ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರುವಂತಿಲ್ಲ; ಆಹಾರ ಸೇವಿಸುವವರಿಲ್ಲ!

ಹೆದ್ದಾರಿ ಬದಿಯ 500 ಮೀಟರ್‌ ವ್ಯಾಪ್ತಿಯಲ್ಲಿರುವ ಪಬ್‌, ಬಾರ್‌, ರೆಸ್ಟೋರೆಂಟ್‌ ತೆರವು ಆದೇಶದ ಪರಿಣಾಮ
Last Updated 1 ಜುಲೈ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯ ದಾಸ್ತಾನು ಇದೆ. ಆದರೆ, ಗ್ರಾಹಕರಿಗೆ ಮಾರುವಂತಿಲ್ಲ. ರುಚಿ–ಶುಚಿ ಆಹಾರ ಇದ್ದರೂ ಸೇವಿಸುವ ಗ್ರಾಹಕರೇ ಇಲ್ಲ.  ಮಂದ ಬೆಳಕಿನ ಕೋಣೆಗಳಲ್ಲಿ ಎಂದಿನಂತೆ ಮಧುರ ಸಂಗೀತ ಅಲೆಅಲೆಯಾಗಿ ಕೇಳಿಬರುತ್ತಿದೆ. ಸಂಗೀತ ಆಲಿಸುವ ರಸಿಕರೇ ಇಲ್ಲ...  

ಇದು ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ರೆಸ್ಟ್‌ ಹೌಸ್‌ ರಸ್ತೆಯಲ್ಲಿ ಬಾಗಿಲು ತೆರೆದಿದ್ದ ಪಬ್‌ಗಳಲ್ಲಿ ಶನಿವಾರ ಕಂಡುಬಂದ ಚಿತ್ರಣ.

ಹೆದ್ದಾರಿ ಬದಿಯ 500 ಮೀಟರ್‌ ವ್ಯಾಪ್ತಿಯಲ್ಲಿರುವ ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್‌ ಆದೇಶ ನೀಡಿರುವುದರಿಂದ ನಗರದ 700 ಮದ್ಯದಂಗಡಿಗಳು ಶುಕ್ರವಾರ ಮದ್ಯ ರಾತ್ರಿಯಿಂದಲೇ ಬಂದ್‌ ಆಗಿವೆ.

ವಾರಾಂತ್ಯದ ದಿನಗಳಲ್ಲಿ ಮೋಜು, ಮಸ್ತಿಗಾಗಿ ಬರುವ ಗ್ರಾಹಕರಿಗೂ ತಮ್ಮ ನೆಚ್ಚಿನ ಪಬ್‌, ರೆಸ್ಟೋರೆಂಟ್‌ಗಳಲ್ಲಿ  ಮದ್ಯ ಸಿಗದಂತಾಗಿರುವುದು ಭಾರೀ ನಿರಾಸೆ ಉಂಟು ಮಾಡಿದೆ.

ರೆಸ್ಟ್‌ ಹೌಸ್‌ ರಸ್ತೆಯಲ್ಲಿರುವ  ಲಿ ರಾಕ್‌ ಪಬ್‌ನ ಕಾಯಂ ಗ್ರಾಹಕ ಮೈಕೆಲ್‌ ಅವರು ಕುಟುಂಬದ ಜತೆಗೆ  ಸಮಯ ಕಳೆಯಲು ಮಧ್ಯಾಹ್ನ ಪಬ್‌ಗೆ ಬಂದಿದ್ದರು. ‘ಸುಪ್ರೀಂಕೋರ್ಟ್‌ ಆದೇಶದ ಅನುಸಾರ ಮದ್ಯ ಪೂರೈಕೆ ಇಲ್ಲ’ ಎನ್ನುವ ಸೂಚನಾ ಫಲಕ ವನ್ನು ಪಬ್‌ ಮಾಲೀಕರು ಪ್ರವೇಶ ದ್ವಾರಕ್ಕೆ ಅಂಟಿಸಿರುವುದನ್ನು ಕಂಡು ನಿರಾಸೆಯಿಂದ ವಾಪಸ್‌ ಹೊರಟರು.

