ಸೋಮವಾರ, ಡಿಸೆಂಬರ್ 16, 2019
26 °C

20 ದಿನದಲ್ಲಿ 63 ಡೆಂಗಿ ಪ್ರಕರಣ ಬೆಳಕಿಗೆ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

20 ದಿನದಲ್ಲಿ 63 ಡೆಂಗಿ ಪ್ರಕರಣ ಬೆಳಕಿಗೆ

ಹಾಸನ: ಹವಾಮಾನ ಬದಲಾವಣೆ ಯಿಂದ ಜಿಲ್ಲೆಯಲ್ಲಿ ಡೆಂಗಿ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿದೆ.  ಒಂದು ವಾರದಿಂದ ನಗರದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಜಿಲ್ಲಾಸ್ಪತ್ರೆ, ಜನಪ್ರಿಯ ಆಸ್ಪತ್ರೆ, ಎನ್‌ಡಿಆರ್‌ಕೆ ಆಸ್ಪತ್ರೆ, ಮಂಗಳಾ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೂನ್‌ 10 ರಿಂದ 30ರವರೆಗೆ ಜಿಲ್ಲೆಯಲ್ಲಿ 63 ಡೆಂಗಿ ಪ್ರಕರಣ ಪತ್ತೆಯಾ ಗಿರುವುದು ಜನರಲ್ಲಿ ಭೀತಿ ಹುಟ್ಟಿಸಿವೆ. ಜನವರಿಯಿಂದ  ಈ ವರೆಗೂ ಒಟ್ಟು 78 ಡೆಂಗಿ, 18 ಚಿಕೂನ್‌ ಗುನ್ಯಾ, 1  ಮಲೇರಿಯಾ ಪ್ರಕರಣ ವರದಿಯಾಗಿದೆ.

ಯಾವುದೇ ಸಾವು, ನೋವು  ಸಂಭವಿಸಿಲ್ಲವಾದರೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹಾಸನ ತಾಲ್ಲೂಕಿನಲ್ಲಿಯೇ 36 ಡೆಂಗಿ ಪ್ರಕರಣ ವರದಿಯಾಗಿದೆ. ಕಳೆದ ವರ್ಷ 263 ಡೆಂಗಿ ಪ್ರಕರಣ ಪತ್ತೆಯಾಗಿತ್ತು. ಅರಸೀಕೆರೆ ತಾಲ್ಲೂಕಿನ ಬಾಣವಾರ ಹೋಬಳಿಯ ಬುಚ್ಚನಕೊಪ್ಪಲು,  ಅರಕಲಗೂಡು, ಹೊಳೆನರಸೀಪುರ ತಾಲ್ಲೂಕಿನ ಗೊಲ್ಲರ ಕೊಪ್ಪಲು, ಐದಹಳ್ಳಿ, ಮತಿಗಟ್ಟದಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ.

ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ದಾಸ್ತಾನು ಮಾಡಲಾಗಿದೆ. ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಉಚಿತ ಚಿಕಿತ್ಸೆ ಮತ್ತು ಔಷಧ ಪಡೆಯಬಹುದು.

‘ಮಳೆಯಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದೆ. ಹೂ ಕುಂಡ, ತೊಟ್ಟಿ, ರೆಫ್ರಿಜರೇಟರ್‌, ನೀರಿನ ಟ್ಯಾಂಕ್‌, ಡ್ರಮ್‌ಗಳಲ್ಲಿ ಲಾರ್ವಾ ಬೆಳೆಯಲು ಬಿಡಬಾರದು. ಹಾಸನ ತಾಲ್ಲೂಕಿನಲ್ಲಿಯೇ  ಜನರಲ್ಲಿ ಅರಿವು ಮೂಡಿಸಲು ಹಾಗೂ ಲಾರ್ವಾ ಸಮೀಕ್ಷೆ ಗಾಗಿ 300  ಸಿಬ್ಬಂದಿ ನಿಯೋಜಿಸಲಾಗಿದೆ.

ಉಳಿದ ತಾಲ್ಲೂಕುಗಳಲ್ಲಿಯೂ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿ ದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ವೆಂಕಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜ್ವರ  ಬಂದ ತಕ್ಷಣ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ವೈರಲ್‌ ಜ್ವರ ಆಗಿರುವ ಕಾರಣ ಏಳು ದಿನ ಇರುತ್ತದೆ. ಇಂಜೆಕ್ಷನ್‌, ಗ್ಲುಕೋಸ್‌, ಮಾತ್ರೆ ತೆಗೆದುಕೊಂಡರೆ ಗುಣಮುಖರಾ ಗಬಹುದು. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದರೆ ನನ್ನ ಮೊ. 9449843055 ಕರೆ ಮಾಡಿ ತಿಳಿಸಬಹುದು’ ಎಂದು ಹೇಳಿದರು.

ರೋಗದ ಲಕ್ಷಣ

ಹಾಸನ: ಜ್ವರ, ತಲೆನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ತೋಳು, ಮೈ ಕೈ ನೋವು, ಅತಿಸಾರ ಡೆಂಗಿ ರೋಗದ ಆರಂಭಿಕ ಲಕ್ಷಣಗಳು. ಗಂಭೀರ ಹಂತ ತಲುಪಿದಾಗ ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ ಕರುಳಿನಲ್ಲಿ ರಕ್ತಸ್ರಾವವಾಗುತ್ತದೆ. ಚಿಕೂನ್‌ಗುನ್ಯಾ ಬಂದಾಗ ವಿಪರೀತ ಮೈ –ಕೈ ನೋವು, ತಲೆ ಸಿಡಿತ, ಮಂಡಿ, ಮೊಣಕೈ, ಮುಂಗೈಗಳಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ.

* * 

ಮೊದಲ ಹಂತದಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಿ, ಸುತ್ತಮುತ್ತಲ ವಾತಾವರಣ ಶುಚಿಯಾಗಿ ಇಡುವಂತೆ ಸೂಚಿಸಲಾಗಿದೆ

ಡಾ.ಆರ್‌.ವೆಂಕಟೇಶ್‌

ಜಿಲ್ಲಾ  ಆರೋಗ್ಯಾಧಿಕಾರಿ

ಪ್ರತಿಕ್ರಿಯಿಸಿ (+)