ಶುಕ್ರವಾರ, ಡಿಸೆಂಬರ್ 6, 2019
19 °C
ಮಾಜಿ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಮಾಹಿತಿ

15 ತಿಂಗಳ ಹಿಂದೆಯೇ ‘ನಿರ್ದಿಷ್ಟ ದಾಳಿ’ಗೆ ಯೋಜನೆ

ಪಿಟಿಐ Updated:

ಅಕ್ಷರ ಗಾತ್ರ : | |

15 ತಿಂಗಳ ಹಿಂದೆಯೇ ‘ನಿರ್ದಿಷ್ಟ ದಾಳಿ’ಗೆ ಯೋಜನೆ

ಪಣಜಿ:  ಭಾರತೀಯ ಸೇನೆ 2016ರ ಸೆಪ್ಟೆಂಬರ್‌ 29ರಂದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಸಿದ್ದ ‘ನಿರ್ದಿಷ್ಟ ದಾಳಿ’ಯನ್ನು 15 ತಿಂಗಳ ಹಿಂದೆಯೇ ಯೋಜಿಸಲಾಗಿತ್ತು ಎಂದು ಮಾಜಿ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಹೇಳಿದ್ದಾರೆ.

ಮಣಿಪುರದಲ್ಲಿ 2015ರ ಜೂನ್‌ನಲ್ಲಿ  ಎನ್‌ಎಸ್‌ಸಿಎನ್‌–ಕೆ ಬಂಡುಕೋರರು  ಸೇನಾ ವಾಹನಗಳ ನಡೆಸಿದ ‘ಹೊಂಚು ದಾಳಿ’ಯ ನಂತರ, ಪಿಒಕೆಯಲ್ಲಿ ನಿರ್ದಿಷ್ಟ ದಾಳಿ ನಡೆಸಲು ಯೋಜನೆ ರೂಪಿಸಲಾಯಿತು ಎಂದು ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ.

‘ಮಣಿಪುರದಲ್ಲಿ ನಡೆದ ದಾಳಿ ಬಗ್ಗೆ ಕೇಳಿದಾಗ ಅವಮಾನವಾಯಿತು. 200 ಸದಸ್ಯರ ಉಗ್ರರ ಸಂಘಟನೆಯೊಂದು 18  ಡೋಗ್ರಾ ಯೋಧರನ್ನು ಕೊಲ್ಲುತ್ತದೆ ಎಂದರೆ, ನಿಜಕ್ಕೂ ಅದು ಸೇನೆಗೆ ಅಪಮಾನ. ನಾವೆಲ್ಲ ಕೂತು ಚರ್ಚಿಸಿ, ಮೊದಲ ನಿರ್ದಿಷ್ಟ ದಾಳಿಯ ಯೋಜನೆ ರೂಪಿಸಿದೆವು. 2015ರ ಜೂನ್‌ 8ರ ಬೆಳಗ್ಗೆ ಅದನ್ನು ಕಾರ್ಯರೂಪಕ್ಕೆ ತಂದೆವು. ಭಾರತ–ಮ್ಯಾನ್ಮಾರ್‌ ಗಡಿಯಲ್ಲಿ 70–80 ಉಗ್ರರನ್ನು ಹೊಡೆದುರುಳಿಸಿದೆವು’ ಎಂದು  ಹಿಂದಿನ ಘಟನೆಗಳನ್ನು ಸ್ಮರಿಸಿದ್ದಾರೆ.

‘2016ರ ಸೆಪ್ಟೆಂಬರ್‌ 29ರ  ನಿರ್ದಿಷ್ಟ ದಾಳಿಗೆ 2015ರ ಜೂನ್‌9ರಂದು ಯೋಜನೆ ಆರಂಭವಾಗಿತ್ತು. ಹೆಚ್ಚುವರಿ ತುಕಡಿಗಳಿಗೆ ತರಬೇತಿ ನೀಡಲು ಆರಂಭಿಸಲಾಗಿತ್ತು. ಆದ್ಯತೆಯ ಮೇರೆಗೆ ಅಗತ್ಯ ಸಲಕರಣೆಗಳನ್ನು ಖರೀದಿಸಲಾಗಿತ್ತು’ ಎಂದು ಅವರು ವಿವರಿಸಿದ್ದಾರೆ.

