ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಗೋವಾ ಗಡಿ ಪ್ರವೇಶ ಶುಲ್ಕ ರದ್ದು

ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲೂ ವ್ಯತ್ಯಾಸವಿಲ್ಲ
Last Updated 1 ಜುಲೈ 2017, 19:27 IST
ಅಕ್ಷರ ಗಾತ್ರ

ಕಾರವಾರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಿಂದಾಗಿ, ಕರ್ನಾಟಕ–ಗೋವಾ ಗಡಿಯ ಪೊಲ್ಲೆಮ್‌ನಲ್ಲಿ ಗೋವಾ ಸರ್ಕಾರದ ಲೋಕೋಪಯೋಗಿ ಇಲಾಖೆ ನಿರ್ಮಿಸಿದ್ದ ಟೋಲ್‌ನಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ ವಾಹನಗಳ ಪ್ರವೇಶ ಶುಲ್ಕ ರದ್ದುಗೊಂಡಿದೆ.

ಗೋವಾ ಪ್ರವೇಶಿಸುವ ಬೇರೆ ರಾಜ್ಯದ ವಾಹನಗಳಿಂದ ಅಲ್ಲಿನ ಸರ್ಕಾರ ಪ್ರವೇಶ ಶುಲ್ಕ ವಸೂಲು ಮಾಡುತ್ತಿತ್ತು. ತ್ರಿಚಕ್ರ ವಾಹನಗಳಿಗೆ ₹100, ನಾಲ್ಕು ಚಕ್ರದ ವಾಹನಗಳಿಗೆ ₹ 250, 6 ಚಕ್ರದ ವಾಹನಗಳಿಗೆ ₹500, 6ಕ್ಕೂ ಅಧಿಕ ಚಕ್ರದ ವಾಹನಗಳಿಗೆ ₹ 1,000 ಶುಲ್ಕ ಇತ್ತು.

ಪ್ರವಾಸೋದ್ಯಮವೇ ಕೇಂದ್ರ ಬಿಂದುವಾಗಿದ್ದ ಗೋವಾಕ್ಕೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಕೇರಳದಿಂದ ಕಾರು, ಮಿನಿ ಬಸ್‌, ಟೆಂಪೊ ಟ್ರಾವೆಲರ್‌ ಹಾಗೂ ಬಸ್‌ನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಟೋಲ್‌ನಿಂದ ಗೋವಾ ಸರ್ಕಾರಕ್ಕೆ ಹೆಚ್ಚಿನ ಆದಾಯ ಕೂಡ ಬರುತ್ತಿತ್ತು. ಇದೀಗ ಪ್ರವೇಶ ಶುಲ್ಕ ರದ್ದುಗೊಂಡಿದ್ದು, ಪ್ರವಾಸಿಗರಲ್ಲಿ ಸಂತಸ ತಂದಿದೆ.

‘ಕಾರವಾರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ನೋಂದಣಿಯಾದ ವಾಹನಗಳಿಗೆ ಪ್ರವೇಶ ಶುಲ್ಕದಿಂದ ವಿನಾಯಿತಿ ಇತ್ತು. ಅಲ್ಲದೇ ಬೇರೆ ನೋಂದಣಿಯ ವಾಹನಗಳು ಗೋವಾವನ್ನು ಪ್ರವೇಶಿಸಿ, 4 ತಾಸಿನೊಳಗೆ ವಾಪಸ್‌ ಬಂದರೆ ಶುಲ್ಕವನ್ನು ಮರುಪಾವತಿ ಮಾಡುತ್ತಿದ್ದೆವು. ಸರ್ಕಾರದಿಂದ ಆದೇಶ ಬಂದ ನಿಮಿತ್ತ ಶುಕ್ರವಾರ ಮಧ್ಯರಾತ್ರಿಯಿಂದಲೇ ಪ್ರವೇಶ ಶುಲ್ಕ ವಸೂಲಿಯನ್ನು ನಿಲ್ಲಿಸಿದ್ದೇವೆ’ ಎಂದು ಟೋಲ್‌ನ ಸಿಬ್ಬಂದಿ ನಜೀಮ್‌ ಶೇಖ್‌ ತಿಳಿಸಿದರು.

ಮದ್ಯದ ದರ ಯಥಾಸ್ಥಿತಿಯಲ್ಲಿ: ಸುಪ್ರೀಂ ಕೋರ್ಟ್‌ ಆದೇಶದನ್ವಯ, ಗೋವಾದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಅಂಚಿನಿಂದ 500 ಮೀಟರ್‌ ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳು ಎರಡು ತಿಂಗಳು ಹಿಂದೆಯೇ ಬಾಗಿಲು ಮುಚ್ಚಿವೆ. ಸದ್ಯ ನಡೆಯುತ್ತಿರುವ ವೈನ್‌ಶಾಪ್‌ಗಳಲ್ಲಿ ಮದ್ಯದ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ ಕೆಲವೆಡೆ ನಿಗದಿತ ದರಕ್ಕಿಂತ ಒಂದು ಬಾಟಲಿಗೆ ₹ 20 ರಿಂದ ₹ 30 ಹೆಚ್ಚಿಗೆ ಪಡೆಯಲಾಗುತ್ತಿದೆ.

‘ಶನಿವಾರದಿಂದ ಜಿಎಸ್‌ಟಿ ಜಾರಿಯಾಗಿದೆ. ಆದರೆ ನಮ್ಮಲ್ಲಿ ಮದ್ಯ ದಾಸ್ತಾನಿದ್ದು, ಅದನ್ನೇ ಮಾರಾಟ ಮಾಡುತ್ತಿದ್ದೇವೆ. ಹೊಸದಾಗಿ ಮದ್ಯ ಬಾಟಲಿಗಳು ಪೂರೈಕೆಯಾದಾಗ ದರದಲ್ಲಿನ ವ್ಯತ್ಯಾಸ ತಿಳಿಯಲಿದೆ’ ಎನ್ನುತ್ತಾರೆ ಮದ್ಯ ಮಾರಾಟ ಅಂಗಡಿಯೊಂದರ ದಿನೇಶ್‌ ಶೆಟ್ಟಿ.

ಇಂಧನ ದರ ಬದಲು ಇಲ್ಲ
ಗೋವಾ ಗಡಿಯಲ್ಲಿನ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರವು ಪ್ರತಿ ಲೀಟರ್‌ಗೆ ಕ್ರಮವಾಗಿ ತಲಾ ₹ 57.33 ಹಾಗೂ ₹ 55.67 ಮಾತ್ರವೇ ಇದೆ.‘ಸದ್ಯ ಯಾವುದೇ ವ್ಯತ್ಯಾಸ ಆಗಿಲ್ಲ. ಮುಂದಿನ ದಿನಗಳಲ್ಲಿ ಆಗಲಿದೆಯೇ ಎನ್ನುವುದನ್ನು ಕಾದು ನೋಡಬೇಕು’ ಎಂದು ಇಲ್ಲಿನ ಭಾರತ್‌ ಪೆಟ್ರೋಲಿಯಂ ಬಂಕ್‌ನ ಸಿಬ್ಬಂದಿ  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT