ಶುಕ್ರವಾರ, ಡಿಸೆಂಬರ್ 6, 2019
17 °C

ಗೋರಕ್ಷಣೆ ಹೆಸರಲ್ಲಿ ಅಮಾಯಕರ ಹತ್ಯೆ: ರಾಷ್ಟ್ರಪತಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋರಕ್ಷಣೆ ಹೆಸರಲ್ಲಿ ಅಮಾಯಕರ ಹತ್ಯೆ: ರಾಷ್ಟ್ರಪತಿ  ಅಸಮಾಧಾನ

ನವದೆಹಲಿ: ಗೋರಕ್ಷಣೆ ಹೆಸರಿನಲ್ಲಿ ದೇಶದಲ್ಲಿ ಹೆಚ್ಚಿರುವ ಅಮಾಯಕರ ಹತ್ಯೆ ಬಗ್ಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ  ಶನಿವಾರ  ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಅಮಾಯಕರ ಮೇಲಿನ ಅಟ್ಟಹಾಸ ನಿಯಂತ್ರಿಸಲು ಸಾಧ್ಯವಾಗದಷ್ಟು ಮಿತಿಮೀರಿದೆ ಎಂದ ಅವರು, ದೇಶದಲ್ಲಿಯ ಸದ್ಯದ ಪರಿಸ್ಥಿತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು.  

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮರು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಪರೋಕ್ಷವಾಗಿ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದರು.

ಪ್ರಜ್ಞಾವಂತ ಸಮಾಜ ಇಂತಹ ಅನಾಗರಿಕ ಮತ್ತು ಅಮಾನುಷ  ಪ್ರಕರಣಗಳ ವಿರುದ್ಧ ಧ್ವನಿ ಎತ್ತಬೇಕು. ಆ ಮೂಲಕ ಜನರ ಬದುಕುವ ಹಕ್ಕು ಮತ್ತು ಘನತೆ ಎತ್ತಿ ಹಿಡಿದು ದೇಶದ ಸೌಹಾರ್ದ, ಸಾಮರಸ್ಯ ಪರಂಪರೆ ರಕ್ಷಿಸಬೇಕಿದೆ ಎಂದರು.

ಸಂಸ್ಕೃತಿಯ ರಕ್ಷಣೆಯ ಹೆಸರಿನ  ನಡೆಯುತ್ತಿರುವ ಪುಂಡಾಟಗಳಿಗೆ ಕಾನೂನು ರಕ್ಷಿಸಬೇಕಾದವರೇ ಬಹಿರಂಗವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ  ಕೂಡಾ ಕೇಂದ್ರದ ವಿರುದ್ಧ ಹರಿಹಾಯ್ದರು.

ದೇಶದಲ್ಲಿ ಹೆಚ್ಚುತ್ತಿರುವ  ಅಸಹಿಷ್ಣುತೆ ಮತ್ತು ಹಿಂಸಾಚಾರಗಳಿಂದ  ದೇಶದ   ವಿವಿಧತೆ, ಸಹಬಾಳ್ವೆ, ಸೌಹಾರ್ದತೆ  ಮೂಲಸ್ವರೂಪಕ್ಕೆ ಧಕ್ಕೆಯಾಗುತ್ತಿದೆ ಎಂದು   ಕಳವಳ ವ್ಯಕ್ತಪಡಿಸಿದರು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ‘ಅಮಾಯಕರ ಹತ್ಯೆಗಳಿಂದ ನನ್ನ ರಕ್ತ ಕುದಿಯುತ್ತಿದೆ. ಪ್ರತಿ ಭಾರತೀಯನ ರಕ್ತವೂ ಕುದಿಯಬೇಕು’ ಎಂದು ಪ್ರತಿಕ್ರಿಯಿಸಿದರು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ನಾಯಕ ಮೋತಿಲಾಲ್‌ ವೋರಾ, ನೀಲಬ್‌ ಮಿಶ್ರಾ  ವೇದಿಕೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)