್ಬಂದಿಯ ನೆರವಿನೊಂದಿಗೆ ಅಕೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ  ದಾಖಲಿಸುತ್ತಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಆಕೆಯನ್ನು ಮಾನಸಿಕ ಆಸ್ಪತ್ರೆಗೆ ಸೇರಿಸುವಂತೆ ಹೇಳುತ್ತಾರೆ.

ಇಂತಹ ಮಹಿಳೆಯನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಾದರೆ ಕೋರ್ಟ್‌ ಅನುಮತಿ ಪಡೆಯಬೇಕಾಗುತ್ತದೆ. ಕಾನೂನಿನ ಪ್ರಕಾರ, ಘಟನೆಯನ್ನು ಮೊದಲು ವ್ಯಾಪ್ತಿಯ ನ್ಯಾಯಾಧೀಶರ ಗಮನಕ್ಕೆ ತಂದು, ಅವರಿಂದ ನಿರ್ದೇಶನ ಪಡೆಯಬೇಕಾಗುತ್ತದೆ. ಆದ್ದರಿಂದ ರಾಜು ತಮ್ಮ ಮೇಲಧಿಕಾರಿಗಳ ಜೊತೆ ಚರ್ಚಿಸಿ ಕಾನೂನಿನ ನೆರವು ಪಡೆಯಲು ಮುಂದಾಗುತ್ತಾರೆ. ಈ ಸಂಬಂಧ ಎಲ್ಲ ಪ್ರಕ್ರಿಯೆ ನಡೆಸುತ್ತಾರೆ.  ಇದರಿಂದಾಗಿ, ಬೀದಿಯಿಂದ ಮಹಿಳೆಯ ಪ್ರಕರಣ ಕಟಕಟೆಗೆ ಬಂದು ನಿಲ್ಲುತ್ತದೆ.

ಆಕೆಯನ್ನು ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ  (ನಿಮ್ಹಾನ್ಸ್‌) ಒಳರೋಗಿಯಾಗಿ ದಾಖಲಿಸುವಂತೆ ಹಾಗೂ ಆಕೆಯ ಆರೋಗ್ಯದ ಸ್ಥಿತಿಗತಿ ಕುರಿತು ಕಾಲಕಾಲಕ್ಕೆ ವರದಿ ನೀಡುವಂತೆ ಕೋರ್ಟ್‌ ತಿಳಿಸುತ್ತದೆ. ಚಿಕಿತ್ಸೆ ನೀಡಿದ ವೈದ್ಯರು, ಮಹಿಳೆ ಸಿಜೋಫ್ರೆನಿಯಾ  ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳುತ್ತಾರೆ.

ಇದಕ್ಕಾಗಿ ಆರು ತಿಂಗಳ ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಗೆ ಸಹಕರಿಸಿದ ಮಹಿಳೆಯ ಆರೋಗ್ಯದಲ್ಲಿ ಸುಧಾರಣೆ ಕಾಣಿಸುತ್ತದೆ. ‘ಮಹಿಳೆ ಗುಣಮುಖರಾಗಿದ್ದು ಇನ್ನುಮುಂದೆ ಅವರನ್ನು ಹೊರರೋಗಿಯಾಗಿ ಔಷಧಿಗಳಿಂದ ನಿಭಾಯಿಸಬಹುದು’ ಎಂದು ವೈದ್ಯರು ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರೆ.

ಈ ವೈದ್ಯಕೀಯ ವರದಿಯ ಆಧಾರದ ಮೇಲೆ ನ್ಯಾಯಾಧೀಶರು  ಮಹಿಳೆಯ ವಿಳಾಸವನ್ನು ತಿಳಿದುಕೊಳ್ಳುವಂತೆ ಸೂಚಿಸಿ ಆಕೆಯನ್ನು ಸಂಬಂಧಿಕರಿಗೆ ಒಪ್ಪಿಸುವಂತೆ ಪೊಲೀಸರಿಗೆ ಆದೇಶಿಸುತ್ತಾರೆ. ಕೋರ್ಟ್‌ ಆದೇಶದಂತೆ ಸಂಸ್ಥೆಯು ವಿಚಾರಣೆ ಮಾಡಿದಾಗ, ಮಹಿಳೆ ತನ್ನ ಹೆಸರು  ಚಾಂದನಿ, ತಾನು ಕೋಲ್ಕತ್ತಾದವಳು ಎಂದು ಬೆಂಗಾಲಿಯಲ್ಲಿ ಹೇಳಿ ತನ್ನ ಸಂಬಂಧಿಕರ ವಿಳಾಸ ನೀಡುತ್ತಾಳೆ.

