ಮಂಗಳವಾರ, ಡಿಸೆಂಬರ್ 10, 2019
17 °C

‘ನಾನು ಹೋರಾಟಗಾರ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಾನು ಹೋರಾಟಗಾರ್ತಿ’

ಬೆಂಗಳೂರು: ‘ರಾಷ್ಟ್ರಪತಿ ಚುನಾವಣೆಗೆ ನಿಲ್ಲಿಸಿ ನನ್ನನ್ನು ಬಲಿಪಶು ಮಾಡಲಾಗಿದೆ ಎಂಬುದು ಸುಳ್ಳು’ ಎಂದು ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್‌ ಸ್ಪಷ್ಟಪಡಿಸಿದರು.

ಕೆಪಿಸಿಸಿ ಕಚೇರಿಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಚುನಾವಣೆಗೆ ನಿಲ್ಲಿಸುವ ಮೂಲಕ ಪಕ್ಷ ಹೊಸ ಜವಾಬ್ದಾರಿಯೊಂದನ್ನು ನೀಡಿದೆ. ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇನೆ’ ಎಂದರು.

‘ದೇಶದ 17 ಪ್ರಮುಖ ವಿರೋಧ ಪಕ್ಷಗಳ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಗೆಲುವಿಗೆ ಅಗತ್ಯವಾದ ಮತಗಳು ಇಲ್ಲದಿರುವಾಗ ಯಾಕೆ ಕಣಕ್ಕಿಳಿದಿದ್ದೀರಿ ಎಂದು ಅನೇಕರು ಕೇಳುತ್ತಿದ್ದಾರೆ. ಮತಗಳಿಕೆ ಮೊದಲೇ ನಿರ್ಧಾರವಾಗುವಂತಿದ್ದರೆ ಚುನಾವಣೆ ಏಕೆ ಬೇಕು’ ಎಂದು ಅವರು ಪ್ರಶ್ನಿಸಿದರು.

‘ದೇಶದ ಎಲ್ಲ ಶಾಸಕರು, ಸಂಸದರಿಗೆ ಪತ್ರ ಬರೆದಿದ್ದೇನೆ. ಜಾತ್ಯಾತೀತ ತತ್ವ ಬೇಕೋ ಅಥವಾ ಜಾತಿಯತೆ ಬಿತ್ತುವ ಸಿದ್ಧಾಂತ ಬೇಕೋ  ಎಂಬುದು ನಿಮ್ಮ ಆಯ್ಕೆ. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿ ಎಂದು ಕೇಳಿಕೊಂಡಿದ್ದೇನೆ’ ಎಂದರು.

‘ನಮ್ಮ ಸೈದ್ಧಾಂತಿಕ ನಿಲುವುಗಳು ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಪರವಾಗಿವೆ. ಕೊನೆತನಕ ಹೋರಾಟ ನಿಲ್ಲುವುದಿಲ್ಲ. ರಾಷ್ಟ್ರಪತಿ ಚುನಾವಣೆ ಕೂಡ ಸೈದ್ಧಾಂತಿಕ ಹೋರಾಟವೇ ಆಗಿದೆ’ ಎಂದು ಅವರು ಹೇಳಿದರು.

‘ನಾನು ಮತ್ತು ಕೋವಿಂದ್‌ ಸ್ಪರ್ಧಿಸುತ್ತಿದ್ದಂತೆ ಜಾತಿ ಬಣ್ಣ ಬಳಿಯಲಾಗುತ್ತಿದೆ. ಹಿಂದಿನ   ರಾಷ್ಟ್ರಪತಿ  ಚುನಾವಣೆಗಳಲ್ಲಿ ಅಭ್ಯರ್ಥಿಗಳ ಜಾತಿ ಚರ್ಚೆಗೆ ಬಂದಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗಾಂಧೀಜಿ ಅವರ ಸಬರಮತಿ ಆಶ್ರಮದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಗಾಂಧೀಜಿ ಪ್ರತಿಪಾದಿಸಿದ ಜಾತ್ಯತೀತ, ಸಹಿಷ್ಣುತೆ, ಸರ್ವ ಧರ್ಮಗಳನ್ನು ಗೌರವಿಸುವ ತತ್ವಗಳನ್ನು ಮುಂದಿಟ್ಟುಕೊಂಡೇ ನಾವು ಸಾಗಬೇಕಿದೆ. ಅದನ್ನೇ ನಾನೂ ಮಾಡುತ್ತಿದ್ದೇನೆ. ಬಿಹಾರಕ್ಕೆ ಹೋದಾಗ ನಿತೀಶ್‌ಕುಮಾರ್‌ ಅವರನ್ನು ಭೇಟಿಯಾಗಿ  ಬೆಂಬಲ ಕೋರುತ್ತೇನೆ’  ಎಂದರು.

ಇದಕ್ಕೂ ಮೊದಲು ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ಶಾಸಕರು ಮತ್ತು ಸಂಸದರಲ್ಲಿ ಮೀರಾ ಕುಮಾರ್‌ ಮನವಿ ಮಾಡಿದರು. ಕೆಪಿಸಿಸಿ ವತಿಯಿಂದ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

‘ದೇವೇಗೌಡರ ವ್ಯಕ್ತಿತ್ವ ದೊಡ್ಡದು’: ಮೀರಾ ಕುಮಾರ್‌ ಅವರು ಬೆಂಗಳೂರಿಗೆ ಬಂದ ಕೂಡಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದ ವಿಐಪಿ ಲಾಂಜ್‌ನಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರನ್ನು  ಭೇಟಿ ಮಾಡಿ ಬೆಂಬಲ ಕೋರಿದರು. ‘ಭಾರತದ ರಾಜಕಾರಣದಲ್ಲಿ ದೇವೇಗೌಡರ ವ್ಯಕ್ತಿತ್ವ ದೊಡ್ಡದು.  ಹಲವು ಬಾರಿ ಅವರ ಸಲಹೆಗಳನ್ನು ಪಡೆದಿದ್ದೇನೆ. ಅವರು ನನ್ನ ನಾಮಪತ್ರಕ್ಕೆ ಸಹಿ ಹಾಕಿದ್ದು ಅದೃಷ್ಟ’ ಎಂದೂ ಮೀರಾ ಕುಮಾರ್‌ ಹೇಳಿದರು.

ಪ್ರತಿಕ್ರಿಯಿಸಿ (+)