ಬುಧವಾರ, ಡಿಸೆಂಬರ್ 11, 2019
24 °C

ಸಾಲ ಪ್ರಸ್ತಾವನೆಗೆ ಬ್ಯಾಂಕ್‌ ವಿಳಂಬ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಲ ಪ್ರಸ್ತಾವನೆಗೆ ಬ್ಯಾಂಕ್‌ ವಿಳಂಬ ಬೇಡ

ಉಡುಪಿ: ‘ಮೀನು ಮಾರಾಟ ಮಾಡುವ ಮಹಿಳೆಯರು ಪಡೆಯುವ ಸಾಲದ ಬಡ್ಡಿ ಸಹಾಯ ಧನದ ಮರುಪಾವತಿಯಲ್ಲಿ ಆಗುವ ವಿಳಂಬವನ್ನು ತಡೆಯಲು ವಿಳಂಬ ಮಾಡದೆ ಪ್ರಸ್ತಾವನೆಯನ್ನು ಇಲಾಖೆಗೆ ಸಲ್ಲಿಸಿ’ ಎಂದು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಿಳೆಯರ ಸಾಲದ ಮೇಲಿನ ಬಡ್ಡಿ ಸಹಾಯ ಧನ ಮರು ಪಾವತಿ ಕುರಿತು ಚರ್ಚಿಸಲು ಉಡುಪಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬ್ಯಾಂಕ್‌ಗಳು ಪ್ರಸ್ತಾವನೆ ಸಲ್ಲಿಸುವುದು ವಿಳಂಬವಾದ ಕಾರಣ ಸುಮಾರು ₹7 ಕೋಟಿ ಬಡ್ಡಿ ಸಹಾಯ ಧನ ಮರುಪಾವತಿ ಬಾಕಿ ಇತ್ತು. ನಾನು ಸಚಿವನಾದ ನಂತರ ಹಣಕಾಸು ಇಲಾಖೆಗೆ ಮನವಿ ಮಾಡಿ ಆ ಮೊತ್ತವನ್ನು ಬಿಡುಗಡೆ ಮಾಡಿಸಿದೆ’ ಎಂದರು.

‘ಮತ್ತೆ ಅದೇ ರೀತಿ ದೊಡ್ಡ ಮೊತ್ತ ಬಾಕಿಯಾದರೆ ಅನುದಾನ ಸಿಗುವುದು ಕಷ್ಟವಾಗುತ್ತದೆ. ಅಲ್ಲದೆ ಕಾಲ ಕಾಲಕ್ಕೆ ಬಡ್ಡಿ ಮರುಪಾವತಿ ಮಾಡಿದರೆ ಮಾತ್ರ ಮಹಿಳೆಯರಿಗೆ ಅನುಕೂಲವಾಗಲಿದೆ. ಆದ್ದರಿಂದ ಸಮಯ ಮಿತಿಯಲ್ಲಿ ಪ್ರಸ್ತಾವನೆ ಸಿದ್ಧಪಡಿಸಿ ನೀಡಿ’ ಎಂದು ಅವರು ತಾಕೀತು ಮಾಡಿದರು.

ಕಳೆದ ಒಂದೂವರೆ ವರ್ಷದ ಬಡ್ಡಿ ಸಹಾಯ ಧನ ಸಂಪೂರ್ಣ ಹಾಗೂ ಅದರ ಹಿಂದಿನ ಒಂದೂವರೆ ವರ್ಷದ ಸಹಾಯ ಧನ ಭಾಗಶಃ ಬಾಕಿ ಇದೆ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಾರ್ಶ್ವನಾಥ ಮಾಹಿತಿ ನೀಡಿದರು.                

ಕೆಲವರು ನಕಲಿ ದಾಖಲೆ ನೀಡಿ ಮೀನುಗಾರ ಮಹಿಳೆಯರಿಗೆ ನೀಡುವ ಸಾಲವನ್ನು ಪಡೆಯುತ್ತಿದ್ದಾರೆ ಮತ್ತು ಮರು ಪಾವತಿ ಮಾಡುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಮೋದ್, ‘ಮೀನು ವ್ಯಾಪಾರಿ ಮಹಿಳೆಯರು, ಸ್ವ ಸಹಾಯ ಸಂಘದವರಿಗೆ ಮಾತ್ರ ಸಾಲ ನೀಡಿ. ಸಂಘದೊಂದಿಗೆ ಸಮನ್ವಯ ಸಾಧಿಸಿ ಅಸಲಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಕಲಿ ಅರ್ಜಿದಾರರನ್ನು ಪರಿಗಣಿಸಬೇಡಿ’ ಎಂದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಫ್ರಾನ್ಸಿಸ್ ಬೋರ್ಜಿಯಾ ಇದ್ದರು.

ಪ್ರತಿಕ್ರಿಯಿಸಿ (+)