ಗುರುವಾರ , ಡಿಸೆಂಬರ್ 12, 2019
17 °C

ಕೈಕೊಟ್ಟ ಮುಂಗಾರು: ರೈತರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಕೊಟ್ಟ ಮುಂಗಾರು: ರೈತರಲ್ಲಿ ಆತಂಕ

ತಾಳಿಕೋಟೆ: ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿ ಕುಳಿತಿರುವ ಪಟ್ಟಣ ಹಾಗೂ ಸುತ್ತಲಿನ ಅರ್ಧಕ್ಕೂ ಹೆಚ್ಚು ರೈತರು ಮಳೆಯಿಲ್ಲದೇ ಕಂಗಾಲಾಗಿದ್ದಾರೆ.

ಆಯಾ ಗ್ರಾಮಗಳಲ್ಲಿ ಗ್ರಾಮ ದೇವತೆಗೆ ಉಡಿತುಂಬಿ ಬಿತ್ತನೆಗೆ ಅನುಮತಿ ಪಡೆದು ಜಮೀನು ಹರಗಿ ಬೀಜ–ಗೊಬ್ಬರ ತಂದು ಬಿತ್ತನೆ ಮಾಡಲು ಅಣಿಯಾಗುವ ಸಂದರ್ಭದಲ್ಲಿ ಬಂದ ಭರಪೂರ ಮಳೆ ರೈತರ ಹೃದಯದ ಬಡಿತ ಹೆಚ್ಚಿಸಿತ್ತು.

ಇದಕ್ಕಿಂಬು ಗೊಡುವಂತೆ ಹವಾ ಮಾನ ವರದಿಯಲ್ಲಿ ಕೂಡ ಈ ಬಾರಿ ಉತ್ತಮ ಮುಂಗಾರು ಬರುವದೆಂಬ ಹುರುಪಿನಲ್ಲಿ  ಅರ್ಧದಷ್ಟು ರೈತರು ಹತ್ತಿ, ತೊಗರಿ, ಸೂರ್ಯ ಕಾಂತಿಯನ್ನು ಬಿತ್ತನೆ ಮಾಡಿದ್ದಾರೆ.

ಪಟ್ಟಣದ ಸುತ್ತಮುತ್ತ ಉತ್ತಮ ಮಳೆಯಾಗಿದ್ದರೂ ಮೂಕಿಹಾಳದಿಂದ ನಾಲತವಾಡದವರೆಗಿನ  ಶಿವಪುರ, ಅಡವಿಸೋಮನಾಳ, ಚೌನಬಾವಿ, ಕಿಲಾರಟ್ಟಿ, ಜೈನಾಪುರ, ಹಗರಗುಂಡ ಮೊದಲಾದೆಡೆ ನಿರಿಕ್ಷಿತ ಮಳೆಯೇ ಇಲ್ಲ.

ಬಿತ್ತನೆಯ ತಿಥಿ ಹೋದರೆ ಬಿತ್ತನೆ ನಡೆಯದು ಎಂಬ ಕಾರಣಕ್ಕೆ ಒಣ ಭೂಮಿಯಲ್ಲಿಯೇ ಈ ಭಾಗದ ಹೆಚ್ಚಿನ ರೈತರು ಸಾಲಸೋಲ ಮಾಡಿ ಬೀಜ–ಗೊಬ್ಬರ ತಂದು ಬಿತ್ತನೆ ಮುಗಿಸಿದ್ದಾರೆ. ಬಿತ್ತನೆ ಮಾಡಿ 10ದಿನ ಕಳೆದರೂ ಮಳೆರಾಯನ ದರ್ಶನ ಭಾಗ್ಯವಿಲ್ಲ.

ಆಕಾಶ ದಲ್ಲಿ ದಟ್ಟೈಸುವ ಕಪ್ಪು ಮೋಡಗಳು ಇನ್ನೇನು ಮಳೆ ಸುರಿಸಬಹುದೆಂಬ  ನಿರೀಕ್ಷೆಯನ್ನು ಆಷಾಡ ಗಾಳಿ ಸುಳ್ಳು ಮಾಡುತ್ತಿದೆ. ತಲೆಯ ಮೇಲೆ ಉಗುಳಿ ದಂತೆ ನೀರು ಚುಮುಕಿಸಿ ಓಡುವ ಮೋಡಗಳನ್ನು ನೋಡುವಾಗ ರೈತರ ಹೊಟ್ಟೆಯಲ್ಲಿ ಬೆಂಕಿ ಇಟ್ಟ ಅನು ಭವವಾಗುತ್ತಿದೆ ಎನ್ನುತ್ತಾರೆ ರೈತರು.

‘ನಮಗ ಮಳಿನ ಬಂದಿಲ್ಲರಿ ಮಿತಿ ಹೋದ್ರ ಬಿತ್ತಾಕ ಬರುದುಲ್ಲಂತ ತೊಗರಿ ಬಿತ್ತಾಕಹತ್ತೇನ್ರಿ, ಮಳಿ ಕೈ ಕೊಡು ಲಕ್ಷಣನಾ ಬಾಳ ಐತ್ರಿ, ದೇವರು ಮಾಡಿ ದಂಗಾಗಲ್ರಿ’ ಎಂದು ಅಡವಿ ಸೋಮನಾಳದ ರೈತ ತಿಪ್ಪಣ್ಣ ಮದರಿ ಮುಗಿಲತ್ತ ಕೈ ತೋರಿದರು.

ಉತ್ತಮ ಮಳೆಯಾಗಿದೆ ಎಂಬ ಹರ್ಷದಲ್ಲಿ ಬಳಗಾನೂರ, ಕೊಣ್ಣೂರ, ವಡವಡಗಿ ಗ್ರಾಮಗಳಲ್ಲಿ ಉತ್ತ ಮ ಮಳೆಯಾಗಿ ಅನೇಕರು ಮಾಡಿದ ಬಿತ್ತನೆ ಹಸಿರು ಗೆರೆ ಕೊರೆದಂತೆ ನಾಟಿ ಮೇಲೆ ದ್ದಿವೆ. ಅದಕ್ಕೆ ಎಡೆ ಹೊಡೆಯುತ್ತಿರುವ ರೈತಾಪಿಗಳು ಮಳೆ ಬಾರದ್ದರಿಂದ ಚಿಗುರಿದ ಸಸಿಗಳು ಅಲ್ಲಿಯೇ ಒಣಗಿ ಹೋಗುತ್ತಿವೆ ಎಂದು  ಬಳಗಾನೂರಿನ ಪಿಕೆಪಿಎಸ್‌ ಅಧ್ಯಕ್ಷ ಲೋಕಣ್ಣ ಸಜ್ಜನ, ರೈತ ಮಲ್ಲನಗೌಡ ದೋರನಳ್ಳಿ ಆತಂಕ ವ್ಯಕ್ತಪಡಿಸಿದರು.

‘ಹಿರೂರ, ತಮದಡ್ಡಿ, ಸಾಸನೂರ, ಬಂಡೆಪ್ಪನ ಸಾಲವಾಡಗಿ ಮೊದಲಾದೆಡೆ ಮಳೆಯಿಲ್ಲದೇ ಇನ್ನುವರೆಗೆ ಬಿತ್ತನೆಯೇ ಪ್ರಾರಂಭವಾಗಿಲ್ಲ’ ಒಣಭೂಮಿ ಯಲ್ಲಿಯೇ ಕೆಲವರು ಬಿತ್ತನೆ ಮಾಡಿ ದ್ದಾರೆ. ಮಾಡದ ರೈತರೂ ಇದ್ದಾರೆ. ಈ ಭಾಗದ ರೈತರ ಕಷ್ಟಕ್ಕೆ ಕೊನೆಯಿಲ್ಲವೇ’ ಎಂದು  ಎಂದು ಪ್ರಗತಿಪರ ರೈತ ಸಂಗನಗೌಡ ಅಸ್ಕಿ ಕಳವಳ ವ್ಯಕ್ತಪಡಿಸಿದರು.   

ರೈತರಿಗೆ ತಪ್ಪದ ತೊಂದರೆ: ಗೋಳಾಟ

ಕಳೆದ ಬಾರಿ ತೊಗರಿಗೆ ಉತ್ತಮ  ಬೆಲೆ ಬಂದಿತ್ತು ಆದರೆ ತೊಗರಿ ಖರೀದಿ ಕೇಂದ್ರದಲ್ಲಿ ಮಾರಾಟಕ್ಕೆ ಒಯ್ದರೆ ವಾರಗಟ್ಟಲೇ ಟ್ರ್ಯಾಕ್ಟರ್‌ ಬಾಡಿಗೆ ಕೊಟ್ಟು ಸರದಿಯಲ್ಲಿ ನಿಂತಿದ್ದೇ ಬಂತು.

ಖರೀದಿಯಾಗದೇ ಕಡಿಮೆ ಬೆಲೆಯಲ್ಲಿ ತೊಗರಿ ಮಾರಾಟ ಮಾಡಿ ಕಳೆದ ವರ್ಷದ ಮಾಡಿದ ಸಾಲದಲ್ಲಿ ಕೊಂಚ ಕಡಿಮೆ ಮಾಡಿಕೊಂಡೆವು ಈಗ ಹಳೆಯ ಸಾಲದ ಜೊತೆ ಹೊಸ ಸಾಲದೊಂದಿಗೆ ಬಿತ್ತನೆ ಮಾಡಿದ್ದೇವೆ ಆದರೆ ಮಳೆಯೇ ಇಲ್ಲ ಹಿಂಗಾದ್ರೆ ರೈತ ಬದುಕೂದು ಹೆಂಗ್ರಿ, ಅತ್ತ ಹಳೆ ಸಾಲ ಮುಟ್ಟಿಲ್ಲ, ಬೀಜ–ಗೊಬ್ಬರಕ್ಕೆ ಬಿತ್ತನೆಗೆ ಮಾಡಿದ ಹೊಸ ಸಾಲದ ಬರೆ ದೊಡ್ಡದಾಗುವ ಲಕ್ಷಣ ಕಾಣತೈತ್ರಿ ಎಂದು ಗೋಟಖಿಂಡ್ಕಿಯ ರುದ್ರಸ್ವಾಮಿ ಹಿರೇಮಠ ಆತಂಕ ವ್ಯಕ್ತಪಡಿಸಿದರು.

 

ಪ್ರತಿಕ್ರಿಯಿಸಿ (+)