ಶುಕ್ರವಾರ, ಡಿಸೆಂಬರ್ 6, 2019
17 °C
ವರ್ತಕರು ಆತಂಕ ಪಡುವ ಅಗತ್ಯವಿಲ್ಲ: ಅರುಣ್‌ ಜೇಟ್ಲಿ

ತೆರಿಗೆ ಪಾವತಿಸದವರಿಂದ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆರಿಗೆ ಪಾವತಿಸದವರಿಂದ ವಿರೋಧ

ನವದೆಹಲಿ: ಯಾವುದೇ ತೆರಿಗೆ ಪಾವತಿಸಲು ಬಯಸದವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

ಹೊಸ ತೆರಿಗೆ ವ್ಯವಸ್ಥೆ ಬಗ್ಗೆ ವರ್ತಕರು   ಆತಂಕಕ್ಕೆ ಒಳಗಾಗಲು ಯಾವ ಕಾರಣವೂ ಇಲ್ಲ ಎಂದೂ ಅವರು ತಿಳಿಸಿದರು.

‘ಒಂದು ವ್ಯವಸ್ಥೆಯಿಂದ ಇನ್ನೊಂದು ವ್ಯವಸ್ಥೆಗೆ ಬದಲಾಗುವಾಗ ಆತಂಕ  ಸಹಜ. ಆದರೆ, ಕಳವಳ ಪಡೆಬೇಕಾದ ಅಗತ್ಯವಿಲ್ಲ.  ತೆರಿಗೆ ಪಾವತಿಸದೇ ಇರುವುದು ತಮ್ಮ ಮೂಲಭೂತ ಹಕ್ಕು ಎಂದು ಕೆಲವರು ಭಾವಿಸಿದ್ದಾರೆ. ಆದರೆ, ಈ ಸರ್ಕಾರ ಇದನ್ನು ಒಪ್ಪುವುದಿಲ್ಲ. ನೀವು ಸರ್ಕಾರದ ಮತ್ತು ದೇಶದ ರಸ್ತೆ ಹಾಗೂ ಇತರ ಸೌಲಭ್ಯಗಳನ್ನು ಬಳಸುತ್ತಿದ್ದೀರಿ. ಹಾಗಾಗಿ, ತೆರಿಗೆ ಪಾವತಿಸುವುದಿಲ್ಲ ಎಂಬ ವಾದವನ್ನು ಒಪ್ಪಲಾಗದು’ ಎಂದು ಇಂಡಿಯಾ ಟಿವಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೇಟ್ಲಿ ಹೇಳಿದರು.

‘ಅವರ ಕಳವಳಕ್ಕೆ ನೈಜ ಕಾರಣ ಬೇರೆಯೇ ಇದೆ. ಇಡೀ ಉದ್ದಿಮೆಯ ಹಣಕಾಸು ವಹಿವಾಟುಗಳು ಆನ್‌ಲೈನ್‌ ಮೂಲಕ ನಡೆಯುವುದರಿಂದ, ವ್ಯಾಪಾರದ ಪ್ರಮಾಣ ಹೆಚ್ಚಾಗುತ್ತದೆ ಇದು ಅವರು ಪಾವತಿಸುವ ತೆರಿಗೆಯ ಮೇಲೂ ಪ್ರಭಾವವಾಗುತ್ತದೆ. ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ’ ಎಂದು ಜೇಟ್ಲಿ ವಿವರಿಸಿದರು.

‘ಪರಿಣಾಮಕಾರಿಯಾಗಿರುವ ಈ ವ್ಯವಸ್ಥೆಯು ತೆರಿಗೆ ಪಾವತಿದಾರರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ತೆರಿಗೆ ವಂಚನೆಯ ಮೇಲೂ ಕಡಿವಾಣ ಹಾಕುತ್ತದೆ’ ಎಂದು ಪ್ರತಿಪಾದಿಸಿದರು.

