ಭಾನುವಾರ, ಡಿಸೆಂಬರ್ 8, 2019
21 °C
ಅಂಗಡಿಯೊಳಗೆ ಉಳಿದ 14.06 ಲಕ್ಷ ಪೆಟ್ಟಿಗೆ ಮದ್ಯ

ಹೆದ್ದಾರಿಯ 3,515 ಮದ್ಯದ ಅಂಗಡಿ ಮುಚ್ಚಿದ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆದ್ದಾರಿಯ 3,515 ಮದ್ಯದ ಅಂಗಡಿ ಮುಚ್ಚಿದ ಇಲಾಖೆ

ಬೆಂಗಳೂರು: ಹೆದ್ದಾರಿಗಳ ಬದಿಯಲ್ಲಿರುವ 3,515 ಮದ್ಯದ ಅಂಗಡಿಗಳಿಗೆ ಅಬಕಾರಿ ಇಲಾಖೆ ಶನಿವಾರ ಬೀಗ ಜಡಿದಿದೆ.

ಈ ಅಂಗಡಿಗಳಲ್ಲಿ 14.06 ಲಕ್ಷ ಬಾಕ್ಸ್‌ ಮದ್ಯ ದಾಸ್ತಾನಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ. ಅಂಗಡಿ ಬೀಗ ತೆಗೆದು ಅಕ್ರಮ ಮಾರಾಟಕ್ಕೆ ಪ್ರಯತ್ನ ಮಾಡಿದರೆ ಅಷ್ಟೂ ಮದ್ಯ ವಶಕ್ಕೆ ಪಡೆದು ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಬಕಾರಿ ಇಲಾಖೆ ಮೂಲಗಳು ಎಚ್ಚರಿಸಿವೆ.

₹150 ಕೋಟಿ ನಷ್ಟ: ಬಂದ್ ಆಗಿರುವ ಈ 3,515 ಅಂಗಡಿಗಳ ಪರವಾನಗಿ ನವೀಕರಣ ಆಗದಿದ್ದರೆ ಅದರಿಂದ ಬರುವ ₹150 ಕೋಟಿ ಆದಾಯ ಖೋತಾ ಆಗಲಿದೆ ಎಂದೂ ಮೂಲಗಳು ವಿವರಿಸಿವೆ. ರಾಜ್ಯ ಸರ್ಕಾರ 2017–18ನೇ ಸಾಲಿಗೆ ₹ 18,050 ಕೋಟಿ  ಆದಾಯದ ಗುರಿ ನೀಡಿದೆ. ಇಷ್ಟು ಅಂಗಡಿಗಳು ಬಂದ್‌ ಆದರೆ ಗುರಿ  ಮುಟ್ಟುವುದು ಕಷ್ಟವಾಗಲಿದೆ ಎಂದರು.

ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ವ್ಯಾಪ್ತಿಯ ಹೊರಗೆ ಅಂಗಡಿಗಳನ್ನು ತೆರೆಯುವ ಚಾಲ್ತಿ ಪರವಾನಗಿದಾರರಿಗೆ ನವೀಕರಣ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗಿದೆ. ಅದರ ಲಾಭ ಪಡೆದುಕೊಳ್ಳಲು ಮೂರು ತಿಂಗಳ ಕಾಲಾವಕಾಶವೂ ಇದೆ.

12.93 ಲಕ್ಷ ಬಾಕ್ಸ್  ಕಡಿಮೆ ಮದ್ಯ ಮಾರಾಟ: ಜೂನ್‌ ತಿಂಗಳಲ್ಲಿ ಮದ್ಯ ಮಾರಾಟಕ್ಕೆ  ಹೊಂದಿದ್ದ ಗುರಿಯಲ್ಲಿ ಶೇ 77.82ರಷ್ಟು ಮಾತ್ರ ಸಾಧನೆಯಾಗಿದೆ.