ಇದನ್ನು ಕೋರ್ಟ್‌ಗೆ ತಿಳಿಸುವ ಸಂಸ್ಥೆ, ‘ಮಾನಸಿಕ ಆರೋಗ್ಯ ಕಾಯ್ದೆ 1987ರ ಪ್ರಕಾರ ಸುಧಾರಣೆಯಾದ ರೋಗಿಯನ್ನು ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಲು ಅವಕಾಶವಿರುವುದಿಲ್ಲ. ಆದ್ದರಿಂದ  ಸಂಬಂಧಿಕರು ಸಿಗುವವರೆಗೆ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲು ಆದೇಶ ನೀಡಬೇಕು’ ಎಂದು ಕೋರುತ್ತದೆ.

ಚಾಂದನಿ ನೀಡಿದ ವಿಳಾಸವನ್ನು ಪತ್ತೆಮಾಡಿ ಅವಳ ಸಂಬಂಧಿಕರ ಬಳಿ ಆಕೆಯನ್ನು ಬಿಡುವಂತೆ  ನ್ಯಾಯಾಧೀಶರು ಪೊಲೀಸರಿಗೆ ಆದೇಶಿಸುತ್ತಾರೆ. ಅಲ್ಲಿಯವರೆಗೆ ಆಕೆಯನ್ನು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಇರಿಸುವಂತೆ ನಿರ್ದೇಶಿಸುತ್ತಾರೆ.

ನ್ಯಾಯಾಲಯದ ಆದೇಶ ಪ್ರತಿ ಪಡೆದ ಪೊಲೀಸರು ವಿಳಾಸವನ್ನು ಹುಡುಕಿಕೊಂಡು ಪಶ್ಚಿಮ ಬಂಗಾಲಕ್ಕೆ ಹೋಗುತ್ತಾರೆ. ಚಾಂದನಿ ನೀಡಿದ ವಿಳಾಸಕ್ಕೆ ಹೋಗಿ ಪೊಲೀಸರು ವಿಚಾರಣೆ ಮಾಡುತ್ತಾರೆ. ಆಗ ಅವರಿಗೆ ಚಾಂದನಿಯ ಗಂಡ ತುಂಬಾ ಹಿಂದೆಯೇ ತೀರಿಕೊಂಡಿದ್ದು, ಆನಂತರ ಕುಟುಂಬದವರು ಮನೆಯನ್ನು ಮಾರಿ ಹೋಗಿದ್ದು ತಿಳಿಯುತ್ತದೆ.

ತನಗೊಬ್ಬ ಮಗಳು ಇರುವುದಾಗಿ ಹೇಳಿದ್ದ ಚಾಂದನಿ ಆಕೆಯ ವಿಳಾಸವನ್ನು ನೀಡಿರುತ್ತಾಳೆ. ಆದರೆ ಆ ವಿಳಾಸದಲ್ಲಿ  ಯಾರೂ ಇರುವುದಿಲ್ಲ. ಪೊಲೀಸರು ಅನೇಕ ಕಡೆ ವಿಚಾರಿಸಿದಾಗ ಚಾಂದನಿಯ ನಾದಿನಿ (ಗಂಡನ ತಮ್ಮನ ಹೆಂಡತಿ) ವಿಳಾಸ ತಿಳಿಯುತ್ತದೆ. ಪೊಲೀಸರು ಅಲ್ಲಿಗೆ ಹೋಗುತ್ತಾರೆ. ಅದೃಷ್ಟವಶಾತ್‌, ಅಲ್ಲಿ ನಾದಿನಿ ಸಿಗುತ್ತಾರೆ.

