ಶನಿವಾರ, ಡಿಸೆಂಬರ್ 14, 2019
25 °C

10,773 ಹೆಕ್ಟೇರ್‌ ಮುಂಗಾರು ಬಿತ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

10,773 ಹೆಕ್ಟೇರ್‌ ಮುಂಗಾರು ಬಿತ್ತನೆ

ಹೊಸದುರ್ಗ: ತಾಲ್ಲೂಕಿನಲ್ಲಿ ವಾಡಿಕೆಯ ಮಳೆ ಬಾರದ ಕಾರಣ ಬಿತ್ತನೆಯಾಗಿದ್ದ ಮುಂಗಾರು ಹಂಗಾಮಿನ ಬೆಳೆ ಒಣಗುತ್ತಿದೆ. ಇಪ್ಪತ್ತು ದಿನಗಳಿಂದ ಆಕಾಶದಲ್ಲಿ ಕಾಣಿಸಿಕೊಳ್ಳುತ್ತಿರುವ ಕರಿಮೋಡ ಉತ್ತಮ ಮಳೆ ಬರುತ್ತದೆ ಎಂಬ ನಿರೀಕ್ಷೆ ಮೂಡಿಸಿದ್ದವು.  ಆದರೆ, ಇದು ಸುಳ್ಳಾಗಿದೆ. ಜನರಿಗೆ ಕುಡಿಯುವ ನೀರಿನ ಚಿಂತೆ ಕಾಡುತ್ತಿದೆ.

‘ಏಪ್ರಿಲ್‌ ಕೊನೆ ಹಾಗೂ ಮೇ ಮೊದಲ ವಾರದಲ್ಲಿ ಬಂದ ಒಂದು ಹದ ಮಳೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿ ಮುಂಗಾರು ಬಿತ್ತನೆ ಮಾಡಿದ್ದೆವು. ಆದರೆ, ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಮುಂಗಾರು ಸಾವೆ, ಎಳ್ಳು, ಹೆಸರು, ಶೇಂಗಾ ಬೆಳೆ ಹೂವಿನ ಹಂತದಲ್ಲಿ ಇರುವಾಗಲೇ ಒಣಗುತ್ತಿವೆ. ಕಳೆದ ವರ್ಷವೂ ಮಳೆ ಅಭಾವದಿಂದ ಬರದ ಬವಣೆಯಿಂದ ನಲುಗಿದ್ದ ಅನ್ನದಾತರಿಗೆ ಈ ಬಾರಿಯು ಬರೆಯ ಮೇಲೆ ಬರೆ ಎಳೆದಂತಾಗಿದೆ’ ಎಂದು ರೈತ ನಾಗರಾಜು ಬೇಸರಿಸುತ್ತಾರೆ.

‘ಕೃಷಿ ಚಟುವಟಿಕೆಗೆ ಬಳಸುತ್ತಿರುವ ಜಾನುವಾರು ಮೇವು, ನೀರಿನಸಮಸ್ಯೆ ಉಲ್ಬಣವಾಗಿದೆ. ಜಾನುವಾರು ಹೇಗೆ ಸಾಕಬೇಕು ಎಂಬ ಚಿಂತೆ ಕಾಡುತ್ತಿದೆ’. ಎಂದು ಚಿಂತೆ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿ  ಈ ಬಾರಿ 55,670 ಹೆಕ್ಟೇರ್‌ ಮುಂಗಾರು ಬಿತ್ತನೆ ಗುರಿಯಿದೆ. ಆದರೆ ಮಳೆಯ ಅಭಾವದಿಂದ ಕೇವಲ 10,773 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ.

ಸಾವೆ, ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಸೇರಿದಂತೆ ಮತ್ತಿತರ ಮುಂಗಾರು ಬಿತ್ತನೆ ಮಾಡಲು ಹಸನಗೊಳಿಸಿರುವ ಹೊಲಗಳು ಖಾಲಿ ಇವೆ. ಮಳೆ ಬಂದರೂ ಮುಂಗಾರು ಬೆಳೆ ಬಿತ್ತನೆ  ಮಾಡುವ ಅವಧಿ ಮುಗಿದಿದೆ. ಈಗ ಏನಿದ್ದರೂ ರಾಗಿ, ಹಿಂಗಾರು ಸಾವೆ ಬಿತ್ತನೆ ಮಾಡಲು ಸಾಧ್ಯ ಎನ್ನುತ್ತಾರೆ ರೈತ ಕರಿಯಪ್ಪ.

ಬಿತ್ತನೆಯ ವಿವರ:   ತಾಲ್ಲೂಕಿನಲ್ಲಿ ಹೆಸರು 2,986 ಹೆಕ್ಟೇರ್‌, ಮುಂಗಾರು ಸಾವೆ 5,310, ತೊಗರಿ 185, ಹತ್ತಿ 745, ಅಲಸಂದೆ 57, ಶೇಂಗಾ 760, ಎಳ್ಳು 44, ಹರಳು 68, ನವಣೆ 173 ಹೆಕ್ಟೇರ್‌ ಸೇರಿದಂತೆ ಒಟ್ಟು 10,773 ಹೆಕ್ಟೇರ್‌ ಬಿತ್ತನೆಯಾಗಿದೆ.

ಹೋಬಳಿವಾರು ಮಳೆ ಮಾಹಿತಿ: ವಾಡಿಕೆಯಂತೆ ಕಸಬಾ 176.4 ಮಿ.ಮೀ ಮಳೆ ಆಗಬೇಕಿತ್ತು. 112.5 ಮಿ.ಮೀ ಆಗಿದೆ. ಮಾಡದಕೆರೆ  175.4 ಮಿ.ಮೀ. ಬದಲು 124.9 ಮಿ.ಮೀ ಮಳೆಯಾಗಿದೆ. ಮತ್ತೋಡು 163.3 ಮಿ.ಮೀ ಮಳೆ ಬರಬೇಕಿತ್ತು. ಆದರೆ,  128.1 ಮಿ.ಮೀ ಆಗಿದೆ. ಶ್ರೀರಾಂಪುರ 153.2 ಮಿ.ಮೀಗೆ 139.4 ಮಿ.ಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಹೋಬಳಿವಾರು ಬಿತ್ತನೆ

4,442 ಕಸಬಾ

1,708 ಶ್ರೀರಾಂಪುರ

2,839 ಮತ್ತೋಡು

1,784 ಮಾಡದಕೆರೆ

26 ಮಿ.ಮೀ ಮಳೆ ಕುಸಿತ

ಜನವರಿ ಆರಂಭದಿಂದ ಜೂನ್‌ವರೆಗೆ ತಾಲ್ಲೂಕಿನಲ್ಲಿ ಸರಾಸರಿ 168.7ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 125.3 ಮಿ.ಮೀ ಮಳೆಯಾಗಿದೆ. 26 ಮಿ.ಮೀ ಕುಸಿತವಾಗಿದೆ.

 

ಪ್ರತಿಕ್ರಿಯಿಸಿ (+)