ಶುಕ್ರವಾರ, ಡಿಸೆಂಬರ್ 6, 2019
17 °C

‘ಲೋಧಾ ಶಿಫಾರಸುಗಳ ಜಾರಿಗೆ ಬದ್ಧ’

Published:
Updated:
‘ಲೋಧಾ ಶಿಫಾರಸುಗಳ ಜಾರಿಗೆ ಬದ್ಧ’

ಮುಂಬೈ: ‘ಸುಪ್ರೀಂಕೋರ್ಟ್‌ ನೀಡಿರುವ ಗಡುವಿನೊಳಗೆ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊ ಳಿಸಲು ಬದ್ಧವಾಗಿದ್ದೇವೆ’ ಎಂದು ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಮುಖ್ಯಸ್ಥ ವಿನೋದ್‌ ರಾಯ್‌ ಹೇಳಿದ್ದಾರೆ.

‘ಲೋಧಾ ಶಿಫಾರಸುಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸುವಂತೆ ನ್ಯಾಯಾಲಯ ನಮಗೆ ಆದೇಶಿಸಿದೆ. ಸುಪ್ರೀಂಕೋರ್ಟ್‌ನ  ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಶನಿವಾರ ನಡೆದ ಸಭೆಯ ಬಳಿಕ ಅವರು ನುಡಿದರು.

‘ಲೋಧಾ ಶಿಫಾರಸು ಅನುಷ್ಠಾನ ವಿಚಾರದಲ್ಲಿ ಬಿಸಿಸಿಐ ಸದಸ್ಯರ ನಡುವೆ ಒಮ್ಮತದ ಅಭಿಪ್ರಾಯ ಮೂಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಜುಲೈ 14ರಂದು  ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಶಿಫಾರಸು ಗಳನ್ನು ಜಾರಿಗೆ ತರಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅಂದು ನ್ಯಾಯಾಲಯಕ್ಕೆ ವರದಿ ನೀಡಲಿದ್ದು, ಅದನ್ನು ಬಿಸಿಸಿಐ ವೆಬ್‌ಸೈಟ್‌ನಲ್ಲೂ ಪ್ರಕಟಿಸುತ್ತೇವೆ’ ಎಂದಿದ್ದಾರೆ.

‘ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಸೆಪ್ಟೆಂಬರ್‌ನಲ್ಲಿ ಬಿಸಿಸಿಐ ವಾರ್ಷಿಕ ಮಹಾ ಸಭೆ ನಡೆಯಲಿದೆ. ಅಂದು ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಅಕ್ಟೋಬರ್‌ 31ಕ್ಕೆ ನಮ್ಮ ಕಾರ್ಯಾವಧಿ ಮುಗಿಯಲಿದ್ದು ಅಷ್ಟರೊಳಗೆ ನ್ಯಾಯಾ ಲಯ ವಹಿಸಿರುವ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತೇವೆ’ ಎಂದು ತಿಳಿಸಿದ್ದಾರೆ.

‘ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ ಮತ್ತು ವಿವಿಎಸ್‌ ಲಕ್ಷ್ಮಣ್‌ ಅವರನ್ನು ಹೊಂದಿರುವ ಕ್ರಿಕೆಟ್‌ ಸಲಹಾ ಸಮಿತಿ ಭಾರತ ತಂಡದ ಮುಖ್ಯ ಕೋಚ್‌ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲಿದೆ. ಈ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಮೊದಲು ನಿಗದಿ ಮಾಡಿದ್ದ ದಿನಾಂಕವನ್ನು ಮುಂದೂಡಿರುವುದಕ್ಕೆ ನಮ್ಮದೇನೂ ತಕರಾರಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)