ಶುಕ್ರವಾರ, ಡಿಸೆಂಬರ್ 6, 2019
17 °C

ಡೆಂಗಿ ಆರ್ಭಟಕ್ಕೆ ತುಮಕೂರು ತತ್ತರ

ಸಿ. ಕೆ. ಮಹೇಂದ್ರ Updated:

ಅಕ್ಷರ ಗಾತ್ರ : | |

ಡೆಂಗಿ ಆರ್ಭಟಕ್ಕೆ ತುಮಕೂರು ತತ್ತರ

ತುಮಕೂರು: ತುಮಕೂರು ನಗರ ಸೇರಿ ಜಿಲ್ಲೆಯಾದ್ಯಂತ ಡೆಂಗಿ ಜ್ವರ ತೀವ್ರವಾಗಿ ಹರಡುತ್ತಿದೆ. ನಗರದ ಖಾಸಗಿ ಆಸ್ಪತ್ರೆಗಳೆಲ್ಲ ಜ್ವರಪೀಡಿತರಿಂದ ತುಂಬಿ ತುಳುಕಾಡುತ್ತಿವೆ.  ಬಹುತೇಕ ಬಡಾವಣೆಗಳಲ್ಲಿ ಜ್ವರದ ಪ್ರಕರಣಗಳು ಕಾಣಿಸಿಕೊಂಡಿವೆ. ಇದರಿಂದಾಗಿ ಜನರು ಭಯಭೀತರಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹೆದರುತ್ತಿರುವ ಜನರು ಖಾಸಗಿ ಆಸ್ಪತ್ರೆಗಳಿಗೆ ಮುಗಿ ಬೀಳುತ್ತಿದ್ದಾರೆ. ಇಲ್ಲೂ ಸೂಕ್ತ  ಚಿಕಿತ್ಸೆ ಸಿಗದೆ ಬೆಂಗಳೂರು ಕಡೆಗೆ ಮುಖ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

‘ನಗರ ಸೇರಿ ಜಿಲ್ಲೆಯ ಎಲ್ಲ ಕಡೆಯೂ ಸಮಸ್ಯೆ ತೀವ್ರವಾಗಿದೆ. ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಏನು ಮಾಡುತ್ತಿವೆ ಎಂಬುದು ಗೊತ್ತಾಗುತ್ತಿಲ್ಲ’ ಎನ್ನುತ್ತಾರೆ ನಗರದ ಖಾಸಗಿ ಆಸ್ಪತ್ರೆಯೊಂದರ ವೈದ್ಯರು.

‘ಪ್ರತಿ ದಿನ ಆಸ್ಪತ್ರೆಗೆ ಮೂರು– ನಾಲ್ಕು ಮಂದಿ ಡೆಂಗಿ ಪೀಡಿತರು ದಾಖಲಾಗುತ್ತಿದ್ದಾರೆ.  ಆಸ್ಪತ್ರೆಯ ಪುರುಷರ ವಾರ್ಡ್‌ ಪೂರಾ ಭರ್ತಿಯಾಗಿದೆ. ಸಾಕಷ್ಟು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ  ಚಿಕಿತ್ಸೆ ನೀಡಿ  ಮನೆಗೆ ಕಳುಹಿಸಿಕೊಡಲಾಗಿದೆ’ ಎಂದು ನಗರದ ಚರಕ ಆಸ್ಪತ್ರೆ ವೈದ್ಯ ಡಾ. ಬಸವರಾಜು ತಿಳಿಸಿದರು.

‘ಕಳೆದ ವರ್ಷಕ್ಕಿಂತಲೂ ಈ ವರ್ಷ ಜ್ವರ ಪೀಡಿತರ ಪ್ರಮಾಣ ದುಪ್ಪಟ್ಟು ಆಗಿದೆ. ಆದರೆ ವೈರಸ್‌ನ ತೀವ್ರತೆ ಕಳೆದ ವರ್ಷದಷ್ಟು ಇಲ್ಲ. ಹೀಗಾಗಿ ಸಾವಿನ ಪ್ರಮಾಣ ಕಡಿಮೆಯಾಗಿದೆ’ ಎಂದು ಅವರು ಹೇಳಿದರು.

‘ಆಸ್ಪತ್ರೆಗೆ ಪ್ರತಿ ದಿನ 10–12 ಪ್ರಕರಣಗಳು ದಾಖಲಾಗುತ್ತಿವೆ. ಅತಿ ವ್ಯಾಪಕವಾಗಿ ಎಲ್ಲ ಕಡೆಯೂ ಸೋಂಕು ಹರಡುತ್ತಿದೆ’ ಎಂದು ಶ್ರೀದೇವಿ ವೈದ್ಯಕೀಯ ಕಾಲೇಜಿನ ಔಷಧ ವಿಭಾಗದ ಮುಖ್ಯಸ್ಥೆ ಡಾ. ಶಾಲಿನಿ ತಿಳಿಸಿದರು.

