ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆಯಿಲ್ಲದ ಹೆದ್ದಾರಿ: ಅಪಾಯಕ್ಕೆ ಹಾದಿ

Last Updated 2 ಜುಲೈ 2017, 5:48 IST
ಅಕ್ಷರ ಗಾತ್ರ

ಹುನಗುಂದ: ನಿರ್ವಹಣೆ  ಕೊರತೆಯಿಂದ ಹುನಗುಂದ–ವಿಜಯಪುರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–50 ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಭಾರಿ ವಾಹನಗಳು ಸೇರಿದಂತೆ ಬಿಡುವಿಲ್ಲದಂತೆ ಸಂಚರಿಸುವ ಈ ರಸ್ತೆಯಲ್ಲಿ ಜನ ತಮ್ಮ ಜೀವವನ್ನು ಕೈಯಲ್ಲಿದುಕೊಂಡು ಓಡಾಡಬೇಕಿದೆ.

ಸರ್ವೀಸ್ ರಸ್ತೆಯ ಕಡೆಗೆ ಹಾಕಿರುವ ಕಬ್ಬಿಣದ ತಡೆ ಗೋಡೆಗಳು ಬಹುತೇಕ ಶಿಥಿಲಗೊಂಡಿವೆ. ಇನ್ನು ರಸ್ತೆಯಲ್ಲಿರುವ ಬೀದಿ ದೀಪಗಳು ಬಹುತೇಕ ದೀಪಗಳು ಕೆಟ್ಟಿದ್ದರೆ, ಇನ್ನುಳಿದವು ಕೆಲಸ ಮಾಡುವುದಿಲ್ಲ.

ಇದೆಲ್ಲಕ್ಕಿಂತ ಮುಖ್ಯವಾಗಿ  ಹುನಗುಂದದಿಂದ ಅಮರಾವತಿಗೆ ಹೋಗಲು ನಿರ್ಮಿಸಿರುವ ಕೆಳ ಸೇತುವೆ ಮಳೆ ಬಂದರೆ ಹಳ್ಳದಂತಾಗುತ್ತದೆ. ಮಳೆ ಬಂದಾಗ, ನೀರು ಮತ್ತು ಕೆಸರಿನಿಂದ ಆವೃತ್ತವಾಗುವ ಈ ಸೇತುವೆ ದಾಟಿಕೊಂಡು ಹೋಗುವುದು ದೊಡ್ಡ ಸವಾಲಾಗಿದೆ. ಅವೈಜ್ಞಾನಿಕತೆಯಿಂದ ನಿರ್ಮಿಸಿದ ಈ ಸೇತುವೆ ಬಳಿ ಆಗುವ ಅನಾಹುತಗಳಿಗೆ ಲೆಕ್ಕವಿಲ್ಲ.

ಇಳಕಲ್ ರಸ್ತೆಯಲ್ಲಿ ವಿಜಯ ಪೆಟ್ರೋಲ್ ಬಂಕ್ ಎದುರಿಗೆ ಮತ್ತು ವಾಹನ ನಿಲುಗಡೆ ಸ್ಥಳಕ್ಕೆ ಹೋಗುವ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಗುಂಡಿ ಬಿದ್ದಿರುವ ಈ ರಸ್ತೆ ವಾಹನಗಳ ಸಂಚಾರಕ್ಕೆ ದುರ್ಗಮ ಮಾರ್ಗವಾಗಿದೆ. ಇದರಿಂದಾಗಿ, ಈ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯ ಅನಿಸುವಂತಾಗಿವೆ.

ಕಾಡಗಿಹಳ್ಳದ ಸಮೀಪದ ಕಬ್ಬಿಣದ ತಡೆ ಕಂಬಗಳ ಸ್ಥಿತಿಯೂ ಹೊರತಲ್ಲ. ರಸ್ತೆ ಬದಿಯ ಚರಂಡಿಗಳ ಮೇಲಿನ ಕಾಂಕ್ರಿಟ್ ಕಿತ್ತು ಹೋಗಿದೆ. ನೀರು ಹರಿಬೇಕಾದ ಜಗದಲ್ಲಿ ಕೆಸರು ಮನೆ ಮಾಡಿದ್ದು, ಗಬ್ಬು ನಾರುತ್ತಿವೆ. ಮಳೆ ಬಂದಾಗ ತುಂಬಿ ರಸ್ತೆ ಮೇಲೆಯೇ ಹರಿಯುತ್ತದೆ. 

‘ರಸ್ತೆಯ ಅವ್ಯವಸ್ಥೆ ಕುರಿತು ನಾಗಲಿಂಗನಗರ ಮತ್ತು ಗಣೇಶನಗರ ಜನತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಸಲ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ನಿತ್ಯ ನೂರಾರು ವಿದ್ಯಾರ್ಥಿಗಳು ವಿದ್ಯಾನಗರದ ಶಾಲಾ– ಕಾಲೇಜಿಗೆ ಹೋಗುತ್ತಾರೆ. ಈ ವೇಳೆ ಏನಾದರೂ ಅನಾಹುತ ನಡೆದರೆ ಯಾರು ಹೊಣೆ’ ಎಂದು  ನಾಗಲಿಂಗನಗರ ನಿವಾಸಿ ಕೃಷ್ಣ ಜಾಲಿಹಾಳ ಆಗ್ರಹಿಸುತ್ತಾರೆ.

‘ಅಮರಾವತಿಯ ರಸ್ತೆಯ ಕೆಳ ಸೇತುವೆ ಸರಿಯಾಗಿಲ್ಲ. ಸೇತುವೆಯನ್ನು ಮತ್ತಷ್ಟು ಎತ್ತರಿಸಬೇಕು. ಸದ್ಯ, ಧನ್ನೂರ ರಸ್ತೆಯಲ್ಲಿ ಹೆದ್ದಾರಿ ಕಾಮಗಾರಿ ಆರಂಭವಾಗಿದೆ. ಧನ್ನೂರು ಕ್ರಾಸ್ ಮತ್ತು ನಾಗಲಿಂಗನಗರದ ಜನರಿಗೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಬೇಕು.

ಈ ರಸ್ತೆಯಲ್ಲಿ ಸಾಕಷ್ಟು ಆದಾಯ ಬರುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ನಾಗರಿಕ ಸೇವಾ ಸುಧಾರಣಾ ಸಮೀತಿ ಪ್ರಧಾನ ಕಾರ್ಯದರ್ಶಿ ಜಿ.ಬಿ. ಕಂಬಾಳಿಮಠ ಒತ್ತಾಯಿಸುತ್ತಾರೆ.

ಹೆದ್ದಾರಿ ವಿಸ್ತರಣೆಗೊಂಡು ಸುಗಮ ಸಂಚಾರ ಆರಂಭಗೊಂಡಾಗ ಖುಷಿಪಟ್ಟಿದ್ದ ಜನರು, ಈಗ ಅದೇ ಹೆದ್ದಾರಿಯ ನಿರ್ವಹಣೆಯ ಕೊರತೆಯಿಂದ ಆಗುತ್ತಿರುವ ಅನಾಹುತಗಳಿಗೆ ಬಲಿಯಾಗುತ್ತಿದ್ದಾರೆ. ಸರ್ವೀಸ್ ರಸ್ತೆಯ ಕಬ್ಬಿಣದ ತಡೆ ಗೋಡೆ, ಪಾದಚಾರಿ ಮಾರ್ಗ ಹಾಗೂ ಚರಂಡಿಗಳ ಕಾಮಗಾರಿ ಕಳಪೆಯಾಗಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಜನ ಗೊಣಗುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT