ಶನಿವಾರ, ಡಿಸೆಂಬರ್ 14, 2019
20 °C

ವರಾಹಮೂರ್ತಿಯ ನೆಲೆ ಈ ಕಲ್ಲಹಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರಾಹಮೂರ್ತಿಯ ನೆಲೆ ಈ ಕಲ್ಲಹಳ್ಳಿ

ಕೆ.ಆರ್.ಪೇಟೆ: ವರಾಹರೂಪಿ ಶ್ರೀಹರಿ ದರ್ಶನ ಮಾಡಬೇಕೆಂದಿದ್ದರೆ, ನೀವು ಒಮ್ಮೆ  ತಾಲ್ಲೂಕಿನ ವರಾಹನಾಥ ಕಲ್ಲಹಳ್ಳಿಗೆ ಭೇಟಿ ನೀಡಬೇಕು. ಜಿಲ್ಲೆಯ ಪ್ರಸಿದ್ಧ ಮೇಲುಕೋಟೆಯ ನಂತರ ವೈಷ್ಣವ ಪವಿತ್ರ ತಾಣಗಳಲ್ಲಿ ಈ ಊರಿಗೆ ದ್ವಿತೀಯ ಸ್ಥಾನವಿದೆ.  

ಶ್ರೀಹರಿಯ ಅವತಾರಗಳಲ್ಲಿ ಒಂದಾದ ‘ವರಹ’ ಅವತಾರದ ಸಾಕ್ಷಾತ್ ದರ್ಶನ ನಿಮಗಿಲ್ಲಿ ಲಭಿಸುತ್ತದೆ.  ವಿಶೇಷವೆಂದರೆ ಇಲ್ಲಿಯ  ವರಾಹಮೂರ್ತಿ ತೊಡೆಯಲ್ಲಿ  ಭೂದೇವಿಯು ಆಸೀನಳಾಗಿರುವುದು.

ಹಾಗಾಗಿ ಈ ವರಾಹ ಮೂರ್ತಿಯನ್ನು ಭೂವರಾಹಮೂರ್ತಿ ಎಂದೂ ಕರೆಯುತ್ತಾರೆ, ಸುಮಾರು ಎಂಟು ಅಡಿ ಎತ್ತರವಿರುವ ಏಕ ಕಪ್ಪುಶಿಲೆಯಲ್ಲಿ ಕಡೆದಿರುವ ಈ ವಿಗ್ರಹ ಅದ್ಭುತವಾದ ಕುಸರಿಕಲೆಗೆ ಹಾಗೂ ಚಿತ್ತಾರಕ್ಕೆ, ಸೌಂದರ್ಯಕ್ಕೆ ಹೆಸರಾಗಿದೆ. ಎತ್ತರವಾದ ಪೀಠದಲ್ಲಿ ವಿರಾಜಮಾನನಾಗಿರುವ ವರಾಹನಾಥ ಅಭಯ ಮುದ್ರೆಯಲ್ಲಿದ್ದಾನೆ.  ಒಟ್ಟು 14 ಅಡಿ ಎತ್ತರದ ಈ ವಿಗ್ರಹವು - ರುದ್ರ, ರಮಣೀಯ ಶೃಂಗಾರಮಯವಾಗಿದೆ.

ಕಾವೇರಿ ಹಿನ್ನೀರಿನಲ್ಲಿ ಈ ದೇಗುಲವಿರುವುದರಿಂದ  ಕನ್ನಂಬಾಡಿ ಜಲಾಶಾಯ ಗರಿಷ್ಠಮಟ್ಟ ತಲುಪಿದಾಗ ಈ ಸ್ಥಳ ನೀರಿನಿಂದ ಆವೃತವಾಗುತ್ತದೆ. ಆಗ ನೋಡಲು ಎರಡೂ ಕಣ್ಣೂ ಸಾಲದು. ದೇಗುಲ ಶಿಥಿಲಾವಸ್ಥೆಯಲ್ಲಿದ್ದರಿಂದ ಅದನ್ನು ಕೆಡಿವಿ ಪರಕಾಲ ಮಠದ  ನೇತೃತ್ವದಲ್ಲಿ ಭಕ್ತರ ನೆರವು ಹಾಗೂ ಸಹಾಯದಿಂದ  ಹೊಸದಾದ ದೇವಸ್ಥಾನ ನಿರ್ಮಿಸಲಾಗಿದೆ. ಕಾವೇರಿ ನದಿಯ ಹಿನ್ನೀರಿಗೆ ಶೋಭೆ ತರುವಂತೆ ನಿರ್ಮಿತವಾಗಿದೆ. ‘ಈ ಸ್ಥಳಕ್ಕೆ ವಿಶೇಷ ಮಹತ್ವವಿದೆ.

ಹಿರಣ್ಯಾಕ್ಷನನ್ನು ಕೊಂದ ವರಾಹಸ್ವಾಮಿ  ತನ್ನ ಕೋಪ ಶಮನಗೊಳಿಸಿದ್ದು ಇಲ್ಲಿಯೇ . ಗೌತಮ ಮುನಿಗಳು ಇಲ್ಲಿ ವರಹಾ ಮೂರ್ತಿಯನ್ನು ಪೂಜಿಸಿ  ವಿಗ್ರಹ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ’ ಎಂದು ದೇವಸ್ಥಾನದ ನಿರ್ವಹಣೆಯ ಮುಖ್ಯಸ್ಥ ಎಸ್.ರಾಘವನ್ ಹೇಳುತ್ತಾರೆ.