‘ಶಂಕಿತ ಡೆಂಗಿ ಜ್ವರಕ್ಕೆ ಆರು ಮಂದಿ ಸಾವಿಗೀಡಾಗಿರಬಹುದು. ಆದರೆ  ಡೆಂಗಿಯಿಂದಲೇ ಸಾವಿಗೀಡಾಗಿದ್ದಾರೆ ಎಂದು ಇನ್ನೂ ತೀರ್ಮಾನಕ್ಕೆ ಬರಲಾಗಿಲ್ಲ’ ಎನ್ನುತ್ತಾರೆ ಅಧಿಕಾರಿಯೊಬ್ಬರು. ಸಾಮಾನ್ಯ ಜನರು ಮಾತ್ರವಲ್ಲ ವಕೀಲರು, ಸರ್ಕಾರಿ ನೌಕರರು, ಶಿಕ್ಷಕರು, ವಿದ್ಯಾರ್ಥಿಗಳು ಡೆಂಗಿಯಿಂದ ಬಳಲುತ್ತಿದ್ದಾರೆ. 

‘ನನ್ನ ಸ್ನೇಹಿತನ ಮಗನಿಗೆ ಕಾಣಿಸಿಕೊಂಡ ಮರುದಿನವೇ ನನಗೂ ಜ್ವರ ಕಾಣಿಸಿಕೊಂಡಿತು. ಆಸ್ಪತ್ರೆಗೆ ದಾಖಲಾದರೆ ವಾರ್ಡ್‌ ಪೂರಾ ಜ್ವರ ಪೀಡಿತರೆ ಇದ್ದರು’ ಎಂದು ಗಾಂಧಿನಗರದ ನಿವಾಸಿ, ಸರ್ಕಾರಿ ನೌಕರ ಸ್ವಾಮಿ ಮಾಹಿತಿ ಹಂಚಿಕೊಂಡರು.

‘ಕೆ.ಆರ್‌.ಎಕ್ಸ್‌ಟೆನ್ಷನ್‌ ಬಡಾವಣೆಯಲ್ಲಿರುವ ನನ್ನ ಸ್ನೇಹಿತ ವಕೀಲ, ಆತನ ಪತ್ನಿ, ಇಬ್ಬರೂ ಮಕ್ಕಳಿಗೂ ಏಕ ಕಾಲದಲ್ಲಿ ಜ್ವರ ಕಾಣಿಸಿಕೊಂಡಿತು. ನನ್ನ ಪರಿಚಯದ ಅನೇಕರಿಗೆ ಸೋಂಕು ತಗುಲಿದೆ’ ಎನ್ನುತ್ತಾರೆ ವಕೀಲ ಓಬಯ್ಯ.

‘ಪಾಲಿಕೆ ಸದಸ್ಯರೊಬ್ಬರು ಸಹ ಜ್ವರದಿಂದ ಬಳಲಿದ್ದಾರೆ. ಸದಸ್ಯರಿಬ್ಬರ ಮಕ್ಕಳಿಗೂ ಕಾಣಿಸಿಕೊಂಡಿದೆ. ಈ ಜ್ವರ ಯಾರನ್ನೂ ಬಿಟ್ಟಿಲ್ಲ’ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಯೊಬ್ಬರು. ‘ನನ್ನ ಮಗ ಎಂದಿನಂತೆಯೇ ಶಾಲೆಗೆ ತೆರಳಿದ್ದ. ಶಾಲೆಯಿಂದ ಶಿಕ್ಷಕರು ಕರೆ ಮಾಡಿ ಮಗನಿಗೆ ಜ್ವರ ಬಂದಿದೆ ಎಂದು ತಿಳಿಸಿದರು. ರಕ್ತ ಪರೀಕ್ಷೆ ಮಾಡಿಸಿದಾಗ ಡೆಂಗಿ ಪತ್ತೆಯಾಯಿತು’ ಎಂದು ಪಾಲಿಕೆ ಸದಸ್ಯ ಎಂ.ಪಿ.ಮಹೇಶ್‌ ತಿಳಿಸಿದರು.