ಗಜಲರ್‌್ಸ ಇನ್‌ ಪಬ್‌ ಪ್ರವೇಶ ದ್ವಾರದಲ್ಲೂ ‘ನಾವು ಬಾಗಿಲು ತೆರೆದಿದ್ದೇವೆ. ಆದರೆ, ನಿಮಗೆ ಮದ್ಯ ಪೂರೈಸುವುದಿಲ್ಲ’ ಎನ್ನುವ ಸೂಚನಾ ಫಲಕ ಎದ್ದು ಕಾಣುತ್ತಿತ್ತು.

ಬೀಯರ್‌ ಕೂಡ ದೊರೆಯುವುದಲ್ಲವೇ? ಎಂದು ಪಬ್‌ ವ್ಯವಸ್ಥಾಪಕರನ್ನು ವಿಚಾರಿಸುತ್ತಿದ್ದ ಗ್ರಾಹಕರು ‘ಜಾಗತಿಕಮಟ್ಟದಲ್ಲಿ ಪಬ್‌ ಸಿಟಿಯಾಗಿಯೂ ಗುರುತಿಸಿಕೊಂಡಿದ್ದ ಬೆಂಗಳೂರಿನ ಮಟ್ಟಿಗೆ ಇದು ಆಘಾತಕಾರಿ ಬೆಳವಣಿಗೆ. ಇದರಿಂದ ಪ್ರವಾಸೋದ್ಯಮಕ್ಕೂ ದೊಡ್ಡ ಹೊಡೆತ ಬೀಳಲಿದೆ. ಪ್ರತಿಷ್ಠಿತ ರಸ್ತೆಗಳನ್ನಾದರೂ ರಾಜ್ಯ ಸರ್ಕಾರ  ಡಿನೋಟಿಫೈ ಮಾಡಬಹುದಿತ್ತು’ ಎಂದು ‘ಪ್ರಜಾವಾಣಿ’ ಜತೆಗೆ ಅನಿಸಿಕೆ ಹಂಚಿಕೊಂಡರು.

‘ಒಳ್ಳೆಯ ಸಂಗೀತ, ಒಳ್ಳೆಯ ಮದ್ಯ ಹಾಗೂ ರುಚಿಯಾದ ಆಹಾರ ಒಂದೇ ಕಡೆ ಸಿಗುವುದು ಅಪರೂಪ. ಇವೆಲ್ಲವೂ ಒಂದೇ ಕಡೆ ಸಿಗುತ್ತಿದ್ದ ಕಾರಣಕ್ಕೆ ಈ ಮೂರೂ ರಸ್ತೆಗಳು ಬಹಳಷ್ಟು ಮಂದಿಯನ್ನು ಆಕರ್ಷಿಸುತ್ತಿದ್ದವು. ಅದರಲ್ಲೂ ಯುವಜನರಿಗೆ ನೆಚ್ಚಿನ ತಾಣವಾಗಿದ್ದವು. ಇನ್ನು ಮುಂದೆ ಅಂಥ ಆಕರ್ಷಣೆ ಕಳೆಗುಂದಬಹುದು’ ಎನ್ನುವುದು ಐ.ಟಿ ಉದ್ಯೋಗಿ ಮಧುಕುಮಾರ್‌ ಅನಿಸಿಕೆ.

‘ಕನಿಷ್ಠ 150ರಿಂದ 200 ಮಂದಿ ಗ್ರಾಹಕರು ನಿತ್ಯ ಪಬ್‌ಗೆ ಬರುತ್ತಿದ್ದರು. ಮದ್ಯ ಸೇವಿಸುತ್ತಾ ರಾಕ್‌ ಸಂಗೀತ ಆಲಿಸುವವರ ಸಂಖ್ಯೆಯೇ ಹೆಚ್ಚಿತ್ತು. ಮದ್ಯ ಪೂರೈಕೆ ಇಲ್ಲದೇ ಯಾರೂ ಕೂಡ ಬರುತ್ತಿಲ್ಲ. ಬೆರಳೆಣಿಕೆ ಸಂಖ್ಯೆಯಲ್ಲಿ ಬಂದವರೂ ಕೂಡ ಮದ್ಯ ಪೂರೈಕೆ ಇಲ್ಲದಿರುವುದು ಗೊತ್ತಾಗಿ ನಿರಾಸೆಯಿಂದ ವಾಪಸ್‌ ಹೋಗುತ್ತಿದ್ದಾರೆ’ ಎಂದು ಲಿ ರಾಕ್‌ ಪಬ್‌ ವ್ಯವಸ್ಥಾಪಕ ರಘು ತಿಳಿಸಿದರು.

