ಗುರುವಾರ , ಡಿಸೆಂಬರ್ 12, 2019
17 °C

ಎಂಟು ವರ್ಷಗಳಾದರೂ ಮುಗಿಯದ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಟು ವರ್ಷಗಳಾದರೂ ಮುಗಿಯದ ಕಾಮಗಾರಿ

ಸಂತೇಬೆನ್ನೂರು: ಒಂದಲ್ಲ ಒಂದು ಕಾರಣಕ್ಕೆ ವಿಳಂಬವಾಗುತ್ತಿರುವ ಬೀರೂರು– ಸಮ್ಮಸಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಎಂಟನೇ ವರ್ಷಕ್ಕೆ ಕಾಲಿಟ್ಟಿದೆ. ಇನ್ನೂ ಸಾಕಷ್ಟು ಕೆಲಸ ನಡೆಯಬೇಕಾಗಿರುವುದರಿಂದ ವರ್ಷಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಸಂತೇಬೆನ್ನೂರು–ದಾವಣಗೆರೆ ನಡುವಿನ ರಸ್ತೆ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಸಂತೇಬೆನ್ನೂರು– ಚನ್ನಗಿರಿ ನಡುವಿನ ರಸ್ತೆ ಕಾಮಗಾರಿ ಶೇ 25ರಷ್ಟೂ ಆಗಿಲ್ಲ. ಅಲ್ಲಲ್ಲಿ ಒಂದೆರಡು ಕಿ.ಮೀ ಡಾಂಬರು ರಸ್ತೆ ನಿರ್ಮಿಸಲಾಗಿದೆ.

ಕಾಮಗಾರಿಗೆ ಅಡಚಣೆ: ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಸಾಕಷ್ಟು ಅವಧಿ ಬೇಕಾಗಲಿದೆ. ಬಾಕಿ ಕಾಮಗಾರಿಗಳು ಮಂದ ಗತಿಯಲ್ಲಿ ಸಾಗುತ್ತಿವೆ. ತೊರೆ, ಹಳ್ಳಗಳಿಗೆ ಸೇತುವೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಕಾಕನೂರು ಬಳಿಯ ಹಿರೇಹಳ್ಳ, ಮರಡಿ ಬಳಿಯ ಹಳ್ಳಗಳಿಗೆ ಬೃಹತ್‌ ಸೇತುವೆ ನಿರ್ಮಿಸಲಾಗುತ್ತಿದೆ.

ಗ್ರಾಮಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಬಾಕಿ ಉಳಿದಿದೆ. ರಸ್ತೆ ನಿರ್ಮಾಣ  ಕೆಲವು ಭಾಗಗಳಲ್ಲಿ ಪೂರ್ಣಗೊಂಡಿಲ್ಲ. ಹೀಗಾಗಿ ವರ್ಷಾಂತ್ಯದಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇಲ್ಲ ಎನ್ನುತ್ತಾರೆ ಪ್ರಯಾಣಿಕರು.

2009–10ರಲ್ಲೇ ಈ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೆ–ಷಿಪ್‌ನಿಂದ ರಸ್ತೆ ವಿಸ್ತರಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿತ್ತು. ವಿದ್ಯುತ್ ಕಂಬಗಳ ಸ್ಥಳಾಂತರ, ಸರ್ಕಾರಿ ಶಾಲಾ–ಕಾಲೇಜುಗಳಿಗೆ ಕಾಂಪೌಂಡ್ ನಿರ್ಮಾಣ ಮಾಡಿಕೊಡಲಾಗಿತ್ತು.

ಗ್ಯಾಮನ್ ಇಂಡಿಯಾ ಕಂಪೆನಿಯು ₹ 220 ಕೋಟಿ ವೆಚ್ಚದಲ್ಲಿ ಬೀರೂರಿನಿಂದ ದಾವಣಗೆರೆವರೆಗಿನ ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದಿತ್ತು. ‘ಹೊಸ ರಸ್ತೆ ನಿರ್ಮಾಣಕ್ಕೆ ಹಳೆಯ ಡಾಂಬರು ರಸ್ತೆ ಕಿತ್ತು ಹಾಕಲಾಗಿತ್ತು. ಜಲ್ಲಿ, ಮಣ್ಣು, ಕಲ್ಲು ಹರಡಿತ್ತು. ಇದ್ದಕ್ಕಿದ್ದಂತೆ ಗುತ್ತಿಗೆದಾರ ಕಂಪೆನಿ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು’ ಎಂದು ತಣಿಗೆರೆ ಗ್ರಾಮದ ಕುಮಾರ್ ಹೇಳಿದರು.

ಬಹುತೇಕ ಬಸ್‌ಗಳು ಈ ರಸ್ತೆಯಲ್ಲಿ ಓಡಾಟವನ್ನೇ ನಿಲ್ಲಿಸಿದ್ದವು. ರಸ್ತೆ ಕಾಮಗಾರಿ ಪುನರಾರಂಭಗೊಳ್ಳಬಹುದು ಎಂಬ ಭರವಸೆಯೇ ಹೋಗಿತ್ತು. ಟೆಂಡರ್‌ ರದ್ದುಗೊಳಿಸಲಾಯಿತು.  

ಶಾಸಕ ವಡ್ನಾಳ್ ರಾಜಣ್ಣ ಅವರು 2014ರಲ್ಲಿ ಹೊಸ ಟೆಂಡರ್‌ ಪ್ರಕ್ರಿಯೆ ಆರಂಭಿಸಿ, ನನೆಗುದಿಗೆ ಬಿದ್ದ ಕಾಮಗಾರಿಗೆ ಮತ್ತೆ ಚಾಲನೆ ನೀಡಿದರು.ದಾವಣಗೆರೆ–ಚನ್ನಗಿರಿ ಹೆದ್ದಾರಿ ನಿರ್ಮಾಣಕ್ಕೆ ₹ 180 ಕೋಟಿ ಜೆಎಂಸಿ ಸಂಸ್ಥೆ ಗುತ್ತಿಗೆ ಪಡೆಯಿತು. ಸುಮಾರು 60 ಕಿ.ಮೀ ದೂರದ ರಸ್ತೆಯ ಕಾಮಗಾರಿ ಕೈಗೆತ್ತಿಕೊಂಡಿತ್ತು.

* * 

ಸಂತೇಬೆನ್ನೂರು–ಬಾಡ–ದಾವಣಗೆರೆ ಹೆದ್ದಾರಿ ಬಹುತೇಕ ನಿರ್ಮಾಣವಾಗಿದೆ. ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದೆ

–  ತೆಲಗಿ ಮಂಜುನಾಥ್

ಪ್ರತಿಕ್ರಿಯಿಸಿ (+)