‘ನಾಲ್ಕೈದು ದಿನ ತುಮಕೂರಿನಲ್ಲೆ ಚಿಕಿತ್ಸೆ ಕೊಡಿಸಿದೆ. ಕೊನೆಗೆ ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲಿಸಬೇಕಾಯಿತು.  ಇದೊಂದೆ ಆಸ್ಪತ್ರೆಯಲ್ಲಿ ತುಮಕೂರು, ಗುಬ್ಬಿ, ಪಾವಗಡ, ಶಿರಾ, ಕುಣಿಗಲ್‌ ತಾಲ್ಲೂಕುಗಳ 40ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲೆಯ ಜನರಿಂದ ಆ ಆಸ್ಪತ್ರೆ ತುಂಬಿ ತುಳುಕುತ್ತಿದೆ’ ಎಂದು ಮಾಹಿತಿ ಹಂಚಿಕೊಂಡರು.

‘ಬೆಂಗಳೂರಿಗೆ ಹೋಲಿಸಿದರೆ ತುಮಕೂರಿನ ಆಸ್ಪತ್ರೆಗಳಲ್ಲೇ ಚಿಕಿತ್ಸೆ ವೆಚ್ಚ ಹೆಚ್ಚು. ಆರಂಭದಲ್ಲೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ತೋರಿಸಿದರೆ ಚಿಕಿತ್ಸೆ ವೆಚ್ಚ ಹೆಚ್ಚುವುದಿಲ್ಲ. ಆದರೆ ತುಮಕೂರಿನ ಆಸ್ಪತ್ರೆಗಳಲ್ಲಿ ನಾಲ್ಕೈದು ದಿನ ಚಿಕಿತ್ಸೆ ನೀಡಿ ನಂತರ ಬೆಂಗಳೂರಿಗೆ ಸಾಗ  ಹಾಕುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜನರ ಸಮಸ್ಯೆಯ ಬಗ್ಗೆ ಅರಿವು ಇಲ್ಲದವರಂತೆ ಮೇಯರ್‌, ಆಯುಕ್ತರು  ವರ್ತಿಸುತ್ತಿದ್ದಾರೆ. ಅವರೇ ಗಂಭೀರವಾಗಿ ಕ್ರಮ ತೆಗೆದುಕೊಳ್ಳದಿದ್ದ ಮೇಲೆ ನಾವೇನು ಮಾಡಲು ಸಾಧ್ಯ’ ಎಂದು ಪಾಲಿಕೆ ಅಧಿಕಾರಿಯೊಬ್ಬರು  ಪ್ರತಿಕ್ರಿಯಿಸಿದರು.

‘ನಿತ್ಯವೂ ಫಾಗಿಂಗ್ ಮಾಡಲಾಗುತ್ತಿದೆ. ಜನರಿಗೆ ತಿಳಿ ಹೇಳಿದರೂ ಕಸವನ್ನು ಖಾಲಿ ಜಾಗಗಳಲ್ಲಿ ಬಿಸಾಡುತ್ತಾರೆ. ಮನೆ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳುವುದಿಲ್ಲ. ನೀರು ನಿಲ್ಲುವ ಕಡೆ ಬ್ಲೀಚಿಂಗ್ ಪೌಡರ್ ಹಾಕಿದರೂ ಸೊಳ್ಳೆಗಳು ನಿಯಂತ್ರಣಕ್ಕೆ ಬರುತ್ತವೆ. ಆದರೆ ಎಲ್ಲವನ್ನೂ ಪಾಲಿಕೆಯೆ ಮಾಡಬೇಕೆಂದರೆ ಹೇಗೆ’ ಎನ್ನುತ್ತಾರೆ ಪಾಲಿಕೆ ಸದಸ್ಯ ಟಿ.ಆರ್‌.ನಾಗರಾಜ್.

‘35 ವಾರ್ಡ್‌ಗಳಿವೆ. 14 ಮಂದಿ ಆರೋಗ್ಯ ಅಧಿಕಾರಿಗಳು ಇರುವ ಕಡೆ 4 ಮಂದಿ ಇದ್ದಾರೆ. ನಗರದ ಜನಸಂಖ್ಯೆಗೆ ಅನುಗುಣವಾಗಿ 650   ಪೌರ ಕಾರ್ಮಿಕರು ಇರಬೇಕು. ಆದರೆ 320 ಮಂದಿ ಇದ್ದಾರೆ. ಇವರಲ್ಲಿ 50– 60 ಕಾರ್ಮಿಕರು ಪ್ರತಿ ದಿನ  ರಜೆಯಲ್ಲಿರುತ್ತಾರೆ’ ಎಂದರು.

‘ನಗರದ ಈ ಪರಿಸ್ಥಿತಿಗೆ ಪಾಲಿಕೆಯೆ ಹೊಣೆ ಹೊರಬೇಕು. ನಗರದ ಸ್ವಚ್ಛತೆ, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ಜನರಲ್ಲಿ ಜಾಗೃತಿ ಮೂಡಿಸುವುದು ಅದರ ಹೊಣೆ. ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಬೇಕು’ ಎನ್ನುತ್ತಾರೆ ವಕೀಲ ಎಸ್‌.ರಮೇಶ್‌.

ಕಾರ್ಡ್‌ ಪರೀಕ್ಷೆ ಲೆಕ್ಕಕ್ಕೆ ಇಲ್ಲ...

ತುಮಕೂರು: ಡೆಂಗಿ ಜ್ವರ ಕಂಡು ಹಿಡಿಯಲು ಸಾಮಾನ್ಯವಾಗಿ ವೈದ್ಯರು ಡೆಂಗಿ ಕಾರ್ಡ್‌ ರಕ್ತ ಪರೀಕ್ಷೆ ಮಾಡಿಸಲು ಹೇಳುತ್ತಾರೆ. ಆದರೆ ಈ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾದರೂ ಅದನ್ನು ಡೆಂಗಿ ಎಂದು ಲೆಕ್ಕಹಾಕುವುದಿಲ್ಲ ಎನ್ನುತ್ತಾರೆ ಡಾ.ರಂಗಸ್ವಾಮಿ.

‘ಮ್ಯಾಕ್ಸ್ ಎಲಿಸಾ’ ಪರೀಕ್ಷೆಯಲ್ಲಿ  ಸೋಂಕು ಪತ್ತೆಯಾದರೆ ಮಾತ್ರ ಅದನ್ನು ಡೆಂಗಿ ಪ್ರಕರಣ ಎಂದು ದಾಖಲಿಸಿಕೊಳ್ಳಲಾಗುತ್ತದೆ. ಇಂಥ 62 ಪ್ರಕರಣಗಳು ಜಿಲ್ಲೆಯಲ್ಲಿ ಈವರೆಗೆ ಕಂಡುಬಂದಿವೆ’ ಎಂದು ಹೇಳಿದರು.

‘ಡೆಂಗಿ ಕಾರ್ಡ್‌ ಪರೀಕ್ಷೆಯಲ್ಲಿ ಎನ್‌ಎಸ್‌ –1 ಸೋಂಕು ಕಂಡುಬಂದರೂ ಅದು ಸಹ ಡೆಂಗಿ ಜ್ವರವೇ ಆಗಿದೆ. ಈ ಸೋಂಕು ಕಾಣುತ್ತಿದ್ದಂತೆ ವೈದ್ಯರು  ರೋಗಿಗಳಿಗೆ ಚಿಕಿತ್ಸೆ ಆರಂಭಿಸುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಡೆಂಗಿ ತಗುಲಿದವರು ನಮ್ಮ ದಾಖಲೆಗಳಲ್ಲಿರುವುದಕ್ಕಿಂತ  ಹೆಚ್ಚಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಸಾವಿನ ಲೆಕ್ಕ....

ತುಮಕೂರು: ‘ಡೆಂಗಿ ಜ್ವರದಿಂದ ಎಷ್ಟು ಜನರು ಸಾವಿಗೀಡಾಗಿದ್ದಾರೆ ಎಂಬುದನ್ನು ನಾವು ಘೋಷಿಸಲು ಸಾಧ್ಯವಿಲ್ಲ. ಸಂಶಯಾಸ್ಪದ ಪ್ರಕರಣಗಳ ವರದಿಗಳನ್ನು ಇಲಾಖೆಗೆ ಸಲ್ಲಿಸಲಾಗುತ್ತದೆ. ಅಲ್ಲಿ  ನಿರ್ಧಾರ ಮಾಡಬೇಕು’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ.

‘ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವುದು ಸತ್ಯ. ಇದರ ಜತೆಗೆ ಚಿಕುನ್‌ಗುನ್ಯ, ವೈರಾಣು ಸೋಂಕಿನ ಜ್ವರವು ಕಾಣಿಸಿಕೊಳ್ಳುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಇನ್ನೂ ಮಾಡಬೇಕಾಗಿದೆ. ಜನರು ಸಹ ಇಲಾಖೆ ಜತೆ ಸಹಕರಿಸಬೇಕು’ ಎಂದರು.

ವೈದ್ಯರನ್ನು ಸಂಪರ್ಕಿಸಿ

ಹೊಟ್ಟೆ ನೋವು,  ವಾಂತಿ, ರಕ್ತಸ್ರಾವ, ಮೂಗು, ವಸಡು ಮತ್ತು ಮಲಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಪ್ರತಿಕ್ರಿಯಿಸಿ (+)