ಸೋಮವಾರ, ಡಿಸೆಂಬರ್ 9, 2019
26 °C

ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯ ಮರೀಚಿಕೆ

ಎಂ. ರವಿ Updated:

ಅಕ್ಷರ ಗಾತ್ರ : | |

ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯ ಮರೀಚಿಕೆ

ಹುಬ್ಬಳ್ಳಿ: ಭಾರತ್‌ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಗರದ ಗಿರಣಿಚಾಳದಲ್ಲಿ 1948ರಲ್ಲಿ ಆರಂಭವಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತನ್ನದೇ ಇತಿಹಾಸ ಇದೆ. ಆದರೆ, ಏಳು ದಶಕಗಳು ಸಂದರೂ ಈ ಶಾಲೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ಒಂದರಿಂದ ಐದನೇ ತರಗತಿವರೆಗೆ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 85 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕಿಯರು ಇದ್ದಾರೆ. ದೊಡ್ಡ ಮೈದಾನದಲ್ಲಿ ಇರುವ ತಗಡಿನ ಮನೆಯಲ್ಲೇ ಶಾಲೆ ಇನ್ನೂ ನಡೆಯುತ್ತಿದೆ. ಮಳೆ ಬಂದರೆ ಸೋರುತ್ತದೆ. ವಿದ್ಯಾರ್ಥಿಗಳು ಕೂರಲು ಬೆಂಚುಗಳು ಇಲ್ಲ. ಚಾಪೆ ಮೇಲೆ ಕೂತೇ ಮಕ್ಕಳು ಪಾಠ ಕಲಿಯುತ್ತಿದ್ದಾರೆ. ಜೋರಾಗಿ ಮಳೆ ಬಂದರೆ ಶಾಲಾ ಕೊಠಡಿ ಜಲಾವೃತವಾಗುತ್ತದೆ.

ಬೇಸಿಗೆಯಲ್ಲಿ ಸುಡು ಬಿಸಿಲಿಗೆ ತಗಡು ಕಾದರೆ ಒಳಗೆ ಮಕ್ಕಳು ಕೂರಲು ಆಗುವುದಿಲ್ಲ. ಸಿಮೆಂಟ್‌ ಕಟ್ಟಡವೊಂದು ಇದ್ದು ಅಲ್ಲೂ ಯಾವುದೇ ಸೌಕರ್ಯ ಇಲ್ಲ. ಶಾಲೆಗಳಿಗೆ ರಜೆ ಇದ್ದ ವೇಳೆ ಪುಂಡ ಯುವಕರು ಕಿಟಕಿ–ಬಾಗಿಲುಗಳನ್ನು ಮುರಿದು ಶಾಲೆ ಒಳಗೆ ಕಲ್ಲು ಇನ್ನಿತರೆ ವಸ್ತುಗಳನ್ನು ಬಿಸಾಡುತ್ತಾರೆ. ಮಾರನೆ ದಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತರಗತಿಯನ್ನು ಸ್ವಚ್ಛ ಮಾಡುವುದರಲ್ಲೇ ಸಮಯ ಹೋಗುತ್ತದೆ.

ಒಂದೇ ಶೌಚಾಲಯ: ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಇರುವುದು ಒಂದೇ ಶೌಚಾಲಯ. ಅದು ಸಹ ಸ್ವಚ್ಛತೆಯಿಂದ ಕೂಡಿಲ್ಲ. ವಿದ್ಯಾರ್ಥಿಗಳು ಮೈದಾನದಲ್ಲೇ ಮೂತ್ರ ವಿಸರ್ಜನೆ ಮಾಡಿ ಜಲಬಾಧೆ ತೀರಿಸಿಕೊಳ್ಳುತ್ತಾರೆ. ಆದರೆ, ವಿದ್ಯಾರ್ಥಿನಿಯರ ಪಾಡಂತೂ ಹೇಳತೀರದಾಗಿದೆ. ಕನಿಷ್ಠ ಮೂರು ಶೌಚಾಲಯವಾದರೂ ನಿರ್ಮಿಸಬೇಕು ಎಂದು ಸಂಬಂಧಪಟ್ಟವರಿಗೆ ಮುಖ್ಯಶಿಕ್ಷಕರು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಕುಡಿಯುವ ನೀರಿನ ವ್ಯವಸ್ಥೆ ಇಲ್ಲ: ಶಾಲೆಯಲ್ಲಿ ನಳ ಇಲ್ಲವೇ ಇಲ್ಲ. ನೀರು ಕುಡಿಯಬೇಕೆಂದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮನೆಯಿಂದ ಬಾಟಲಿಯಲ್ಲಿ ತರಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡ ದಾನಿಯೊಬ್ಬರು 20 ಲೀಟರ್‌ ನೀರಿನ ಕ್ಯಾನೊಂದನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ. ಅದಕ್ಕೆ ಶಿಕ್ಷಕರು ಕೈಯಿಂದ ಹಣ ಕೊಟ್ಟು ನೀರು ತುಂಬಿಸುತ್ತಿದ್ದಾರೆ.

ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಸ್ಥಳೀಯರು ವಿದ್ಯಾರ್ಥಿಗಳ ಜೊತೆಗೂಡಿ ಈಚೆಗೆ ಪ್ರತಿಭಟನೆ ಮಾಡಿ, ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಮೂಲ ಸೌಕರ್ಯ ಒದಗಿಸಬೇಕೆಂಬ ವಿದ್ಯಾರ್ಥಿ ಗಳ ಕೂಗು ಅರಣ್ಯ ರೋದನವಾಗಿದೆ.

‘ಶಾಲೆಯಲ್ಲಿ ಬರೆ ‘ಇಲ್ಲ’ಗಳ ದೂರೇ ಹೆಚ್ಚು ಇದೆ. ಕನಿಷ್ಠ ಕುಡಿಯುವ ನೀರು, ಸರಿಯಾದ ಶೌಚಾಲಯ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಬಿಇಒ ಉಮೇಶ ಬೊಮ್ಮಕ್ಕನವರ ಅವರು ರೋಟರಿ ಸಂಸ್ಥೆ ಪದಾಧಿಕಾರಿಗಳೊಂದಿಗೆ ಈಚೆಗೆ ಶಾಲೆಗೆ ಭೇಟಿ ನೀಡಿ, ಸೌಕರ್ಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಸಂಸ್ಥೆಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಶ್ಯಾಮಲಾ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೀಘ್ರವೇ ಶಾಲೆಗೆ ಮೂಲ ಸೌಕರ್ಯ’

‘ಶಾಲೆ ಇರುವ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಿವಿಲ್‌ ನ್ಯಾಯಾಲಯದಲ್ಲಿ ಖಾಸಗಿ ವ್ಯಕ್ತಿ ಮತ್ತು ಭಾರತ್‌ ಮಿಲ್‌ ನಡುವೆ ವ್ಯಾಜ್ಯ ನಡೆಯುತ್ತಿದೆ. ಮೈದಾನದ ಒಟ್ಟು ಜಾಗದಲ್ಲಿ  ನಾಲ್ಕು ಗುಂಟೆಯನ್ನು ಶಾಲೆಗೆ ಬಿಟ್ಟುಕೊಟ್ಟರೆ ಭೂಮಿಯ ಮಾಲೀಕರ ಹೆಸರನ್ನೇ ಶಾಲೆಗೆ ಇಡುವುದಾಗಿ ಖಾಸಗಿ ವ್ಯಕ್ತಿಗೆ ಮನವಿ ಮಾಡಲಾಗಿದೆ. ಶಾಲೆಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ರೋಟರಿ ಸಂಸ್ಥೆಯವರು ಭರವಸೆ ನೀಡಿದ್ದು, ಕೆಲವೇ ದಿನಗಳಲ್ಲಿ ರಿಪೇರಿ ಕೆಲಸ ಮಾಡಲಾಗುವುದು’ ಎಂದು ಹುಬ್ಬಳ್ಳಿ ಶಹರ ಬಿಇಒ ಉಮೇಶ ಬೊಮ್ಮಕ್ಕನವರ ತಿಳಿಸಿದರು.

ಪ್ರತಿಕ್ರಿಯಿಸಿ (+)