ಶುಕ್ರವಾರ, ಡಿಸೆಂಬರ್ 6, 2019
17 °C
ಟಿಕೆಟ್‌ ಮೂಲ ದರದ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಲು ಆರಂಭ

ಜಿಎಸ್‌ಟಿ: ಸಿನಿಮಾ ಪ್ರಿಯರಿಗೆ ತುಸು ಸಿಹಿ, ತುಸು ಕಹಿ!

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಜಿಎಸ್‌ಟಿ: ಸಿನಿಮಾ ಪ್ರಿಯರಿಗೆ ತುಸು ಸಿಹಿ, ತುಸು ಕಹಿ!

ಬೆಂಗಳೂರು: ಬಹುನಿರೀಕ್ಷಿತ ‘ಸರಕು ಮತ್ತು ಸೇವಾ ತೆರಿಗೆ’ (ಜಿಎಸ್‌ಟಿ) ವ್ಯವಸ್ಥೆಗೆ ಕನ್ನಡ ಚಿತ್ರರಂಗದ ವಿರೋಧ ಮುಂದುವರಿದಿದೆ. ಈ ನಡುವೆ ಮಲ್ಟಿಪ್ಲೆಕ್ಸ್‌ಗಳು ಜಿಎಸ್‌ಟಿ ಅನ್ವಯ ಟಿಕೆಟ್‌ ಮೂಲ ದರದ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಲು ಆರಂಭಿಸಿವೆ.

ಆದರೆ, ಕೆಲವು ಏಕಪರದೆಯ ಚಿತ್ರಮಂದಿರಗಳು ಟಿಕೆಟ್ ದರದ ಮೇಲಿನ ತೆರಿಗೆ ಪಾಲನ್ನು ಪೂರ್ತಿಯಾಗಿ ಗ್ರಾಹಕರ ಮೇಲೆ ಇನ್ನೂ ವರ್ಗಾಯಿಸಿಲ್ಲ.

ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಮೊದಲು ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಮನೋರಂಜನಾ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಇತ್ತು. ಪರಭಾಷಾ ಚಿತ್ರಗಳಿಗೆ ಶೇ 30ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.

₹100ಕ್ಕಿಂತ ಕಡಿಮೆ ಟಿಕೆಟ್‌ ದರ ಇರುವ ಚಿತ್ರಮಂದಿರಗಳಿಗೆ ಶೇ 18ರಷ್ಟು, ₹100ಕ್ಕಿಂತ ಹೆಚ್ಚಿನ ಟಿಕೆಟ್ ದರ ಇರುವ ಚಿತ್ರಮಂದಿರ

ಗಳಿಗೆ ಶೇ 28ರಷ್ಟು ತೆರಿಗೆ ನಿಗದಿ ಮಾಡಲಾಗಿದೆ.

‘ಹೊಸ ವ್ಯವಸ್ಥೆಯಿಂದ ನಿರ್ಮಾಪಕರಿಗೆ ತೊಂದರೆ ಜಾಸ್ತಿ. ಟಿಕೆಟ್ ದರ ಹೆಚ್ಚಿಸಿದರೆ ಜನ ಸಿನಿಮಾ ವೀಕ್ಷಿಸುವುದು ಕಡಿಮೆಯಾಗಬಹುದು ಎಂಬ ಭಯ ಇರುತ್ತದೆ. ಹಾಗಾಗಿ, ತೆರಿಗೆ ಪಾಲನ್ನು ನಿರ್ಮಾಪಕರು ತಮ್ಮ ಕೈಯಿಂದ ಕಟ್ಟಬೇಕಾಗಬಹುದು’ ಎಂದು ನಿರ್ಮಾಪಕ, ವಿತರಕ ಎಂ.ಎನ್. ಕುಮಾರ್ ಹೇಳಿದರು.

‘ಹೊಸ ವ್ಯವಸ್ಥೆಯ ಅನ್ವಯ ಪಿ.ವಿ.ಆರ್‌ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರದ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಜನ ಸಿನಿಮಾ ವೀಕ್ಷಿಸುವುದರ ಮೇಲೆ ಆಗುವ ಪರಿಣಾಮಗಳೇನು ಎಂಬುದನ್ನು ಈಗಲೇ ಹೇಳಲು ಆಗದು’ ಎನ್ನುತ್ತಾರೆ ಒರಾಯನ್ ಮಾಲ್‌ನ ಪಿ.ವಿ.ಆರ್‌ ಮಲ್ಟಿಪ್ಲೆಕ್ಸ್‌ ಪ್ರತಿನಿಧಿ ಹೇಮಂತ್‌.

‘ಗೊಂದಲವೇ ಹೆಚ್ಚು’: ಜಿಎಸ್‌ಟಿ ವಿಚಾರವಾಗಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ನಿರ್ಮಾಪಕ ಜಾಕ್ ಮಂಜು ಅವರು, ‘ಈ ವ್ಯವಸ್ಥೆ ವಿಚಾರವಾಗಿ ಗೊಂದಲಗಳೇ ಹೆಚ್ಚಿವೆ’ ಎಂದರು.

