ಶುಕ್ರವಾರ, ಡಿಸೆಂಬರ್ 13, 2019
16 °C

ರೇಷ್ಮೆ ಇಲಾಖೆಗೆ ಹೆಚ್ಚಿನ ಅನುದಾನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇಷ್ಮೆ ಇಲಾಖೆಗೆ ಹೆಚ್ಚಿನ ಅನುದಾನ ಅಗತ್ಯ

ಕುಷ್ಟಗಿ: ‘ರೇಷ್ಮೆ ಸಾಕಾಣಿಕೆ ರೈತರಿಗೆ ವಿವಿಧ ರೀತಿಯ ಸಲಕರಣೆಗಳಿಗೆ ಹೆಚ್ಚಿನ ಬೇಡಿಕಯಿದ್ದು, ಸದ್ಯ ಕೊಪ್ಪಳ ಜಿಲ್ಲೆಗೆ ದೊರೆಯುತ್ತಿರುವ ಅನುದಾನ ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ಇಲಾಖೆ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಎಚ್‌.ಆರ್. ಅಮರನಾಥ್‌ ಹೇಳಿದರು.

ಶುಕ್ರವಾರ ವಿವಿಧ ರೈತರ ಹಿಪ್ಪುನೇರಳೆ ತೋಟಗಳು ಹಾಗೂ ರೇಷ್ಮೆ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ನಂತರ ತಾಲ್ಲೂಕಿನ ನೆರೆಬೆಂಚಿ ಗ್ರಾಮದ ರೇಷ್ಮೆ ಫಾರ್ಮ್‌ದಲ್ಲಿ ನಡೆದ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಭಾಗದ ನೆಲ, ಜಲ ವಾತಾವರಣ ರೇಷ್ಮೆ ಬೆಳೆಯಲು ಬಹಳಷ್ಟು ಪೂರಕವಾಗಿದ್ದು ರೈತರನ್ನು ಉತ್ತೇಜಿಸುವ ಹೊಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲಿದೆ. ತಾಂತ್ರಿಕ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ರೈತರಿಗೆ ನೆರವಾಗಬೇಕು. ಹಿಪ್ಪುನೇರಳೆ ನಾಟಿ ಮಾಡುವುದು, ತೋಟ ನಿರ್ವಹಣೆ, ಹುಳು ಸಾಕಾಣಿಕೆಗೆ ಸಂಬಂಧಿಸಿದ ಇಲಾಖೆ ಕಾರ್ಯಕ್ರಮಗಳು ಸಕಾಲದಲ್ಲಿ ಮತ್ತು ಸಮರ್ಪಕ ರೀತಿಯಲ್ಲಿ ರೈತರಿಗೆ ದೊರಕಿಸಿಕೊಡಬೇಕು’ ಎಂದರು.

‘ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಹೊಸ ರೈತರಿಗೆ ಸಲಕರಣೆಗಳನ್ನು ಸಹಾಯಧನ ರೂಪದಲ್ಲಿ ವಿತರಿಸಬೇಕಿದೆ, ಪ್ಲಾಸ್ಟಿಕ್‌ ಚಂದ್ರಿಕೆಗಳನ್ನು ವಿತರಿಸಲು ರೈತರ ವಂತಿಗೆ ಹಣದ ಡ್ರಾಫ್ಟ್‌ನೊಂದಿಗೆ ಪ್ರಸ್ತಾವನೆ ಸಲ್ಲಿಸಬೇಕು.

ನೇರವಾಗಿ ಸಕಾಲದಲ್ಲಿ ರೈತರಿಗೆ ಚಂದ್ರಿಕೆಗಳನ್ನು ತಲುಪಿಸುವಂತೆ ಹರಿಯಾಣ ಮೂಲದ ಖಾಸಗಿ ಕಂಪೆನಿಯೊಂದಿಗೆ ಚರ್ಚಿಸಲಾಗಿದೆ. ಹುಳು ಸಾಕಾಣಿಕೆ ಮನೆ ಮತ್ತು ಹಾಸಿಗೆ ಸೋಂಕು ನಿವಾರಣೆಗೆ  ವಿಜೇತಾ ಮತ್ತು ಬ್ಲೀಚಿಂಗ್‌ ಪುಡಿ ವಿತರಿಸಬೇಕು’ ಎಂದರು.

‘ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡಿದ ರೈತರಿಗೆ ತಲಾ ಎಕರೆಗೆ ₹10,500 ರಂತೆ ಸಹಾಯಧನ, ಹನಿ ನೀರಾವರಿ ವ್ಯವಸ್ಥೆ, ಹುಳು ಸಾಕಾಣಿಕೆ ಶೆಡ್‌ಗಳಿಗೆ ನೀಡಬೇಕಿರುವ ಸಹಾಯ ಧನದ ಪ್ರಸ್ತಾವನೆ ಶೀಘ್ರವೇ ಸಿದ್ಧಪಡಿ ಬೇಕು’ ಎಂದರು.

ಬೀಳ್ಕೊಡುಗೆ: ಸೇವೆಯಿಂದ ನಿವೃತ್ತರಾದ ರೇಷ್ಮೆ ಇಲಾಖೆ ಪ್ರದರ್ಶಕ ಮಲ್ಲನಗೌಡ ಹಿರೇಗೌಡರ ಮತ್ತು ನಿರೀಕ್ಷಕ ಶರಣಪ್ಪ ಬಂಗಾಳಿ ಅವರಿಗೆ ನೆರೆಬೆಂಚಿ ಫಾರ್ಮ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡುಗೆ ನೀಡಲಾಯಿತು.

ಎಚ್‌.ಆರ್‌. ಅಮರನಾಥ್‌, ಪ್ರಭಾರ ಸಹಾಯಕ ನಿರ್ದೇಶಕ ಸತ್ಯನಾರಾಯಣ, ತಾಂತ್ರಿಕ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಜಿ.ಗಣಾಚಾರಿ, ನಿವೃತ್ತ ಸಹಾಯಕ ನಿರ್ದೇಶಕ ಪಿ.ಎಚ್‌. ಕೊಣ್ಣೂರು ಮಾತಾಡಿದರು. ಪ್ರದರ್ಶಕ ಉಮೇಶ ಪಾಟೀಲ ನಿರೂಪಿಸಿದರು.

ಪ್ರತಿಕ್ರಿಯಿಸಿ (+)