ಶುಕ್ರವಾರ, ಡಿಸೆಂಬರ್ 6, 2019
18 °C
15 ಶೈಕ್ಷಣಿಕ ಕೃತಿಗಳ ಲೋಕಾರ್ಪಣೆ ಸಮಾರಂಭ

ಸೃಜನಾತ್ಮಕ ಕಲಿಕೆಗೆ ಸಿಗುತ್ತಿಲ್ಲ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೃಜನಾತ್ಮಕ ಕಲಿಕೆಗೆ ಸಿಗುತ್ತಿಲ್ಲ ಅವಕಾಶ

ಬೆಂಗಳೂರು: ‘ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಫಲಿತಾಂಶದ ಆಧಾರದಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಳೆಯುತ್ತಿದೆಯೇ ಹೊರತು, ಸೃಜನಾತ್ಮಕ ಕಲಿಕೆಗೆ ಅವಕಾಶ ನೀಡುತ್ತಿಲ್ಲ’ ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಬೇಸರ ವ್ಯಕ್ತಪಡಿಸಿದರು.

ನವಕರ್ನಾಟಕ ಪ್ರಕಾಶನ ಶನಿವಾರ  ಇಲ್ಲಿ ಆಯೋಜಿಸಿದ್ದ ‘15 ಶೈಕ್ಷಣಿಕ ಕೃತಿಗಳ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಔಪಚಾರಿಕ ಶಿಕ್ಷಣ ವ್ಯವಸ್ಥೆಯು ಸೃಜನಾತ್ಮಕ ಕಲಿಕೆಗೆ ತೊಡಕಾಗಿದೆ. ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳ ನಿಜವಾದ ಕಲಿಕೆಯ ಬಗ್ಗೆ ಕಳಕಳಿ ಇಲ್ಲ. ಮಕ್ಕಳಿಗೆ ವೈಚಾರಿಕ ಮತ್ತು ವೈಜ್ಞಾನಿಕ ಸ್ವಾತಂತ್ರ್ಯವನ್ನು ನೀಡಬೇಕು. ಮಕ್ಕಳ ವಿಚಾರಗಳನ್ನು ಹತ್ತಿಕ್ಕಬಾರದು. ಆಗ ಮಾತ್ರ ನಿಜವಾದ ನಾಗರಿಕತೆ ಬೆಳೆಯುತ್ತದೆ. ಅಂತಹ ವಾತಾವರಣವನ್ನು ಶಾಲೆ ಮತ್ತು ಮನೆಗಳಲ್ಲಿ ಸೃಷ್ಟಿಮಾಡಬೇಕು’ ಎಂದು ಅವರು ತಿಳಿಸಿದರು.

ಲೇಖಕ  ಅಡ್ಡೂರು ಕೃಷ್ಣರಾವ್, ‘ವಿಜ್ಞಾನ ಮತ್ತು ಕೃಷಿಯ ಕುರಿತ ಕನ್ನಡ ಪುಸ್ತಕಗಳ ಸಂಖ್ಯೆ ಕಡಿಮೆ. ಪಠ್ಯ ಪುಸ್ತಕಕ್ಕೆ ಸೀಮಿತವಾಗಿರುವ ಈ ವಿಷಯವನ್ನು  ಬೋಧಿಸುವ ಶಿಕ್ಷಕರು ಯಾವತ್ತೂ ಬೀಜ ಬಿತ್ತಿದವರಲ್ಲ. ಕೃಷಿಯ ಸಾಧ್ಯತೆಗಳ ಅರಿವು ಅವರಿಗಿರುವುದಿಲ್ಲ. ಹಾಗಾಗಿ ಅವರಿಂದ ಪರಿಣಾಮಕಾರಿ ಬೋಧನೆಯನ್ನು ನಿರೀಕ್ಷಿಸುವಂತಿಲ್ಲ. ಈ ಕೃತಿ ಶಿಕ್ಷಕರಿಗೂ ಮಾರ್ಗದರ್ಶಕವಾಗಲಿದೆ’ ಎಂದರು.

‘ರೈತರ ಆತ್ಮಹತ್ಯೆ ಹೆಚ್ಚುತ್ತಿರುವುದು ಮತ್ತು ಯುವಕರು ಕೃಷಿಯಿಂದ ವಿಮುಖವಾಗುತ್ತಿರುವ  ಸಂದರ್ಭದಲ್ಲಿ ವೈಜ್ಞಾನಿಕ ಕೃಷಿಯ ಬಗ್ಗೆ ಜಾಗೃತಿ ಮತ್ತು ಆತ್ಮವಿಶ್ವಾಸ ಮೂಡಿಸಲು ಈ ಪುಸ್ತಕ  ನೆರವಾಗುತ್ತದೆ’ ಎಂದು  ಅಭಿಪ್ರಾಯಪಟ್ಟರು.

ಕೃತಿಗಳನ್ನು ಶಿಕ್ಷಣ ತಜ್ಞ  ಟಿ.ಎಂ. ಕುಮಾರ್ ಬಿಡುಗಡೆಗೊಳಿಸಿದರು.

ಬಿಡುಗಡೆಯಾದ ಕೃತಿಗಳು

ಎ.ಒ. ಆವಲ ಮೂರ್ತಿ ಅವರ ‘ತಂಪು ಪಾತ್ರೆ, ಜೋಕೆ!’, ‘ನೀರೊಳಗಿನ ಕಲ್ಲೇಕೆ ಹಗುರ?’, ‘ಕಚಗುಳಿ ಇಟ್ಟಾಗ ನಗುವೇಕೆ?’ ‘ಈರುಳ್ಳಿ ಹಚ್ಚಿದರೆ ಕಣ್ಣೀರೇಕೆ?’, ‘ಗುಡುಗೇಕೆ ಗುಡುಗುಡು ಸದ್ದು ಮಾಡುತ್ತದೆ’, ‘ಭೂಮಿಯ ದೃವ್ಯರಾಶಿ ಎಷ್ಟು?’, ‘ಅಲೆಗಳೇಳುವುದೇಕೆ?’, ‘ನಾವು ಸೀನುವುದೇಕೆ?’

ಡಾ.ಪ್ರತಿಭಾ ಕಾರಂತ್‌ ಅವರ ‘ಕಲಿಕೆಯ ಪುರ್ವಾಪೇಕ್ಷಿತ ಕೌಶಲಗಳು– ಒಂದು ಪ್ರಾಯೋಗಿಕ ಕೈಪಿಡಿ’, ‘ಸಂವಹನ– ಗ್ರಹಿಸುವ ಮತ್ತು ವ್ಯಕ್ತಪಡಿಸುವ ಕೌಶಲ’ ಭಾಗ–1 ಮತ್ತು ಭಾಗ –2 ಎಸ್‌. ಮಂಜುನಾಥ ರಚಿಸಿದ ‘ಚಿವ್‌ ಚಿವ್‌ ಗುಬ್ಬಿಶಿಶುಗೀತೆಗಳು’ ಗಣೇಶ ಪಿ. ನಾಡೋರ  ಅವರ ‘ಸಾಧನೆ  ಮಕ್ಕಳಿಗಾಗಿ ಕತೆಗಳು’ ಮಹಾಬಲೇಶ್ವರ ರಾವ್ ರಚಿಸಿದ ‘ಸೃಜನಶೀಲ ಶಿಕ್ಷಣ’ ಮತ್ತು ಅಡ್ಡೂರು ಕೃಷ್ಣರಾವ್‌ ಅವರ ‘ಕೃಷಿ ವಿಜ್ಞಾನ’

ಪ್ರತಿಕ್ರಿಯಿಸಿ (+)