ಈ ಮೂರ್ತಿ ಇರುವ ಸ್ಥಳಕ್ಕೆ ಅನತಿದೂರದಲ್ಲೇ ಕೊಡಗಿನಿಂದ ಹರಿದು ಬರುವ ಕಾವೇರಿ ನದಿಯು  ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಯೊಂದಿಗೆ ಸಂಗಮವಾಗಿ ಇಲ್ಲಿಗೆ ಬಂದು ನಮಿಸುವುದು ವಾಡಿಕೆ. ಸುತ್ತಲೂ ಹಸಿರು, ನದಿಯ ಝಳು-ಝುಳು ನಾದ, ಪಕ್ಷಿಗಳ ಕಲರವ, ಗಂಟೆಯ ನಾದ, ಮಂಗಳಾರತಿಯ ಬೆಳಕು, ಪ್ರವಾಸಿಗರನ್ನು ಇಲ್ಲಿ ಮಂತ್ರ ಮುಗ್ಧರನ್ನಾಗಿಸುತ್ತದೆ.  

ದಕ್ಷಿಣ ಭಾರತದಲ್ಲಿಯೇ ಅಪರೂಪ: ಇಲ್ಲಿರುವ  ವಿಗ್ರಹ ದಕ್ಷಿಣ ಭಾರತದಲ್ಲಿಯೇ ಅಪರೂಪ. ಶತಮಾನಗಳಿಂದ ತನ್ನ ಪ್ರಭೆಯಿಂದ ಭಕ್ತರ ಆಕರ್ಷಕ ಪೂಜನೀಯ ಮೂರ್ತಿಯಾಗಿದೆ. ಈ ವಿಗ್ರಹದ ನಿರ್ಮಾತೃ ಯಾರೆಂಬುದು ತಿಳಿದಿಲ್ಲವಾದರೂ ದೇಗುಲದ ಮುಂದಿರುವ ಶಾಸನದ ಪ್ರಕಾರ ಕ್ರಿ.ಶ 1334 ರಲ್ಲಿ ಹೊಯ್ಸಳ ಅರಸ ಮುಮ್ಮಡಿ ಬಲ್ಲಾಳನು ತನ್ನ ಮಡದಿಯಾದ ದ್ಯಾಮಲಾದೇವಿಯ ಜ್ಞಾಪಕಾರ್ಥಕವಾಗಿ ಈ ಸ್ಥಳವನ್ನು ‘ದೇಮಲಾಪುರ’ ಎಂದು ಕರೆಯಲಾಯಿತು ಎನ್ನಲಾಗುತ್ತದೆ.

ಮಂಡ್ಯ ಜಿಲ್ಲಾ ಕೇಂದ್ರದಿಂದ 50 ಕಿ.ಮೀ, ಮೈಸೂರಿನಿಂದ 50 ಕಿ.ಮೀ, ಹಾಸದಿಂದ 80ಕಿ.ಮೀ, ಕೆ.ಆರ್. ಸಾಗರದಿಂದ 30ಕಿ.ಮೀ ದೂರದಲ್ಲಿ ಈ ಸ್ಥಳವಿದೆ.

ಮಂಡ್ಯ, ಬೆಂಗಳೂರು, ಮೈಸೂರು ಕಡೆಯಿಂದ ಬರುವವರು ಕಟ್ಟೇರಿ (ಕೆ.ಆರ್.ಎಸ್ ಸಮೀಪ) ಗ್ರಾಮದ ಸರ್ಕಲ್‌ಗೆ, ಶ್ರೀರಂಗಪಟ್ಟಣ, ಪಾಂಡವಪುರ ರೈಲು ನಿಲ್ದಾಣ, ಕ್ಯಾತನಹಳ್ಳಿ ಮಾರ್ಗವಾಗಿ ಬರುವವರು ಇದೇ ಸರ್ಕಲ್‌ಗೆ ಬಂದು ಡಿಂಕಾ, ಬಲ್ಲೇನಹಳ್ಳಿ ರಸ್ತೆಯಲ್ಲಿ ಚಲಿಸಿ ಗಂಜಿಗೆರೆ  ಮಾರ್ಗದಲ್ಲಿ ಈ ಸ್ಥಳ ತಲುಪಬಹುದಾಗಿದೆ.  ಪ್ರತೀ ಶನಿವಾರ  , ರೇವತಿ  ನಕ್ಷತ್ರವಿರುವ ದಿನ   ಮೂರ್ತಿಗೆ ವಿಶೇಷ ಅಲಂಕಾರ, ವಿಶೇಷ  ಪೂಜೆ ಇರುತ್ತದೆ. ವಿಶೇಷಪೂಜೆ ಮತ್ತಿತರ  ಮಾಹಿತಿಗೆ ಮೊ:9448011535 ಸಂಪರ್ಕಿಸಬಹುದು.

 

ಪ್ರತಿಕ್ರಿಯಿಸಿ (+)