ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಯುಡಿ ಅಂಗಸಂಸ್ಥೆಗೆ ಪಾಕಿಸ್ತಾನ ನಿಷೇಧ

Last Updated 1 ಜುಲೈ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಹಫೀಜ್‌ ಸಯೀದ್ ನೇತೃತ್ವದ ಜಮಾತ್ ಉದ್ ದವಾ (ಜೆಯುಡಿ) ಭಯೋತ್ಪಾದಕ ಸಂಘಟನೆಯ ಅಂಗಸಂಸ್ಥೆ ‘ತೆಹ್ರಿಕ್–ಎ–ಆಜಾದಿ ಜಮ್ಮು–ಕಾಶ್ಮೀರ’(ಟಿಎಜೆಕೆ) ಸಂಘಟನೆಯನ್ನು ಪಾಕಿಸ್ತಾನ ನಿಷೇಧಿಸಿದೆ. ಭಯೋತ್ಪಾದನೆ ನಿಗ್ರಹ ಸಂಬಂಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಎದುರಾದ ಒತ್ತಡದಿಂದ ಈ ಕ್ರಮ ಕೈಗೊಂಡಿದೆ.

ಸಯೀದ್‌ನನ್ನು ಲಾಹೋರ್‌ನಲ್ಲಿ 90 ದಿನಗಳ ಗೃಹಬಂಧನಕ್ಕೆ ಒಳಪಡಿಸಿದ ಬಳಿಕ ಈ ಸಂಘಟನೆ ಮುನ್ನಲೆಗೆ ಬಂದಿತ್ತು. ಫೆಬ್ರುವರಿ 5ರಂದು ನಡೆದ ಕಾಶ್ಮೀರ ದಿನಾಚರಣೆ ವೇಳೆ ಕಾಶ್ಮೀರ ಪರ ರ್‌್ಯಾಲಿ ಆಯೋಜನೆ ಹಾಗೂ ಬ್ಯಾನರ್‌ಗಳನ್ನು ಪಾಕಿಸ್ತಾನದಾದ್ಯಂತ ಹಾಕುವ ಮೂಲಕ ಇದು ಗಮನ ಸೆಳೆದಿತ್ತು.

ಗೃಹಬಂಧನಕ್ಕೊಳಗಾಗುವ ಸೂಚನೆ ಅರಿತಿದ್ದ ಸಯೀದ್, ಕಾಶ್ಮೀರದ ಸ್ವಾತಂತ್ರ್ಯ ಹೋರಾಟವನ್ನು ಚುರುಕುಗೊಳಿಸಲು ಟಿಎಜೆಕೆ ಹೆಸರಿನ ಸಂಘಟನೆ ಹುಟ್ಟುಹಾಕುವ ಸೂಚನೆ ನೀಡಿದ್ದ.

ಜೆಯುಡಿ ಸಂಘಟನೆಯ ಸಂಪರ್ಕ ಜಾಲದ ರಕ್ಷಣೆ ಹಾಗೂ ಮತ್ತೊಂದು ಅಂಗಸಂಸ್ಥೆ ಫಲಾ–ಎ–ಇನ್ಸಾನಿಯಾ ಪ್ರತಿಷ್ಠಾನ ಉಳಿಸಿಕೊಳ್ಳುವುದು ಹೇಗೆಂದು ಸಯೀದ್ ಸಾಕಷ್ಟು ಪೂರ್ವ ತಯಾರಿ ನಡೆಸಿದ್ದ. ಸರ್ಕಾರದ ಯೋಜನೆಯ ಸುಳಿವು ಅರಿತಿದ್ದ ಆತ, ಜೆಯುಡಿಯ ಮತ್ತೊಂದು ರೂಪದ ಟಿಎಜೆಕೆ ಸಂಘಟನೆ  ಹುಟ್ಟುಹಾಕಿದ್ದ.

ಜೂನ್ 8ರಂದು ಸ್ಪೇನ್‌ನಲ್ಲಿ ನಡೆದ ಹಣಕಾಸು ಕಾರ್ಯಪಡೆಯ ಸಭೆಗೂ ಮುನ್ನ  ಟಿಎಜೆಕೆ  ಸಂಘಟನೆಯನ್ನು ಪಾಕಿಸ್ತಾನವು ‘ನಿಷೇಧಿತ ಸಂಘಟನೆ’ ಪಟ್ಟಿಗೆ ಸೇರಿಸಿತ್ತು. ಪಾಕಿಸ್ತಾನ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಇದು ಪ್ರಕಟವಾಗಿದೆ.

ಜೈಷೆ ಮೊಹಮ್ಮದ್, ಅಲ್ ಕೈದಾ, ತೆಹ್ರಿಕ್ ಎ–ತಾಲಿಬಾನ್, ಜೆಯುಡಿಯ ಶಸ್ತ್ರಸಜ್ಜಿತ ಸಂಘಟನೆ ಲಷ್ಕರ್–ಎ– ತಯಬಾ ಸೇರಿದಂತೆ 64 ಸಂಘಟನೆಗಳು ನಿಷೇಧಿತ ಸಂಘಟನೆ ಪಟ್ಟಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT