ಸೋಮವಾರ, ಡಿಸೆಂಬರ್ 16, 2019
18 °C

ಮಾಜಿ ಯೋಧನ ಸಾಮಾಜಿಕ ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಜಿ ಯೋಧನ ಸಾಮಾಜಿಕ ಕಾಳಜಿ

ಈಜು ಒಂದು ಕಲೆ. ಇದರಿಂದ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಆದರೆ, ಇದನ್ನು ಕಲಿಯಲು ನದಿ, ಬಾವಿಗಳು ಬೇಕಲ್ಲ. ನದಿಗಳು ಬತ್ತಿದ್ದರೆ, ಬಾವಿಗಳೆಲ್ಲ ಮುಚ್ಚಿ ಹೋಗಿವೆ. ಇದನ್ನರಿತ ಬ್ಯಾಡಗಿ ಪಟ್ಟಣದ ಸಿಆರ್‌ಪಿಎಫ್‌ ಮಾಜಿ ಯೋಧ ಹನುಮಂತಪ್ಪ ಛತ್ರದ ಅವರು ಸ್ವಂತ ಜಮೀನಿನಲ್ಲಿ ಈಜು ಕೊಳವೊಂದನ್ನು ನಿರ್ಮಿಸಿದ್ದಾರೆ.

ಸಿಆರ್‌ಪಿಎಫ್‌ನಲ್ಲಿ 39 ವರ್ಷ ಸೇವೆ ಸಲ್ಲಿಸಿ 2011ರಲ್ಲಿ ನಿವೃತ್ತಿಯಾದ ಹನುಮಂತಪ್ಪ ತಮ್ಮ ನಾಲ್ಕೆಕರೆ ಜಮೀ ನಿನಲ್ಲಿ ಎರಡು ಗುಂಟೆ ಜಾಗಯನ್ನು ಈಜುಕೊಳಕ್ಕೆ ಮೀಸಲಿರಿಸಿದ್ದಾರೆ.

ಹನುಮಂತಪ್ಪ ನಿವೃತ್ತಿಯ ಬಳಿಕ ಮೀನು ಸಾಕಾಣಿಕೆ ಮಾಡುವ ಉದ್ದೇಶ ಹೊಂದಿದ್ದರು. ಅದಕ್ಕಾಗಿ ₹6.5 ಲಕ್ಷ ವೆಚ್ಚದಲ್ಲಿ 65X30X9 ಅಡಿ ಎತ್ತರದ ತೊಟ್ಟಿಯನ್ನು ನಿರ್ಮಿಸಿದ್ದರು. ಆದರೆ ಆ ನಿರ್ಧಾರ ಕೈಬಿಟ್ಟು ಅದನ್ನೇ ಈಜು ಕೊಳವಾಗಿ ಪರಿವರ್ತಿಸಿದರು.

ತೀವ್ರ ಬರಗಾಲದಲ್ಲಿಯೂ 2 ಇಂಚು ನೀರೆತ್ತುವ ಕೊಳವೆ ಬಾವಿಯಿಂದ ಸುಮಾರು ಒಂದು ವಾರದವರೆಗೆ ನೀರು ತುಂಬಿಸಿ ಈಜಲು ಅನುಕೂಲ ಮಾಡಿಕೊಟ್ಟಿದ್ದಾರೆ. ನೂರಾರು ಯುವಕರು ಈಜು ಕಲಿತಿದ್ದಾರೆ.

ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಮೊದಲು ಬೇರೆ ತೊಟ್ಟಿಯಲ್ಲಿ ಸ್ನಾನ ಮಾಡಿದ ಬಳಿಕ ಈಜುವ ತೊಟ್ಟಿಯಲ್ಲಿ ಈಜಲು ಅವಕಾಶ ನೀಡಲಾಗುತ್ತದೆ. ಹೀಗಾಗಿ ತೊಟ್ಟಿಯ ನೀರನ್ನು 15 ದಿನಕ್ಕೊಮ್ಮೆ ಬದಲಾಯಿಸಲಾಗುತ್ತದೆ. ಭಾನುವಾರ ಹಾಗೂ ರಜಾ ಅವಧಿಯಲ್ಲಿ ಈಜಲು ಸಾಕಷ್ಟು ಜನರು ಬಂದು ಹೋಗುತ್ತಾರೆ.

ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಹೊಂದಿಕೊಂಡಿರುವ ಕೊಳಕ್ಕೆ ಬಳ್ಳಾರಿ, ರಾಯಚೂರ ಹಾಗೂ ಸುತ್ತಲಿನ ರೈತರು ಬರುತ್ತಾರೆ. ಜೊತೆಗೆ ಪಟ್ಟಣದ ಆಸಕ್ತ ಯುವಕರು ಲಾರಿಗಳ ಟ್ಯೂಬ್‌ ಬಳಸಿ ಈಜು ಕಲಿಯುತ್ತಿದ್ದಾರೆ.

ಕೊಳದ ನೀರೂ ಉಪಯೋಗ: ಈಜು ಕೊಳದ ಸುತ್ತಲು ಹೂವಿನ ಗಿಡ, ಕಬ್ಬು ಬೆಳೆಯಲಾಗಿದೆ. ಈಜಲು ಬಳಸಿದ ನೀರನ್ನು ತೆಂಗಿನ ಗಿಡಗಳಿಗೆ ಹಾಯಿಸಲಾಗುತ್ತದೆ. ಇನ್ನುಳಿದ ಜಮೀನಿನಲ್ಲಿ ಎಲೆಕೋಸು, ಹತ್ತಿಯನ್ನು ಬೆಳೆಯಲಾಗುತ್ತಿದೆ.

‘ದೊಡ್ಡ ಪಟ್ಟಣದಲ್ಲಿ ಮಾತ್ರ ಈಜುವ ಸೌಲಭ್ಯ ಮಾತ್ರ ಸಿಗುತ್ತದೆ. ಆದರೆ ಬ್ಯಾಡಗಿ ಪಟ್ಟಣದಂತಹ ಊರುಗಳ ಯುವಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತೊಟ್ಟಿಗೆ ಈಜುಕೊಳದ ಸ್ಪರ್ಶ ನೀಡಿದೆ. ಇದರಿಂದ ಪಟ್ಟಣದ ಯುವ ಜನರು ಈಜು ಕಲಿಯಲು ಸಾಧ್ಯವಾದರೆ, ಇದನ್ನು ಮಾಡಿದ್ದು ಸಾರ್ಥಕ’ ಎನ್ನುತ್ತಾರೆ ಮಾಜಿ ಯೋಧ ಹನುಮಂತಪ್ಪ.

 

ಪ್ರತಿಕ್ರಿಯಿಸಿ (+)