‘ಈ ವ್ಯವಸ್ಥೆಯಲ್ಲಿ ಹಲವು ಹಂತಗಳಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ ಎಂಬ ಮಾತುಗಳಿವೆ. ಪಾವತಿಸಿದ ತೆರಿಗೆಯಲ್ಲಿ ಒಂದು ಭಾಗ ಮರಳಿ ಸಿಗುತ್ತದೆ ಎಂದೂ ಹೇಳಲಾಗುತ್ತಿದೆ. ಆದರೆ ಆರಂಭಿಕ ಹಂತವಾಗಿ ಹಲವೆಡೆ ₹ 100ಕ್ಕಿಂತ ಕಡಿಮೆ ಟಿಕೆಟ್ ದರ ಇರುವ ಚಿತ್ರಮಂದಿರಗಳು ಶೇ 10ರಷ್ಟನ್ನು ಮಾತ್ರ ಗ್ರಾಹಕರಿಂದ ಪಡೆಯುತ್ತಿವೆ. ಇನ್ನುಳಿದ ಶೇ 8ರಷ್ಟನ್ನು ನಿರ್ಮಾಪಕರಿಂದ ಪಡೆಯುತ್ತಿವೆ’ ಎಂದು ತಿಳಿಸಿದರು.

ಕೆಲವು ಚಿತ್ರಮಂದಿರಗಳು ಟಿಕೆಟ್‌ ದರ ಹೆಚ್ಚಿಸಿಯೇ ಇಲ್ಲ. ತೆರಿಗೆ ಪಾಲನ್ನು ಅವು ನಿರ್ಮಾಪಕರಿಂದ ಪಡೆಯುತ್ತಿವೆ. ಇದರಿಂದ ನಿರ್ಮಾಪಕರಿಗೆ ನಷ್ಟವಾಗಬಾರದು ಎಂಬ ಕಾರಣಕ್ಕೆ, ಚಿತ್ರಮಂದಿರದ ಬಾಡಿಗೆ ಮೊತ್ತದಲ್ಲಿ ತುಸು ವಿನಾಯಿತಿ ನೀಡಲು ಒಪ್ಪಿವೆ ಎಂದು ಮಂಜು ಹೇಳಿದರು.

‘ಸರ್ಕಾರ ಒಪ್ಪಿದೆ’

ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ರಾಜ್ಯದ ಬಹುತೇಕ ಚಿತ್ರಮಂದಿರಗಳ ಟಿಕೆಟ್ ದರ ₹100ಕ್ಕಿಂತ ಹೆಚ್ಚಿಲ್ಲ. ಅವುಗಳಿಗೆ ವಿಧಿಸಿರುವ ಶೇ 18ರಷ್ಟು ತೆರಿಗೆಯಲ್ಲಿ ಅರ್ಧದಷ್ಟು (ಅಂದರೆ ಶೇಕಡ 9) ರಾಜ್ಯದ ಪಾಲಿದೆ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು.

‘ರಾಜ್ಯ ಸರ್ಕಾರವು ತನ್ನ ಪಾಲಿನ ಶೇ 9ರಷ್ಟು ತೆರಿಗೆಯನ್ನು ಚಿತ್ರರಂಗಕ್ಕೆ ಬಿಟ್ಟುಕೊಡಲು ಒಪ್ಪಿದೆ. ಹಾಗಾಗಿ ಚಿತ್ರನಿರ್ಮಾಪಕರು ಶೇ 9ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ನಮ್ಮ ಪಾಲಿಗೆ ಇದು ಕೂಡ ಕಷ್ಟದ ಕೆಲಸ’ ಎಂದು ಗೋವಿಂದು ಹೇಳಿದರು.

ಬಹಳ ಖುಷಿಪಡುವುದು ಬೇಡ!

ಇಷ್ಟರವರೆಗೆ ಶೇ 30ರಷ್ಟು ತೆರಿಗೆ ಪಡೆಯುತ್ತಿದ್ದ ಪರಭಾಷಾ ಚಿತ್ರಗಳು ಇನ್ನು ಮುಂದೆ ಶೇ 28ರಷ್ಟು ತೆರಿಗೆ ಪಾವತಿಸಿದರೆ ಸಾಕು. ಹಾಗಾಗಿ ಟಿಕೆಟ್‌ನ ಒಟ್ಟು ದರ ಕಡಿಮೆಯಾಗಬಹುದು ಎಂಬ ನಿರೀಕ್ಷೆ ನಿಮ್ಮಲ್ಲಿ ಇತ್ತೇ?

‘ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬರುವವರೆಗೆ ನಮ್ಮಲ್ಲಿ ಟಿಕೆಟ್‌ ಬೆಲೆ (ಶೇ 30ರಷ್ಟು ತೆರಿಗೆ ಸೇರಿ) ₹180 ಆಗಿತ್ತು. ಹೊಸ ವ್ಯವಸ್ಥೆ ಬಂದ ನಂತರವೂ ಟಿಕೆಟ್ ದರ ಅಷ್ಟೇ ಇದೆ’ ಎಂದು ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುವ ಪ್ರಸಿದ್ಧ ಚಿತ್ರಮಂದಿರದ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಪಾವತಿಸಬೇಕಿರುವ ತೆರಿಗೆ ಮೊತ್ತದಲ್ಲಿ ಶೇ 2ರಷ್ಟು ಕಡಿಮೆ ಆಗಿದೆ. ಈ ಪಾಲನ್ನು ಚಿತ್ರ ಪ್ರದರ್ಶಕರು ಮತ್ತು ವಿತರಕರು ಹಂಚಿಕೊಳ್ಳುತ್ತಾರೆ. ₹180 ಇರುವ ಟಿಕೆಟ್ ದರದಲ್ಲಿ ಎರಡು ಅಥವಾ ನಾಲ್ಕು ರೂಪಾಯಿ ಇಳಿಕೆ ಮಾಡುವುದು ಅನುಮಾನ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)