ಜಿಎಸ್‌ಟಿಯಿಂದಾಗಿ ತೆರಿಗೆ ದಾಖಲೆಗಳ ಸಂಖ್ಯೆ, ಅವುಗಳ ನಿರ್ವಹಣೆ ಹೆಚ್ಚಾಗಲಿದೆ ಎಂಬ ವಾದವನ್ನು ಜೇಟ್ಲಿ ಸ್ಪಷ್ಟವಾಗಿ ತಳ್ಳಿಹಾಕಿದರು.

‘ವ್ಯಾಪಾರಿಗಳು ಅಥವಾ ಉದ್ದಿಮೆಗಳು ತಿಂಗಳಿಗೆ ಒಂದು ಬಾರಿ ಮಾತ್ರ ಲೆಕ್ಕಪತ್ರ ವಿವರ ಸಲ್ಲಿಸಿದರೆ ಸಾಕು.  ಹಿಂದಿನ ತಿಂಗಳು ನಡೆದ ಹಣಕಾಸು ವಹಿವಾಟುಗಳ ವಿವರಗಳನ್ನು ಪ್ರತೀ ತಿಂಗಳ 10ರ ಒಳಗಾಗಿ ಸಲ್ಲಿಸಬೇಕು. ಉದ್ದೇಶಪೂರ್ವಕವಾಗಿ ತೆರಿಗೆ ಬಾಕಿ ಉಳಿಸಿಕೊಂಡಿರುವವರನ್ನು ಪತ್ತೆ ಹಚ್ಚುವ ಪ್ರಕ್ರಿಯೆಯನ್ನು ಜಿಎಸ್‌ಟಿ ಸುಲಭ ಮಾಡಲಿದೆ’ ಎಂದು ಅವರು ಹೇಳಿದರು.

ವರ್ಷಕ್ಕೆ ₹ 20 ಲಕ್ಷಕ್ಕಿಂತ ಕಡಿಮೆ ವಹಿವಾಟು ಹೊಂದಿರುವ ಉದ್ದಿಮೆಗಳು ಜಿಎಸ್‌ಟಿ ಅಡಿಯಲ್ಲಿ ನೋಂದಣಿ ಮಾಡಬೇಕಿಲ್ಲ ಎಂದು ಜೇಟ್ಲಿ ಮಾಹಿತಿ ನೀಡಿದರು.

ಜಿಎಸ್‌ಟಿ ಕ್ರಾಂತಿಕಾರಕ ತೆರಿಗೆ ವ್ಯವಸ್ಥೆಯಾಗಿದ್ದರೂ, ಅದರ ಅಡಿಯಲ್ಲಿ ಬರುವ ವಿವಿಧ ದರಗಳು, ಹೊಸ ವ್ಯವಸ್ಥೆಯ ಉದ್ದೇಶವನ್ನೇ ಹಾಳುಗೆಡಹಿವೆ ಎಂಬ ಆರೋಪಗಳನ್ನೂ ಅವರು ತಿರಸ್ಕರಿಸಿದರು.

ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಮಾಡಿರುವ ಟೀಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವರು, ‘ಇದೊಂದು ಅಪಕ್ವ ವಾದ. ಇಂತಹ ಬುದ್ಧಿಜೀವಿಗಳು ಬಡತನವನ್ನು ಕಂಡಿಲ್ಲ. ಹಾಗಾಗಿ ಇದು ಅವರಿಗೆ ಅರ್ಥವಾಗುವುದಿಲ್ಲ’ ಎಂದು ತೀಕ್ಷ್ಣವಾಗಿ ಹೇಳಿದರು. ದಿನಬಳಕೆಯ ವಸ್ತುಗಳನ್ನು ಕಡಿಮೆ ತೆರಿಗೆ ವ್ಯಾಪ್ತಿಯಲ್ಲಿ ಸರ್ಕಾರ ತಂದಿದೆ ಎಂದು ಅವರು ಹೇಳಿದರು.

‘ಜಿಎಸ್‌ಟಿಯಲ್ಲಿ ಎಲ್ಲ ವಸ್ತುಗಳಿಗೂ ಒಂದೇ ರೀತಿಯ ಅಂದರೆ ಶೇ 15ರಷ್ಟು ತೆರಿಗೆ ನಿಗದಿಪಡಿಸಬಹುದಿತ್ತು. ಆದರೆ, ಬಡವರಿಗೆ ನೆರವಾಗುವ ಉದ್ದೇಶದಿಂದ ಆಹಾರ ವಸ್ತುಗಳ ಬೆಲೆ ಇಳಿಸುವುದಕ್ಕೆ  ಬೇರೆ ಬೇರೆ ದರ ನಿಗದಿಪಡಿಸುವುದು ಅನಿವಾರ್ಯವಾಗಿತ್ತು’ ಎಂದು ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ತೆರಿಗೆ ದರ ನಿಗದಿಪಡಿಸುವಾಗ ಜಿಎಸ್‌ಟಿ ಮಂಡಳಿ ಕೆಲವು ತಪ್ಪುಗಳನ್ನು ಮಾಡಿದೆ. ಅವುಗಳಲ್ಲಿ ಕೆಲವನ್ನು ಈಗಾಗಲೇ ಸರಿ ಪಡಿಸಲಾಗಿದೆ ಎಂದು ಅವರು ಹೇಳಿದರು.

ರಾಹುಲ್‌ಗೆ ಜಿಎಸ್‌ಟಿ ಪಾಠ ಮಾಡಲು ಸಿದ್ಧ: ಗೋಯಲ್‌

ನವದೆಹಲಿ:  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪಾಠ ಹೇಳಲು ಸದಾ ಸಿದ್ಧ, ಆದರೆ, ಮೊದಲು ಅವರು ಭಾರತಕ್ಕೆ ಮರಳಲಿ ಎಂದು ಕೇಂದ್ರ ಇಂಧನ ಸಚಿವ ಪೀಯೂಷ್‌ ಗೋಯಲ್‌  ತಿರುಗೇಟು ನೀಡಿದ್ದಾರೆ.

ಸ್ವಪ್ರತಿಷ್ಠೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅರೆಬೆಂದ ಸ್ಥಿತಿಯಲ್ಲಿ ಜಿಎಸ್‌ಟಿ ಜಾರಿಮಾಡುತ್ತಿದ್ದಾರೆ ಎಂದು ರಾಹುಲ್ ಲೇವಡಿ ಮಾಡಿದ್ದರು.

ರಾಹುಲ್‌ ಗಾಂಧಿ ಅವರಿಗೆ ಅರ್ಥವಾಗುವಂತೆ ಅತ್ಯಂತ ಸರಳ ಭಾಷೆಯಲ್ಲಿ  ಜಿಎಸ್‌ಟಿ ಬಗ್ಗೆ ಅವರಿಗೆ ತಿಳಿ ಹೇಳುತ್ತೇನೆ ಎಂದು ಗೋಯಲ್‌ ಹೇಳಿದ್ದಾರೆ.

ಸಕ್ಕರೆ ಬೆಲೆ ಏರಿಕೆ ಇಲ್ಲ

ಜಿಎಸ್‌ಟಿಯಿಂದ  ಸಕ್ಕರೆ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಬೆಲೆಯಲ್ಲಿ  ಏರಿಕೆ  ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಕ್ಕರೆಗೆ ಶೇ 5 ರಷ್ಟು ತೆರಿಗೆ ನಿಗದಿ ಮಾಡಲಾಗಿದೆ. ಆದರೆ, ವರ್ಷಕ್ಕೆ ₹20 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ವ್ಯಾಪಾರಸ್ಥರಿಗೆ ಇದು ಅನ್ವಯಿಸುವುದಿಲ್ಲ.

* ವ್ಯಾಪಾರಿಗಳು ತೆರಿಗೆ ಪಾವತಿಸುವುದಿಲ್ಲ. ಗ್ರಾಹಕರು ಅದನ್ನು ಪಾವತಿಸುತ್ತಾರೆ.  ತೆರಿಗೆ ಕಟ್ಟಲು  ಗ್ರಾಹಕರೇ ಸಿದ್ಧರಿರುವಾಗ, ವರ್ತಕರಿಗೆ ಆತಂಕವೇಕೆ?

-ಅರುಣ್‌ ಜೇಟ್ಲಿ, ಹಣಕಾಸು ಸಚಿವ

ಪ್ರತಿಕ್ರಿಯಿಸಿ (+)