‘ಜೂನ್‌ 30ಕ್ಕೆ ಪರವಾನಗಿ ಅವಧಿ ಮುಗಿದಿದೆ. ಜುಲೈ 1ಕ್ಕೆ ಹೊಸ ಪರವಾನಗಿ ಸಿಗಬೇಕಿತ್ತು. ಆದರೆ, ಪರವಾನಗಿ ನವೀಕರಣ ಆಗದಿರು
ವುದರಿಂದ ಮದ್ಯ ಮಾರಾಟ ಮಾಡುವಂತಿಲ್ಲ. ಕಾರ್ಮಿಕರಿಗೆ ಕೆಲಸ ಬಿಡದಂತೆ, 15 ದಿನ ಕಾಯುವಂತೆ ಪಬ್‌ ಮಾಲೀಕರು ಹೇಳಿದ್ದಾರೆ. ಪುನಾ ಆರಂಭಿಸಲು ಪರವಾನಗಿ ಸಿಗದಿದ್ದರೆ ಬೇರೆ ಕಡೆಗೆ ಸ್ಥಳಾಂತರಿಸಲಿದ್ದಾರೆ’ ಎಂದರು.

ಬ್ರಿಗೇಡ್‌ ರಸ್ತೆಯಲ್ಲಿ ಆರು ತಿಂಗಳ ಹಿಂದೆಯಷ್ಟೇ ಹೊಸದಾಗಿ ಆರಂಭವಾಗಿದ್ದ  ಕಮ್ಯುನಿಟಿ ಪಬ್‌, ಮೋಜೊ ಪಬ್‌, ಮಹಿಳೆಯರಿಗೆ ವಿಶೇಷ ಪ್ರವೇಶವಿರುವ ಬ್ರಿಗೇಡ್‌ ಗಾರ್ಡನ್‌ ಪಬ್‌ಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿಯೇ ಬೀಗ ಮುದ್ರೆ ಹಾಕಿದ್ದರು.

‘ಕಳೆದ ಮೂರು ದಶಕಗಳಿಂದ ಪಬ್‌ ನಡೆಸುತ್ತಿದ್ದೇವೆ. ನಮಗೆ ಎರಡು ತಲೆಮಾರಿನ ಗ್ರಾಹಕರು ಇದ್ದಾರೆ. ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ, ವಿದೇಶ ಪ್ರಯಾಣದ ಸಂಭ್ರಮ, ಸ್ನೇಹಿತರ ಸಮ್ಮಿಲನ ಸ್ಮರಣೀಯವಾಗಿಸಿಕೊಳ್ಳಲು ಗ್ರಾಹಕರು ಬರುತ್ತಿದ್ದರು. ಸಿಬ್ಬಂದಿಗೆ 5 ನಿಮಿಷ ಕೂಡ ಬಿಡುವು ಸಿಗುತ್ತಿರಲಿಲ್ಲ. ಪಬ್‌ ಗ್ರಾಹಕರಿಂದ ತುಂಬಿ ತುಳುಕುತ್ತಿತ್ತು. ಈಗ ಬೆಳಿಗ್ಗೆಯಿಂದ ಖಾಲಿ ಇದೆ. ನಾಳೆಯಿಂದ ಪಬ್‌ ಮುಂದೆ ‘ಕಾಫಿ ಕೆಫೆ’ ನಾಮಫಲಕ ಹಾಕುವ ನಿರ್ಧಾರ ಮಾಡಿದ್ದೇವೆ’ ಎಂದು ಪಿಕೋಸ್‌ ಕ್ಲಬ್‌ ವ್ಯವಸ್ಥಾಪಕ ನಿರ್ದೇಶಕ ಎನ್‌.ಶ್ರೀನಿವಾಸ ಗೌಡ ಬೇಸರ ವ್ಯಕ್ತಪಡಿಸಿದರು.

ಕೆಲಸ ಕಳೆದುಕೊಳ್ಳುವ ಭೀತಿ

ಹೆದ್ದಾರಿ ಬದಿಯ ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟ ಬಂದ್‌ ಆಗಿರುವುದರಿಂದ ಸಾವಿರಾರು ಸಂಖ್ಯೆಯ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ನಗರದ ಬ್ರಿಗೇಡ್‌ ರಸ್ತೆಯ ಪಬ್‌ವೊಂದರಲ್ಲಿ ಸರ್ವರ್‌ ಕೆಲಸ ಮಾಡುತ್ತಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಯುವಕ ಆದರ್ಶ್‌, ‘ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದಿದ್ದೆ. ನಾನು ಕೆಲಸ ಮಾಡುತ್ತಿರುವ ಪಬ್‌ನಲ್ಲಿ ಕನಿಷ್ಠ 30 ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದೇವೆ’ ಎಂದು ಹೇಳಿದರು.