ಅವರ ಬಳಿ ವಿಚಾರಿಸಿದಾಗ ನಾದಿನಿ, ‘ಚಾಂದನಿಯ ಗಂಡ ತೀರಿಕೊಂಡಿದ್ದಾನೆ. ನನ್ನ ಗಂಡನೂ ತೀರಿಕೊಂಡಿದ್ದು ನನ್ನ ಇಬ್ಬರು ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ನಾವು ತುಂಬಾ ಬಡತನದಲ್ಲಿ ವಾಸಿಸುತ್ತಿದ್ದೇವೆ. ಈ ಸಮಯದಲ್ಲಿ ನನಗೆ ಕರ್ನಾಟಕವರೆಗೆ ಬಂದು ಅವಳನ್ನು ನೋಡಲು ಆಗುವುದಿಲ್ಲ. ವಿಳಾಸ ಕೊಟ್ಟು ಹೋದರೆ ಅನುಕೂಲಮಾಡಿಕೊಂಡು ಬಂದು ಹೋಗುತ್ತೇವೆ’ ಎನ್ನುತ್ತಾರೆ. ಚಾಂದನಿಯ ಮಗಳು ಎಲ್ಲಿದ್ದಾಳೆಂದು ತಮಗೂ ತಿಳಿದಿಲ್ಲ ಎನ್ನುತ್ತಾರೆ. ಮಗಳಿಗಾಗಿ ತುಂಬಾ ಹುಡುಕಾಟ ನಡೆಸುವ ಪೊಲೀಸರಿಗೆ ಕೊನೆಗೂ ಆಕೆ ಸಿಗುವುದಿಲ್ಲ. ಈ ವರದಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ.

ಚಾಂದನಿಯ ಹಿನ್ನೆಲೆ ಕೆದಕಿದಾಗ ಕಂಡುಬಂದದಿಷ್ಟು... ಗಂಡನನ್ನು ಕಳೆದುಕೊಂಡ ಮೇಲೆ ಚಾಂದನಿ ಮಾನಸಿಕ ಆಘಾತಕ್ಕೆ ಒಳಗಾಗುತ್ತಾಳೆ. ಊರು ಬಿಟ್ಟು ಅಲ್ಲಿ ಇಲ್ಲಿ ಅಲೆದಾಡುತ್ತ ಅಲ್ಲಿಯೇ ಕಂಡ ರೈಲು ಹತ್ತುತ್ತಾಳೆ.  ಅದು ಕರ್ನಾಟಕದ ರೈಲು.  ಅಲ್ಲಿ ಇಲ್ಲಿ ಸುತ್ತಾಡುತ್ತಾ ಧಾರವಾಡಕ್ಕೆ ಬಂದಿರುತ್ತಾಳೆ. ಆರೋಗ್ಯವಂತ ಮಹಿಳೆಯರನ್ನೇ ಬಿಡದ ಈ ಸಮಾಜ, ಮಾನಸಿಕ ಸ್ಥಿಮಿತ ಕಳೆದುಕೊಂಡಾಕೆಯನ್ನು ಬಿಡುತ್ತದೆಯೇ? ಅದೇನು ಆಯಿತೋ ಗೊತ್ತಿಲ್ಲ.

ಒಟ್ಟಿನಲ್ಲಿ ಆಕೆಗೆ ಜನಸಂದಣಿ ಎಂದರೆ ಭಯ ಶುರುವಾಗುತ್ತದೆ. ಆದ್ದರಿಂದ ಹಗಲಿನಲ್ಲಿ ಎಲ್ಲಿಯೋ ತಲೆಮರೆಸಿಕೊಂಡು,  ಕತ್ತಲಾಗುತ್ತಿದ್ದಂತೆ ಆಹಾರ ಹುಡುಕಿಕೊಂಡು ಹೋಗುತ್ತಿರುತ್ತಾಳೆ. ಹೋಟೆಲ್‌ಗಳ ಬಳಿ ಹೋಗಿ ತಿಂದು ಬೀಸಾಕಿದ ಆಹಾರ ತಿನ್ನುವುದನ್ನು ನಿತ್ಯ ಕಾಯಕ ಮಾಡಿಕೊಳ್ಳುತ್ತಾಳೆ.  ಭಾಷೆ ಗೊತ್ತಿಲ್ಲದ ನಾಡಿಗೆ ಬಂದು,  ಮಾತು ಬಂದರೂ ಮೂಕಳಾಗಿ ಬದುಕಲು ಶುರು ಮಾಡುತ್ತಾಳೆ.

