ಸೋಮವಾರ, ಡಿಸೆಂಬರ್ 16, 2019
18 °C
ಕಸ್ತೂರಿ ರಂಗನ್‌ ಪ್ರತಿಪಾದನೆ

ಯುವಪ್ರತಿಭೆಗಳನ್ನು ನಮ್ಮ ದೇಶದಲ್ಲೇ ಉಳಿಸಿಕೊಳ್ಳಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವಪ್ರತಿಭೆಗಳನ್ನು ನಮ್ಮ ದೇಶದಲ್ಲೇ ಉಳಿಸಿಕೊಳ್ಳಬೇಕಿದೆ

ಬೆಂಗಳೂರು: ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಯುವಪ್ರತಿಭೆಗಳನ್ನು ನಮ್ಮ ದೇಶದಲ್ಲೇ ಉಳಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ಕೆ. ಕಸ್ತೂರಿ ರಂಗನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನ್ಯಾಷನಲ್‌ ಕಾಲೇಜಿನಲ್ಲಿ ಬೆಂಗಳೂರು ಸೈನ್ಸ್ ಫೋರಂ ಶನಿವಾರ ಹಮ್ಮಿಕೊಂಡಿದ್ದ  ‘40 ನೇ ವಾರ್ಷಿಕ ವಿಜ್ಞಾನ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣ ಮುಗಿಯುತ್ತಿದ್ದಂತೆ ವಿದೇಶಗಳಲ್ಲಿ ನನಗೆ ಹೆಚ್ಚು ಅವಕಾಶಗಳು ಲಭಿಸಿದವು. ಆದರೆ, ವಿಕ್ರಂ ಸಾರಾಭಾಯಿ ಅವರು ನನ್ನ ಪ್ರತಿಭೆಯನ್ನು ಗುರುತಿಸಿ, ಇಲ್ಲಿಯೇ ಇರುವಂತೆ ಮನವೊಲಿಸಿದರು. ಅವರಂತಹ ಸಮರ್ಥ ನಾಯಕರ ಅಗತ್ಯ ಇಸ್ರೊಗೆ ಇದೆ’ ಎಂದು ಹೇಳಿದರು.

‘ಸಾರಾಭಾಯಿ ಅವರು ಸ್ವಂತ ಹಣ ಖರ್ಚು ಮಾಡಿ ತಿರುವನಂತಪುರದ ಬಳಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆರಂಭಿಸಿದರು. ಇದರಿಂದಾಗಿ ಭಾರತ  ಬಾಹ್ಯಾಕಾಶ ಕ್ಷೇತ್ರದಲ್ಲಿ ಛಾಪು ಮೂಡಿಸಲು ಸಾಧ್ಯವಾಗಿದೆ’ ಎಂದು ನೆನಪಿಸಿಕೊಂಡರು.

‘ಸಾರಾಭಾಯಿ ಅವರ ಕಾಲಘಟ್ಟ ಇಸ್ರೊದ ಪ್ರಾರಂಭಿಕ ಹಂತವೆಂದು,  ನಂತರ  ಸತೀಶ್‌ ಧವನ್‌ ಅವರ ಕಾಲಘಟ್ಟವನ್ನು ಪ್ರಾಯೋಗಿಕ ಹಂತವೆಂದು ಹಾಗೂ ಯು.ಆರ್‌.ರಾವ್‌ ಅವರ ಅವಧಿಯನ್ನು ಕಾರ್ಯಾಚರಣೆ ಹಂತ ಎಂದೂ ವಿಭಾಗಿಸಬಹುದು’ ಎಂದು ಅವರು ವಿಶ್ಲೇಷಿಸಿದರು.

‘ನಮ್ಮ ದೇಶದಲ್ಲಿ ಬಾಹ್ಯಾಕಾಶ ಚಟುವಟಿಕೆ ಪ್ರಾರಂಭವಾಗಿ ಐದು ದಶಕಗಳು ಕಳೆದಿವೆ. 180 ವಿದೇಶಿ ಉಪಗ್ರಹಗಳ ಉಡಾವಣೆ, 6 ವಿದ್ಯಾರ್ಥಿ ಉಪಗ್ರಹಗಳು, 1 ಎಸ್‌ಆರ್‌ವಿ, ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧಪಡಿಸಿದ್ದ ‘ಕೇರ್‌’ನ ಪರೀಕ್ಷಾರ್ಥ ಯಶಸ್ವಿ ಉಡಾವಣೆ, ಮರುಬಳಕೆಯ ಬಾಹ್ಯಾಕಾಶ ನೌಕೆ (ಆರ್‌ಎಲ್‌ವಿ-ಟಿಡಿ) ಉಡಾವಣೆ ಇಸ್ರೊ ಸಾಧನೆಗೆ ಸಾಕ್ಷಿ’ ಎಂದು ವಿವರಿಸಿದರು.

‘ಚೀನಾಕ್ಕೆ ಹೋಲಿಸಿದರೆ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಿಂದೆ ಉಳಿದಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಾನವಸಹಿತ ಉಪಗ್ರಹ ಉಡಾವಣೆಯೊಂದನ್ನು ಬಿಟ್ಟರೆ, ಎಲ್ಲಾ ರೀತಿಯಿಂದಲೂ ಭಾರತ,ಚೀನಾಕ್ಕೆ ಸಮವಾಗಿದೆ’ ಎಂದು ಉತ್ತರಿಸಿದರು.

ಪ್ರತಿಕ್ರಿಯಿಸಿ (+)