‘ಪಾಕಿಸ್ತಾನದ ಫಿರಂಗಿಗಳನ್ನು  (ಅಥವಾ ಗುಂಡಿನ ದಾಳಿ ನಡೆಸುವ ಸಾಧನ) ಗುರುತಿಸುವುದಕ್ಕಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ರೂಪಿಸಿದ್ದ, ಶಸ್ತ್ರಾಸ್ತ್ರ ಪತ್ತೆಹಚ್ಚುವ ರೇಡಾರ್‌ ‘ಸ್ವಾತಿ’ ಅನ್ನು ಬಳಸಲಾಗಿತ್ತು. ಆದರೆ, ಈ ರೇಡಾರ್‌ ಅನ್ನು ಮೂರು ತಿಂಗಳ ನಂತರ ಸೇನೆಗೆ ಸೇರ್ಪಡೆಗೊಳಿಸಲಾಗಿತ್ತು’ ಎಂದು ಪರಿಕ್ಕರ್‌ ಮಾಹಿತಿ ನೀಡಿದ್ದಾರೆ.ಸ್ವಾತಿಯ ನೆರವಿನಿಂದ ಪಾಕ್‌ ಸೇನೆಯ 40 ಫಿರಂಗಿಗಳನ್ನು ನಾಶಪಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಈ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್‌ಗಳನ್ನು ಬಳಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ತುರ್ತು ಸಂದರ್ಭದಲ್ಲಿ ಅಗತ್ಯಬಿದ್ದರೆ ಬಳಸಲು ಮಾತ್ರ ಹೆಲಿಕಾಪ್ಟರ್‌ ಅನ್ನು ಮೀಸಲಿಡಲಾಗಿತ್ತು’ ಎಂದು ಪರಿಕ್ಕರ್‌ ಹೇಳಿದ್ದಾರೆ.

ಆ ಒಂದು ಪ್ರಶ್ನೆ...

ಸೇನಾ ಕಾರ್ಯಾಚರಣೆ ಕುರಿತಾಗಿ ಟಿವಿ ನಿರೂಪಕರೊಬ್ಬರು ಕೇಳಿದ ಪ್ರಶ್ನೆ ತಮಗೆ ಬೇಸರ ಉಂಟು ಮಾಡಿದ ವಿಚಾರವನ್ನೂ

ಅವರು ಬಹಿರಂಗ ಪಡಿಸಿದ್ದಾರೆ.

‘ಮಾಧ್ಯಮ ಕೇಳಿದ ಒಂದು ಪ್ರಶ್ನೆ ನನಗೆ ನೋವು ತಂದಿತ್ತು. ಸಹೋದ್ಯೋಗಿಯಾಗಿದ್ದ, ಮಾಜಿ ಯೋಧ ರಾಜವರ್ಧನ್‌ ಸಿಂಗ್‌ ರಾಥೋಡ್‌ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಇದ್ದರು. ಯೋಧರು ನಡೆಸುವ ಶೋಧ ಕಾರ್ಯಾಚರಣೆಗಳ ಬಗ್ಗೆ ಅವರು ವಿವರಿಸುತ್ತಿದ್ದರು. ನಿರೂಪಕರೊಬ್ಬರು, ‘ಇದೇ ರೀತಿಯ ದಾಳಿಯನ್ನು ಪಶ್ಚಿಮದ ಗಡಿಯಲ್ಲಿ ನಡೆಸುವ ಧೈರ್ಯ, ಸಾಮರ್ಥ್ಯ ನಿಮಗೆ ಇದೆಯೇ’ ಎಂದು ರಾಥೋಡ್‌ ಅವರನ್ನು ಕೇಳಿದ್ದರು’ ಎಂದು  ಪರಿಕ್ಕರ್‌ ಹೇಳಿದ್ದಾರೆ.

‘ಅತ್ಯಂತ ಭಾವಾವೇಶದಿಂದ ಆ ಪ್ರಶ್ನೆಗೆ ಕಿವಿಗೊಟ್ಟಿದ್ದೆ. ಸೂಕ್ತ ಸಮಯದಲ್ಲಿ ಅದಕ್ಕೆ ಉತ್ತರ ನೀಡುವ ನಿರ್ಧಾರ ಮಾಡಿದ್ದೆ’ ಎಂದು

ಅವರು ತಿಳಿಸಿದ್ದಾರೆ.

ಪರಿಕ್ಕರ್‌ ಹೇಳಿದ್ದು...

* ಮಣಿಪುರದಲ್ಲಿ ಸೇನೆ ಮೇಲೆ ನಡೆದ ‘ಹೊಂಚು ದಾಳಿ’ ನಂತರ ನಿರ್ಧಾರ

* ಹೆಚ್ಚುವರಿ ತುಕಡಿಗೆ ತರಬೇತಿ ಮತ್ತು ಅಗತ್ಯ ಶಸ್ತ್ರಾಸ್ತ್ರ ಖರೀದಿ

* ಇನ್ನೂ ಸೈನ್ಯಕ್ಕೆ ಸೇರ್ಪಡೆಯಾಗದಿದ್ದ ರೇಡಾರ್‌ ಬಳಕೆ

ಪ್ರತಿಕ್ರಿಯಿಸಿ (+)