ನೆಂಟರಿಷ್ಟರು ಇದ್ದೂ ಇಲ್ಲದಂತಾಗಿದ್ದಾರೆ. ಆಕೆಯ ನೆರವಿಗೆ ಬಂದಿರುವುದು ಮಾತ್ರ ಮಾನವೀಯತೆ ಮೆರೆದ ರಾಜು ಹಾಗೂ ಈ ಪ್ರಕರಣದ ಬಗ್ಗೆ ಕಾಲಕಾಲಕ್ಕೆ ಆದೇಶ ಹೊರಡಿಸಿದ ಕೋರ್ಟ್‌. ಇದರಿಂದಾಗಿ ಸದ್ಯ ಅಕೆ ನಿರಾಶ್ರಿತರ ಕೇಂದ್ರದಲ್ಲಿ ನೆಲೆ ಕಂಡುಕೊಂಡಿದ್ದಾಳೆ.

***

ಇಲ್ಲಿ ಒಂದು ಮಾತು ಹೇಳಲೇಬೇಕು. ಬಡವರು, ಅನಾಥರು, ಶೋಷಿತರು ಮುಂತಾದವರ ರಕ್ಷಣೆಗಾಗಿ ಹಲವಾರು ಕಾನೂನುಗಳಿವೆ. ಪ್ರತಿ ಜಿಲ್ಲೆಗಳಲ್ಲೂ ಸರ್ಕಾರಿ ಆಸ್ಪತ್ರೆಗಳು, ಅನಾಥಾಲಯಗಳು, ಪುನರ್ವಸತಿ ಕೇಂದ್ರಗಳು ಇಂಥವರ ಸೇವೆಗಾಗಿಯೇ ಇವೆ. ಆದರೆ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡೋ ಅಥವಾ ಇನ್ನಾವುದೋ ಕಾರಣಕ್ಕೆ ಇದಾವುದರ ಅರಿವೇ ಇಲ್ಲದ ಜನರನ್ನು ದಿನನಿತ್ಯ ನಾವು ಕಾಣುತ್ತಿರುತ್ತೇವೆ. ಇವರ ಸಂರಕ್ಷಣೆಯನ್ನು ಕೇವಲ ಸರ್ಕಾರ ಅಥವಾ ಪೊಲೀಸರೇ ಬಂದು ಮಾಡಬೇಕು ಎಂದುಕೊಳ್ಳುವುದು ತಪ್ಪು ಅಲ್ಲವೇ...?

ಕೊನೆಯ ಪಕ್ಷ ನೇರವಾಗಿ ಸಹಾಯ ಮಾಡಲು ಅಳುಕಾದರೂ, ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟರೆ ಅವೆಷ್ಟೋ ಜೀವಗಳು ಬೀದಿಬದಿಯಲ್ಲಿ ಅನಾಥ ಶವವಾಗಿ ಬೀಳುವುದನ್ನು ತಪ್ಪಿಸಬಹುದು. ಪ್ರತಿ ಜಿಲ್ಲೆಗಳಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು, ಪ್ರತಿ ತಾಲ್ಲೂಕಿನಲ್ಲಿ ಕಾನೂನು ಸೇವಾ ಸಮಿತಿಗಳು ಇವೆ. ಅವುಗಳ ನೆರವನ್ನಾದರೂ ಪಡೆಯಬೇಕು. ನಮ್ಮ ಅಂತರಂಗದಲ್ಲಿಯೂ ಇರುವ ಒಬ್ಬ ‘ರಾಜು’ ವನ್ನು ಜಾಗೃತಗೊಳಿಸುವ ಅವಶ್ಯಕತೆ ಇದೆ ಅನಿಸುತ್ತದೆಯಲ್ಲವೇ?

(ಹೆಸರು ಬದಲಾಯಿಸಲಾಗಿದೆ)

ಲೇಖಕ: ನ್ಯಾಯಾಂಗ ಇಲಾಖೆ ಅಧಿಕಾರಿ

*

ಪ್ರತಿಕ್ರಿಯಿಸಿ (+)