ಜೂನ್‌ ಅಂತ್ಯಕ್ಕೆ 58.30 ಲಕ್ಷ ಬಾಕ್ಸ್‌ ಮಾರಾಟದ ಗುರಿ ಇದ್ದು, 45.36 ಲಕ್ಷ ಬಾಕ್ಸ್‌ ಮಾತ್ರ ಮಾರಾಟವಾಗಿದೆ ಎಂದು ಪಾನೀಯ ನಿಗಮ ತಿಳಿಸಿದೆ.  ಜೂನ್‌ ಕೊನೆ ವಾರದಲ್ಲಿ ಮಾರಾಟ ಜೋರಾಗಿರುತ್ತದೆ. ಕಳೆದ ವರ್ಷದ ಜೂನ್‌ಗೆ ಹೋಲಿಕೆ ಮಾಡಿದರೆ ಈಗ 4 ಲಕ್ಷ ಬಾಕ್ಸ್‌ ಕಡಿಮೆ ಮಾರಾಟವಾಗಿದೆ ಎಂದೂ ನಿಗಮ ಹೇಳಿದೆ.

ಕ್ಲಬ್‌ಗಳಲ್ಲೂ ಮದ್ಯ ಮಾರಾಟ ಸ್ಥಗಿತ

ಕ್ಲಬ್‌ಗಳಲ್ಲಿ ಮದ್ಯ ಸರಬರಾಜು ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ ಆದೇಶದಿಂದ ಯಾವುದೇ ಅಡ್ಡಿ ಇಲ್ಲ ಎಂದು  ಅಬಕಾರಿ ಇಲಾಖೆ ಈ ಹಿಂದೆ ತಿಳಿಸಿತ್ತು. ಆದರೆ, ಇಲಾಖೆಯು ಕ್ಲಬ್‌ಗಳ ಪರವಾನಗಿ ನವೀಕರಿಸದ   ಕಾರಣ ಬೆಂಗಳೂರಿನ ಕ್ಲಬ್‌ಗಳಲ್ಲಿ ಶನಿವಾರ ಮದ್ಯ ಸರಬರಾಜು ಸ್ಥಗಿತಗೊಳಿಸಲಾಗಿದೆ.

‘ ಪರವಾನಗಿಯನ್ನು ಅಧಿಕಾರಿಗಳು ಇನ್ನೂ ನವೀಕರಿಸಿಲ್ಲ. ಹಾಗಾಗಿ ಶುಕ್ರವಾರ ಮಧ್ಯ ರಾತ್ರಿಯಿಂದ ಮದ್ಯ ಮಾರಾಟ ಸ್ಥಗಿತಗೊಳಿಸಿದ್ದೇವೆ’ ಎಂದು ನಗರದ ಸೇಂಟ್‌ ಮಾರ್ಕ್ಸ್‌ ರಸ್ತೆಯ ಬೌರಿಂಗ್‌ ಕ್ಲಬ್‌ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಯಲ್ಲೂ (ಕೆಎಸ್‌ಸಿಎ) ಶನಿವಾರದಿಂದ ಮದ್ಯ ಸರಬರಾಜು ಸ್ಥಗಿತಗೊಳಿಸಲಾಗಿದೆ.   ಎಲ್ಲ ಸದಸ್ಯರಿಗೂ ಸಂಸ್ಥೆ ಈ ಬಗ್ಗೆ ಸಂದೇಶ ರವಾನಿಸಿದೆ.

‘ಕ್ಲಬ್‌ಗಳ ಪರವಾನಗಿ ನವೀಕರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದುವರೆಗೂ  ಪರವಾನಗಿ ನವೀಕರಿಸಿಲ್ಲ’ ಎಂದು ಕೆಎಸ್‌ಸಿಎ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಲಬ್‌ಗಳಲ್ಲಿ ಮದ್ಯ ಸರಬರಾಜು ಮುಂದುವರಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಪರವಾನಗಿ ನವೀಕರಣಕ್ಕೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಅಬಕಾರಿ ಇಲಾಖೆ ಆಯುಕ್ತ ಮಂಜುನಾಥ ನಾಯ್ಕ್‌ ‘ತಿಳಿಸಿದರು.

ಪ್ರತಿಕ್ರಿಯಿಸಿ (+)