‘ದ್ವಿತೀಯ ಪಿಯುಸಿವರೆಗೆ ಓದಿರುವ ನನಗೆ ತಕ್ಷಣಕ್ಕೆ ಪರ್ಯಾಯ ಉದ್ಯೋಗ ಸಿಗುವ ಭರವಸೆಯೂ ಇಲ್ಲ. ಪಬ್‌ನಲ್ಲಿ ನಮಗೆ ಸಿಗುವ ಸಂಬಳ ಕಡಿಮೆಯೇ. ಆದರೆ, ದಿನಕ್ಕೆ ₹200ರಿಂದ ₹300ರವರೆಗೆ ಟಿಪ್ಸ್‌, ಸರ್ವಿಸ್‌ ಚಾರ್ಚ್‌ ಸಿಗುತ್ತಿತ್ತು. ಇದರಿಂದಲೇ ನಿತ್ಯದ ಖರ್ಚು ನಿಭಾಯಿಸುತ್ತಿದ್ದೆವು. ತಿಂಗಳ ಸಂಬಳ ಉಳಿತಾಯ ಮಾಡಿ, ಹಳ್ಳಿಯಲ್ಲಿರುವ ತಂದೆ ತಾಯಿಗೆ ಕಳುಹಿಸುತ್ತಿದ್ದೆ. ಕೆಲಸ ಕಳೆದುಕೊಂಡರೆ ಭವಿಷ್ಯ ಹೇಗೆ ರೂಪಿಸಿಕೊಳ್ಳಲಿ ಎನ್ನುವ ಚಿಂತೆ ಕಾಡುತ್ತಿದೆ’ ಎಂದು ಅಳಲು ತೋಡಿಕೊಂಡರು.

ಪಿಕೋಸ್‌ ಪಬ್‌ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಸಹ, ಪಬ್‌ ನಡೆಯದಿದ್ದರೆ ಜೀವನ ನಿರ್ವಹಣೆ ಹೇಗೆ? ಎನ್ನುವ ಆತಂಕದಲ್ಲಿದ್ದಾರೆ.

‘ಬಾಗಿಲು ಹಾಕಿದರೆ, ಕಾರ್ಮಿಕರು ಬೇರೆಡೆ ಕೆಲಸ ಅರಸಿ ಹೋಗಬಹುದು.  ನುರಿತ ಕಾರ್ಮಿಕರು ಕೆಲಸ ತೊರೆಯದಿರಲೆಂದು  ಪಬ್‌ ಬಾಗಿಲು ತೆರೆದಿದ್ದೇವೆ. ಪಬ್‌ ಬೇರೆಡೆ ಸ್ಥಳಾಂತರಿಸುವವರೆಗೂ ಕಾರ್ಮಿಕರನ್ನು ನಮ್ಮಲ್ಲೇ ಉಳಿಸಿಕೊಳ್ಳುವ ಸವಾಲು ಮತ್ತು ಅನಿವಾರ್ಯತೆ ಎದುರಾಗಿದೆ’ ಎಂದು ಚರ್ಚ್‌ ಸ್ಟ್ರೀಟ್‌ನಲ್ಲಿರುವ ಪಬ್‌ವೊಂದರ ಮಾಲೀಕರು ತಿಳಿಸಿದರು.

ಹೈಕೋರ್ಟ್‌ಗೆ ಬಾರ್ ಮಾಲೀಕರ ಅರ್ಜಿ

‘ನಗರದ ಬ್ರಿಗೇಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಮತ್ತು ಎಂ.ಜಿ ರಸ್ತೆಗಳಲ್ಲಿರುವ ಬಾರ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶ ಅನ್ವಯವಾಗುವುದಿಲ್ಲ. ಆದ್ದರಿಂದ ಅವುಗಳನ್ನು ಬಂದ್‌ ಮಾಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಬಾರ್ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ನ್ಯಾಯಮೂರ್ತಿ ಬಿ. ಮನೋಹರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಚಾರಣೆಯನ್ನು ಸೋಮವಾರಕ್ಕೆ (ಜು.3) ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT