ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರತೂರಿನಲ್ಲಿ ಆಫ್ರಿಕನ್ ಮೂಲದ ಬ್ರಹ್ಮಲಿಕಾ

Last Updated 2 ಜುಲೈ 2017, 6:33 IST
ಅಕ್ಷರ ಗಾತ್ರ

ಕಲಬುರ್ಗಿ: ಭಾರತೀಯ ನ್ಯಾಯ ದಾರ್ಶನಿಕೆಯ ರಚನೆಕಾರ ವಿಜ್ಞಾನೇಶ್ವರ ಜನ್ಮಸ್ಥಳ ಇಲ್ಲಿನ ಮರತೂರಿನಲ್ಲಿ ಆಫ್ರಿಕಾ ಮೂಲದ ಸಹಸ್ರಾಯುಷಿ ‘ಬ್ರಹ್ಮಲಿಕಾ’ ವೃಕ್ಷ ಜನರ ಜೀವನಾಡಿಯಾಗಿ ಬೆಳೆದು ನಿಂತಿದೆ. ಈ ಅಪರೂಪದ ಮರ ಮಾನವ, ಜಾನುವಾರುಗಳು ಅಲ್ಲದೇ ಇತರ ಜೀವಕೋಟಿಗಳ ಆರೋಗ್ಯ ರಕ್ಷಣೆಗೆ ದಿವ್ಯ ಔಷಧ.
ಕಲಬುರ್ಗಿಯಿಂದ 11 ಕಿ.ಮೀ ಅಂತರದಲ್ಲಿರುವ ಮರತೂರಿನಲ್ಲಿ ಬ್ರಹ್ಮಲಿಕಾ ಮರವು ಬೃಹದಾಕಾರವಾಗಿ ಬೆಳೆದಿದೆ.

ವೈಜ್ಞಾನಿಕ ಹಿನ್ನೆಲೆ : ಈ ಮರದ ವೈಜ್ಞಾನಿಕ ಹೆಸರು ‘ಅಡೆನ್‍ಸೋನಿಯಾ ಡಿಜಿಟೆಟಾ’. ಕನ್ನಡದಲ್ಲಿ ಇದು ‘ಬ್ರಹ್ಮಲಿಕಾ’ವಾದರೆ, ಹಿಂದಿಯಲ್ಲಿ ‘ಗೋರಖ್ ಇಮ್ಲಿ’ಎಂಬ ವಿಶಿಷ್ಟ ಹೆಸರು ಹೊಂದಿದೆ. ಮರತೂರಿನಲ್ಲಿ ಲಕ್ಷ್ಮಿ ದೇವಸ್ಥಾನಕ್ಕೆ ಹೊಂದಿಕೊಂಡು ಈ ಮರ ಇರುವುದರಿಂದ ಗ್ರಾಮಸ್ಥರು ಇದನ್ನು ‘ಲಕ್ಷ್ಮಿ ಗಿಡ’ ಎಂದು ವಿಶೇಷ ಪೂಜೆ ಸಲ್ಲಿಸುತ್ತಾರೆ.

‘ವಿಶಾಲವಾದ ಈ ಮರದಲ್ಲಿ ತೆಂಗಿನಕಾಯಿ ಆಕಾರದ ಕಾಯಿಗಳಿವೆ. ಗಟ್ಟಿಯಾದ ಬೀಜಗಳುಳ್ಳ ಕಾಯಿಗಳನ್ನು ಗ್ರಾಮಸ್ಥರು ಕಾದಿಡುತ್ತಾರೆ. ಕಾಯಿ, ಎಲೆ, ಹೂವು, ಮರದ ಕಾಂಡ, ತೊಗಟೆ– ಹೀಗೆ ಎಲ್ಲಾ ಭಾಗಗಳು ಔಷಧಿ ಗುಣಗಳನ್ನು ಹೊಂದಿವೆ. ಈ ಮರ ಸಾವಿರ ವರ್ಷಗಳಿಂದ ಗಟ್ಟಿಯಾಗಿ ಬೇರೂರಿದೆ’ ಎಂದು ಸಸ್ಯಶಾಸ್ತ್ರಜ್ಞರು ಹೇಳುತ್ತಾರೆ. 

‘ಮರದ ಪ್ರತಿ ಭಾಗವೂ ಮನುಷ್ಯರಿಗಷ್ಟೇ ಅಲ್ಲ, ಪ್ರತಿಯೊಂದು ಜೀವಿಗೂ ಔಷಧದ ರೂಪದಲ್ಲಿ ಉಪಯುಕ್ತ ಎಂಬುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಚರ್ಮರೋಗ, ದಂತಕ್ಷಯ ಮತ್ತು ಅಸ್ತಮಾ ಅಲ್ಲದೇ ಶೀತ, ನೆಗಡಿ, ಗಂಟಲು ಬೇನೆ, ಪಿತ್ತ ಮುಂತಾದ ಸಣ್ಣ ರೋಗಗಳಿಗೂ ಇದು ಉಪಯುಕ್ತ’ ಎಂದು ಪ್ರಾಧ್ಯಾಪಕ ಡಾ.ನಿಂಬಣ್ಣ ಕೊರ್ಚಿ ಹೇಳುತ್ತಾರೆ. 

