ಶನಿವಾರ, ಡಿಸೆಂಬರ್ 14, 2019
22 °C
ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯ ಇಂದು

ಕೊಹ್ಲಿ ಪಡೆಗೆ ಸರಣಿ ಗೆಲುವಿನ ಗುರಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೊಹ್ಲಿ ಪಡೆಗೆ ಸರಣಿ ಗೆಲುವಿನ ಗುರಿ

ನಾರ್ತ್‌ ಸೌಂಡ್‌, ಆ್ಯಂಟಿಗ: ಸತತ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿರುವ ಭಾರತ ತಂಡದವರು ಈಗ ಸರಣಿ ಗೆಲುವಿನ ಮೇಲೆ ಕಣ್ಣು ನೆಟ್ಟಿದ್ದಾರೆ.

ಭಾನುವಾರ ನಡೆಯುವ ಏಕದಿನ ಕ್ರಿಕೆಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗ ಆತಿಥೇಯ ವೆಸ್ಟ್‌ ಇಂಡೀಸ್‌ ಸವಾಲಿಗೆ ಎದೆಯೊಡ್ಡಲಿದೆ.

ಎರಡನೇ ಪಂದ್ಯದಲ್ಲಿ 105ರನ್‌ ಗಳಿಂದ ಗೆದ್ದಿದ್ದ ಪ್ರವಾಸಿ ಪಡೆ ಶುಕ್ರವಾರ ನಡೆದಿದ್ದ ಮೂರನೇ ಪಂದ್ಯದಲ್ಲಿ 93ರನ್‌ಗಳಿಂದ ಜೇಸನ್‌ ಹೋಲ್ಡರ್‌ ಬಳಗವನ್ನು ಪರಾಭವಗೊಳಿಸಿತ್ತು.

ಭಾರತ ನೀಡಿದ್ದ 252ರನ್‌ಗಳ ಗುರಿ ಬೆನ್ನಟ್ಟಲು ಆತಿಥೇಯ ತಂಡ ಪರದಾ ಡಿತ್ತು. ಕೊಹ್ಲಿ ಪಡೆಯ ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ಆರ್‌. ಅಶ್ವಿನ್‌ ಅವರ ದಾಳಿಗೆ ಕಂಗೆಟ್ಟಿದ್ದ ವಿಂಡೀಸ್‌ 38.1 ಓವರ್‌ಗಳಲ್ಲಿ 158 ರನ್‌ಗಳಿಗೆ ಹೋರಾಟ ಮುಗಿಸಿತ್ತು.

ಮುಖ್ಯ ಕೋಚ್‌ ಇಲ್ಲದೆಯೇ ಕೆರಿಬಿಯನ್‌ ನಾಡಿನಲ್ಲಿ ಸರಣಿ ಆಡುತ್ತಿ ರುವ ಭಾರತದ ಆಟಗಾರರು ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ವಿಭಾಗ ಗಳಲ್ಲಿ  ಶ್ರೇಷ್ಠ ಸಾಮರ್ಥ್ಯ ತೋರುತ್ತಿದ್ದಾರೆ.

ಅಜಿಂಕ್ಯ ರಹಾನೆ, ಶಿಖರ್‌ ಧವನ್‌ ಮತ್ತು ನಾಯಕ ವಿರಾಟ್‌  ಅವರು ಬ್ಯಾಟಿಂಗ್‌ ವಿಭಾಗದಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದಾರೆ. ಮುಂಬೈನ ಬಲಗೈ ಬ್ಯಾಟ್ಸ್‌ಮನ್‌ ಅಜಿಂಕ್ಯ, ಸರಣಿಯಲ್ಲಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಮೂರು ಪಂದ್ಯಗಳನ್ನು ಆಡಿರುವ ರಹಾನೆ ಖಾತೆ ಯಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕ ಸೇರಿದಂತೆ  237ರನ್‌ಗಳಿವೆ.

ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸುವ ಅವರು ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವಲ್ಲಿ ಯಶಸ್ವಿಯಾಗುತ್ತಿರುವುದು ಪ್ರವಾಸಿ ಪಡೆಗೆ ವರವಾಗಿ ಪರಿಣಮಿಸಿದೆ.

ಸರಣಿಯಲ್ಲಿ ಎರಡು ಬಾರಿ ಶತಕದ ಜೊತೆಯಾಟ ಆಡಿರುವ ಅಜಿಂಕ್ಯ ಮತ್ತು ಧವನ್‌ ಜೋಡಿ ನಾಲ್ಕನೇ ಪಂದ್ಯ ದಲ್ಲೂ ಅಬ್ಬರದ ಆರಂಭ ನೀಡಲು ಕಾದಿದೆ.

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿ ಯುವ ಕೊಹ್ಲಿ ಕೂಡ ವಿಂಡೀಸ್‌ ಬೌಲರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಏಕದಿನ ಮತ್ತು ಟಿ–20 ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಅವರು ಸರಣಿಯಲ್ಲಿ 65ರ ಸರಾಸರಿಯಲ್ಲಿ 130ರನ್‌ ಪೇರಿಸಿದ್ದಾರೆ.

ಲಯ ಕಂಡುಕೊಂಡ ಯುವಿ–ಮಹಿ: ಅನುಭವಿಗಳಾದ ಯುವರಾಜ್‌ ಸಿಂಗ್‌ ಮತ್ತು ಮಹೇಂದ್ರ ಸಿಂಗ್‌ ದೋನಿ ಅವರು ಲಯ ಕಂಡುಕೊಂಡಿರುವುದರಿಂದ ತಂಡದ ಶಕ್ತಿ ವೃದ್ಧಿಸಿದೆ.

ಮೊದಲ ಎರಡು ಪಂದ್ಯಗಳಲ್ಲಿ ರನ್‌ ಗಳಿಸಲು ಪರದಾಡಿದ್ದ ಇವರು ಹಿಂದಿನ ಪಂದ್ಯದಲ್ಲಿ ಕ್ರಮವಾಗಿ 39 ಮತ್ತು ಔಟಾಗದೆ 78ರನ್‌ ಬಾರಿಸಿ ಅಭಿಮಾನಿಗಳನ್ನು ರಂಜಿಸಿದ್ದರು.

ಮಹಾರಾಷ್ಟ್ರದ ಕೇದಾರ್‌ ಜಾಧವ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರೂ ಸ್ಫೋಟಕ ಆಟಕ್ಕೆ ಹೆಸರಾಗಿದ್ದಾರೆ. ಇವರು ಮತ್ತೊಮ್ಮೆ ಗುಡುಗಿದರೆ ವಿವಿಯನ್‌ ರಿಚರ್ಡ್ಸ್‌ ಅಂಗಳದಲ್ಲಿ ರನ್‌ ಹೊಳೆ ಹರಿಯುವುದು ನಿಶ್ಚಿತ.

ಸ್ಪಿನ್‌ ಬಲ: ಬೌಲಿಂಗ್‌ನಲ್ಲಿ ಅನುಭವಿ ಆರ್‌. ಅಶ್ವಿನ್‌ ಮತ್ತು ಕುಲದೀಪ್‌ ಯಾದವ್‌ ಅವರ ಸ್ಪಿನ್‌ ಬಲ ವಿರಾಟ್‌ ಪಡೆಯ ಬೆನ್ನಿಗಿದೆ. ಚೈನಾಮನ್‌ ಬೌಲರ್‌ ಕುಲದೀಪ್‌ ಆಡಿದ 3 ಪಂದ್ಯಗಳಿಂದ 6 ವಿಕೆಟ್‌ ಕೆಡವಿದ್ದು ಹೆಚ್ಚು ವಿಕೆಟ್‌ ಪಡೆ ದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಚೆನ್ನೈನ ಅಶ್ವಿನ್‌ ಖಾತೆಯಲ್ಲಿ 4 ವಿಕೆಟ್‌ಗಳಿವೆ. ಇವರು ಮತ್ತೊಮ್ಮೆ ಕೈಚಳಕ ತೋರಲು ಉತ್ಸುಕರಾಗಿದ್ದಾರೆ. ವೇಗಿಗಳಾದ ಭುವನೇಶ್ವರ್‌ ಕುಮಾರ್‌  ಮತ್ತು ಉಮೇಶ್‌ ಯಾದವ್‌ ಅವರ ಸಾಮರ್ಥ್ಯದ ಮೇಲೂ ನಂಬಿಕೆ ಇಡಬಹುದಾಗಿದೆ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಇವರು ತಮ್ಮ ಬತ್ತಳಿಕೆಯಲ್ಲಿರುವ ‘ಇನ್‌ಸ್ವಿಂಗ್‌’, ‘ಔಟ್‌ ಸ್ವಿಂಗ್‌’ ಮತ್ತು ‘ಯಾರ್ಕರ್‌’ ಅಸ್ತ್ರಗಳನ್ನು ಬಳಸಿ ವಿಂಡೀಸ್‌ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಬಲ್ಲರು.

ಪುಟಿದೇಳುವುದೇ ವಿಂಡೀಸ್‌: ಸತತ ಎರಡು ಪಂದ್ಯಗಳಲ್ಲಿ ಎದುರಾಗಿರುವ ನಿರಾಸೆಯಿಂದ ಕುಗ್ಗಿಹೋಗಿರುವ ವಿಂಡೀಸ್‌ ತಂಡ ಭಾನುವಾರ ಪುಟಿದೇಳುವ ಹುಮ್ಮಸ್ಸಿನಲ್ಲಿದೆ.

ಜೇಸನ್‌ ಹೋಲ್ಡರ್‌ ಪಡೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಜೊತೆಗೆ ಕ್ಷೇತ್ರ ರಕ್ಷಣೆಯಲ್ಲೂ ಗಮನಾರ್ಹ ಸಾಮರ್ಥ್ಯ ತೋರಬೇಕಿದೆ. ಆತಿಥೇಯರು ಹಿಂದಿನ ಎರಡೂ ಪಂದ್ಯಗಳಲ್ಲೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದರು. ಶಾಯ್‌ ಹೋಪ್‌, ರಾಸ್ಟನ್‌ ಚೇಸ್‌ ಮತ್ತು ಜೇಸನ್‌ ಮಹ ಮ್ಮದ್‌  ಅವರನ್ನು ಬಿಟ್ಟರೆ ಉಳಿದ ಯಾರೂ ತೋಳರಳಿಸಿ ಆಡುತ್ತಿಲ್ಲ. ಹಿಂದಿನ ಪಂದ್ಯದಲ್ಲಿ ತಂಡ 158ರನ್‌ ಗಳಿಗೆ ಆಲೌಟ್‌ ಆಗಿದ್ದು ಇದಕ್ಕೆ ಸಾಕ್ಷಿ. 

ಪಂದ್ಯದ ಆರಂಭ: ಸಂಜೆ 6.30ಕ್ಕೆ

ನೇರ ಪ್ರಸಾರ: ಟೆನ್‌ ಸ್ಪೋರ್ಟ್ಸ್‌.

ಪ್ರತಿಕ್ರಿಯಿಸಿ (+)