ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 77 ಮದ್ಯದಂಗಡಿಗಳು ಸ್ಥಗಿತ

Last Updated 2 ಜುಲೈ 2017, 6:45 IST
ಅಕ್ಷರ ಗಾತ್ರ

ಯಾದಗಿರಿ: ಸುಪ್ರೀಂಕೋರ್ಟ್ ಸೂಚನೆ ಯಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ 77 ಮದ್ಯದಂಗಡಿಗಳು ಬಾಗಿಲು ಮುಚ್ಚಿವೆ. ರಾಜ್ಯ ಹೆದ್ದಾರಿ ಆಸುಪಾಸಿದ್ದ ಒಟ್ಟು 77 ಮದ್ಯದಂಗಡಿಗಳಿಗೆ ಅಬಕಾರಿ ಇಲಾಖೆ ಪರವಾನಗಿ ನವೀಕರಿಸದಿರುವುದರಿಂದ, ಸ್ಥಳಾಂತರಗೊಳ್ಳುವ ತನಕ ಅನಿವಾರ್ಯವಾಗಿ ಅಂಗಡಿ ಮಾಲೀಕರು ಬಾಗಿಲು ಮುಚ್ಚಬೇಕಿದೆ.

‘ಜಿಲ್ಲೆಯ ನಾಲ್ಕು ರಾಜ್ಯ ಹೆದ್ದಾರಿ ಗಳಲ್ಲಿ ಒಟ್ಟು 93 ಮದ್ಯದಂಗಡಿಗಳಿವೆ. ಅವುಗಳಲ್ಲಿ  77 ಮದ್ಯದಂಗಡಿಗಳ ಪರವಾನಗಿಯನ್ನು ಸುಪ್ರೀಂಕೋರ್ಟ್ ಸೂಚನೆಯಂತೆ 2017–18ನೇ ಸಾಲಿಗೆ ನವೀಕರಿಸಿಲ್ಲ’ ಎಂದು ಅಬಕಾರಿ ಜಿಲ್ಲಾ ಧಿಕಾರಿ ಸೂರ್ಯಕಾಂತ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೆಪ್ಟೆಂಬರ್ ಅಂತ್ಯದೊಳಗೆ ಈ ಅಂಗಡಿಗಳ ಮಾಲೀಕರು ಹೆದ್ದಾರಿ ಬದಿಯಿಂದ ಸ್ಥಳಾಂತರಿಸುವ ಮೂಲಕ ಸುಪ್ರೀಂಕೋರ್ಟ್ ಸೂಚನೆ ಪಾಲಿಸಿದರೆ, ಮಾತ್ರ ಪರವಾನಗಿ ನವೀಕರಿಸಬಹುದು. ಈ ಮೂರು ತಿಂಗಳ ಅವಧಿಯಲ್ಲಿ ಮದ್ಯದ ಅಂಗಡಿಗಳನ್ನು ಸ್ಥಳಾಂತರಿ ಸದಿದ್ದರೆ, ಪರವಾನಗಿ ರದ್ದುಗೊಳ್ಳುತ್ತದೆ’ ಎಂದು ಅವರು ಹೇಳಿದರು.

ಮೂರು ಹಂತದಲ್ಲಿ ಪರವಾನಗಿ: ಮದ್ಯದಂಗಡಿಗಳಿಗೆ ಸರ್ಕಾರ ಮೂರು ಹಂತಗಳಾಗಿ ಪರವಾನಗಿ ನೀಡುತ್ತದೆ. ಸಿಎಲ್–2 ( ಕೇವಲ ಮದ್ಯಮಾರಾಟ), ಸಿಎಲ್–7 (ವಸತಿ ಜತೆಗೆ ಮದ್ಯ ಮಾರಾಟ), ಸಿಎಲ್–9 ಊಟದ ಜತೆಗೆ ಮದ್ಯಮಾರಾಟ ಹೀಗೆ ಸರ್ಕಾರ ಮೂರು ಹಂತದಲ್ಲಿ ಮದ್ಯಮಾರಾಟಕ್ಕೆ ಪರ ವಾನಗಿ ನೀಡುತ್ತದೆ. ಇದರೊಟ್ಟಿಗೆ ಸರ್ಕಾರಿ ಸ್ವಾಮ್ಯದ ಸಿಎಲ್‌–11 (ಎಂಎಸ್‌ಐಎಲ್) ಪರವಾನಗಿ ಮಾರಾಟ ಕೂಟ ನಡೆಯುತ್ತದೆ.

ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಸಿಎಲ್–2 ಹಂತದಲ್ಲಿನ ಒಟ್ಟು 39, ಸಿಎಲ್‌–7 ಹಂತದಲ್ಲಿನ 14, ಸಿಎಲ್–9ಹಂತದಲ್ಲಿನ 17 ಸೇರಿ ಜಿಲ್ಲೆಯಲ್ಲಿ ಒಟ್ಟು 77 ಮದ್ಯದಂಗಡಿಗಳ ನವೀಕರಣ ಗೊಳ್ಳದ ಕಾರಣ ಬೀಗ ಬಿದ್ದಿದೆ.

ಸರ್ಕಾರಕ್ಕೆ ಮನವಿ: ‘ಜಿಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ ಅಸೋಸಿ ಯೇಷನ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯನ್ನು ಡಿನೋಟಿಫೈ ಮಾಡಿ, ಸ್ಥಳೀಯ ರಸ್ತೆಗಳು ಎಂದು ಘೋಷಿಸುವಂತೆ ಆಗ್ರಹಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಮೂಲಕ ಸಂಬಂಧಪಟ್ಟ ದಾಖಲಾತಿಗಳನ್ನು ಕಳುಹಿಸಿಕೊಡಲಾಗಿದೆ. ನಿರೀಕ್ಷೆಯಂತೆ 15 ದಿನದೊಳಗಾಗಿ ರಾಜ್ಯ ಸರ್ಕಾರ ರಾಜ್ಯ ಹೆದ್ದಾರಿ ಡಿನೋಟಿಫೈ ಮಾಡುವ ಸಾಧ್ಯತೆ ಹೆಚ್ಚಿದೆ. ಇದು ನಡೆದರೆ ಇದೀಗ ಪರವಾನಗಿ ದೊರಕದಿರುವ ರಾಜ್ಯ ಹೆದ್ದಾರಿಯಲ್ಲಿನ 77 ಅಂಗಡಿಗಳಿಗೆ ನವೀಕರಣ ದೊರೆಯಲಿದೆ. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಮದ್ಯದಂಗಡಿ ಮಾಲೀಕರಾದ ವಿನೋದ್ ಹೇಳುತ್ತಾರೆ.

‘ಪಂಜಾಬ್ ಅಸೋಸಿಯೇಷನ್ ವತಿಯಿಂದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೇಲ್ಮನವಿ ಸಲ್ಲಿಸಲಾಗಿದೆ. ಜುಲೈ 4ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಅಂದು ನಡೆಯುವ ವಿದ್ಯಮಾನ ಆಧರಿಸಿ ರಾಜ್ಯದ ಅಸೋಸಿಯೇಷನ್ ಸಹ ನಿರ್ಧಾರ ತೆಗೆದುಕೊಳ್ಳಲಿದೆ’ ಎನ್ನುತ್ತಾರೆ ಅವರು.

ಸಿಎಲ್–7 ಚಿಂತಾಜನಕ: ‘ಸುರಪುರ ತಾಲ್ಲೂಕಿನಲ್ಲಿ 18 ಮದ್ಯದ ಅಂಗಡಿ ಗಳಿವೆ. ಸುಪ್ರೀಂಕೋರ್ಟ್ ಸೂಚನೆಯಂತೆ ಅವುಗಳಲ್ಲಿ 17 ಅಂಗಡಿಗಳಿಗೆ ನವೀಕರಣ ಪರವಾನಗಿ ದೊರವುದಿಲ್ಲ. ಇನ್ನೂ ಸಿಎಲ್–7  ಪರವಾನಗಿ ಹೊಂದಿದವರ ಪರಿಸ್ಥಿತಿ ಶೋಚ ನೀಯವಾಗಿದೆ.

ಕೋಟ್ಯಂತರ ರೂಪಾಯಿ ವ್ಯಯಿಸಿ ನೂತನವಾಗಿ ಲಾಡ್ಜ್ ನಿರ್ಮಿಸಿ, ಪರವಾನಗಿ ಪಡೆದವರು ಸ್ಥಳಾಂತರಿ ಸುವುದು ಕಷ್ಟ ಸಾಧ್ಯವಾಗಿದೆ. 16ಕ್ಕೂ ಹೆಚ್ಚು ಸಿಎಲ್–7 ಪರವಾನಗಿ ಹೊಂದಿ ರುವ ಮದ್ಯದಂಗಡಿಗಳು ಜಿಲ್ಲೆಯಲ್ಲಿದ್ದು, ಎಲ್ಲರೂ ಸಂಕಷ್ಟ ಎದುರಿಸುತ್ತಿದ್ದಾರೆ ಎನ್ನುತ್ತಾರೆ ಅವರು.

‘ಇದೀಗ ಮದ್ಯಮಾರಾಟ ಉದ್ಯಮ ನಡೆಸಬೇಕು ಎಂದರೆ ಸುಪ್ರೀಂಕೋರ್ಟ್ ಸೂಚನೆಯಂತೆ ಮೂರು ತಿಂಗಳೊಳಗೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಪರವಾನಗಿ ರದ್ದುಗೊಳ್ಳುತ್ತದೆ. ಏನು ಮಾಡಬೇಕು ಎಂಬುದು ತೋಚದ ಸ್ಥಿತಿ ಉಂಟಾಗಿದೆ’ ಎಂದು ಮದ್ಯದಂಗಡಿ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

300ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ
ಮದ್ಯದಂಗಡಿಗಳಲ್ಲಿ ವಿವಿಧ ಕೆಲಸ ಮಾಡಿಕೊಂಡಿದ್ದ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ. ಹೆದ್ದಾರಿ ಬದಿಯ ಮದ್ಯದಂಗಡಿಗಳಲ್ಲಿ ಇಡೀ ರಾತ್ರಿ ದುಡಿಯುತ್ತಿದ್ದ ಬಡ ಕೂಲಿ ಕಾರ್ಮಿಕರ ಬದುಕು ಈಗ ಶೋಚನೀಯ ಸ್ಥಿತಿ ತಲುಪಿವೆ.

ಹಗಲೂ ಕೆಸಲ ಮಾಡಿ ರಾತ್ರಿಯಲ್ಲೂ ದುಡಿಯುವ ಅನೇಕ ಯುವಕರು ಈಗ ದಿಕ್ಕುತೋಚದಂತಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ತಿದ್ದುಪಡಿ, ಸುಧಾರಣೆ ಅಸಾಧ್ಯ. ಹಾಗಾಗಿ, ಬೇರೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದೇನೆ ಎಂದು ಮದ್ಯದ ಅಂಗಡಿ ಕೂಲಿಕಾರ್ಮಿಕ ಮರೆಪ್ಪ ಶನಿವಾರ ‘ಪ್ರಜಾವಾಣಿ’ಗೆ ಸಂಕಷ್ಟ ತೋಡಿಕೊಂಡರು.

* * 

ಸುಪ್ರೀಂಕೋರ್ಟ್‌ ಸೂಚನೆ  ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ.  ಹೆದ್ದಾರಿ ಬದಿಯಿದ್ದ 77 ಮದ್ಯದಂಗಡಿಗಳ ಪರವಾನಗಿ ನವೀಕರಣಗೊಳಿಸಿಲ್ಲ.
ಸೂರ್ಯಕಾಂತ ಜಿಂದೆ
ಅಬಕಾರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT