ಶುಕ್ರವಾರ, ಡಿಸೆಂಬರ್ 6, 2019
19 °C

ಅರ್ಧಕ್ಕೂ ಹೆಚ್ಚು ಮದ್ಯದಂಗಡಿ ಬಂದ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಧಕ್ಕೂ ಹೆಚ್ಚು ಮದ್ಯದಂಗಡಿ ಬಂದ್‌!

ತುಮಕೂರು: ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿದ್ದ  ಜಿಲ್ಲೆಯ ಅರ್ಧಕ್ಕಿಂತಲೂ ಹೆಚ್ಚು ಮದ್ಯದಂಗಡಿಗಳು ಶನಿವಾರ ಬಾಗಿಲು ಮುಚ್ಚಿದವು. ಅಬಕಾರಿ ಇಲಾಖೆಯ ಅಧಿಕಾರಿಗಳು ಕೆಲವು ಕಡೆ ಬಲವಂತವಾಗಿ ಬಾಗಿಲು ಮುಚ್ಚಿಸಿದರು.

ಅರ್ಧಕ್ಕೂ ಹೆಚ್ಚು ಅಂಗಡಿ ಬಂದ್ ಆದ ಕಾರಣ ಮದ್ಯಪ್ರಿಯರಿಗೆ ಮದ್ಯ ಸಿಗದೆ ಪೇಚಾಡುವಂತಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಕಡೆಗಳಲ್ಲಿ ಕಿಟಕಿಗಳಿಂದ ಮದ್ಯಮಾರಾಟ ಮಾಡುವ ಪ್ರಯತ್ನ ನಡೆಯಿತು ಎಂಬ ದೂರುಗಳು ಬಂದಿವೆ. ಮದ್ಯದಂಗಡಿಗಳು ಮುಚ್ಚಿದ್ದರಿಂದ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳಲ್ಲಿ ಹೆಚ್ಚು ಸಂದಣಿ ಕಂಡುಬಂತು.

ಜಿಲ್ಲೆಯಲ್ಲಿ  341 ಮದ್ಯದಂಗಡಿಗಳಿವೆ. ಇವುಗಳಲ್ಲಿ  190 ಅಂಗಡಿಗಳು ಮುಚ್ಚಲಾಗಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಹೆಚ್ಚು ಅಂಗಡಿಗಳು ಮುಚ್ಚಲು ಕಾರಣವಾಯಿತು ಎಂದು  ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್‌ ಆದೇಶದ ಬಳಿಕವೂ ಗಡುವು ಮುಗಿಯುವವರೆಗೂ ಈ ಅಂಗಡಿಗಳು ಸ್ಥಳಾಂತರಗೊಂಡಿರಲಿಲ್ಲ. ಬೆರಳಣಿಕೆಯಷ್ಟು ಮಾಲೀಕರು ಮಾತ್ರ  ತಾವಾಗಿಯೇ ಮುಚ್ಚಿದ್ದಾರೆ. ಉಳಿದವರಿಗೆ ಬಾಗಿಲು ಹಾಕಿಸಲಾಯಿತು. ಹೊಸ ಜಾಗ ತೋರಿಸಿದರೆ ಪರವಾನಗಿ ನವೀಕರಣ ಮಾಡಿಕೊಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ನಿಯಮದಂತೆ ಅಬಕಾರಿ ವರ್ಷ ಜುಲೈ 1 ರಿಂದ ಜೂನ್‌ 30 ಕ್ಕೆ ಕೊನೆಗೊಳ್ಳುತ್ತದೆ. ಜುಲೈ 1ರಿಂದ ಪರವಾನಗಿ ನವೀಕರಣ ಮಾಡಿಸಿಕೊಳ್ಳುವುದು ಕಡ್ಡಾಯ. ಕೋರ್ಟ್ ಆದೇಶದ ಪ್ರಕಾರ ಇರುವ ಅಂಗಡಿಗಳಿಗೆ ಮಾತ್ರ ನವೀಕರಣ ಮಾಡಲಾಗುತ್ತದೆ’ ಎಂದರು.

ಒಳ್ಳೆಯದೆ ಆಯಿತು...

‘ಸುಪ್ರೀಂ ಕೋರ್ಟ್ ಆದೇಶದಿಂದ ಒಳ್ಳೆಯದಾಗಿದೆ. ರಸ್ತೆಗಳ ಪಕ್ಕದಲ್ಲಿ ಬಾರ್‌ಗಳು ಇದ್ದುದ್ದರಿಂದ ಮಹಿಳೆಯರು, ಮಕ್ಕಳು ಓಡಾಡುವುದು ಕಷ್ಟವಾಗುತ್ತಿತ್ತು. ಅಲ್ಲಲ್ಲಿ ಅಪಘಾತಗಳಿಗೂ ಕಾರಣವಾಗುತ್ತಿತ್ತು. ಬಾರ್‌ಗಳ ಸ್ಥಳಾಂತರ ಒಳ್ಳೆಯ ಕ್ರಮವಾಗಿದೆ’ ಎಂದು  ನಗರದ ರಾಜೇಶ್‌ ತಿಳಿಸಿದರು.

‘ಈ ಅಂಗಡಿಗಳನ್ನು ಸ್ಥಳಾಂತರ ಮಾಡುವಾಗ ಯಾವುದೇ ಕಾರಣಕ್ಕೂ ಮನೆಗಳಿರುವ ಬಳಿ, ಜನಸಂದಣಿ ಇರುವ ಕಡೆ ಕೊಡಬಾರದು. ಆಸ್ಪತ್ರೆ, ಶಾಲೆಗಳು, ಬಸ್‌ ನಿಲ್ದಾಣ, ಹೋಟೆಲುಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಜನ ವಸತಿ ಪ್ರದೇಶದಿಂದ ದೂರ ಇದ್ದರೆ ಇನ್ನೂ ಒಳ್ಳೆಯದು. ಇಂಥದೊಂದು ನಿಯಮವನ್ನು  ಸರ್ಕಾರ ರೂಪಿಸಬೇಕು’ ಎಂದು ಒತ್ತಾಯಿಸಿದರು.

ಕೆಲಸ  ಕಳೆದುಕೊಂಡ ಆತಂಕ

ಏಕಾಏಕಿ ನೂರಕ್ಕೂ ಹೆಚ್ಚು ಅಂಗಡಿಗಳು  ಬಾಗಿಲು ಮುಚ್ಚಿದ್ದರಿಂದ ಸಾವಿರಾರು ಕಾರ್ಮಿಕರಿಗೆ ದಿಕ್ಕೆ ತೋಚದಂತಾಯಿತು. ಮುಂದೆ ಎಲ್ಲಿಗೆ ಹೋಗುವುದು ಎಂಬ ಪ್ರಶ್ನೆ ಕಾಡಿತು.‘ಮಾಲೀಕರು ಮತ್ತೆ ಯಾವಾಗ ಬಾರ್‌ ಆರಂಭಿಸುತ್ತಾರೆ ಎಂಬುದು ಗೊತ್ತಿಲ್ಲ.

ರಸ್ತೆಯಿಂದ ದೂರ ಇದ್ದರೆ ವ್ಯಾಪಾರ ಕಡಿಮೆಯಾಗುತ್ತದೆ. ಇದರಿಂದ ವ್ಯಾಪಾರ ನಡೆಸಲು ಸಾಧ್ಯವಾಗದು. ನಮಗೂ ಸಂಬಳ, ಮೇಲು ಕಾಸು ಗೀಟುವುದಿಲ್ಲ’ ಎಂದು ಕಾರ್ಮಿಕರೊಬ್ಬರು ಗೋಳಾಡಿದರು. ‘ಬಾರ್‌ಗಳನ್ನು ಆರಂಭಿಸಲು ಇನ್ನೂ ಒಂದೆರಡು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೂ ಸಂಬಳ ಇಲ್ಲದೆ ಕಾಲ ತಳ್ಳಬೇಕಾಗಿದೆ’ ಎಂದರು.

ಅಂಕಿ–ಅಂಶ

341 ಜಿಲ್ಲೆಯಲ್ಲಿದ್ದ ಮದ್ಯ ದಂಗಡಿಗಳು

191 ಸುಪ್ರೀಂ ಕೋರ್ಟ್‌ ಆದೇಶದಂತೆ ಬಂದ್ ಮಾಡಿದ ಅಂಗಡಿಗಳು

ಪ್ರತಿಕ್ರಿಯಿಸಿ (+)