‘ಅಸ್ಸಾಂ, ನಾಗಾಲ್ಯಾಂಡ್‌, ಮಣಿಪುರ, ಉತ್ತರಪ್ರದೇಶ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ನಾಟಿ ವೈದ್ಯರು ಇಲ್ಲಿಗೆ ಬಂದು ಮರದ ಎಲೆ, ತೊಗಟೆ ಮತ್ತು ಕಾಯಿಗಳನ್ನು ಒಯ್ಯುತ್ತಾರೆ’ ಎಂದು ಲಕ್ಷ್ಮಿಗುಡಿಯ ಪೂಜಾರಿ ಶಾಮರಾವ ಸುಣಗಾರ ಹೇಳುತ್ತಾರೆ.

‘ಮಾನವನ ಆರೋಗ್ಯಕ್ಕೆ ಇಷ್ಟೆಲ್ಲ ಉಪಯುಕ್ತವಾಗಿರುವ ಈ ಮರಕ್ಕೂ ನಿಧಿಗಳ್ಳರ ಕಾಟವಿದೆ. ಬಹುಪಯೋಗಿಯಾದ ಈ ಮರದ ಕೆಳಗೆ ಮತ್ತು ಪಕ್ಕದಲ್ಲಿ ದೇವಸ್ಥಾನ ಇರುವ ಕಾರಣ ನಿಧಿ ಇದೆ ಎಂಬ ನಂಬಿಕೆ ಕೆಲವರಲ್ಲಿದೆ. ಎರಡು ವರ್ಷಗಳ ಹಿಂದೆ ನಿಧಿಗಳ್ಳರು ತಗ್ಗು ತೋಡಿ, ನಿಧಿಗಾಗಿ ಹುಡುಕಾಟ ನಡೆಸಿದ್ದರು’ ಎಂದು ಗ್ರಾಮಸ್ಥ ಹುಣಚಪ್ಪ ಪೂಜಾರಿ ಹೇಳಿದರು.

ಮರತೂರಿಗೆ ಮರ ಬಂದದ್ದು ಹೇಗೆ?
ದಕ್ಷಿಣ ಆಫ್ರಿಕಾ ಖಂಡದ ಈ ಮರಕ್ಕೆ ಅಲ್ಲಿ ‘ಅಬಾಮೋಬಾಬ್’ ಎಂದು ಕರೆಯುತ್ತಾರೆ. 12ನೇ ಶತಮಾನದಲ್ಲಿ ಮರತೂರು ಪ್ರಮುಖ ಎಣ್ಣೆ ವ್ಯಾಪಾರ ಕೇಂದ್ರವಾಗಿತ್ತು ಎಂದು ಅಲ್ಲಿನ ಮಿತಾಕ್ಷರ ಶಾಸನ ಹೇಳುತ್ತದೆ. ಔಷಧಿ ಗುಣ ಹೊಂದಿರುವ ಈ ಸಸ್ಯ ಪ್ರಬೇಧವನ್ನು ಆಗಿನ ಆಫ್ರಿಕನ್ ತೈಲ ವರ್ತಕರು ಮರತೂರಿಗೆ ತಂದು ಬೆಳೆಸಿರಬಹುದು ಎಂಬುದು ಸಸ್ಯಶಾಸ್ತ್ರಜ್ಞರ ಅಭಿಪ್ರಾಯ.

* * 

ಅಳಿವಿನಂಚಿನಲ್ಲಿರುವ ಇಂತಹ ಸಸ್ಯ ಪ್ರಬೇಧಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಆಫ್ರಿಕನ್ ಮೂಲದ ಈ ಅಡೆನ್‍ಸೋನಿಯಾ ಡಿಜಿಟೆಟಾ ಔಷಧಿಯುಳ್ಳ ಮರ. ಈ ಬಗ್ಗೆ ಅಧ್ಯಯನ ನಡೆಸಲಾಗಿದೆ
ಗಿರೀಶ್ ಕಡ್ಲೆವಾಡ
ಗೌರವ ಕಾರ್ಯದರ್ಶಿ, ರಾಜ್ಯ ವಿಜ್ಞಾನ ಪರಿಷತ್ತು

ಸಂಜೀವಕುಮಾರ ಕುನ್ನೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT